Tirupati May Darshan Ticket: ಮೇ ತಿಂಗಳ ತಿರುಪತಿ ವಿಶೇಷ ದರ್ಶನ ಟಿಕೆಟ್ ಬಿಡುಗಡೆ ದಿನಾಂಕ ಘೋಷಣೆ
ದೇಶದ ಪ್ರಸಿದ್ಧ ಪುಣ್ಯಕ್ಷೇತ್ರವಾದ ತಿರುಮಲದಲ್ಲಿ ನಿತ್ಯ ಭಕ್ತರ ದಂಡೇ ನೆರೆದಿರುತ್ತದೆ. ಸಾವಿರಾರು ಜನರು ಸ್ವಾಮಿಯ ದರ್ಶನ ಪ್ರತಿ ದಿನವೂ ಪಡೆಯುತ್ತಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ತಿರುಪತಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. ಜನ ಹಿಂದಿನಂತೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆಯುತ್ತಿದ್ದಾರೆ. ಈ ನಡುವೆ ಟಿಟಿಡಿ ಮೇ ತಿಂಗಳ ದರ್ಶನದ ಟಿಕೆಟ್ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.
ತಿರುಪತಿಗೆ ಕಳೆದ ಗುರುವಾರ 57,357 ಮಂದಿ ಭಕ್ತರು ಆಗಮಿಸಿದ್ದು ಶ್ರೀಗಳ ದರ್ಶನ ಪಡೆದಿದ್ದಾರೆ. ಇವರಲ್ಲಿ 18,924 ಮಂದಿ ಹರಕೆ ತೀರಿಸಿದ್ದಾರೆ. ಹುಂಡಿ ಮೂಲಕ ತಿರುಮಲ ತಿರುಪತಿ ದೇವಸ್ಥಾನಕ್ಕೆ 3.52 ಕೋಟಿ ರೂಪಾಯಿ ಆದಾಯ ಬಂದಿದೆ. ಶ್ರೀವಾರಿ ಸರ್ವ ದರ್ಶನಕ್ಕೆ ಗುರುವಾರ 12 ಗಂಟೆ ಬೇಕಾಯಿತು. 22 ಕಂಪಾರ್ಟ್‌ಮೆಂಟ್‌ಗಳಲ್ಲಿ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಕಾದು ದರ್ಶನ ಪಡೆದಿದ್ದಾರೆ. ಈ ವಾರಾಂತ್ಯದಲ್ಲಿ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ಟಿಟಿಡಿ ಹೊಂದಿದೆ.

ಮೇ ತಿಂಗಳ ತಿರುಪತಿ ವಿಶೇಷ ದರ್ಶನ ಟಿಕೆಟ್
ಈ ನಡುವೆ ಟಿಟಿಡಿ ಅಧಿಕಾರಿಗಳು ಈ ವರ್ಷದ ಮೇ ತಿಂಗಳ ಎಲ್ಲಾ ರೀತಿಯ ಟಿಕೆಟ್ / ಟೋಕನ್‌ಗಳ ಬಿಡುಗಡೆ ದಿನಾಂಕಗಳನ್ನು ಬಹಿರಂಗಪಡಿಸಿದ್ದಾರೆ. ಮೇ ತಿಂಗಳ 300 ರೂಪಾಯಿಯ ಶ್ರೀವಾರಿ ವಿಶೇಷ ದರ್ಶನ ಟಿಕೆಟ್ ಕೋಟಾ ಇದೇ ಫೆಬ್ರವರಿ 24 ರಂದು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಹೀಗಾಗಿ ಬೆಳಗ್ಗೆ 10 ಗಂಟೆಗೆ ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಟಿಕೆಟ್ ಲಭ್ಯವಾಗಲಿವೆ.
ಮೇ ತಿಂಗಳ ವಸತಿ ನಿಲಯದ ಕೋಟಾ ಟಿಕೆಟ್‌ಗಳನ್ನು ಅದೇ ದಿನ ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ತಿರುಮಲ ಮತ್ತು ತಿರುಪತಿಯಲ್ಲಿ ವಿವಿಧ ರೀತಿಯ ವಸತಿ ಸೌಕರ್ಯಗಳಿವೆ. ತಿರುಪತಿಯ ಮುಖ್ಯ ಬಸ್ ನಿಲ್ದಾಣದ ಬಳಿ ಶ್ರೀನಿವಾಸಂ ಮತ್ತು ರೈಲ್ವೆ ನಿಲ್ದಾಣದ ಎದುರು ವಿಷ್ಣುವಾಸಂ ವಸತಿ ಕಟ್ಟಡಗಳು ಇದ್ದು ಭಕ್ತರು ಅವುಗಳ ಕೊಠಡಿಗಳನ್ನು ಕಾಯ್ದಿರಿಸಬಹುದಾಗಿದೆ.

ತಿರುಪತಿಯಲ್ಲಿ ವಸತಿ ಗೃಹಗಳು
ಇನ್ನೂ ಪದ್ಮಾವತಿ ಅತಿಥಿ ಗೃಹ, ವೆಂಕಟೇಶ್ವರ ಅತಿಥಿ ಗೃಹ, ರಾಮ್ ಬಗೀಚ ವರಾಹಸ್ವಾಮಿ ವಿಶ್ರಾಂತಿ ಗೃಹ, ಟ್ರಾವೆಲರ್ಸ್ ಬಂಗಲೆ, ನಾರಾಯಣಗಿರಿ ಅತಿಥಿ ಗೃಹ, ನಂದಕಂ, ಪಾಂಚಜನ್ಯಂ, ಕೌಸ್ತುಭಂ, ವಕುಲಮಾತಾ, ಸಪ್ತಗಿರಿ ವಸತಿ ಕಟ್ಟಡಗಳು ತಿರುಮಲದಲ್ಲಿ ಲಭ್ಯವಿದೆ. ಭಕ್ತರು ಆನ್‌ಲೈನ್‌ನಲ್ಲಿ ಈ ಕೊಠಡಿಗಳನ್ನು ಕಾಯ್ದಿರಿಸುವ ಸೌಲಭ್ಯವನ್ನು ಹೊಂದಿದ್ದಾರೆ.
ಶ್ರೀವಾರಿ ಆರ್ಜಿತ ಸೇವಾ ಟಿಕೆಟ್‌ಗಳ ಎಲೆಕ್ಟ್ರಾನಿಕ್ ಡಿಪ್ ನೋಂದಣಿ ಇದೇ ಫೆಬ್ರವರಿ 18 ರಂದು ತೆರೆಯಲಿದೆ. ಇಲ್ಲಿ ಶ್ರೀವಾರಿ ಕಲ್ಯಾಣೋತ್ಸವ, ಊಂಜಲ್ ಸೇವೆ, ಆರ್ಜಿತ ಬ್ರಹ್ಮೋತ್ಸವ, ಸಹಸ್ರ ದೀಪಾಲಂಕಾರ, ಸುಪ್ರಭಾತಂ, ತೋಮಾಲ, ಅರ್ಚನ, ಅಷ್ಟದಳ ಪಾದ ಪದ್ಮಾರಾಧನೆ ಸೇವೆಗಳ ಲಕ್ಕಿ ಡಿಪ್‌ಗಾಗಿ ಭಕ್ತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಲಕ್ಕಿ ಡಿಪ್ ದಿನಾಂಕ
ಲಕ್ಕಿ ಡಿಪ್ ಫಲಿತಾಂಶ ಇದೇ ಫೆಬ್ರವರಿ 20 ರಂದು ಮಧ್ಯಾಹ್ನ 12 ಗಂಟೆಗೆ ಬಿಡುಗಡೆಯಾಗಲಿದೆ. ಆಯ್ಕೆಯಾದವರು ಫೆಬ್ರವರಿ22ರ ಮಧ್ಯಾಹ್ನ 12 ಗಂಟೆಯೊಳಗೆ ಹಣ ಪಾವತಿಸಿ ಹೆಸರು ದೃಢಪಡಿಸಿಕೊಳ್ಳಬೇಕು. 22ರಂದು ಬೆಳಗ್ಗೆ 10 ಗಂಟೆಗೆ ಕಲ್ಯಾಣೋತ್ಸವ, ಆರ್ಜಿತ ಬ್ರಹ್ಮೋತ್ಸವ, ಊಂಜಾಲ್ ಸೇವೆ, ಸಹಸ್ರ ದೀಪಾಲಂಕಾರ ಆರ್ಜಿತ ಸೇವೆಗೆ ಟಿಕೆಟ್ ಬಿಡುಗಡೆ ಮಾಡಲಾಗುವುದು.
ಫೆಬ್ರವರಿ 23ರಂದು ಬೆಳಗ್ಗೆ 10 ಗಂಟೆಗೆ ಅಂಗಪ್ರದಕ್ಷಿಣಂ ಟೋಕನ್‌ಗಳನ್ನು ಬಿಡುಗಡೆ ಮಾಡಲಾಗುವುದು. ಹಿರಿಯ ನಾಗರಿಕರು/ಅಂಗವಿಕಲರ ಕೋಟಾ ಬುಕಿಂಗ್ ಅದೇ ದಿನ ಮಧ್ಯಾಹ್ನ 3 ಗಂಟೆಗೆ ತೆರೆಯುತ್ತದೆ. ಶ್ರೀವಾಣಿ ಟ್ರಸ್ಟ್ ದಾನಿಗಳಿಗಾಗಿ ಕಾಯ್ದಿರಿಸಿದ ದರ್ಶನ ಮತ್ತು ವಸತಿ ಕೊಠಡಿಗಳ ಕೋಟಾ ಆನ್‌ಲೈನ್‌ನಲ್ಲಿ ಫೆಬ್ರವರಿ 23 ರಂದು ಬೆಳಿಗ್ಗೆ 11 ಗಂಟೆಗೆ ಲಭ್ಯವಿರುತ್ತದೆ.












Click it and Unblock the Notifications