ಯುದ್ಧ ಮುಗಿದಿದೆ ಎಂದ ತಾಲಿಬಾನ್‌: ಉಗ್ರರ ನೀತಿ ಜಾರಿ ಬಂದಾಗ ಏನಾದೀತು ಅಫ್ಘನ್‌ ಸ್ಥಿತಿ?

ಕೈರೋ, ಆ.16: ಯುಎಸ್ ನೇತೃತ್ವದ ಪಡೆಗಳು ಕಾಬೂಲ್‌ನಿಂದ ತೆರಳಿದ ನಂತರ ಕಾಬೂಲ್‌ನಲ್ಲಿ ಅಧ್ಯಕ್ಷೀಯ ಗದ್ದುಗೆಯ ಮೇಲೆ ಹಿಡಿತ ಸಾಧಿಸಿದ ತಾಲಿಬಾನ್ ಭಯೋತ್ಪಾದಕ ಗುಂಪು ಯುದ್ದ ಮುಗಿದಿದೆ ಎಂದು ಘೋಷಿಸಿದೆ. ಈ ಬೆನ್ನಲ್ಲೇ ಪಾಶ್ಚಿಮಾತ್ಯ ರಾಷ್ಟ್ರಗಳು ತಮ್ಮ ನಾಗರಿಕರನ್ನು ಸ್ಥಳಾಂತರಿಸಲು ಸೋಮವಾರ ಹರಸಾಹಸ ಪಡುತ್ತಿದೆ.

ಸುಮಾರು ಎರಡು ದಶಕಗಳಿಂದ ವಿಶ್ವದ ದೊಡ್ಡಣ್ಣ ಅಮೆರಿಕ ಅಫ್ಘಾನಿಸ್ತಾನದಲ್ಲಿ ತನ್ನ ಸೈನ್ಯವನ್ನು ಹೊಂದಿತ್ತು. ಆದರೆ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡ ಅಮೆರಿಕ ತಾಲಿಬಾನ್‌ ಜೊತೆ ಒಂದು ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಒಪ್ಪಂದದಂತೆ ತಾಲಿಬಾನ್‌ ಅಮೆರಿಕ ತನ್ನ ಸೈನ್ಯವನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ಅಫ್ಘಾನ್‌ ಮೇಲೆ ತಾಲಿಬಾನ್‌ ದಾಳಿ ನಡೆಸಿ ಈ ಕದನ ವಿರಾಮವನ್ನು ಮುರಿದಿದೆ.

ಹಲವಾರು ಪ್ರಮುಖ ಪ್ರಾಂತ್ಯಗಳನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್‌ ಉಗ್ರರು ಕೊನೆಗೂ ಅಫ್ಘಾನ್‌ ದೇಶದ ರಾಜಧಾನಿ ಕಾಬೂಲ್‌ ಅನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವಲ್ಲಿ ಸಫಲವಾಗಿದ್ದಾರೆ. ಇಸ್ಲಾಮಿಕ್ ಉಗ್ರರು ನಗರವನ್ನು ಪ್ರವೇಶಿಸುತ್ತಿದ್ದಂತೆ ಅಧ್ಯಕ್ಷ ಅಶ್ರಫ್ ಘನಿ ಭಾನುವಾರ ದೇಶದಿಂದ ಪಲಾಯನ ಮಾಡಿದ್ದಾರೆ. ರಕ್ತಪಾತವನ್ನು ತಪ್ಪಿಸಲು ಬಯಸಿದ್ದೇನೆ ಎಂದು ಅಧ್ಯಕ್ಷ ಅಶ್ರಫ್ ಘನಿ ಹೇಳಿಕೊಂಡಿದ್ದಾರೆ. ಈ ನಡುವೆ ನೂರಾರು ಅಫ್ಘನ್ನರು ತುಂಬಿರುವ ಕಾಬೂಲ್‌ ವಿಮಾನ ನಿಲ್ದಾಣದಿಂದ ತೆರಳಲು ಹತಾಶರಾಗಿದ್ದಾರೆ. "ಅಫ್ಘಾನ್ ಜನರಿಗೆ ಮತ್ತು ಮುಜಾಹಿದ್ದೀನ್‌ಗಳಿಗೆ ಇಂದು ಉತ್ತಮ ದಿನವಾಗಿದೆ. 20 ವರ್ಷಗಳ ತಮ್ಮ ಪ್ರಯತ್ನದ ಫಲ ಮತ್ತು ತ್ಯಾಗಕ್ಕೆ ಸಾಕ್ಷಿಯಾಗಿದ್ದಾರೆ," ಎಂದು ತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರ ಮೊಹಮ್ಮದ್ ನಯೀಮ್ ಅಲ್ ಜಜೀರಾ ಟಿವಿಗೆ ತಿಳಿಸಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದಲ್ಲಿ ಉಗ್ರರು ಮತ್ತೆ ತಮ್ಮದೇ ಆದ ಶರಿಯತ್‌ ಅನ್ನು ಜಾರಿಗೆ ತಂದರೆ ಅಫ್ಘನ್‌ ಸ್ಥಿತಿ ಏನಾಗಬಹುದು ಎಂಬ ಆತಂಕವನ್ನು ಮಾನವ ಹಕ್ಕು ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.

"ದೇವರಿಗೆ ಧನ್ಯವಾದಗಳು, ದೇಶದಲ್ಲಿ ಯುದ್ಧ ಮುಗಿದಿದೆ"

ಶತಕೋಟಿ ಡಾಲರ್ ವೆಚ್ಚದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಇತರರಿಂದ ಹಲವು ವರ್ಷಗಳ ಕಾಲ ತರಬೇತಿ ಪಡೆದು ಸುಸಜ್ಜಿತವಾದ ಅಫ್ಘಾನ್‌ ಪಡೆಗಳು ಕಾಬೂಲ್‌ನಲ್ಲಿ ಭಾನುವಾರ ಸೋತು ಹೋಗಿದೆ. ಅಫ್ಘಾನಿಸ್ತಾನ ರಾಷ್ಟ್ರದ ಹಿಡಿತವನ್ನು ತನ್ನ ಕೈಗೆ ತೆಗೆದುಕೊಳ್ಳಲು ತಾಲಿಬಾನ್‌ ಕೇವಲ ಒಂದು ವಾರ ತೆಗೆದುಕೊಂಡಿತು. ಅಧ್ಯಕ್ಷೀಯ ಅರಮನೆಯಲ್ಲಿ ತಾಲಿಬಾನ್ ಕಮಾಂಡರ್‌ಗಳು ಇದ್ದಾರೆ ಎಂದು ತೋರಿಸುವ ದೃಶ್ಯಗಳನ್ನು ಅಲ್ ಜಜೀರಾವು ಪ್ರಸಾರ ಮಾಡಿತ್ತು. ''ಅಫ್ಘಾನಿಸ್ತಾನದಲ್ಲಿ ಹೊಸ ಆಡಳಿತದ ರೂಪವನ್ನು ಶೀಘ್ರದಲ್ಲೇ ಸ್ಪಷ್ಟಪಡಿಸಲಾಗುವುದು," ಎಂದು ನಯೀಮ್ ಹೇಳಿದರು. ಹಾಗೆಯೇ ತಾಲಿಬಾನ್‌ಗಳು ಪ್ರತ್ಯೇಕವಾಗಿ ಬದುಕಲು ಬಯಸುವುದಿಲ್ಲ ಎಂದು ಹೇಳಿದ ನಯೀಮ್‌, ಶಾಂತಿಯುತ ಅಂತರಾಷ್ಟ್ರೀಯ ಸಂಬಂಧಗಳಿಗೆ ಕರೆ ನೀಡಿದರು. "ನಾವು ಬಯಸಿದ್ದನ್ನು ನಾವು ತಲುಪಿದ್ದೇವೆ, ಅದು ನಮ್ಮ ದೇಶದ ಸ್ವಾತಂತ್ರ್ಯ ಮತ್ತು ನಮ್ಮ ಜನರ ಸ್ವಾತಂತ್ರ್ಯ, ಯಾರನ್ನೂ ಗುರಿಯಾಗಿಸಲು ನಮ್ಮ ಭೂಮಿಯನ್ನು ಬಳಸಲು ನಾವು ಯಾರಿಗೂ ಅನುಮತಿಸುವುದಿಲ್ಲ, ಮತ್ತು ನಾವು ಇತರರಿಗೆ ಹಾನಿ ಮಾಡಲು ಬಯಸುವುದಿಲ್ಲ," ಎಂದು ಮೊಹಮ್ಮದ್ ನಯೀಮ್‌ ಹೇಳಿದರು. ಹಾಗೆಯೇ "ದೇವರಿಗೆ ಧನ್ಯವಾದಗಳು, ದೇಶದಲ್ಲಿ ಯುದ್ಧ ಮುಗಿದಿದೆ" ಎಂದು ತಿಳಿಸಿದ್ದಾರೆ.

 ಅಫ್ಘಾನ್‌ ತೊರೆಯುತ್ತಿರುವ ನಾಗರಿಕರು

ಅಫ್ಘಾನ್‌ ತೊರೆಯುತ್ತಿರುವ ನಾಗರಿಕರು

ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರರು ''ಸೋಮವಾರ ಮುಂಜಾನೆ ಎಲ್ಲಾ ರಾಯಭಾರ ಸಿಬ್ಬಂದಿಗಳು, ರಾಯಭಾರಿ ರಾಸ್ ವಿಲ್ಸನ್ ಸೇರಿದಂತೆ, ಕಾಬೂಲ್ ವಿಮಾನ ನಿಲ್ದಾಣಕ್ಕೆ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ. ಅಮೆರಿಕದ ಧ್ವಜವನ್ನು ಕೆಳಗಿಳಿಸಲಾಗಿದೆ ಮತ್ತು ರಾಯಭಾರ ಕಾಂಪೌಂಡ್‌ನಿಂದ ಅಮೆರಿಕದ ಧ್ವಜವನ್ನು ತೆಗೆದುಹಾಕಲಾಗಿದೆ,'' ಎಂದು ಹೇಳಿದರು. ತಾಲಿಬಾನ್‌ ವಶದಲ್ಲಿರುವ ಅಫ್ಘಾನ್‌ ರಾಷ್ಟ್ರದ ಮುಂದಿನ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಪಾಕಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿರುವ ಮಾನವ ಹಕ್ಕುಗಳ ಕಾರ್ಯಕರ್ತ ರಕ್ಷಂಡ ಜಿಲಾಲಿ, "ತಾಲಿಬಾನ್‌ಗಳು ವಿಮಾನ ನಿಲ್ದಾಣವನ್ನು ಹೇಗೆ ಹಿಡಿದಿಟ್ಟುಕೊಳ್ಳಬಹುದು ಮತ್ತು ಅಫ್ಘನ್ನರಿಗೆ ನಿಯಮಗಳು ಮತ್ತು ಷರತ್ತುಗಳನ್ನು ಹೇಗೆ ನಿರ್ದೇಶಿಸಬಹುದು?," ಎಂದು ತಿಳಿಸಿದ್ದಾರೆ. "ಇದು ನಮ್ಮ ವಿಮಾನ ನಿಲ್ದಾಣವಾಗಿದೆ ಆದರೆ ನಾವು ಸಂಪೂರ್ಣ ಅನಿಶ್ಚಿತತೆಯಲ್ಲಿ ಕಾಯುತ್ತಿರುವಾಗ ರಾಜತಾಂತ್ರಿಕರನ್ನು ಸ್ಥಳಾಂತರಿಸುವುದನ್ನು ನಾವು ನೋಡುತ್ತಿದ್ದೇವೆ," ಎಂದು ಜಿಲಾಲಿ ತನಗೆ ಅನೇಕ ಜೀವ ಬೆದರಿಕೆಗಳು ಬಂದಿವೆ ಎಂದು ವಿಮಾನ ನಿಲ್ದಾಣದಿಂದ ವಾಟ್ಸ್‌ಆಪ್ ಮೂಲಕ ರಾಯಿಟರ್ಸ್‌ಗೆ ತಿಳಿಸಿದರು.

ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್ ಮತ್ತು ಜಪಾನ್ ಸೇರಿದಂತೆ 60 ಕ್ಕೂ ಹೆಚ್ಚು ಪಾಶ್ಚಿಮಾತ್ಯ ದೇಶಗಳು ಜಂಟಿ ಹೇಳಿಕೆಯನ್ನು ನೀಡಿವೆ. ''ದೇಶವನ್ನು ತೊರೆಯಲು ಬಯಸುವ ಎಲ್ಲಾ ಆಫ್ಘನ್ನರು ಮತ್ತು ಅಂತರರಾಷ್ಟ್ರೀಯ ನಾಗರಿಕರನ್ನು ನಿರ್ಗಮಿಸಲು ಅನುಮತಿ ನೀಡಬೇಕು,'' ಎಂದು ಹೇಳಿದೆ. "ಅಫ್ಘಾನ್ ಜನರು ಸುರಕ್ಷತೆ, ಭದ್ರತೆ ಮತ್ತು ಘನತೆಯಿಂದ ಬದುಕಲು ಅರ್ಹರು," ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. "ಅಂತರಾಷ್ಟ್ರೀಯ ಸಮುದಾಯದಲ್ಲಿ ನಾವು ಅವರಿಗೆ ಸಹಾಯ ಮಾಡಲು ಸಿದ್ಧವಾಗಿ ನಿಂತಿದ್ದೇವೆ," ಎಂದು 60 ಕ್ಕೂ ಹೆಚ್ಚು ಪಾಶ್ಚಿಮಾತ್ಯ ದೇಶಗಳು ಹೇಳಿದೆ.

80 ಗುಂಪಿನ ಗಾಯಾಳುಗಳನ್ನು ಕಾಬೂಲ್‌ನ ಆಸ್ಪತ್ರೆಗೆ ಕರೆತರಲಾಗಿದೆ. ಹಾಗೆಯೇ ತೀವ್ರ ಗಾಯವಾಗಿ ಜೀವ ಭಯ ಇರುವವರನ್ನು ಮಾತ್ರ ನಾವು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ ಎಂದು ತುರ್ತುಪರಿಸ್ಥಿತಿ ಸಹಾಯ ಗುಂಪು ಹೇಳಿರುವ ಮೂಲಕ ಗಾಯಾಳುಗಳು ಹಲವಾರು ಮಂದಿ ಇದ್ದಾರೆ ಎಂಬುವುದರ ಸುಳಿವು ನೀಡಿದ್ದಾರೆ. ಫೇಸ್ಬುಕ್ ಪೋಸ್ಟ್ ನಲ್ಲಿ, ಘನಿ, ಕಾಬೂಲ್‌ನ ಲಕ್ಷಾಂತರ ನಿವಾಸಿಗಳಿಗೆ ಅಪಾಯವನ್ನುಂಟು ಮಾಡುವ ತಾಲಿಬಾನ್ ಜೊತೆಗಿನ ಘರ್ಷಣೆಯನ್ನು ತಪ್ಪಿಸಲು ದೇಶವನ್ನು ತೊರೆದಿದ್ದಾರೆ ಎಂದು ಹೇಳಿದರು. ಸೆಪ್ಟೆಂಬರ್ 11, 2001 ರ ದಾಳಿಯ ನಂತರ ಅಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿದ್ದ ಸೇನೆಯನ್ನು ಹಿಂಪಡೆಯುವ ನಾಯಕತ್ವದ ನಿರ್ಧಾರದಿಂದಾಗಿ, ನಾಯಕತ್ವದ ವೈಫಲ್ಯದಿಂದ ಅವ್ಯವಸ್ಥೆ ಉಂಟಾಗಿದೆ ಎಂದು ವಾಷಿಂಗ್ಟನ್‌ನಲ್ಲಿ, ಅಧ್ಯಕ್ಷ ಜೋ ಬೈಡೆನ್‌ರ ವಿರೋಧಿಗಳು ಆರೋಪ ಮಾಡಿದರು.

 ಶರಿಯಾ: ಇಸ್ಲಾಮ್‌ ಕಾನೂನು

ಶರಿಯಾ: ಇಸ್ಲಾಮ್‌ ಕಾನೂನು

ತಾಲಿಬಾನ್‌ಗಳು ತಮ್ಮ ಶರಿಯಾ ಅಥವಾ ಇಸ್ಲಾಮಿಕ್ ಧಾರ್ಮಿಕ ಕಾನೂನನ್ನು ಹೇರುವಲ್ಲಿ ಹಿಂದಿನ ಕಠಿಣ ಅಭ್ಯಾಸಗಳಿಗೆ ಹಿಂದಿರುಗುತ್ತಾರೆ ಎಂದು ಅನೇಕ ಅಫ್ಘನ್‌ಗಳು ಭಯಪಡುತ್ತಿದ್ದಾರೆ. ತಾಲಿಬಾನ್‌ಗಳ 1996-2001ರ ಆಳ್ವಿಕೆಯಲ್ಲಿ, ಮಹಿಳೆಯರು ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹಾಗೆಯೇ ಕಲ್ಲೆಸೆತ, ಚಾವಟಿ ಮತ್ತು ಗಲ್ಲಿಗೇರಿಸುವಂತಹ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಮಹಿಳಾ ಹಕ್ಕುಗಳನ್ನು ಗೌರವಿಸುವ ಮತ್ತು ವಿದೇಶಿಯರು ಮತ್ತು ಅಫ್ಘನ್ನಿಯನ್ನರನ್ನು ರಕ್ಷಿಸುವ ಭರವಸೆಯೊಂದಿಗೆ ಈ ತಾಲಿಬಾನ್‌ ಉಗ್ರರು ಹೆಚ್ಚು ಮುಖವಾಡ ಧರಿಸಿಯೇ ಜೀವಿಸುವ ಪ್ರಯತ್ನ ನಡೆಸಿದ್ದರು. "ನಾವು ಎಲ್ಲಾ ಅಫ್ಘಾನ್ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ ಮತ್ತು ಅಫ್ಘನ್ನಿಗರಿಗೆ ಅಗತ್ಯ ರಕ್ಷಣೆಯನ್ನು ಖಾತರಿಪಡಿಸುತ್ತೇವೆ," ಎಂದು ನಯೀಮ್ ಅಲ್ ಜಜೀರಾ ಮುಬಾಶರ್ ಟಿವಿಗೆ ತಿಳಿಸಿದರು.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ತಾಲಿಬಾನ್ ಮತ್ತು ಇತರ ಎಲ್ಲ ಪಕ್ಷಗಳನ್ನು ಅತ್ಯಂತ ಸಂಯಮದಿಂದ ಇರಬೇಕೆಂದು ಒತ್ತಾಯಿಸಿದರು ಮತ್ತು ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಭವಿಷ್ಯದ ಬಗ್ಗೆ ನಿರ್ದಿಷ್ಟ ಕಾಳಜಿಯನ್ನು ವ್ಯಕ್ತಪಡಿಸಿದರು. ಪೆಂಟಗನ್‌ಗೆ ಕೆಲಸ ಮಾಡಿದ ಯುಎಸ್ ನಾಗರಿಕರು ಮತ್ತು ಅಫ್ಘಾನಿಸ್ತಾನಗಳನ್ನು ಸ್ಥಳಾಂತರಿಸಲು ಸಹಾಯ ಮಾಡಲು ಇನ್ನೂ 1,000 ಸೈನಿಕರಿಗೆ ಅಧಿಕಾರ ನೀಡಿದೆ ಎಂದು ಯುಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಷಿಂಗ್ಟನ್‌ನಲ್ಲಿ ಭಾನುವಾರ ಸಂಜೆ ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ಪ್ರತಿಕ್ರಿಯೆ ನೀಡಿ, ಸುಮಾರು 500 ಜನರನ್ನು, ಬಹುತೇಕ ಅಮೆರಿಕನ್ನರನ್ನು ಇಲ್ಲಿಯವರೆಗೆ ಸ್ಥಳಾಂತರಿಸಲಾಗಿದೆ, ಮತ್ತು ಎಲ್ಲಾ ಯೋಜಿತ ಯುಎಸ್ ಪಡೆಗಳು ಕಾಬೂಲ್‌ನಲ್ಲಿರುವಾಗ ಈ ಸಂಖ್ಯೆ ದಿನಕ್ಕೆ 5,000 ಕ್ಕೆ ಏರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಫ್ರಾನ್ಸ್, ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ ಯುರೋಪಿಯನ್ ರಾಷ್ಟ್ರಗಳು ಕೂಡ ನಾಗರಿಕರನ್ನು ಹಾಗೂ ಕೆಲವು ಅಫ್ಘನ್ ಉದ್ಯೋಗಿಗಳನ್ನು ದೇಶದಿಂದ ಹೊರಹಾಕಲು ಕೆಲಸ ಮಾಡುತ್ತಿವೆ ಎಂದು ಹೇಳಿದರು. ಸದ್ಯಕ್ಕೆ ತನ್ನ ರಾಯಭಾರ ಕಚೇರಿಯನ್ನು ಸ್ಥಳಾಂತರಿಸುವ ಅಗತ್ಯವಿಲ್ಲ ಎಂದು ರಷ್ಯಾ ಹೇಳಿದೆ. ಟರ್ಕಿ ತನ್ನ ರಾಯಭಾರ ಕಚೇರಿಯು ತನ್ನ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಹೇಳಿದೆ.

 ಅಫ್ಘಾನಿಸ್ತಾನದಿಂದ ಅಮೆರಿಕನ್ನರ ನಿರ್ಗಮನ

ಅಫ್ಘಾನಿಸ್ತಾನದಿಂದ ಅಮೆರಿಕನ್ನರ ನಿರ್ಗಮನ

1975 ರಲ್ಲಿ ಯುನೈಟೆಡ್ ಸ್ಟೇಟ್ಸ್ ವಿಯೆಟ್ನಾಂನಿಂದ ಹೊರಟ ಹೆಲಿಕಾಪ್ಟರ್‌ಗಳ ಚಿತ್ರಗಳು ಅಮೆರಿಕದ ಹೊರಹೋಗುವಿಕೆಯನ್ನು ಪ್ರಚೋದಿಸುತ್ತಿವೆಯೇ ಎಂಬ ಎಬಿಸಿ ನ್ಯೂಸ್‌ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಯುಎಸ್ ರಾಜ್ಯ ಕಾರ್ಯದರ್ಶಿ ಆಂಟನಿ ಬ್ಲಿಂಕನ್, "ನಾವು ಒಂದು ಹೆಜ್ಜೆ ಹಿಂದಕ್ಕೆ ಹೋಗೋಣ. ಇದು ಸ್ಪಷ್ಟವಾಗಿ ಸೈಗಾನ್ ಅಲ್ಲ," ಎಂದು ತಿಳಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಯನ್ನು ಆಗಸ್ಟ್ 31 ರೊಳಗೆ ಹಿಂದಕ್ಕೆ ಕರೆಸಿಕೊಳ್ಳಲು ತನ್ನ ರಿಪಬ್ಲಿಕನ್ ಪೂರ್ವವರ್ತಿ ಡೊನಾಲ್ಡ್ ಟ್ರಂಪ್ ಆರಂಭಿಸಿದ ಯೋಜನೆಗೆ ಅಂಟಿಕೊಂಡ ನಂತರ ಬೈಡೆನ್ ದೇಶೀಯ ಟೀಕೆಗಳನ್ನು ಎದುರಿಸಬೇಕಾಯಿತು ಎಂಬುವುದು ಇಲ್ಲಿ ಗಮನಿಸಬೇಕಾದ ವಿಚಾರ. ಪ್ರಸ್ತುತ ಹಲವಾರು ಮಂದಿ ಬೈಡೆನ್‌ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರೂ ಇದು ಡೊನಾಲ್ಡ್‌ ಟ್ರಂಪ್‌ ಆರಂಭ ಮಾಡಿದ ಕಾರ್ಯದ ಮುಂದುವರಿಕೆ ಎಂಬುವುದು ಮಾತ್ರ ಸತ್ಯ.

ಭಾನುವಾರ ಒಂದು ಹೇಳಿಕೆಯಲ್ಲಿ, ಸೆನೆಟ್ ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ "ಅಮೆರಿಕನ್ ನಾಯಕತ್ವದ ನಾಚಿಕೆಗೇಡಿನ ವೈಫಲ್ಯ" ಎಂದು ಬೈಡೆನ್ ವಿರುದ್ದ ಟೀಕೆ ಮಾಡಿದರು. "ಚೀನಾದಂತಹ ಭಯೋತ್ಪಾದಕರು ಮತ್ತು ಪ್ರಮುಖ ಸ್ಪರ್ಧಿಗಳು ಒಂದು ಮಹಾಶಕ್ತಿಯ ಮುಜುಗರವನ್ನು ಕೆಳಮಟ್ಟದಲ್ಲಿ ನೋಡುತ್ತಿದ್ದಾರೆ," ಎಂದು ಮೆಕ್‌ಕಾನ್ನೆಲ್ ಹೇಳಿದರು. ಅಫ್ಘಾನಿಸ್ತಾನದಲ್ಲಿ ಹಸ್ತಕ್ಷೇಪ ಮಾಡದಿರುವುದಕ್ಕೆ ಪ್ರತಿಯಾಗಿ ತಾಲಿಬಾನ್ ಇತರರ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ನೀತಿಯನ್ನು ಅಳವಡಿಸಿಕೊಳ್ಳುವುದಾಗಿ ನಯೀಮ್ ಹೇಳಿದರು. "ಅಫ್ಘಾನಿಸ್ತಾನದಲ್ಲಿ ವಿದೇಶಿ ಪಡೆಗಳು ತಮ್ಮ ವಿಫಲ ಅನುಭವವನ್ನು ಮತ್ತೊಮ್ಮೆ ಪುನರಾವರ್ತಿಸುತ್ತವೆ ಎಂದು ನಾವು ಭಾವಿಸುವುದಿಲ್ಲ," ಎಂದು ತಾಲಿಬಾನ್ ರಾಜಕೀಯ ಕಚೇರಿಯ ವಕ್ತಾರ ಮೊಹಮ್ಮದ್ ನಯೀಮ್ ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+