ಸೆ. 27ರಂದು ವಿಶ್ವ ಪ್ರವಾಸೋದ್ಯಮ ದಿನ; ಪರಿಸರ ಸ್ನೇಹಿ ಚಟುವಟಿಕೆಗಳು
ಬೆಂಗಳೂರು, ಸೆಪ್ಟೆಂಬರ್ 24; ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಸೆಪ್ಟೆಂಬರ್ 27ರಂದು ಆಚರಣೆ ಮಾಡಲಾಗುತ್ತದೆ. ಈ ಪ್ರಯುಕ್ತ ವಿವಿಧ ಪರಿಸರಸ್ನೇಹಿ ಚಟುವಟಿಕೆಗಳನ್ನು ಆಯೋಜನೆ ಮಾಡಬೇಕು ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ಹೇಳಿದ್ದಾರೆ.
ಸೆಪ್ಟೆಂಬರ್ 27ರ ಬುಧವಾರ 2023ನೇ ಸಾಲಿನ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು 'ಟೂರಿಸಂ & ಗ್ರೀನ್ ಇನ್ವೆಸ್ಟ್‌ಮೆಂಟ್ಸ್' ಎಂಬ ಸಂದೇಶದಡಿಯಲ್ಲಿ ಆಚರಿಸಲಾಗುತ್ತಿದೆ. ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಲು ಸಾಮಾನ್ಯ ಸಲಹೆಗಳನ್ನು ಪಾಲಿಸುವಂತೆ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.

ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಚತೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ನೈರ್ಮಲ್ಯ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇನ್ನಿತರ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಪಡಿಸಲು ಸಲಹೆಗಳನ್ನು ನೀಡಲಾಗಿದೆ.
ಪರಿಸರ ಸ್ನೇಹಿ ಚಟುವಟಿಕೆ ಸಲಹೆಗಳು
* ರಾಜ್ಯಾದ್ಯಂತ ಎಲ್ಲ ಹೋಟೆಲ್‍ಗಳು/ ರೆಸ್ಟೋರೆಂಟ್‍ಗಳಲ್ಲಿ ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಥೀಮ್‍ನ್ನು ಪರಿಸರಸ್ನೇಹಿ ಬಟ್ಟೆ ಬ್ಯಾನರ್‌ನಲ್ಲಿ ಮುದ್ರಿಸಿ ಪ್ರದರ್ಶಿಸುವುದು.
* ರಾಜ್ಯಾದ್ಯಂತ ಎಲ್ಲಾ ಹೋಟೆಲ್‍ಗಳು/ ರೆಸ್ಟೋರೆಂಟ್‍ಗಳಲ್ಲಿ ಸಾಂಪ್ರದಾಯಿಕ ಖಾದ್ಯಗಳನ್ನು ನೀಡುವುದು.
* ಪ್ರವಾಸಿ ತಾಣಗಳ ಕುರಿತ ವಿಡಿಯೋಗಳನ್ನು ಎಲ್ಲಾ ಹೋಟೆಲ್‍ಗಳು/ ಕಛೇರಿಗಳಲ್ಲಿ ಪ್ರದರ್ಶಿಸುವುದು.
* ಸ್ವಚ್ಚತಾ ಅಭಿಯಾನಗಳನ್ನು ಕೈಗೊಳ್ಳುವುದು ಹಾಗೂ ಸಸಿಗಳನ್ನು ನೆಡುವುದು.
* ರಾಜ್ಯಾದ್ಯಂತ ಎಲ್ಲಾ ಹೋಟೆಲ್‍ಗಳು/ ರೆಸ್ಟೋರೆಂಟ್‍ಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ಕೈಗೊಳ್ಳುವುದು.
* ಎಲ್ಲಾ ಹೋಟೆಲ್/ರೆಸ್ಟೋರೆಂಟ್ ಕೊಠಡಿಗಳ ದರಗಳಲ್ಲಿ ವಿಶೇಷ ರಿಯಾಯಿತಿಯನ್ನು ನೀಡುವುದು.
* ಎಲ್ಲಾ ಹೋಟೆಲ್‍ಗಳಲ್ಲಿ ಛಾಯಾಚಿತ್ರಗಳನ್ನೊಂಡ ಸೆಲ್ಫಿ ಪಾಯಿಂಟ್‍ಗಳನ್ನು ಅಳವಡಿಸುವುದು.
* ಹೋಟೆಲ್‍ಗಳು/ ರೆಸ್ಟೋರೆಂಟ್‍ಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳುವುದು.
ವಿಶ್ವಸಂಸ್ಥೆಯ ವಿಶ್ವ ಪ್ರವಾಸೋದ್ಯಮ ಸಂಸ್ಥೆಯು ವಿಶ್ವ ಪ್ರವಾಸೋದ್ಯಮ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 27 ರಂದು 1980 ರಿಂದ ಆಚರಿಸುತ್ತಿದೆ. ಹಲವಾರು ಪ್ರವಾಸಿ ಕೇಂದ್ರಗಳು, ಸಂಘಟನೆಗಳು ಮತ್ತು ಸರ್ಕಾರಿ ಏಜೆನ್ಸಿಗಳು ಸಹ ಈ ದಿನವನ್ನು ಆಚರಿಸುವಲ್ಲಿ ವಿಶೇಷ ಆಸಕ್ತಿಹೊಂದಿವೆ.
ಪ್ರವಾಸ ಮಾಡುವುದರಿಂದ ನಮ್ಮ ಜೀವನದ ಮೇಲೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಅರ್ಥಿಕ ಪರಿಣಾಮವನ್ನು ಬೀರುತ್ತದೆ. ಪ್ರವಾಸೋದ್ಯಮ ದಿನ ಆಚರಿಸುವ ಮುಖ್ಯ ಉದ್ದೇಶ ಪ್ರವಾಸೋದ್ಯಮದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
ಕೋವಿಡ್ ಪರಿಸ್ಥಿತಿ ಭಾರತ ಸೇರಿದಂತೆ ಎಲ್ಲಾ ದೇಶಗಳ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರಿತ್ತು. ಈಗ ಕ್ರಮೇಣ ದೇಶೀಯ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಪ್ರವಾಸೋದ್ಯಮವು ಧರ್ಮ, ಕೃಷಿ, ಕಲೆ ಮತ್ತು ಕರಕುಶಲ ಇತ್ಯಾದಿ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಆರ್ಥಿಕ ಬೆಳವಣಿಗೆಗೆ ಸಹ ಸಹಾಯಕವಾಗಿದೆ.
ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ವಿಶ್ವದಾದ್ಯಂತ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಲಾಗುತ್ತದೆ. ಪ್ರವಾಸೋದ್ಯಮದ ಮಹತ್ವ ಮತ್ತು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಮೌಲ್ಯದ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ವಿಶ್ವ ಪ್ರವಾಸೋದ್ಯಮ ದಿನದ ಉದ್ದೇಶವಾಗಿದೆ.












Click it and Unblock the Notifications