• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಕಾರಣವೇನು?

|
Google Oneindia Kannada News

ದಿನನಿತ್ಯದ ಅಡುಗೆ ಬಳಕೆಗೆ ಅತಿ ಅಗತ್ಯವಾದ ಈರುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ-ಹೀಗೆ ಯಾವ ರಾಜ್ಯವೂ ಬೆಲೆ ಏರಿಕೆಯ ಹೊಡೆತದಿಂದ ತಪ್ಪಿಸಿಕೊಂಡಿಲ್ಲ. ಮುಂಗಾರು ಆರಂಭವಾದ ದಿನಗಳಿಂದಲೂ ಈರುಳ್ಳಿ ಗ್ರಾಹಕರ ಜೇಬಿಗೆ ಹೊರೆಯಾಗುತ್ತಲೇ ಇದೆ. ಕಳೆದ ಎರಡು ತಿಂಗಳಿನಿಂದ ಅರ್ಧಶತಕ ದಾಟಿದ್ದ ದರ ಈಗ ಶತಕದ ಗಡಿಯನ್ನೂ ದಾಟಿದೆ.

ಸದ್ಯದ ಪರಿಸ್ಥಿತಿಯಲ್ಲಿ ಈ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ಇಳಿದರೂ ಜನಸಾಮಾನ್ಯರು ನಿರಾಳರಾಗುವ ಮಟ್ಟಕ್ಕೆ ಅದು ಎಟುಕುವುದು ಕಷ್ಟ. ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತಿನ ಮೇಲೆ ನಿಷೇಧ ಹೇರಿದೆ. ಇದು ಫೆಬ್ರವರಿಯವರೆಗೂ ಮುಂದುವರಿಯುವ ನಿರೀಕ್ಷೆಯಿದೆ. ಈ ನಡುವೆ ದೇಶದಲ್ಲಿನ ಈರುಳ್ಳಿ ಕೊರತೆಯನ್ನು ತಗ್ಗಿಸಲು ಮತ್ತು ಕಡಿಮೆ ದರದಲ್ಲಿ ಒದಗಿಸಲು 1.2 ಲಕ್ಷ ಟನ್ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲು ಕೂಡ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಈರುಳ್ಳಿಯನ್ನು ಅತಿ ಹೆಚ್ಚು ಬೆಳೆಯುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಚೀನಾ. ನಂತರದ ಸ್ಥಾನವೇ ಭಾರತದ್ದು. ಭಾರತದಲ್ಲಿ ಶೇ 45ರಷ್ಟು ಈರುಳ್ಳಿ ಉತ್ಪಾದನೆಯಾಗುತ್ತಿರುವುದು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ. ಜಗತ್ತಿನ ಬಹುತೇಕ ಎಲ್ಲ ಬಗೆಯ ಖಾದ್ಯಗಳಿಗೂ ಅತ್ಯವಶ್ಯಕ ಎನಿಸಿರುವ ಈರುಳ್ಳಿ ಉತ್ಪಾದನೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದೆ. ಬೇಡಿಕೆಯಂತೂ ತಗ್ಗಲು ಸಾಧ್ಯವೇ ಇಲ್ಲ. ಹೀಗಾಗಿ ಬೆಲೆ ಗಗನಕ್ಕೇರುತ್ತಲೇ ಇದೆ.

ಕ್ವಿಂಟಲ್ ಈರುಳ್ಳಿ ಈಗ 7,000 ರೂ.

ಕ್ವಿಂಟಲ್ ಈರುಳ್ಳಿ ಈಗ 7,000 ರೂ.

ಈರುಳ್ಳಿ ಬೆಲೆ ಕ್ವಿಂಟಲ್‌ಗೆ 5000-6000 ರೂ. ದಾಟಿದೆ. ಕೆಲವು ಕಡೆ 7,000 ರೂ. ಕೂಡ ತಲುಪಿದೆ. ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ದೆಹಲಿ ಮುಂತಾದ ಪ್ರಮುಖ ನಗರಗಳಲ್ಲಿ ಸಾಮಾನ್ಯ ಗುಣಮಟ್ಟದ ಈರುಳ್ಳಿ ಬೆಲೆಯೇ 100ರ ಗಡಿ ದಾಟಿದೆ.

ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಮಿತಿಮೀರಿ ಸುರಿದ ಮಳೆ ಮತ್ತು ಪ್ರವಾಹ ಇಡೀ ಭಾರತ ಮಾತ್ರವಲ್ಲ, ಏಷ್ಯಾದ ಮಾರುಕಟ್ಟೆಯನ್ನೇ ತಲ್ಲಣಗೊಳಿಸಿದೆ.

ಸಾಮಾನ್ಯವಾಗಿ ಪ್ರತಿ ವರ್ಷವೂ ಮುಂಗಾರು ಅವಧಿಯಲ್ಲಿ ಈರುಳ್ಳಿ ಬೆಲೆ ಏರಿಕೆಯಾಗುತ್ತದೆ. ಆದರೆ ಅದು ಕೆಲವು ದಿನಗಳ ಅವಧಿಗೆ ಮಾತ್ರ. ಬೆಲೆ ಏರಿಕೆಗೆ ಪ್ರಮುಖ ಕಾರಣ ಬೆಳೆ ನಾಶ. ಮುಂಗಾರು ಅವಧಿಯಲ್ಲಿ ಬಹುತೇಕ ಕಡೆ ಅಧಿಕ ಮಳೆಯಿಂದ ಬೆಳೆ ಕೊಚ್ಚಿಹೋಗುತ್ತದೆ. ಅಗತ್ಯಕ್ಕಿಂತ ಹೆಚ್ಚು ನೀರು ನಿಂತು ಬೆಳೆದ ಈರುಳ್ಳಿ ನೆಲದಲ್ಲಿಯೇ ಕೊಳೆತು ಹೋಗುತ್ತದೆ. ಹೀಗಾಗಿ ಪೂರೈಕೆಯಲ್ಲಿ ಏರಿಳಿತವಾಗುವುದರಿಂದ ಬೆಲೆಯೂ ಹೆಚ್ಚುತ್ತದೆ.

ಕಳೆದ ವರ್ಷಕ್ಕೆ ಹೋಲಿಸಿದಾಗ ಬದಲಾದ ಚಿತ್ರಣ

ಕಳೆದ ವರ್ಷಕ್ಕೆ ಹೋಲಿಸಿದಾಗ ಬದಲಾದ ಚಿತ್ರಣ

ಈ ವರ್ಷದ ಮಳೆಗಾಲ ರೈತರಿಗೆ ಕೊಟ್ಟ ಶಿಕ್ಷೆ ಸಣ್ಣ ಪ್ರಮಾಣದ್ದಲ್ಲ. ಮುಖ್ಯವಾಗಿ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಭೂಮಿ ಪ್ರವಾಹದಲ್ಲಿ ಮುಳುಗಿದ್ದವು. ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ಸುರಿದ ಮಳೆ, ಉತ್ತರ ಕರ್ನಾಟಕದಲ್ಲಿಯೂ ಪ್ರವಾಹಕ್ಕೆ ಕಾರಣವಾಯಿತು. ಜಮೀನುಗಳು ಜಲಾವೃತವಾಗಿದ್ದವು. ಹೀಗಾಗಿ ಬೆಳೆದ ಬೆಳೆಯನ್ನು ಕಟಾವು ಮಾಡುವುದಕ್ಕೂ ಸಾಧ್ಯವಾಗಲಿಲ್ಲ. ಮುಖ್ಯವಾಗಿ ಸೆಪ್ಟೆಂಬರ್ ಅಂತ್ಯದಲ್ಲಿ ಮತ್ತು ಅಕ್ಟೋಬರ್‌ನಲ್ಲಿ ಸುರಿದ ಮಳೆ ಉಂಟುಮಾಡಿದ ನಷ್ಟ ಅಷ್ಟಿಷ್ಟಲ್ಲ.

ಪೂರೈಕೆಯ ಕೊರತೆಯಿಂದ ಎಲ್ಲ ಪ್ರಮುಖ ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿಯೂ ಬೆಲೆ ಹೆಚ್ಚಳವಾಗಿದೆ.

ಕಳೆದ ವರ್ಷ ಮಹಾರಾಷ್ಟ್ರದ ಈರುಳ್ಳಿ ಬೆಳೆಗಾರರು ಇದೇ ಅವಧಿಯಲ್ಲಿ ಬೆಲೆ ಇಳಿಕೆಯ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಮಾತ್ರವಲ್ಲ ಈರುಳ್ಳಿಯನ್ನು ಮೂಟೆಗಳಲ್ಲಿ ತಂದು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಈಗಿನ ಚಿತ್ರಣ ಸಂಪೂರ್ಣ ತದ್ವಿರುದ್ಧವಾಗಿದೆ.

500 ರೂನಿಂದ 7,000 ರೂ.ಗೆ

500 ರೂನಿಂದ 7,000 ರೂ.ಗೆ

ಇಡೀ ಭಾರತದ ಈರುಳ್ಳಿ ಬೆಲೆ ನಿಗದಿಯಾಗುವುದು ಮತ್ತು ನಿಯಂತ್ರಿತವಾಗುವುದು ದೇಶದ ಅತ್ಯಂತ ಪ್ರಮುಖ ಈರುಳ್ಳಿ ಮಂಡಿಯಾದ ಮಹಾರಾಷ್ಟ್ರದ ನಾಸಿಕ್‌ನ ಲಾಸಾಲ್ಗಾನ್‌ನಲ್ಲಿ. ಈ ಮಾರುಕಟ್ಟೆಯಲ್ಲಿಯೇ ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಕ್ವಿಂಟಲ್‌ಗೆ 5,000-6000 ರೂ. ಮುಟ್ಟಿತ್ತು. ಸೋಮವಾರ (ನ.25) ಇದು 7,012 ರೂ.ಗೆ ಹೆಚ್ಚಿದೆ. ಹದಿನಾಲ್ಕು ದಿನಗಳ ಹಿಂದೆ ಈ ಬೆಲೆ ಕ್ವಿಂಟಲ್‌ಗೆ 5,200 ರೂ. ಇತ್ತು. ಅಂದರೆ ಶೇ 34ರಷ್ಟು ಏಕಾಏಕಿ ಹೆಚ್ಚಳವಾಗಿದೆ. ಅದಕ್ಕೂ ಹದಿನಾಲ್ಕು ದಿನಗಳ ಹಿಂದೆ (ಅ.30) 3,900 ರೂ.ನಷ್ಟಿತ್ತು.

ಈ ವರ್ಷದ ಆರಂಭದಲ್ಲಿ ಈರುಳ್ಳಿ ಬೆಲೆ ಇದೇ ಮಂಡಿಯಲ್ಲಿ ಕ್ವಿಂಟಲ್‌ಗೆ 500-600 ರೂ.ನಷ್ಟಿತ್ತು. ಮೇ ಬಳಿಕ ಅದು 1,000ದ ಗಡಿ ದಾಟಿತ್ತು. 2018ರಲ್ಲಿ ಬರಗಾಲದಿಂದ ರಬಿ ಬೆಳೆಗೆ ಒಣಗಿ ಹೋಗಿತ್ತು. ಹಾಗೆಯೇ ಖಾರಿಫ್ (ಅಕ್ಟೋಬರ್ ಬೆಳೆ) ಮತ್ತು ಜನವರಿ-ಮಾರ್ಚ್‌ ಅವಧಿಯ ಬೆಳೆಗಳು ವಿಳಂಬವಾಗಿದ್ದವು. ಮುಂಗಾರು ತಡವಾಗಿದ್ದರಿಂದ ಈ ಅವಧಿಯ ಬೆಳೆಗೂ ಹಿನ್ನಡೆಯಾಗಿತ್ತು. ಆದರೆ ಬಳಿಕ ಸುರಿದ ಮಳೆ ಇನ್ನಷ್ಟು ಆಘಾತ ನೀಡಿತು.

ಕೆಲವೆಡೆ ಮಳೆಯಿಂದಾಗಿ ಆಗಷ್ಟೇ ಬಿತ್ತನೆ ಮಾಡಿದ್ದ ಬೀಜಗಳು, ಅರೆ ಬೆಳೆದಿದ್ದ ಫಸಲು ಕೊಚ್ಚಿ ಹೋಗಿದ್ದರೆ, ಇನ್ನು ಕೆಲವೆಡೆ ಆಗಷ್ಟೇ ಕಟಾವು ಮಾಡಿದ್ದ ಬೆಳೆ ಕೊಳೆತುಹೋಗಿದೆ. ಈಗ ಲಾಸಾಲ್ಗಾನ್ ಈರುಳ್ಳಿ ಮಂಡಿಗೆ ಈ ಅವಧಿಯಲ್ಲಿ ಬರುತ್ತಿದ್ದ ಈರುಳ್ಳಿಗೆ ಹೋಲಿಸಿದರೆ, ಈಗಿನ ಸರಬರಾಜು ಕೇವಲ ಶೇ 10-20ರಷ್ಟಿದೆ.

ಕಳಪೆ ಗುಣಮಟ್ಟದ ಈರುಳ್ಳಿ ಪೂರೈಕೆ

ಕಳಪೆ ಗುಣಮಟ್ಟದ ಈರುಳ್ಳಿ ಪೂರೈಕೆ

ಬೆಳೆ ನಾಶದಿಂದ ಕಂಗೆಟ್ಟಿರುವ ರೈತರು ಬೆಲೆ ಏರಿಕೆಯಿಂದ ಕೊಂಚ ಸಮಾಧಾನಪಟ್ಟುಕೊಳ್ಳುವಂತಾಗಿದೆ. ಆದರೆ ಮಾರುಕಟ್ಟೆಯಲ್ಲಿನ ಬೆಲೆಗೆ ಹೋಲಿಸಿದರೆ ಅವರಿಗೆ ನಷ್ಟ ಸರಿದೂಗಿಸುವ ಮಟ್ಟದಲ್ಲಿ ದರ ಸಿಗುತ್ತದೆ ಎನ್ನುವಂತಿಲ್ಲ. ಆದರೆ ಈಗಿನ ದರದ ಲಾಭವನ್ನು ಪಡೆದುಕೊಳ್ಳಲು ಅವರು ಮುಂದಾಗುತ್ತಿದ್ದಾರೆ. ಅದರ ಪರಿಣಾಮವೇ ಕಳಪೆ ಗುಣಮಟ್ಟದ ಈರುಳ್ಳಿ ಬೆಳೆ ಕೂಡ ಮಾರುಕಟ್ಟೆಗೆ ರಾಶಿ ರಾಶಿ ಬರುತ್ತಿರುವುದು. ಮಳೆಯಲ್ಲಿ ನೆನೆದು, ಬಿಸಿಲಿನ ಕೊರತೆಯಿಂದ ಅನೇಕ ಕಡೆ ಬೆಳೆದ ಈರುಳ್ಳಿಗೆ ಫಂಗಸ್ ಆವರಿಸಿದೆ. ಹಾನಿಯಾದ ಈರುಳ್ಳಿಗಳನ್ನು ಉತ್ತಮ, ಸಾಮಾನ್ಯ ಗುಣಮಟ್ಟದ (ಎಫ್‌ಎಕ್ಯೂ) ಮಾನದಂಡ ಹೊಂದಿರುವ ಈರುಳ್ಳಿಯ ಜತೆಗೆ ಕಳಪೆ ಗುಣಮಟ್ಟದ ಈರುಳ್ಳಿಗಳನ್ನೂ ಬೆರೆಸಿ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.

ಬಿತ್ತಿದ ಬೆಳೆಯಲ್ಲ ನೀರು ಪಾಲು

ಬಿತ್ತಿದ ಬೆಳೆಯಲ್ಲ ನೀರು ಪಾಲು

ಮುಂಗಾರು ಅವಧಿಯಲ್ಲಿ ಮೂರು ಬಾರಿ ಬಿತ್ತನೆ ಮಾಡಲಾಗಿತ್ತು. ಮೂರು ಬಾರಿಯೂ ಮಳೆ ಬೆಳೆಯನ್ನು ಕೊಚ್ಚಿಕೊಂಡು ಹೋಯಿತು. ಇದರಿಂದ 2020ರ ಏಪ್ರಿಲ್‌ವರೆಗೂ ಈರುಳ್ಳಿಯ ಕೊರತೆ ತೀವ್ರವಾಗಿ ಬಾಧಿಸಲಿದೆ. ಅಕ್ಟೋಬರ್ ಆರಂಭದಲ್ಲಿ ಹಾಕಿದ್ದ ಖಾರಿಫ್ ಬೆಳೆ ಕೂಡ ಅಕಾಲಿಕ ಮಳೆಯಿಂದ ತೀವ್ರ ಹಾನಿಗೊಳಗಾಗಿದೆ. ಹೀಗಾಗಿ ದೇಶದಲ್ಲಿ ಇನ್ನೂ ಐದಾರು ತಿಂಗಳು ಈರುಳ್ಳಿಯ ಕೊರತೆ ಹೀಗೆಯೇ ಮುಂದುವರಿಯುವ ಸಾಧ್ಯತೆ ಇದೆ.

ಸಾಸಮಾನ್ಯವಾಗಿ ನವೆಂಬರ್ ತಿಂಗಳಿನಲ್ಲಿ ಲಾಸಾಲ್ಗಾನ್ ಮಂಡಿಗೆ ಪ್ರತಿದಿನ ಸುಮಾರು 25,000 ಕ್ವಿಂಟಲ್ ಈರುಳ್ಳಿ ಪೂರೈಕೆಯಾಗುತ್ತಿತ್ತು. ಆದರೆ ಈ ವರ್ಷದ ನವೆಂಬರ್ ಕೊನೆಯ ವಾರದಲ್ಲಿ ದಿನಕ್ಕೆ 5,000 ಕ್ವಿಂಟಲ್ ಕೂಡ ಸರಬರಾಜು ಆಗುತ್ತಿಲ್ಲ.

ಮುಂದೆಯೂ ಕೊರತೆ ನಿಶ್ಚಿತ

ಮುಂದೆಯೂ ಕೊರತೆ ನಿಶ್ಚಿತ

ಏಪ್ರಿಲ್ ಆರಂಭದ ಅವಧಿಯಲ್ಲಿ ರೈತರು ಸುಮಾರು 22 ಲಕ್ಷ ಟನ್‌ನಷ್ಟು ಈರುಳ್ಳಿಯನ್ನು ಸಂಗ್ರಹಿಸಿದ್ದರು. ಈಗ ಅದರಲ್ಲಿ ಶೇ 5-6ರಷ್ಟು ಸಂಗ್ರಹ ಮಾತ್ರ ಉಳಿದಿದೆ. ಕೃಷಿ ಇಲಾಖೆಯ ಪ್ರಕಾರ ಖಾರಿಫ್ ಬೆಳೆಯು 2018-19ರ ಸಾಲಿನ 2.97 ಲಕ್ಷ ಹೆಕ್ಟೇರ್‌ನಿಂದ ಪ್ರಸ್ತುತ ವರ್ಷ 2.58 ಲಕ್ಷ ಹೆಕ್ಟೇರ್‌ಗೆ ತಗ್ಗಿದೆ. ಇದರಲ್ಲಿ ಬಹುತೇಕ ಬಿತ್ತನೆ ಕೊರತೆ ಉಂಟಾಗಿರುವುದು ಮಹಾರಾಷ್ಟ್ರದಲ್ಲಿ. ಇದಕ್ಕೆ ಕಾರಣ ತಡವಾದ ಮುಂಗಾರು. ಮುಂಗಾರಿನ ಆರ್ಭಟದಿಂದ ಬೆಳೆ ಕೊಚ್ಚಿಹೋದ ಬಳಿಕವೂ ಹವಾಮಾನ ರೈತರಿಗೆ ಪೂರಕವಾಗಿ ಸುಧಾರಿಸಲಿದೆ ಎಂಬ ನಂಬಿಕೆ ಮೂಡಿಲ್ಲ. ವಾಯುಭಾರ ಕುಸಿತ, ಸೈಕ್ಲೋನ್ ಪರಿಣಾಮ ಪದೇ ಪದೇ ಮಳೆಯಾಗುತ್ತಿದೆ. ಹೀಗಾಗಿ ಚಳಿಗಾಲ ಮುಗಿಯುತ್ತಿದ್ದಂತೆ ನಡೆಯುವ ಬಿತ್ತನೆಗೆ ಕೂಡ ತೊಂದರೆಯಾಗುವ ಅಪಾಯವಿದೆ.

ಬೆಲೆ ಹೆಚ್ಚಳ ಇದು ಮೊದಲೇನಲ್ಲ

ಬೆಲೆ ಹೆಚ್ಚಳ ಇದು ಮೊದಲೇನಲ್ಲ

ಪ್ರಸಕ್ತ ವರ್ಷ ಸುಮಾರು 54 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಖಾರಿಫ್ ಅವಧಿಯ ಉತ್ಪಾದನೆಯಲ್ಲಿ ಶೇ 30-40ರಷ್ಟು ಕುಸಿತವಾಗಿದೆ. ಈರುಳ್ಳಿ ಬೆಲೆ ಏರಿಕೆಯಾಗಿದ್ದರೂ, ಬೇಡಿಕೆಗೇನೂ ತಗ್ಗಿಲ್ಲ. ಬೆಲೆ ಹೆಚ್ಚಳ ಭಾರತೀಯರಿಗೆ ಹೊಸತಲ್ಲ. 1980ರಲ್ಲಿ ಇದೇ ರೀತಿ ಸಾಮಾನ್ಯ ಜನರಿಗೆ ಕೈಗಟುಕದ ದರಕ್ಕೆ ಈರುಳ್ಳಿ ದರ ಏರಿಕೆಯಾಗಿತ್ತು. 1998 ಮತ್ತು 2010ರಲ್ಲಿ ಕೂಡ ಶತಕ ಬಾರಿಸಿತ್ತು. 2013ರಲ್ಲಿ ದೇಶದ ಕೆಲವು ಪ್ರಮುಖ ನಗರಗಳಲ್ಲಿ ಕೆ.ಜಿ. ಈರುಳ್ಳಿ 150 ರೂ. ತಲುಪಿದ ಉದಾಹರಣೆ ಇದೆ. 2015ರ ಆಗಸ್ಟ್‌ನಲ್ಲಿ ಸಹ ಹೆಚ್ಚಳವಾಗಿತ್ತು.

15 ಮಿಲಿಯನ್ ಟನ್ ಈರುಳ್ಳಿ ಬಳಕೆ

15 ಮಿಲಿಯನ್ ಟನ್ ಈರುಳ್ಳಿ ಬಳಕೆ

ಭಾರತದಲ್ಲಿ ವರ್ಷಕ್ಕೆ ಅಂದಾಜು 15 ಮಿಲಿಯನ್ ಟನ್ ಈರುಳ್ಳಿ ಬಳಕೆಯಾಗುತ್ತದೆ. ಕೆ.ಜಿಗೆ 80-100 ರೂ. ದಾಟಿದರೂ ಜನಸಾಮಾನ್ಯರು ಅದನ್ನು ಖರೀದಿಸುವ ಅನಿವಾರ್ಯತೆಗೆ ಒಳಪಡುತ್ತಾರೆ. 1980-81ರಲ್ಲಿ 2.5 ಮಿಲಿಯನ್ ಟನ್‌ನಷ್ಟಿದ್ದ ಈರುಳ್ಳಿ ಉತ್ಪಾದನೆ 2016-17ರ ವೇಳೆಗೆ 22.43 ಟನ್ನಷ್ಟು ಹೆಚ್ಚಳವಾಗಿದೆ. ಜನಸಂಖ್ಯೆಯೂ ಏರಿಕೆಯಾಗಿದೆ. ಅದಕ್ಕೆ ಅನುಗುಣವಾಗಿ ಈರುಳ್ಳಿ ಕೂಡ ಪೂರೈಕೆಯಾಗುತ್ತಿದೆ ಎನ್ನುತ್ತವೆ ಅಂಕಿ ಅಂಶಗಳು. ಆದರೂ ಬೆಲೆ ಏರಿಕೆಯಾಗುವುದಕ್ಕೆ ಬೇಡಿಕೆ ಹೆಚ್ಚಳ ಹಾಗೂ ಪೂರೈಕೆ ಕೊರತೆಯೊಂದೇ ಕಾರಣವಲ್ಲ. ಇದಕ್ಕೆ ಮಾರುಕಟ್ಟೆ ನೀತಿ ನಿರೂಪಣೆಗಳೂ ಕಾರಣ ಎನ್ನಲಾಗುತ್ತಿದೆ.

ರೈತರಿಗೆ ಲಾಭ ಸಿಗುವುದಿಲ್ಲ

ರೈತರಿಗೆ ಲಾಭ ಸಿಗುವುದಿಲ್ಲ

ಭಾರತದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಮತ್ತು ಇಳಿಕೆ ನೇರವಾಗಿ ರೈತರಿಗೆ ಸಂಬಂಧಿಸುವುದಿಲ್ಲ. ಬೆಲೆ ಹೆಚ್ಚಳವಾದಾಗ ಅದಕ್ಕೆ ತಕ್ಕಂತೆ ರೈತರಿಗೆ ಉತ್ತಮ ಬೆಲೆಯೇನೂ ಸಿಗುವುದಿಲ್ಲ. ಆದರೆ ಬೆಲೆ ಇಳಿಕೆಯಾದಾಗ ಮಾತ್ರ ಅದರ ಪರಿಣಾಮ ನೇರವಾಗಿ ಅವರಿಗೆ ತಟ್ಟುತ್ತದೆ. ಮಧ್ಯವರ್ತಿಗಳೇ ಇದರ ಹೆಚ್ಚಿನ ಲಾಭ ಪಡೆದುಕೊಳ್ಳುತ್ತಾರೆ. ರೈತರಿಗೆ ಒಂದು ಕೆ.ಜಿ.ಗೆ 5-8 ರೂ ಮಾತ್ರ ಸಿಗುತ್ತದೆ. ಹೋಲ್‌ಸೇಲ್ ಮಾರಾಟಗಾರರು ಇದಕ್ಕೆ ಶೇ 10-15ರಷ್ಟು ಹೆಚ್ಚುವರಿ ದರ ಸೇರಿಸುತ್ತಾರೆ. ಅದು ಚಿಲ್ಲರೆ ಮಾರುಕಟ್ಟೆಗೆ ಬರುವ ವೇಳೆಗೆ ಶೇ 20-25ರಷ್ಟು ಹೆಚ್ಚಳವಾಗಿರುತ್ತದೆ. ಹೀಗಾಗಿ ಬೆಲೆ ಏರಿಕೆಯಿಂದ ರೈತರಿಗೆ ಸಿಗುವ ಲಾಭದ ಪ್ರಮಾಣ ತೀರಾ ಕಡಿಮೆ. ಗ್ರಾಹಕರಿಗೆ ಆಗುವ ಹೊರೆ ದುಪ್ಪಟ್ಟು.

English summary
India is witnessing massive hike in onion prices across the country. Why onion prices are rising in market? What are the reasons behind it?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X