ದೇವನಹಳ್ಳಿ, ಬೆಂಗಳೂರು ಏರ್‌ಪೋರ್ಟ್ ಭಾಗದ ರೈಲು ರದ್ದು, ಪಟ್ಟಿ
ಬೆಂಗಳೂರು, ನವೆಂಬರ್ 22: ನೈಋತ್ಯ ರೈಲ್ವೆ ದೇವನಹಳ್ಳಿ, ಯಲಹಂಕ, ಕೆಂಪೇಗೌಡ ವಿಮಾನ ನಿಲ್ದಾಣ ಭಾಗಕ್ಕೆ ಸಂಚಾರ ನಡೆಸುವ ಹಲವು ರೈಲುಗಳನ್ನು ರದ್ದುಗೊಳಿಸಿದೆ. ನವೆಂಬರ್ 21 ರಿಂದ 29ರ ತನಕ ಈ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ.
ಬೆಂಗಳೂರು ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣದ ಮರು ವಿನ್ಯಾಸ ಕಾಮಗಾರಿ ನಡೆಯುತ್ತಿದೆ. ರಸ್ತೆ ನಿರ್ಮಾಣ, ಪ್ಲಾಟ್‌ಫಾರಂ ವಿಸ್ತರಣೆ, ಪ್ರವೇಶ ದ್ವಾರ ಸ್ಥಾಪನೆ ಮುಂತಾದ ಕಾಮಗಾರಿಗಳ ಹಿನ್ನಲೆಯಲ್ಲಿ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಯಾವ-ಯಾವ ಮೆಮು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಬೆಂಗಳೂರು ನಗರದಿಂದ ಹೊರ ಭಾಗಕ್ಕೆ ಸಂಚಾರ ನಡೆಸುವ ಜನರು ಈ ಮಾಹಿತಿ ತಿಳಿದು ಸಂಚಾರದ ಯೋಜನೆ ರೂಪಿಸಲು ಮನವಿ ಮಾಡಲಾಗಿದೆ.
ರದ್ದಾದ ರೈಲುಗಳು
* ರೈಲು ಸಂಖ್ಯೆ 06531/ 06532 ಕೆಎಸ್ಆರ್ ಬೆಂಗಳೂರು-ದೇವನಹಳ್ಳಿ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲನ್ನು ಎರಡೂ ಕಡೆಯಿಂದ ನವೆಂಬರ್ 21 ರಿಂದ 29ರ ತನಕ ರದ್ದುಗೊಳಿಸಲಾಗಿದೆ.
* ರೈಲು ನಂಬರ್ 06533/ 06534 ದೇವನಹಳ್ಳಿ-ಯಲಹಂಕ-ಕೆಂಪೇಗೌಡ ವಿಮಾನ ನಿಲ್ದಾಣ ಹಾಲ್ಟ್ ಮೆಮು ವಿಶೇಷ ರೈಲನ್ನು ಎರಡೂ ಕಡೆಯಿಂದ ನವೆಂಬರ್ 21 ರಿಂದ 29ರ ತನಕ ರದ್ದು ಮಾಡಲಾಗಿದೆ.
* ರೈಲು ನಂಬರ್ 06535/ 06536 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ವಿಶೇಷ ರೈಲನ್ನು ಎರಡೂ ಕಡೆಯಿಂದ ನವೆಂಬರ್ 21 ರಿಂದ 29ರ ತನಕ ಸ್ಥಗಿತಗೊಳಿಸಲಾಗಿದೆ.
* ರೈಲು ನಂಬರ್ 06537/ 06538 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ವಿಶೇಷ ರೈಲನ್ನು ಎರಡೂ ಕಡೆಯಿಂದ ನವೆಂಬರ್ 21 ರಿಂದ 29ರ ತನಕ ಸ್ಥಗಿತಗೊಳಿಸಲಾಗಿದೆ.
* ರೈಲು ನಂಬರ್ 06539/ 06540 ದೇವನಹಳ್ಳಿ-ಯಲಹಂಕ-ದೇವನಹಳ್ಳಿ ಮೆಮು ವಿಶೇಷ ರೈಲು ನವೆಂಬರ್ 21 ರಿಂದ 29ರ ತನಕ ರದ್ದು.
ಕಂಟೋನ್ಮೆಂಟ್ ರೈಲು ನಿಲ್ದಾಣದ ಮರು ವಿನ್ಯಾಸ ಕಾಮಗಾರಿ 2025ಕ್ಕೆ ಪೂರ್ಣವಾಗಲಿದೆ ಎಂದು ಅಂದಾಜಿಸಲಾಗಿದೆ. ಬೆಂಗಳೂರು ನಗರದ ಪ್ರಮುಖ ರೈಲು ನಿಲ್ದಾಣದಲ್ಲಿ ಇದು ಸಹ ಒಂದು. ಸುಮಾರು 480 ಕೋಟಿ ರೂ. ವೆಚ್ಚದಲ್ಲಿ ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
2022ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಕಂಟೋನ್ಮೆಂಟ್ ರೈಲು ನಿಲ್ದಾಣದ ಮರು ವಿನ್ಯಾಸ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. 2025ರ ಅಕ್ಟೋಬರ್‌ಗೆ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಮರು ವಿನ್ಯಾಸ ಯೋಜನೆ ಯಡಿ ಲಾರ್ಜ್ ವೇಟಿಂಗ್ ರೂಂ, ಬಹುಟಿಕೆಟ್ ಕೌಂಟರ್, ಸೋಲಾರ್ ಶಕ್ತಿಯನ್ನು ಹೊಂದಿರುವ ಮೇಲ್ಛಾವಣಿ, ನಾಲ್ಕು ಫೂಟ್ ಬ್ರಿಡ್ಜ್, ಪಾರ್ಕಿಂಗ್ ಸೌಲಭ್ಯ ಸೇರಿದಂತೆ ವಿವಿಧ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.












Click it and Unblock the Notifications