ಚಾಮರಾಜನಗರ: ರಣಮಳೆಗೆ ಮಳೆಗೆ ಕೊಚ್ಚಿಹೋದ ಬಿತ್ತನೆ ಮಾಡಿದ್ದ ಬೆಳೆಗಳು
ಚಾಮರಾಜನಗರ, ಮೇ, 18: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಅಬ್ಬರದ ಮಳೆಯಿಂದ ರಾಜ್ಯದ ಹಲವೆಡೆ ಅವಾಂತರಗಳೇ ಸೃಷ್ಟಿಯಾಗಿವೆ. ಹಾಗೆಯೇ ಇಂದು (ಮೇ 18) ಸುರಿದ ಭಾರೀ ಮಳೆಯಿಂದ ಗಡಿಜಿಲ್ಲೆಯ ಹಲವೆಡೆ ಹೊಲ, ಗದ್ದೆಗಳು ಜಲಾವೃತವಾಗಿರುವ ಘಟನೆಗಳು ನಡೆದಿವೆ.
ಶನಿವಾರ (ಮೇ 18) ಮಧ್ಯಾಹ್ನ ಮಳೆರಾಯ ಅಬ್ಬರಿದ ಹಿನ್ನೆಲೆ ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ನೀರಲ್ಲಿ ಕೊಚ್ಚಿಹೋದ ಘಟನೆ ಚಾಮರಾಜನಗರ ತಾಲೂಕಿನ ಹಿರೇಬೇಗೂರು, ಕುಲಗಾಣ, ಅರಳಿಕಟ್ಟೆ ಗ್ರಾಮಗಳಲ್ಲಿ ನಡೆದಿದೆ.

ಹಿರೇಬೇಗೂರಿನ ಚೇರ್ಮನ್ ಮಧು, ರಾಜೇಶ್ ಸೇರಿದಂತೆ ಹತ್ತಾರು ರೈತರು ಬಿತ್ತನೆ ಮಾಡಿದ್ದ ಸೂರ್ಯಕಾಂತಿ, ಹತ್ತಿ ಬೀಜಗಳು ಮಳೆ ಆರ್ಭಟಕ್ಕೆ ಕೊಚ್ಚಿ ಹೋಗಿದ್ದು, ಮತ್ತೊಮ್ಮೆ ಬಿತ್ತನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಹಿರೇಬೇಗೂರಲ್ಲಿ ಟೊಮೊಟೊ ಪೈರು ಕೂಡ ಕೊಚ್ಚಿ ಹೋಗಿದ್ದು, ವೀರಭದ್ರಪ್ಪ ಒಂದು ಹೆಕ್ಟೇರ್‌ಗೆ ಹಾಕಿದ್ದ ಟೊಮ್ಯಾಟೊ ಪೈರು ಮಳೆ ಪಾಲಾಗಿದೆ. ಚೇರ್ಮನ್ ಮಧು ಅವರು 8 ಬ್ಯಾಗ್ ಸೂರ್ಯಕಾಂತಿ ಬಿತ್ತಿದ್ದರು. ಈಗ ಎಲ್ಲವೂ ಕೊಚ್ಚಿಹೋಗಿದ್ದು, ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.
ವಾಹನ ಸವಾರರ ಪರದಾಟ: ಗಡಿಜಿಲ್ಲೆ ಚಾಮರಾಜನಗರದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಶನಿವಾರ ಮಧ್ಯಾಹ್ನದ ಜಿಲ್ಲಾ ಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.
ಗುಡುಗು ಸಿಡಿಲಿನೊಂದಿಗೆ ಮಳೆರಾಯ ಚಾಮರಾಜನಗರ ಜಿಲ್ಲಾಕೇಂದ್ರ ಹಾಗೂ ಚಾಮರಾಜನಗರ ತಾಲೂಕಿನ ಮರಿಯಾಲ, ಹರದನಹಳ್ಳಿ, ಉತ್ತುವಳ್ಳಿ ಭಾಗದಲ್ಲಿ ಎಡಬಿಡದೇ ಆರ್ಭಟಿಸಿದ್ದಾನೆ. ದಿಢೀರನೇ ಮಳೆ ಸುರಿದ ಪರಿಣಾಮ, ವಾಹನ ಸವಾರರು ಮಳೆಯಲ್ಲಿ ಸಿಲುಕಿ ಪರದಾಡಿದರು. ಚಾಮರಾಜನಗರಕ್ಕೆ ಪ್ರವೇಶಿಸುವ ಮುನ್ನ ಮೂಡಲಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡಡಿ ಗುಂಡಿಗಳಾಗಿದ್ದು, ಭಾರೀ ವಾಹನಗಳ ಸವಾರರು ಪರದಾಡಿದ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ ಸರಣಿ ಅಪಘಾತ: ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್ ನಿಲ್ದಾಣದ ಮುಂಭಾಗ ಶನಿವಾರ ಸಂಜೆ 6ಕ್ಕೆ ಸರಣಿ ಅಪಘಾತ ಸಂಭವಿಸಿ ವಾಹನಗಳು ಜಖಂಗೊಂಡಿರುವ ಘಟನೆ ನಡೆಯಿತು.
ಮೈಸೂರು ಕಡೆಯಿಂದ ಬರುತ್ತಿದ್ದ ಬೊಲೆರೋ ಪಿಕಪ್ ವಾಹನ ಮತ್ತು ಗುಂಡ್ಲುಪೇಟೆಯಿಂದ ಬೇಗೂರು ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಗುಂಡ್ಲುಪೇಟೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಇನೋವಾ ಕಾರ್ ನಡುವೆ ಡಿಕ್ಕಿ ಸಂಭವಿಸಿತು.
ಮೈಸೂರು ಕಡೆಯಿಂದ ಬಂದ ಬುಲೆರೋ ಪಿಕಪ್ ವಾಹನ ಬಸ್ ನಿಲ್ದಾಣ ಕಡೆಗೆ ಕೇಳುತ್ತಿದ್ದ ಸಾರಿಗೆ ಬಸ್ ಹಿಂಬದಿ ಡಿಕ್ಕಿಯಾಗಿ ರಸ್ತೆ ಎಡಭಾಗದಲ್ಲಿ ಬರುತ್ತಿದ್ದ ಇನ್ನೂ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದಿಂದ ಮೂರು ವಾಹನಗಳು ಜಖಂಗೊಂಡರೆ, ಅದೃಷ್ಟವಶಾಃತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತ ಉಂಟಾಗಿತ್ತು.












Click it and Unblock the Notifications