ಹೊಸ ವರ್ಷಕ್ಕೆ ಕೊಡಗಿನಲ್ಲಿ ಅಶ್ಲೀಲ ಪಾರ್ಟಿಯ ಸಂದೇಶ ರವಾನಿಸಿದ ಯುವಕ ಅರೆಸ್ಟ್
ಮಡಿಕೇರಿ, ಡಿಸೆಂಬರ್ 28: ಕೊಡಗಿನ ನಿಸರ್ಗ ಚೆಲುವಿಗೆ ಮಾರು ಹೋಗಿರುವ ಪ್ರವಾಸಿಗರು ವರ್ಷಾಚರಣೆಯ ಸಲುವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಆಗಮಿಸುತ್ತಿದ್ದು, ಇಲ್ಲಿನ ಹೋಂಸ್ಟೇ, ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡಿ ಒಂದೆರಡು ದಿನಗಳ ಕಾಲ ಖುಷಿಯಾಗಿ ಕಾಲ ಕಳೆದು ಹೋಗುತ್ತಿದ್ದಾರೆ.
ಇಲ್ಲಿ ಯಾವುದೇ ಅನೈತಿಕ ಚಟುವಟಿಕೆಗೆ ಅವಕಾಶವಾಗುವ ಕಾರ್ಯಕ್ರಮಗಳು ನಡೆಯದಂತೆ ನೋಡಿಕೊಳ್ಳಲಾಗುತ್ತಿದ್ದರೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ತೇಲಿ ಬಿಡುತ್ತಿರುವುದು ತಲೆನೋವಾಗಿ ಪರಿಣಮಿಸಿದ್ದು, ಇಂತಹ ಪೋಸ್ಟ್‌ಗಳತ್ತ ಎಚ್ಚರವಾಗಿರುವಂತೆ ಸೂಚನೆ ನೀಡಲಾಗಿದೆ.

ಕೊಡಗಿಗೆ ಬರುವ ಪ್ರವಾಸಿಗರ ಮೇಲೆ ಪೊಲೀಸರು ಸೇರಿದಂತೆ ಹೋಂಸ್ಟೇ ಮಾಲೀಕರು ನಿಗಾವಹಿಸುತ್ತಿದ್ದು, ಕುಟುಂಬಸ್ಥರಿಗೆ ಮಾತ್ರ ತಂಗಲು ಅವಕಾಶ ನೀಡುತ್ತಾರೆ. ಅಲ್ಲದೆ ಯಾವುದೇ ಅನೈತಿಕ ಚಟುವಟಿಕೆಗೆ ಇಲ್ಲಿ ಆಸ್ಪದವಿಲ್ಲ. ಆದರೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಕೊಡಗಿನಲ್ಲಿ ಅನೈತಿಕ ಚಟುವಟಿಕೆಯ ಕಾರ್ಯಕ್ರಮಗಳಿಗೆ ಅವಕಾಶವಿದೆ ಎಂಬಂತಹ ಸಂದೇಶಗಳನ್ನು ತೇಲಿ ಬಿಡುವ ಮೂಲಕ ಸ್ವಾಸ್ಥ‍್ಯ ಕೆಡಿಸುತ್ತಿದ್ದು, ಆ ಮೂಲಕ ವಿಕೃತಿ ಮೆರೆಯುತ್ತಿದ್ದು, ಅಂತಹ ಯಾವುದೇ ಪೋಸ್ಟ್ ಗಳು ಕಂಡು ಬಂದರೂ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗುತ್ತಿದೆ.
ಈ ನಡುವೆ Koki @ Shayan ಎಂಬ ಟ್ವಿಟರ್ ಖಾತೆಯಲ್ಲಿ "Guys thers is an group sex event in Madikeri Club Mahindra Resort, Rs.3,500/- per person Bro with safety secrecy maintained no HF 20-35 allowed" ಎಂಬುದಾಗಿ ಸಮಯ 04.31 ಘಂಟೆಗೆ ಎಂಬ ಅಶ್ಲೀಲ ಪ್ರಚೋದನಾಕಾರಿ ಸಂದೇಶವನ್ನು ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಹರಿದಾಡಿದ್ದು, ಇದನ್ನು ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಅಲ್ಲದೆ ಈ ಬಗ್ಗೆ ಜಿಲ್ಲಾ ಪೊಲೀಸ್ Social Media Monitoring Cell ನ ಅಧಿಕಾರಿ, ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.

ಅಲ್ಲದೆ ಈ ರೀತಿಯ ಸಂದೇಶದಿಂದ ಸಾರ್ವಜನಿಕರು ಪ್ರಚೋದನೆಗೆ ಒಳಗಾಗಿ ಸಮಾಜದ ಸ್ವಾಸ್ಥ್ಯ ಹದಗೆಡುವ ಸಾಧ್ಯತೆ ಇರುವುದರಿಂದ Koki @ Shayan ಎಂಬ ಹೆಸರಿನ ಟ್ವಿಟರ್ ಖಾತೆ ತೆರೆದು ಮೇಲ್ಕಂಡಂತೆ ಅಶ್ಲೀಲವಾಗಿ ಪೋಸ್ಟ್ ಮಾಡಿರುವ ಖಾತೆದಾರನ ಮೇಲೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಬಾಳೆಲೆ ನಿವಾಸಿಯಾದ ಶಯನ್(20) ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
2024ರ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಜಿಲ್ಲೆ ಹೊರಜಿಲ್ಲೆ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರು ಸಾಮಾಜಿಕ ಜಾಲಾತಾಣಗಳಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಕುರಿತು ಪೋಸ್ಟ್ ಮಾಡುವ ಸುಳ್ಳು ಸಂದೇಶಗಳ ಕುರಿತು ಎಚ್ಚರಿಕೆ ವಹಿಸುವುದು ಹಾಗೂ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ನಡೆಸುತ್ತಿರುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿಗೆ ಸಂಖ್ಯೆ: 08272-228300, 9480804900 ಪೊಲೀಸರು ತಿಳಿಸಿದ್ದಾರೆ.

ಈಗಾಗಲೇ ಕೊಡಗು ಪೊಲೀಸರು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೇಲೆ ನಿಗಾವಹಿಸಿದ್ದು, ಜಿಲ್ಲೆಯಲ್ಲಿರುವ ರೆಸಾರ್ಟ್, ಹೋಂಸ್ಟೇ, ಹೋಟೆಲ್ ಗಳಲ್ಲಿ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಅಲ್ಲದೆ ಕಾನೂನು ಕ್ರಮಗಳನ್ನು ಅಳವಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ.
ಒಂದು ವೇಳೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಸಮಾಜದ ಸ್ವಾಸ್ಥ್ಯ ಹದಗೆಡುವ ರೀತಿಯ ಯಾವುದೇ ರೀತಿಯ ಅನೈತಿಕ, ಅಕ್ರಮ ಚಟುವಟಿಕೆಗಳು ನಡೆಸುತ್ತಿರುವ ಕುರಿತು ಭಾವಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ (Facebook, Instagram, Twitter & etc.) ಹಂಚಿಕೊಂಡಿರುವ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆಯೂ (ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ.) ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications