ನ. 12ರಿಂದ ಬೆಳಗಾವಿ-ಬೆಂಗಳೂರು ನಡುವೆ ಹೊಸ ವಿಮಾನ, ವೇಳಾಪಟ್ಟಿ
ಬೆಳಗಾವಿ, ನವೆಂಬರ್ 09: ಗಡಿನಾಡು ಬೆಳಗಾವಿ ಮತ್ತು ರಾಜಧಾನಿ ಬೆಂಗಳೂರು ಸಂಪರ್ಕಿಸಲು ಬೆಳಗಿನ ವಿಮಾನ ಸಂಚಾರ ಆರಂಭವಾಗುತ್ತಿದೆ. ಕೆಲವು ದಿನಗಳ ಹಿಂದೆ ಇಂಡಿಗೋ ಬೆಳಗಾವಿ-ಬೆಂಗಳೂರು ವಿಮಾನವನ್ನು ರದ್ದುಗೊಳಿಸಿತ್ತು. ಈಗ ಮತ್ತೊಂದು ವಿಮಾನಯಾನ ಸಂಸ್ಥೆ ಹೊಸ ವಿಮಾನ ಸೇವೆಯನ್ನು ಈ ಮಾರ್ಗದಲ್ಲಿ ಆರಂಭಿಸುತ್ತಿದೆ. ನವೆಂಬರ್ 12ರಿಂದ ವಾರಕ್ಕೊಮ್ಮೆ ಈ ವಿಮಾನ ಸಂಚಾರ ನಡೆಸಲಿದೆ.
ಕೊಲ್ಹಾಪುರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಸಂಜಯ್ ಘೋಡಾವತ್ ಗ್ರೂಪ್‌ನ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಬೆಳಗಾವಿ- ಬೆಂಗಳೂರು ನಡುವೆ ವಾರಕ್ಕೊಮ್ಮೆ (ಮಂಗಳವಾರ) ಬೆಳಗಿನ ವಿಮಾನ ಸಂಚಾರವನ್ನು ಆರಂಭಿಸಲಿದೆ. ವಿಮಾನದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ವಿಮಾನದ ವೇಳಾಪಟ್ಟಿ: ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಬೆಳಗಾವಿ-ಬೆಂಗಳೂರು ನಡುವೆ 50 ಆಸನಗಳ ವಿಮಾನವನ್ನು ಓಡಿಸಲಿದೆ. ಎಸ್5-9931 ಸಂಖ್ಯೆಯ ವಿಮಾನ ಬೆಳಗಾವಿಯಿಂದ 7.40ಕ್ಕೆ ಹೊರಟು, 8.50ಕ್ಕೆ ಬೆಂಗಳೂರು ನಗರ ತಲುಪಲಿದೆ. ಎಸ್5-9338 ವಿಮಾನ ಬೆಂಗಳೂರು ನಗರದಿಂದ 12.35ಕ್ಕೆ ಹೊರಟು, 1.45ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣವನ್ನು ತಲುಪಪಿದೆ.
ಕೆಲವು ದಿನಗಳ ಹಿಂದೆ ಇಂಡಿಗೋ ತನ್ನ ಚಳಿಗಾಲದ ವಿಮಾನದ ವೇಳಾಪಟ್ಟಿ ಪ್ರಕಟಿಸಿತ್ತು. ಆಗ ಬೆಳಗಾವಿ-ಬೆಂಗಳೂರು ನಡುವಿನ ಬೆಳಗ್ಗೆಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಪ್ರಯಾಣಿಕರಗೆ ತೊಂದರೆ ಉಂಟಾಗಿತ್ತು. ಈಗ ಈ ಮಾರ್ಗದಲ್ಲಿ ಪ್ರತಿ ಮಂಗಳವಾರ ಸ್ಟಾರ್ ಏರ್ ವಿಮಾನ ಸಂಚಾರ ಆರಂಭವಾಗಲಿದೆ.
ಸ್ಟಾರ್ ಏರ್ ಈಗಾಗಲೇ ಬೆಳಗಾವಿಯಿಂದ ಭಾರತದ 6 ನಗರಗಳಿಗೆ ವಿಮಾನ ಸಂಪರ್ಕವನ್ನು ನೀಡುತ್ತಿದೆ. ಅಹಮದಾಬಾದ್, ಮುಂಬೈ, ತಿರುಪತಿ, ಜೈಪುರ, ನಾಗ್ಪುರ ಮತ್ತು ಬೆಂಗಳೂರಿಗೆ ವಿಮಾನ ಸಂಪರ್ಕವಿದೆ. ಈಗ ಇದೇ ವಿಮಾನಯಾನ ಸಂಸ್ಥೆ ಬೆಳಗಾವಿ-ಬೆಂಗಳೂರು ಮಾರ್ಗದಲ್ಲಿ ವಾರಕ್ಕೊಮ್ಮೆ ಬೆಳಗಿನ ವಿಮಾನವನ್ನು ಆರಂಭಿಸಲಿದೆ.
ಬೆಳಗಾವಿ-ಬೆಂಗಳೂರು ನಡುವೆ ಬೆಳಗಿನ ವಿಮಾನ ಬೇಕು ಎಂದು ಜನರು ಒತ್ತಾಯಿಸುತ್ತಿದ್ದರು. ನವೆಂಬರ್ 12ರಿಂದ ವಿಮಾನ ಸೇವೆ ಆರಂಭವಾಗಲಿದೆ. ಈ ವಿಮಾನ ಸೇವೆಯ ದರ, ಟಿಕೆಟ್ ಬುಕ್ಕಿಂಗ್ ಮುಂತಾದ ಮಾಹಿತಿಗಾಗಿ ಸ್ಟಾರ್ ಏರ್ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಅಕ್ಟೋಬರ್‌ನಲ್ಲಿ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮ್ ಮೋಹನ್ ನಾಯ್ಡು ಭೇಟಿ ಮಾಡಿದ್ದರು. ಬೆಳಗಾವಿ-ಬೆಂಗಳೂರು ನಡುವೆ ವಿಮಾನ ಸಂಚಾರ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.
ನವೆಂಬರ್‌ನಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಫ್ಲೈ-91 ಎಂಬ ವಿಮಾನಯಾನ ಸಂಸ್ಥೆ ಬೆಳಗಾವಿ-ಹೈದರಾಬಾದ್, ಬೆಳಗಾವಿ-ಹುಬ್ಬಳ್ಳಿ, ಬೆಳಗಾವಿ-ಗೋವಾ ನಡುವೆ ಪ್ರತಿದಿನದ ವಿಮಾನ ಹಾರಾಟವನ್ನು ಆರಂಭಿಸಲಿದೆ. ಇದರ ನಡುವೆಯೇ ಸ್ಟಾರ್ ಏರ್ ಬೆಳಗಾವಿ-ಬೆಂಗಳೂರು ವಿಮಾನ ಸೇವೆಯನ್ನು ಪ್ರಾರಂಭಿಸುತ್ತಿದೆ.
ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕದ ಜನರಿಗೆ ಮಾತ್ರವಲ್ಲ ಗೋವಾ, ಮಹಾರಾಷ್ಟ್ರದ ಜನರಿಗೂ ಅನುಕೂಲವಾಗಿದೆ. ಬೆಳಗಾವಿಯಿಂದ ಚೆನ್ನೈ, ವಾರಣಾಸಿ, ಪುಣೆ, ಕೋಲ್ಕತ್ತಾಗೆ ಹೊಸ ವಿಮಾನ ಸೇವೆ ಬೇಕು. ಮುಂಬೈ ಹಾಗೂ ಹೈದರಾಬಾದ್‌ಗೆ ಹೆಚ್ಚುವರಿ ವಿಮಾನ ಬೇಕು ಎಂದು ಜನರು ಬೇಡಿಕೆ ಸಲ್ಲಿಸುತ್ತಿದ್ದರು.
ಆದರೆ ಬೆಳಗಾವಿಯಿಂದ ಇರುವ ವಿಮಾನಗಳೇ ರದ್ದಾಗುತ್ತಿದ್ದು, ಹೊಸ ವಿಮಾನ ಸೇವೆ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದು ಅಂದಾಜಿಸಲಾಗಿತ್ತು. ಮಾಹಿತಿಗಳ ಪ್ರಕಾರ ಬೆಳಗಾವಿಯಿಂದ ಕಳೆದ 2 ವರ್ಷಗಳಲ್ಲಿ ಯಾವುದೇ ಹೊಸ ಮಾರ್ಗದಲ್ಲಿ ವಿಮಾನ ಸೇವೆ ಆರಂಭವಾಗಿಲ್ಲ. ಹೊಸ ಮಾರ್ಗದಲ್ಲಿ ವಿಮಾನ ಹಾರಾಡುವುದು ಇರಲಿ, ಇರುವ ಮಾರ್ಗದ ವಿಮಾನಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ.
ಬೆಳಗಾವಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. 2023ರ ನವೆಂಬರ್‌ನಲ್ಲಿ ಪ್ರಾಯೋಗಿಕ ಸಂಚಾರವೂ ಮುಗಿದಿದೆ. ಆದರೆ ಇದುವರೆಗೂ ರೈಲು ಸಂಚಾರ ಆರಂಭವಾಗಿಲ್ಲ. ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲಾಗುತ್ತದೆ. ಆದರೆ ರೈಲು ಸೇವೆ ಯಾವಾಗ ಆರಂಭ? ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.












Click it and Unblock the Notifications