Vande Bharat Express: ಆ. 31ರಿಂದ ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 28: ಉದ್ಯಾನ ನಗರಿ ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ರೈಲು ಬರಲಿದೆ. ಲೋಕಸಭೆ ಚುನಾವಣೆ 2024 ಮುಗಿಯುತ್ತಿದ್ದಂತೆಯೇ ಭಾರತೀಯ ರೈಲ್ವೆ ವಂದೇ ಭಾರತ್ ರೈಲು ಘೋಷಣೆ ಮಾಡಿತ್ತು. ರೈಲು ಪ್ರಾಯೋಗಿಕ ಸಂಚಾರ ಪೂರ್ಣಗೊಂಡಿದೆ. ಆಗಸ್ಟ್ 31ರಂದು ರೈಲು ಸೇವೆಗೆ ಚಾಲನೆ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಧುರೈ-ಬೆಂಗಳೂರು (ಕಂಟೋನ್ಮೆಂಟ್) ನಡುವೆ ಸಂಚಾರ ನಡೆಸಲಿದೆ. ರೈಲು ಸೇವೆ ಆರಂಭಕ್ಕೆ ಪೂರ್ವಭಾವಿಯಾಗಿ 4 ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ. ಈಗ ವಾಣಿಜ್ಯ ಸಂಚಾರ ಆರಂಭವಾಗುತ್ತಿದೆ.

ಬೆಂಗಳೂರು-ಚೆನ್ನೈ, ಬೆಂಗಳೂರು-ಕೊಯಮತ್ತೂರು ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರವನ್ನು ನಡೆಸುತ್ತಿದೆ. ಈಗ ಮಧುರೈ-ಬೆಂಗಳೂರು ನಡುವೆ ಈ ಮಾದರಿ ರೈಲು ಸೇವೆ ಆರಂಭವಾಗುತ್ತಿದೆ. ರೈಲು ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ಸಂಚಾರವನ್ನು ನಡೆಸಲಿದೆ.
ಮಧುರೈ-ಬೆಂಗಳೂರು ವಂದೇ ಭಾರತ್ ವೇಳಾಪಟ್ಟಿ: ಮಧುರೈ-ಬೆಂಗಳೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ದರಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಬೆಂಗಳೂರು ಮತ್ತು ಮಧುರೈನಿಂದ ಹೊರಡುವ ರೈಲುಗಳು ದಿಂಡಿಗಲ್, ತಿರುಚಿರಾಪಳ್ಳಿ, ನಾಮಕಲ್, ಸೇಲಂ, ಕೃಷ್ಣರಾಜಪುರದಲ್ಲಿ ನಿಲುಗಡೆ ಹೊಂದಲಿವೆ. ರೈಲು ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳ ಕಾಲ ಸಂಚಾರವನ್ನು ನಡೆಸಲಿದೆ.
ರೈಲು ನಂಬರ್ 20671 ಮಧುರೈ-ಬೆಂಗಳೂರು ಕಂಟೋನ್ಮೆಂಟ್ ರೈಲು ಮಧುರೈನಿಂದ 5.15ಕ್ಕೆ ಹೊರಡಲಿದೆ. ಕಂಟೋನ್ಮೆಂಟ್ ರೈಲು ನಿಲ್ದಾಣಕ್ಕೆ 1 ಗಂಟೆಗೆ ಆಗಮಿಸಲಿದೆ. ರೈಲು ನಂಬರ್ 20672 ಬೆಂಗಳೂರು ಕಂಟೋನ್ಮೆಂಟ್-ಮಧುರೈ ರೈಲು ಮಧ್ಯಾಹ್ನ 1.30ಕ್ಕೆ ಕಂಟೋನ್ಮೆಂಟ್‌ನಿಂದ ಹೊರಡಲಿದ್ದು, ಮಧುರೈಗೆ 9.45ಕ್ಕೆ ತಲುಪಲಿದೆ.
ದಕ್ಷಿಣ ರೈಲ್ವೆ ಮಧುರೈ-ಬೆಂಗಳೂರು ನಡುವೆ ವಂದೇ ಭಾರತ್ ರೈಲನ್ನು ಓಡಿಸುತ್ತಿದೆ. ಆಗಸ್ಟ್ 31ರಂದು ಪ್ರಧಾನಿ ನರೇಂದ್ರ ಮೋದಿ ಮಧುರೈ ರೈಲು ನಿಲ್ದಾಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅಂದು ಬೆಂಗಳೂರಿನಲ್ಲಿಯೂ ರೈಲಿಗೆ ಹಸಿರು ನಿಶಾನೆ ತೋರಿಸುವ ಕಾರ್ಯಕ್ರಮವಿದೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ.
ಮಧುರೈ-ಬೆಂಗಳೂರು ಜೊತೆಗೆ ಚೆನ್ನೈ-ನಾಗರ್‌ಕೋಯಿಲ್ ನಡುವಿನ ವಂದೇ ಭಾರತ್ ರೈಲು ಸಂಚಾರ ಸಹ ಆರಂಭವಾಗುವ ನಿರೀಕ್ಷೆ ಇದೆ. ಈ ರೈಲಿನ ಪ್ರಾಯೋಗಿಕ ಸಂಚಾರ ಸಹ ಪೂರ್ಣಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಎರಡು ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆಯನ್ನು ತೋರಿಸುವ ನಿರೀಕ್ಷೆ ಇದೆ.
ಸದ್ಯ ಕರ್ನಾಟಕದಲ್ಲಿ ಮೈಸೂರು-ಬೆಂಗಳೂರು-ಚೆನ್ನೈ, ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ, ಯಶವಂತಪುರ-ಕಾಚಿಗುಡ, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಕಲಬುರಗಿ, ಮಂಗಳೂರು-ಮಡಗಾಂವ್, ಬೆಂಗಳೂರು-ಕಲಬುರಗಿ ನಡುವೆ ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಇನ್ನೂ ಹಲವು ಮಾರ್ಗಕ್ಕಾಗಿ ಬೇಡಿಕೆಯನ್ನು ಇಡಲಾಗಿದೆ. ಆದರೆ ರೈಲ್ವೆ ಇಲಾಖೆ ಯಾವುದೇ ಹೊಸ ಮಾರ್ಗವನ್ನು ಘೋಷಣೆ ಮಾಡಿಲ್ಲ.












Click it and Unblock the Notifications