ಬೆಂಗಳೂರಿನಿಂದ ಉತ್ತರ ಮತ್ತು ಕಲ್ಯಾಣ ಕರ್ನಾಟಕಕ್ಕೆ ವಿಶೇಷ ರೈಲು, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 05: ರಾಜಧಾನಿ ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ರೈಲುಗಳು ಬೇಕು ಎಂಬುದು ಪ್ರಮುಖ ಬೇಡಿಕೆ. ಈಗಿರುವ ರೈಲುಗಳಲ್ಲಿ ಜನರ ದಟ್ಟಣೆ ಹೆಚ್ಚಾಗಿದ್ದು, ವಿವಿಧ ನಗರದಿಂದ ಹೊಸ ರೈಲು ಓಡಿಸಬೇಕು ಎಂದು ರೈಲ್ವೆ ಇಲಾಖೆಯನ್ನು ಒತ್ತಾಯಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.
ಬೆಂಗಳೂರು ನಗರದಿಂದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸಂಪರ್ಕಿಸಲು ಆಗಸ್ಟ್ ತಿಂಗಳಿನಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈ ಕುರಿತು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಪ್ರಯಾಣಿಕರು ರೈಲು ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಸಚಿವ ವಿ. ಸೋಮಣ್ಣ ತಮ್ಮ ಪೋಸ್ಟ್‌ನಲ್ಲಿ, 'ರೈಲುಗಳಲ್ಲಿ ಪ್ರಯಾಣಿಕರ ಜನಸಂದಣಿಯನ್ನು ತಪ್ಪಿಸಿ, ಅವರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಿಂದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಭಾಗಗಳಿಗೆ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣಿಕರು ಈ ವಿಶೇಷ ರೈಲುಗಳ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ರೈಲುಗಳು, ವೇಳಾಪಟ್ಟಿ: ಈ ವಿಶೇಷ ರೈಲುಗಳು ಹುಬ್ಬಳ್ಳಿ-ಯಶವಂತಪುರ, ಯಶವಂತಪುರ-ಬೆಳಗಾವಿ, ಬೆಂಗಳೂರು-ವಿಜಯಪುರ, ಬೆಂಗಳೂರು-ಕಲಬುರಗಿ, ಹುಬ್ಬಳ್ಳಿ-ಬೆಂಗಳೂರು ಹೀಗೆ ವಿವಿಧ ಮಾರ್ಗದಲ್ಲಿ ವಿವಿಧ ದಿನಾಂಕದಂದು ಸಂಚಾರವನ್ನು ನಡೆಸಲಿವೆ. ಬೆಂಗಳೂರು ನಗರದಿಂದ, ಬೆಂಗಳೂರು ನಗರಕ್ಕೆ ಸಂಚಾರ ನಡೆಸುವ ಜನರು ರೈಲು ಸೇವೆ ಬಗ್ಗೆ ಮಾಹಿತಿ ತಿಳಿದು, ಪ್ರವಾಸದ ಯೋಜನೆ ರೂಪಿಸಿಕೊಳ್ಳಿ.
* ರೈಲು ಸಂಖ್ಯೆ 07313. ಹುಬ್ಬಳ್ಳಿ-ಯಶವಂತಪುರ. 13/8/2024ರಂದು ಸಂಚಾರ
* ರೈಲು ನಂಬರ್ 07307. ಯಶವಂತಪುರ-ಬೆಳಗಾವಿ. 14/8/2024ರಂದು ಸಂಚಾರ
* ರೈಲು ಸಂಖ್ಯೆ 07308. ಬೆಳಗಾವಿ-ಯಶವಂತಪುರ. 15/8/2024ರಂದು ಸಂಚಾರ
* ರೈಲು ನಂಬರ್ 07391. ಯಶವಂತಪುರ-ಬೆಳಗಾವಿ. 16/8/2024ರಂದು ಸಂಚಾರ
* ರೈಲು ನಂಬರ್ 07392. ಬೆಳಗಾವಿ-ಯಶವಂತಪುರ. 18/8/2024ರಂದು ಸಂಚಾರ
* ರೈಲು ನಂಬರ್ 06231. ಬೆಂಗಳೂರು (ಎಸ್‌ಎಂವಿಬಿ)-ವಿಜಯಪುರ. 14/8/2024ರಂದು ಸಂಚಾರ
* ರೈಲು ನಂಬರ್ 06232. ವಿಜಯಪುರ-ಬೆಂಗಳೂರು (ಎಸ್‌ಎಂವಿಬಿ). 15/8/2024ರಂದು ಸಂಚಾರ
* ರೈಲು ನಂಬರ್ 06235. ಬೆಂಗಳೂರು (ಎಸ್‌ಎಂವಿಬಿ)-ಹುಬ್ಬಳ್ಳಿ. 16/8/2024ರಂದು ಸಂಚಾರ
* ರೈಲು ನಂಬರ್ 06236. ವಿಜಯಪುರ-ಬೆಂಗಳೂರು (ಎಸ್‌ಎಂವಿಬಿ). 18/8/2024ರಂದು ಸಂಚಾರ
* ರೈಲು ನಂಬರ್ 06533. ಬೆಂಗಳೂರು (ಎಸ್‌ಎಂವಿಬಿ)-ಕಲಬುರಗಿ. 14, 16, 17/8/2024ರಂದು ಸಂಚಾರ
* ರೈಲು ನಂಬರ್ 06534. ಕಲಬುರಗಿ-ಬೆಂಗಳೂರು (ಎಸ್‌ಎಂವಿಬಿ). 15,17, 18/8/2024ರಂದು ಸಂಚಾರ
* ರೈಲು ನಂಬರ್ 07314. ಹುಬ್ಬಳ್ಳಿ-ಬೆಂಗಳೂರು (ಎಸ್‌ಎಂವಿಬಿ). 14/8/2024ರಂದು ಸಂಚಾರ
ಆಗಸ್ಟ್ ತಿಂಗಳಿನಲ್ಲಿ ಮಾತ್ರ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಸಂಚಾರ ನಡೆಸುವ ವಿಶೇಷ ರೈಲುಗಳಿವು. ಈ ರೈಲುಗಳು ಕಾಯಂ ಆಗಿ ಸಂಚಾರ ನಡೆಸುವುದಿಲ್ಲ. ವಿಶೇಷ ರೈಲುಗಳಲ್ಲಿ ಸಂಚಾರ ನಡೆಸುವ ಜನರು ದರ, ವೇಳಾಪಟ್ಟಿ ಮುಂತಾದವುಗಳ ಮಾಹಿತಿಯನ್ನು ಭಾರತೀಯ ರೈಲ್ವೆ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.












Click it and Unblock the Notifications