ಬೀದರ್ ಏರ್‌ಪೋರ್ಟ್‌ ಮತ್ತೆ ಆರಂಭ: ವಿಮಾನ ಸಂಚಾರ ಮಾರ್ಗ, ವೇಳಾಪಟ್ಟಿ

ಬೀದರ್, ಮಾರ್ಚ್‌ 09: ಬೆಂಗಳೂರು ನಗರದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಚರ್ಚೆಗಳು ಜೋರಾಗಿದೆ. ವಿಜಯಪುರ ವಿಮಾನ ನಿಲ್ದಾಣ ಈ ವರ್ಷ ಲೋಕಾರ್ಪಣೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಆದರೆ 2020ರಲ್ಲಿ ಲೋಕಾರ್ಪಣೆಗೊಂಡ ಬೀದರ್ ವಿಮಾನ ನಿಲ್ದಾಣಕ್ಕೆ ಸದ್ಯ ಯಾವುದೇ ವಿಮಾನ ಸಂಪರ್ಕವಿಲ್ಲ. ಬೀದರ್‌ನಿಂದ ವಿಮಾನ ಸೇವೆ ಆರಂಭಿಸುವಂತೆ ಸಚಿವರು, ಸಂಸದರು ಮಾಡಿದ ಪ್ರಯತ್ನಗಳು ಈಗ ಫಲ ಕೊಟ್ಟಿವೆ. ಏಪ್ರಿಲ್‌ನಲ್ಲಿ ಬೀದರ್‌ನಿಂದ ಪುನಃ ವಿಮಾನ ಸೇವೆ ಆರಂಭವಾಗಲಿದೆ.

ಬೀದರ್ ಸಂಸದ ಸಾಗರ್ ಖಂಡ್ರೆ, ಬೀದರ್ ಜಿಲ್ಲಾ ಉಸ್ತುವಾರಿ, ಅರಣ್ಯ, ಪರಿಸರ ಖಾತೆ ಸಚಿವ ಈಶ್ವರ್ ಖಂಡ್ರೆ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ಏಪ್ರಿಲ್‌ 15ರಿಂದ ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಪ್ರತಿದಿನ ಬೀದರ್-ಬೆಂಗಳೂರು ಮಾರ್ಗದಲ್ಲಿ ವಿಮಾನ ಸೇವೆಯನ್ನು ಆರಂಭಿಸಲಿದೆ.

ಸಂಸದ ಸಾಗರ್ ಖಂಡ್ರೆ ತಮ್ಮ ಪೋಸ್ಟ್‌ನಲ್ಲಿ, ಬೀದರ್ ಜನತೆಗೆ ಸಿಹಿ ಸುದ್ದಿ ವಿಮಾನ ಹಾರಾಟ ಪುನರಾರಂಭ. ಬೀದರ್ ಜಿಲ್ಲೆಯ ಜನತೆ, ವ್ಯಾಪಾರಸ್ಥರು, ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಬಹಳ ನಿರೀಕ್ಷಿತ ಸಿಹಿಸುದ್ದಿ. ನಮ್ಮ ಸತತ ಪ್ರಯತ್ನದಿಂದ ಕಲ್ಯಾಣ ಕರ್ನಾಟಕ ವಿಶೇಷ ಯೋಜನೆಯಡಿ ಏಪ್ರಿಲ್ 15ರಿಂದ ಸ್ಟಾರ್ ಏರ್ ವಿಮಾನ ಸೇವೆ ಪುನರಾರಂಭ ಆಗುತ್ತಿದೆ. ಕೇಂದ್ರ ಸರ್ಕಾರದ ಸಬ್ಸಿಡಿ ಹಿಂಪಡೆಯುವ ನಿರ್ಧಾರದಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ, ನಮ್ಮ ಸರ್ಕಾರದ ಬದ್ಧತೆ ಹಾಗೂ ನಮ್ಮ ಹೋರಾಟದ ಫಲವಾಗಿ ಮತ್ತೆ ಲಭ್ಯವಾಗಿದೆ' ಎಂದು ಹೇಳಿದ್ದಾರೆ.

'ಕಲ್ಯಾಣ ಕರ್ನಾಟಕದ ಜನತೆಗೆ ಉತ್ತಮ ಸಂಪರ್ಕವನ್ನು ಒದಗಿಸುವ ನಿಟ್ಟಿನಲ್ಲಿ ಈ ಮಹತ್ವದ ಸೇವೆ ಪುನಃ ಆರಂಭವಾಗಿರುವುದು ಸಂತೋಷದ ವಿಚಾರ. ಮಾನ್ಯ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಸಹಕರಿಸಿದ ಎಲ್ಲಾ ಸಚಿವರಿಗೆ ಹಾಗೂ ಬೀದರ್ ವಿಮಾನ ನಿಲ್ದಾಣದ ಪ್ರಾಧಿಕಾರ ಮತ್ತು ಸರ್ಕಾರದ ಅಧಿಕಾರಿಗಳಿಗೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದಗಳು. ನಮ್ಮ ಜಿಲ್ಲೆ ಪ್ರಗತಿಯ ಹಾದಿಯಲ್ಲಿ ಸದಾ ಮುನ್ನಡೆಯಲಿ' ಎಂದು ಪೋಸ್ಟ್ ಹಾಕಿದ್ದಾರೆ.

2020ರಲ್ಲಿ ಲೋಕಾರ್ಪಣೆ: 7 ಫೆಬ್ರವರಿ 2020ರಂದು ಅಂದಿನ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೀದರ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು. ವಿಮಾನ ನಿಲ್ದಾಣವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಮೂಲಕ ಬೀದರ್ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದರು. ಗಡಿನಾಡು ಬೀದರ್‌ನಿಂದ ಬೀದರ್-ಬೆಂಗಳೂರು, ಬೀದರ್-ಹೈದರಾಬಾದ್‌ಗಳಿಗೆ ವಿಮಾನ ಸೇವೆ ಇತ್ತು. ಆದರೆ ಈಗ ಬೀದರ್‌ನಿಂದ ಯಾವುದೇ ವಿಮಾನ ಸಂಚಾರ ನಡೆಸುತ್ತಿಲ್ಲ. ಯಾವುದೇ ವಿಮಾನದ ಆಗಮನ, ನಿರ್ಗಮನ ಇಲ್ಲದಿದ್ದರೂ 45ಕ್ಕೂ ಅಧಿಕ ಸಿಬ್ಬಂದಿಗಳು ವಿಮಾನ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುತ್ತಿದ್ದಾರೆ.

airport-news

ಈಗ ಸ್ಟಾರ್‌ ಏರ್ ವಿಮಾನಯಾನ ಸಂಸ್ಥೆ ಬೀದರ್-ಬೆಂಗಳೂರು ನಡುವೆ ವಿಮಾನ ಸೇವೆಯನ್ನು ಏಪ್ರಿಲ್‌ 15ರಿಂದ ಆರಂಭಿಸಲಾಗುತ್ತದೆ ಎಂದು ಹೇಳಿದೆ. ಕಂಪನಿಯ ವೆಬ್‌ಸೈಟ್ ಮೂಲಕ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ. ಪ್ರತಿದಿನ ಬೀದರ್-ಬೆಂಗಳೂರು ನಡುವೆ ವಿಮಾನ ಹಾರಾಟ ನಡೆಸಲಿದೆ. ಬೀದರ್‌ಗೆ ವಿಮಾನ ಸೇವೆ ಪುನಃ ಆರಂಭಿಸಲು ಕೆಲವು ದಿನಗಳ ಹಿಂದೆ ಸಚಿವ ಸಂಪುಟ ಸಭೆಯಲ್ಲಿ 13.48 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಲಾಗಿತ್ತು.

ಕಂಪನಿ ವೆಬ್‌ಸೈಟ್ ವೇಳಾಪಟ್ಟಿ ಪ್ರಕಾರ ಬೀದರ್-ಬೆಂಗಳೂರು ನಡುವೆ ಪ್ರತಿದಿನ ಸ್ಟಾರ್ ಏರ್ ವಿಮಾನ ಸಂಚಾರ ನಡೆಸಲಿದೆ. ಬೆಳಗ್ಗೆ 7.45ಕ್ಕೆ ಬೆಂಗಳೂರು-ಬೀದರ್ ವಿಮಾನ ಬೆಂಗಳೂರಿನಿಂದ ಹೊರಟು 9 ಗಂಟೆಗೆ ಬೀದರ್ ತಲುಪಲಿದೆ. ಬೀದರ್-ಬೆಂಗಳೂರು ವಿಮಾನ ಬೆಳಗ್ಗೆ 9.30ಕ್ಕೆ ಹೊರಟು 10.45ಕ್ಕೆ ಬೆಂಗಳೂರು ತಲುಪಲಿದೆ. ಸಾಗರ್ ಖಂಡ್ರೆ, ಈಶ್ವರ ಖಂಡ್ರೆ ವಿಮಾನದ ಬುಕ್ಕಿಂಗ್‌ ಆರಂಭವಾಗಿರುವ ಚಿತ್ರವನ್ನು ಸಹ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಹಂಚಿಕೆಕೊಂಡಿದ್ದಾರೆ.

ಸ್ಟಾರ್ ಏರ್ ಬೀದರ್-ಬೆಂಗಳೂರು ನಡುವೆ ವಿಮಾನ ಸಂಚಾರವನ್ನು ಮೊದಲು ಕೈಗೊಂಡಿತ್ತು. ಆದರೆ ಪ್ರಯಾಣಕರಿರ ಕೊರತೆ, ನಷ್ಟದ ನೆಪ ಹೇಳಿ 2023ರ ಡಿಸೆಂಬರ್ 26ರಂದು ವಿಮಾನ ಸೇವೆಯನ್ನು ಸ್ಥಗಿತಗೊಳಿಸಿತ್ತು. ಬಳಿಕ ಯಾವುದೇ ವಿಮಾನಗಳು ಬೀದರ್‌ ಸಂಪರ್ಕಿಸುತ್ತಿರಲಿಲ್ಲ. ಆದ್ದರಿಂದ ಜಿಲ್ಲೆಯ ಜನರು ಹೈದರಾಬಾದ್ ಅಥವ ಕಲಬುರಗಿಗೆ ಸಂಚಾರ ನಡೆಸಿ, ಅಲ್ಲಿಂದ ವಿಮಾನದ ಮೂಲಕ ಸಂಚಾರವನ್ನು ನಡೆಸಬೇಕಿತ್ತು.

ಬೀದರ್ ಸಂಸದ ಸಾಗರ್ ಖಂಡ್ರೆ ಕೇಂದ್ರ ವಿಮಾನಯಾನ ಖಾತೆ ಸಚಿವ ಶ್ರೀ ಕಿಂಜರಾಪು ರಾಮಮೋಹನ್ ನಾಯ್ಡು ಭೇಟಿ ಮಾಡಿ ಬೀದರ್‌ನಿಂದ ವಿಮಾನ ಸೇವೆ ಪ್ರಾರಂಭಿಸುವ ಕುರಿತು ಮನವಿ ಸಲ್ಲಿಕೆ ಮಾಡಿದ್ದರು. ಸಚಿವ ಈಶ್ವರ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಕೈಗಾರಿಕೆ, ಮೂಲ ಸೌಲಭ್ಯ ಖಾತೆ ಸಚಿವ ಎಂ. ಬಿ. ಪಾಟೀಲ್ ಭೇಟಿ ಮಾಡಿ ವಿಮಾನ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.

ಬೀದರ್‌ಗೆ ವಿಮಾನ ಸೇವೆ ಆರಂಭಿಸಲು ಮೂಲ ಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮೂಲಕ 13.48 ಕೋಟಿ ರೂ. ಅನುದಾನ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಆದ್ದರಿಂದ ಈಗ ಪುನಃ ವಿಮಾನ ಸೇವೆ ಆರಂಭವಾಗಲಿದ್ದು, ಗಡಿನಾಡು ಬೀದರ್ ಜಿಲ್ಲೆಯ ಜನರು ಸಂತಸಗೊಂಡಿದ್ದಾರೆ.

bidar-news

ಈ ಕುರಿತು ಬೀದರ್ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿದ್ದು, "ಬೀದರ್-ಬೆಂಗಳೂರು ನಡುವೆ ವಿಮಾನಯಾನ ಆರಂಭಿಸಲು ಸ್ಟಾರ್ ಏರ್ ಸಿದ್ಧತೆ ಮಾಡಿಕೊಂಡಿದೆ. ಏಪ್ರಿಲ್‌ನಲ್ಲಿ ವಿಮಾನ ಸೇವೆ ಆರಂಭವಾಗಲಿದೆ" ಎಂದು ಹೇಳಿದ್ದಾರೆ. ಮಾಹಿತಿಗಳ ಪ್ರಕಾರ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ (ಕೆಎಸ್‌ಐಐಡಿಸಿ) ಬೀದರ್-ಬೆಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲು ಸ್ಟಾರ್ ಏರ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ.

ಬೀದರ್ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡಾಗ ಟ್ರೂ ಜೆಟ್ 72 ಸೀಟುಗಳ ವಿಮಾನವನ್ನು ಬೆಂಗಳೂರಿಗೆ ಆರಂಭಿಸಿತ್ತು. ಆದರೆ ಕೆಲವೇ ತಿಂಗಳಿನಲ್ಲಿ ಈ ವಿಮಾನ ಸೇವೆ ಸ್ಥಗಿತಗೊಂಡಿತ್ತು. 2022ರಲ್ಲಿ ಸ್ಟಾರ್ ಏರ್ ವಿಮಾನ ಸೇವೆ ಆರಂಭಿಸಿತ್ತು. ಆದರೆ ಪ್ರಯಾಣಿಕರ ಕೊರತೆ, ನಷ್ಟದ ಕಾರಣ 2023ರ ಡಿಸೆಂಬರ್‌ನಲ್ಲಿ ಈ ವಿಮಾನವೂ ಸ್ಥಗಿತಗೊಂಡಿತು. 2023ರ ಬಳಿಕ ಈಗ ಬೀದರ್‌ಗೆ ಮತ್ತೆ ವಿಮಾನ ಸೇವೆ ಆರಂಭವಾಗುತ್ತಿದೆ.

ಬೀದರ್‌ ನಂತರ ಲೋಕಾರ್ಪಣೆಯಾದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೀದರ್ ಪಕ್ಕದ ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೊಳ್ಳಲು ಸರ್ಕಾರ ತಯಾರಿ ಮಾಡಿಕೊಂಡಿದೆ. ಕಲಬುರಗಿ ವಿಮಾನ ನಿಲ್ದಾಣವೂ ಚೆನ್ನಾಗಿ ನಡೆಯುತ್ತಿದೆ. ಆದರೆ ಬೀದರ್ ಮಾತ್ರ ವಿಮಾನ ನಿಲ್ದಾಣವಿದ್ದರೂ ವಿಮಾನ ಸಂಪರ್ಕದಿಂದ ವಂಚಿತವಾಗಿತ್ತು. ಆದ್ದರಿಂದ ಬೀದರ್ ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ 45 ಸಿಬ್ಬಂದಿಗಳನ್ನು ವಿಜಯಪುರ ವಿಮಾನ ನಿಲ್ದಾಣಕ್ಕೆ ನಿಯೋಜನೆ ಮಾಡಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+