ಮತಾಂತರಕ್ಕೆ 60 ದಿನ ಮೊದಲೇ ಅರ್ಜಿ ಸಲ್ಲಿಸಬೇಕು: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ
ಬೆಳಗಾವಿ, ಡಿಸೆಂಬರ್ 21: ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರವರು ಒಟ್ಟು 14 ಸೆಕ್ಷನ್ಗಳಿರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಅನ್ನು ಮಂಗಳವಾರ ಮಂಡಿಸಿದರು.
ಮಂಗಳವಾರ ಮಧ್ಯಾಹ್ನ ಊಟದ ನಂತರ ಕಲಾಪ ಆರಂಭವಾದ ತಕ್ಷಣ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವಕಾಶ ನೀಡಿದರು.
ಮತಾಂತರ ನಿಷೇಧ ಮಸೂದೆಗೆ ಜೆಡಿಎಸ್ ಪಕ್ಷದಿಂದಲೂ ವಿರೋಧ ವ್ಯಕ್ತವಾಯಿತು. ಮತಾಂತರ ನಿಷೇಧ ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿತು.

ಮತಾಂತರ ಎಂದರೆ ಯಾರೇ ವ್ಯಕ್ತಿಯು ತನ್ನ ಸ್ವಂತ ಧರ್ಮವನ್ನು ತ್ಯಜಿಸಿ ಮತ್ತೊಂದು ಧರ್ಮವನ್ನು ಅಳವಡಿಸಿಕೊಳ್ಳುವುದು ಎಂದು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021ರಲ್ಲಿ ವ್ಯಾಖ್ಯಾನಿಸಲಾಗಿದೆ.
ರಾಜ್ಯ ಸರ್ಕಾರವು ಪ್ರಸ್ತಾಪಿಸಿರುವ ಮತಾಂತರ ನಿಷೇಧ ಮಸೂದೆಯಲ್ಲಿನ ಪ್ರಮುಖ ಅಂಶಗಳು
* ನಗದು ರೂಪದಲ್ಲಾಗಲೀ ಅಥವಾ ವಸ್ತುವಿನ ರೂಪದಲ್ಲಾಗಲೀ ನೀಡುವ ಯಾವುದೇ ಉಡುಗೊರೆ, ಪ್ರತಿಫಲ, ಸುಲಭ ಹಣ ಅಥವಾ ಭೌತಿಕ ಪ್ರಯೋಜನ ಪಡೆಯುವುದು ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ವಿರುದ್ಧವಾಗಿದೆ.
* ಯಾವುದೇ ಧಾರ್ಮಿಕ ಸಂಸ್ಥೆಯು ನಡೆಸುವ ಶಾಲೆ ಅಥವಾ ಕಾಲೇಜಿನಲ್ಲಿ ಉದ್ಯೋಗ, ಉಚಿತ ಶಿಕ್ಷಣ, ಮದುವೆಯಾಗುವುದಾಗಿ ವಾಗ್ದಾನ, ಉತ್ತಮ ಜೀವನ ಶೈಲಿ, ದೈವಿಕ ಅಸಂತೋಷ ಅಥವಾ ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕೆ ವಿರುದ್ಧವಾಗಿ ವೈಭವೀಕರಿಸುವುದು ಮತಾಂತರದ ಭಾಗವಾಗಿರುತ್ತದೆ.
* ತಪ್ಪು ನಿರೂಪಣೆ, ಬಲವಂತ, ವಂಚನೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷ ಒಡ್ಡುವ ಮೂಲಕ ಅಥವಾ ಮದುವೆಯ ವಾಗ್ದಾನದ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮಾಡುವ ಮತಾಂತರದ ನಿಷೇಧ.
* ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ಮಾಡಿದ ಮದುವೆಯನ್ನು ಅಸಿಂಧುವೆಂದು ಘೋಷಿಸುವುದು.
* ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡತಕ್ಕದ್ದು.

* ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು.
* ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲೆರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು.
* ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕು.
* ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು.
* ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸಬೇಕು.
* ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕು.
* ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.
* ಮ್ಯಾಜಿಸ್ಟ್ರೇಟ್ರಿಂದ ಮಾಹಿತಿ ಸ್ವೀಕರಿಸಿದ ಬಳಿಕ ಸಂಬಂಧಪಟ್ಟ ಇಲಾಖೆ ಮತಾಂತರ ಹೊಂದಿದ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ಹಾಗೂ ಸರ್ಕಾರದಿಂದ ಸಿಗುವ ಆರ್ಥಿಕ ಲಾಭಗಳ ಬಗ್ಗೆ ಸೂಕ್ತ ಕ್ರಮವಹಿಸುವುದು.

* ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.
ಏನೆಲ್ಲಾ ಅಪರಾಧಗಳಾಗುತ್ತವೆ
1) ತಪ್ಪು ನಿರೂಪಣೆ, ಮೋಸ, ಅನಗತ್ಯ ಒತ್ತಡ, ಬಲಾತ್ಕಾರ ಆಮಿಷ ಆಕರ್ಷಣೆಗಳ ಹಾಗೂ ಮದುವೆ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲಾಗಿದೆ.
2) ದೂರು ನೀಡಬಹುದಾದ ಅರ್ಹ ವ್ಯಕ್ತಿಗಳು: ನೊಂದ ಅಥವಾ ಪೀಡಿತ ವ್ಯಕ್ತಿ, ನೊಂದ ವ್ಯಕ್ತಿಯ ಸೋದರ, ಸೋದರಿ, ಪಾಲಕ ಪೊಷಕರು, ರಕ್ತ ಸಂಬಂಧಿ ಅಥವಾ ದತ್ತು ಪಡೆದವರು ಮತಾಂತರದ ದೂರು ನೀಡಬಹುದು.
ಶಿಕ್ಷೆ ಪ್ರಮಾಣವೇನು?
* ನಿಯಮ ಬಾಹಿರವಾಗಿ ಮತಾಂತರ ಮಾಡಿದ್ದು ಸಾಬೀತಾದರೆ 3 ರಿಂದ 5 ವರ್ಷ ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು.
* ವಯಸ್ಕರಲ್ಲದವರನ್ನು, ಮಹಿಳೆಯನ್ನು ಹಾಗೂ ಪರಿಶಿಷ್ಟ ವರ್ಗ ಅಥವಾ ಪಂಗಡದವರನ್ನು ನಿಯಮಬಾಹಿರವಾಗಿ ಮತಾಂತರ ಮಾಡಿದರೆ 3ರಿಂದ 10 ವರ್ಷಗಳವರೆಗೆ ಶಿಕ್ಷೆ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
* ಅಪ್ರಾಪ್ತರು, ಬುದ್ದಿಮಾಂದ್ಯ ವ್ಯಕ್ತಿಗಳು, ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆಗೆ ಕಾಯ್ದೆಯಲ್ಲಿ ಅವಕಾಶವಿದೆ. ಅಷ್ಟೇ ಅಲ್ಲದೆ 50 ಸಾವಿರ ರೂ. ದಂಡ ವಸೂಲಿಗೂ ಅವಕಾಶವಿದೆ.
* ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ ಐದು ಲಕ್ಷ ರೂಪಾಯಿ ಪರಿಹಾರ ಕೊಡಿಸಲು ಅವಕಾಶ ಕಲ್ಪಿಸಲಾಗಿದೆ.
* ಅಪರಾಧ ಪುನರಾವರ್ತನೆ ಆದಲ್ಲಿ ಐದು ವರ್ಷ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ದಂಡ ವಸೂಲಿಗೂ ಅವಕಾಶವಿದೆ.












Click it and Unblock the Notifications