Shivamogga Airport: ನಾಳೆಯಿಂದಲೇ ಈ ಮೂರು ಹೊಸ ಮಾರ್ಗಗಳಿಗೆ ವಿಮಾನ ಹಾರಾಟ ಶುರು

ಶಿವಮೊಗ್ಗ, ನವೆಂಬರ್‌, 20: ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗದ ಹೊರವಲಯದಲ್ಲಿರುವ ಸೋಗಾನೆ ಬಳಿ ನಿರ್ಮಾಣ ಆಗಿರುವ ವಿಮಾನ ನಿಲ್ದಾಣದಿಂದ ಹೊಸ ಮೂರು ಮಾರ್ಗಗಳಿಗೆ ನಾಳೆಯಿಂದಲೇ (ನವೆಂಬರ್‌ 21) ವಿಮಾನ ಸೇವೆಯನ್ನು ಆರಂಭ ಮಾಡಲಾಗುತ್ತದೆ.

ಸ್ಟಾರ್ ಏರ್ ವಿಮಾನಯಾನ ಸಂಸ್ಥೆಯು ನಾಳೆಯಿಂದ (ನವೆಂಬರ್‌ 21) ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದಿಂದ ಹೈದರಾಬಾದ್, ತಿರುಪತಿ ಮತ್ತು ಗೋವಾಕ್ಕೆ ಮೂರು ಹೊಸ ದೈನಂದಿನ ವಿಮಾನಗಳ ಸಂಚಾರವನ್ನು ಪ್ರಾರಂಭ ಮಾಡಲಿದೆ.

Shivamogga Airport: Flights service to new three routes from November 21

ಈಗಾಗಲೇ ಶಿವಮೊಗ್ಗ-ಬೆಂಗಳೂರು ಸಂಚಾರ ಆರಂಭ ಆಗಿದೆ. ಇದೀಗ ಮಂಗಳವಾರದಿಂದ ಹೈದರಾಬಾದ್, ಗೋವಾ, ತಿರುಪತಿಗೂ ಒಟ್ಟು ನಾಲ್ಕು ಮಾರ್ಗಗಗಳಿಗೆ ವಿಮಾನ ಸಂಚಾರ ಆರಂಭ ಆಗುತ್ತಿದೆ. ನಾಳೆಯಿಂದ ವಿಮಾನಯಾನ ಸಂಸ್ಥೆಯು ತಮ್ಮ ಹೊಸ Embraer E175 ವಿಮಾನವನ್ನು ಬಳಸಿಕೊಂಡು ಈ ಬಹು ನಿರೀಕ್ಷಿತ ಮಾರ್ಗಗಳಲ್ಲಿ ಸಂಚಾರ ಆರಂಭ ಮಾಡಲಿದೆ.

ಹೈದರಾಬಾದ್‌ನ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸವನ್ನು ಅನ್ವೇಷಿಸುವ ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಶಿವಮೊಗ್ಗ- ಹೈದರಾಬಾದ್ ತಡೆರಹಿತ ದೈನಂದಿನ ವಿಮಾನಗಳ ಸೇವೆ ಲಭ್ಯ ಇರುತ್ತದೆ ಎಂದು ಸ್ಟಾರ್ ಏರ್ ಮೂಲಗಳಿಂದ ತಿಳಿದುಬಂದಿದೆ.

ದೈನಂದಿನ ವಿಮಾನಗಳು ಶಿವಮೊಗ್ಗದಿಂದ ತಿರುಪತಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ವೆಂಕಟೇಶ್ವರ ದೇವಸ್ಥಾನ ಮತ್ತು ಇತರ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನುಕೂಲ ಆಗಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಆನಂದಿಸಬಹುದು ಮತ್ತು Embraer E175ನಲ್ಲಿನ ಸೌಕರ್ಯವನ್ನು ಅನುಭವಿಸಬಹುದಾಗಿದೆ.

ಇನ್ನು ಗೋವಾದ ಕಡಲತೀರಗಳಿಗೆ ಭೇಟಿ ನೀಡುವವರಿಗೆ, ಸ್ಟಾರ್ ಏರ್ ದೈನಂದಿನ ವಿಮಾನಗಳ ಸೇವೆಯನ್ನು ನೀಡಲಿದೆ. ಇದು ಗೋವಾದ ಕರಾವಳಿಗೆ ಸಂಪರ್ಕ ಒದಗಿಸುತ್ತದೆ ಎಂದು ಸ್ಟಾರ್ ಏರ್ ತಿಳಿಸಿದೆ. ಇನ್ನು Embraer E175 ತನ್ನ ಸೌಕರ್ಯ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿ ಆಗಿದೆ. ಇದು ಈ ಹೊಸ ಮಾರ್ಗಗಳಿಗೆ ಸೂಕ್ತವಾದ ಆಯ್ಕೆ ಆಗಿದೆ ಎಂದು ಸ್ಟಾರ್ ಏರ್ ಹೇಳಿದೆ.

ಈ ವಿಮಾನವು 2-ವರ್ಗದ ಸಂರಚನೆ, 12 ಐಷಾರಾಮಿ ಬ್ಯುಸಿನೆಸ್ ಕ್ಲಾಸ್ ಆಸನಗಳು ಮತ್ತು 64 ಅತ್ಯುತ್ತಮ-ವರ್ಗದ ಎಕಾನಮಿ ಆಸನಗಳನ್ನು ಹೊಂದಿದೆ. ಪ್ರಯಾಣಿಕರು ವಿಶಾಲವಾದ ಆಸನಗಳು, ಪೂರ್ಣ ಊಟದ ಸೇವೆ, ಆದ್ಯತೆಯ ಚೆಕ್-ಇನ್ ಮತ್ತು ಬ್ಯಾಗೇಜ್ ನಿರ್ವಹಣೆ ಸೇರಿದಂತೆ ಒಟ್ಟಾರೆ ಉತ್ತಮ ಪ್ರಯಾಣದ ಅನುಭವವನ್ನು ಸವಿಯಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2023ರ ಫೆಬ್ರವರಿಯಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದರು. ಕರ್ನಾಟಕದ 9ನೇ ಮತ್ತು ಮಲೆನಾಡು ಭಾಗದಲ್ಲಿ ನಿರ್ಮಾಣ ಆಗಿರುವ ಪ್ರಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಸಹ ವಿಮಾನ ಲ್ಯಾಂಡ್ ಆಗುವ ವ್ಯವಸ್ಥೆಯಿದೆ. ಈ ಕುರಿತು ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಪೂರ್ಣಗೊಳ್ಳಲಿದೆ.

ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಅತಿ ಉದ್ದದ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಶಿವಮೊಗ್ಗ ವಿಮಾನ ನಿಲ್ದಾಣದ್ದಾಗಿದೆ. ಏರ್‌ಬಸ್ 320 ಮಾದರಿಯ ವಿಮಾನಗಳು ಕೂಡ ಇಳಿಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಬೇಕೆಂದು ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

ಸದ್ಯ ಬೆಂಗಳೂರು-ಶಿವಮೊಗ್ಗ ನಡುವೆ ಮಾತ್ರ ವಿಮಾನ ಸಂಪರ್ಕ ಇದೆ. ಮುಂದಿನ ಒಂದು ವರ್ಷ ಕಾಲ ಶಿವಮೊಗ್ಗ-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರತಿಯೊಬ್ಬರ ಟಿಕೆಟ್ ಮೇಲೆ 500 ರೂಪಾಯಿ ಸಬ್ಸಿಡಿಯನ್ನು ರಾಜ್ಯ ಸರ್ಕಾರ ನೀಡಲಿದೆ. ನವೆಂಬರ್‌ನಲ್ಲಿ 3 ಹೊಸ ಮಾರ್ಗದಲ್ಲಿ ವಿಮಾನ ಸೇವೆ ಆರಂಭ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+