ಬೆಳಗಾವಿಯಿಂದ 2 ನಗರಕ್ಕೆ ವಿಮಾನ ಹಾರಾಟ ಸ್ಥಗಿತ
ಬೆಳಗಾವಿ, ಮೇ 21: ಬೆಳಗಾವಿಯಿಂದ ಎರಡು ನಗರಗಳ ವಿಮಾನ ಸೇವೆಯನ್ನು ಜೂನ್‌ನಲ್ಲಿ ರದ್ದುಪಡಿಸಲಾಗುತ್ತದೆ. ಈಗಾಗಲೇ ಈ ಕುರಿತು ಮಾಹಿತಿ ನೀಡಲಾಗಿದ್ದು, ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ರದ್ದುಗೊಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಬೆಳಗಾವಿ-ಸೂರತ್, ಬೆಳಗಾವಿ-ಕೃಷ್ಣಘರ್ (ಅಜ್ಮೀರ್) ವಿಮಾನ ಸೇವೆಯನ್ನು ಸ್ಟಾರ್ ಏರ್ ಸಂಸ್ಥೆ ರದ್ದುಗೊಳಿಸುತ್ತಿದೆ. ಜೂನ್ 14 ರಿಂದ ಈ ಮಾರ್ಗದ ವಿಮಾನಗಳು ಹಾರಾಟ ನಡೆಸುವುದಿಲ್ಲ.

ಉಡಾನ್ ಯೋಜನೆಯಡಿ 2020ರ ಡಿಸೆಂಬರ್‌ನಲ್ಲಿ ಬೆಳಗಾವಿ-ಸೂರತ್, ಬೆಳಗಾವಿ-ಕೃಷ್ಣಘರ್ (ಅಜ್ಮೀರ್) ವಿಮಾನ ಸೇವೆಯನ್ನು ಆರಂಭಿಸಲಾಗಿತ್ತು. 4 ವರ್ಷದ ಬಳಿಕ ವಿಮಾನಯಾನ ಸಂಸ್ಥೆ ಈ ಮಾರ್ಗದ ವಿಮಾನ ಹಾರಾಟ ರದ್ದುಗೊಳಿಸುತ್ತಿದೆ.
ಬುಕ್ಕಿಂಗ್ ಸ್ಥಗಿತ: ಸ್ಟಾರ್ ಏರ್ ಸಂಸ್ಥೆ ಬೆಳಗಾವಿ-ಸೂರತ್, ಬೆಳಗಾವಿ-ಕೃಷ್ಣಘರ್ (ಅಜ್ಮೀರ್) ವಿಮಾನ ಸೇವೆ ಸ್ಥಗಿತಗೊಳಿಸಲು ಕಾರಣವೇನು? ಎಂದು ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಆದರೆ ವಿಮಾನಗಳ ರೊಟೇಷನ್‌ಗಾಗಿ ಸೇವೆ ರದ್ದು ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಈಗಾಗಲೇ ಈ ಮಾರ್ಗದ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಸ್ಥಗಿತಗೊಳಿಸಲಾಗಿದೆ.
ಬೆಳಗಾವಿ-ಸೂರತ್ ಮಾರ್ಗದ ವಿಮಾನ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ಶೇ 90ರಷ್ಟು ಸೀಟುಗಳು ಭರ್ತಿಯಾಗುತ್ತಿದ್ದವು. ಆದರೆ ವಿಮಾನಯಾನ ಸಂಸ್ಥೆ ಈ ಮಾರ್ಗದ ವಿಮಾನ ಹಾರಾಟವನ್ನು ಜೂನ್ 14ರಿಂದ ನಿಲ್ಲಿಸುತ್ತಿದೆ.
ಸೋಮವಾರದಿಂದ ಸ್ಟಾರ್ ಏರ್ ಸಂಸ್ಥೆ ಬೆಳಗಾವಿ-ಕಲಬುರಗಿ ವಯಾ ತಿರುಪತಿ ವಿಮಾನ ಸಂಚಾರವನ್ನು ವಾರದಲ್ಲಿ 4 ದಿನಗಳ ಕಾಲ ಆರಂಭಿಸಿದೆ. ಬೆಳಗಾವಿಯಿಂದ ಸುಮಾರು 3 ಗಂಟೆಯಲ್ಲಿ ಜನರು ಸೇಡಂ ರಸ್ತೆಯಯಲ್ಲಿರುವ ಕಲಬುರಗಿ ವಿಮಾನ ನಿಲ್ದಾಣ ತಲುಪಬಹುದು.
ಸೋಮವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಳಗಾವಿ-ಕಲಬುರಗಿ ನಡುವೆ ವಿಮಾನ ಹಾರಾಟ ನಡೆಸಲಿದೆ. ವಿಮಾನ ವಯಾ ತಿರುಪತಿ ಮೂಲಕ ಸಂಚಾರ ನಡೆಸುವುದರಿಂದ ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಸಹ ಅನುಕೂಲವಾಗಲಿದೆ.
ಸಾಂಬ್ರಾದಲ್ಲಿರುವ ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಜನರಿಗೆ ಅನುಕೂಲವಾಗಿದೆ. ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ಗಳ ನಿರ್ಮಾಣ, ವಿಮಾನ ನಿಲ್ದಾಣದ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ.
ಕೆಎಂವಿ ಪ್ರಾಜೆಕ್ಟ್ ಕಂಪನಿ 220.08 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಗೊಳಿಸುವ ಟೆಂಡರ್ ಪಡೆದಿದೆ. ಎರಡು ವರ್ಷಗಳಲ್ಲಿಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ನಿಲ್ದಾಣದಲ್ಲಿ 3600 ಚದರ ಮೀಟರ್ ವಿಸ್ತಿರ್ಣದ ಟರ್ಮಿನಲ್ ಇದೆ.
24,000 ಚದರ ಮೀಟರ್ ವಿಸ್ತೀರ್ಣದ ಹೊಸ ಟರ್ಮಿನಲ್, ಕಾರು ಪಾರ್ಕಿಂಗ್ ಪ್ರದೇಶ, ಎಕ್ಸ್‌ಲೇಟರ್, ಏರೋ ಬ್ರಿಡ್ಜ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕೈಗೊಳ್ಳಲಾಗಿದೆ. ಈ ಪೈಕಿ ಮೊದಲ ಹಂತದಲ್ಲಿ ಟರ್ಮಿನಲ್ ನಿರ್ಮಾಣವಾಗುತ್ತಿದೆ.
ಹೊಸ ಟರ್ಮಿನಲ್ ಅನ್ನು 20237ರಲ್ಲಿ ಬೆಳಗಾವಿಗೆ ಆಗಮಿಸುವ ಪ್ರಯಾಣಿಕರ ಸಂಖ್ಯೆಯನ್ನು ಗಮದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗುತ್ತಿದೆ. ಬೆಳಗಾವಿಗೆ ಬರುವ, ಹೊರಡುವ 1200 ಪ್ರಯಾಣಿಕರು ಸೇರಿ ಒಟ್ಟು 2,400 ಪ್ರಯಾಣಿಕರಿಗೆ ಏಕಕಾಲಕ್ಕೆ ಅವಕಾಶ ಕಲ್ಪಿಸುವಷ್ಟು ದೊಡ್ಡ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ.
ಬೆಳಗಾವಿಯಿಂದ ದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ನಾಗ್ಪುರ, ತಿರುಪತಿ, ಜೈಪುರ, ಅಹಮದಾಬಾದ್ ಸೇರಿದಂತೆ ಸುಮಾರು 10 ನಗರಗಳಿಗೆ ವಿಮಾನಗಳು ಹಾರಾಟ ನಡೆಸುತ್ತವೆ. 2023ರಲ್ಲಿ ರಾಜ್ಯದ ಹೆಚ್ಚಿನ ಜನದಟ್ಟಣೆಯ ವಿಮಾನ ನಿಲ್ದಾಣದಲ್ಲಿ ಬೆಳಗಾವಿ 3ನೇ ಸ್ಥಾನದಲ್ಲಿತ್ತು.












Click it and Unblock the Notifications