South Western Railway: ಕರ್ನಾಟಕದ ರೈಲು ಯೋಜನೆಗಳಿಗೆ ಅನುದಾನ, ಮಾರ್ಗದ ವಿವರಗಳು
ಬೆಂಗಳೂರು, ಆಗಸ್ಟ್ 19: ನೈಋತ್ಯ ರೈಲ್ವೆ 2024-25ನೇ ಸಾಲಿನ ಕೇಂದ್ರ ಬಜೆಟ್ ಬಳಿಕ ಕರ್ನಾಟಕದ ವಿವಿಧ ರೈಲು ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಿದೆ. ಒಟ್ಟು 6493.87 ಕೋಟಿ ಅನುದಾನವನ್ನು ವಿವಿಧ ಹಂಚಿಕೆ ಮಾಡಲಾಗಿದ್ದು, ಕರ್ನಾಟಕದ ರೈಲು ಯೋಜನೆಗಳಿಗೆ ಸಿಗುವ ಅನುದಾನ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ.
ರೈಲ್ವೆ ಮೂಲ ಸೌಕರ್ಯಗಳು, ನಿಲ್ದಾಣಗಳ ಆಧುನೀಕರಣ, ರೈಲುಗಳು ಸಂಪರ್ಕ, ಪ್ರಯಾಣಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅನುದಾನವನ್ನು ಬಳಕೆ ಮಾಡಲಾಗುತ್ತದೆ. ಈ ಅನುದಾನದಲ್ಲಿ ಹೊಸ ರೈಲು ಮಾರ್ಗಕ್ಕೆ 1448.89 ಕೋಟಿ ಅನುದಾನ, ಹಳಿ ದ್ವಿಗುಣಗೊಳಿಸುವ ಕಾಮಗಾರಿಗೆ 1241 ಕೋಟಿ ರೂ. ಅನುದಾನ ನೀಡಲಾಗಿದೆ.

ಪ್ರಯಾಣಿಕರಿಗೆ ಮೂಲ ಸೌಕರ್ಯ ಒದಗಿಸಲು 961.22 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ರೈಲು ನಿಲ್ದಾಣಗಳನ್ನು ಆಧುನೀಕರಿಸಿ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ ಯೋಜನೆ ಅಡಿ ಬೆಂಗಳೂರಿನ ಯಶವಂತಪುರ, ಕಂಟೋನ್ಮೆಂಟ್ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದೆ.
ಅಮೃತ್ ಭಾರತ್ ರೈಲು ನಿಲ್ದಾಣ ಅಭಿವೃದ್ಧಿ ಯೋಜನೆಯಡಿ ನೈಋತ್ಯ ರೈಲ್ವೆಯಲ್ಲಿನ 51 ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಗುಬ್ಬಿ ಮತ್ತು ಶ್ರವಣಬೆಳಗೊಳ ನಿಲ್ದಾಣಗಳನ್ನು ಈ ಯೋಜನೆಗೆ ಸೇರಿಸಿಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಯೋಜನೆಗಳ ಅನುದಾನ, ಮಾರ್ಗದ ವಿವರ (ಕೋಟಿ ರೂ.ಗಳಲ್ಲಿ)
* ಗದಗ-ವಾಡಿ ಮಾರ್ಗ 200
* ತುಮಕೂರು-ದಾವಣಗೆರೆ ವಯಾ ಚಿತ್ರದುರ್ಗ) 150
* ತುಮಕೂರು-ರಾಯದುರ್ಗ ವಯಾ ಕಲ್ಯಾಣದುರ್ಗ 250
* ಬಾಗಲಕೋಟೆ-ಕುಡಚಿ 150
* ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು 150
* ಬೆಳಗಾವಿ-ಧಾರವಾಡ ವಯಾ ಕಿತ್ತೂರು 20
* ಮಾರಿಕುಪ್ಪಂ-ಕುಪ್ಪಂ 60
* ಕಡೂರು-ಚಿಕ್ಕಮಗಳೂರು-ಹಾಸನ 70
* ಮಲಗೂರು ಪಾಲಸಮುದ್ರ 21
* ಹಾಸನ-ಬೆಂಗಳೂರು ವಯಾ ಶ್ರವಣಬೆಳಗೊಳ 20
* ಹುಬ್ಬಳ್ಳಿ-ಅಂಕೋಲ 20
* ಮುನಿರಾಬಾದ್-ಮೆಹಬೂಬ್ ನಗರ 100
* ಗದಗ-ಯಾವಲಿಗಿ 150
ದ್ವಿಪಥ ಕಾಮಗಾರಿಗೆ ಅನುದಾನ ಹಂಚಿಕೆ
* ಗದಗ-ಹೂಟಗಿ 170
* ಪೆನುಕೊಂಡ-ಧರ್ಮಾವರಂ 100
* ಬೈಯಪ್ಪನಹಳ್ಳಿ-ಹೊಸೂರು
* ಯಶವಂತಪುರ-ಚನ್ನಸಂದ್ರ 100
* ಹುಬ್ಬಳ್ಳಿ-ಚಿಕ್ಕಜಾಜೂರು 25
* ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ 200
* ಹೊಸಪೇಟೆ-ವಾಸ್ಕೋ-ಗಾ-ಡಾಮ 400
* ಯಲಹಂಕ-ಪೆನುಕೊಂಡ 20
* ಅರಸೀಕೆರೆ-ತುಮಕೂರು 20
ಹೊಸ ಮಾರ್ಗ ನಿರ್ಮಾಣ, ದ್ವಿಪಥ ರೈಲು ಮಾರ್ಗ ಕಾಮಗಾರಿ ಅಲ್ಲದೇ ರೈಲ್ವೆ ಮೇಲ್ಸೇತುವೆ, ರೈಲ್ವೆ ಅಂಡರ್‌ಪಾಸ್‌ಗಾಗಿ 349 ಕೋಟಿ ರೂ., ಇತರ ಮೂಲ ಸೌಕರ್ಯದ ಕಾಮಗಾರಿಗಳಿಗೆ 145.84 ಕೋಟಿ ರೂ. ಅನುದಾನವನ್ನು ನಿಗದಿ ಮಾಡಲಾಗಿದೆ. ಪ್ರಯಾಣಿಕರ ರೈಲುಗಳ ಜೊತೆಗೆ ಸರಕು ಸಾಗಣೆಗೂ ಸಹ ಸರ್ಕಾರ ಒತ್ತು ನೀಡುತ್ತಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜುಲೈ 23ರಂದು 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ಅನುದಾನವನ್ನು ಹಂಚಿಕೆ ಮಾಡಿದ್ದರು. ಬಳಿಕ ರೈಲ್ವೆ ವಿಭಾಗಗಳು ತಮ್ಮ ಭಾಗಕ್ಕೆ ಸಿಕ್ಕಿರುವ ಅನುದಾನದ ಕುರಿತು ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ.












Click it and Unblock the Notifications