Shakti yojana: ಸಾಂಸ್ಕೃತಿಕ ನಗರಿಯಲ್ಲಿ 4ನೇ ದಿನವೂ ಸರ್ಕಾರಿ ಬಸ್‌ಗಳು ಫುಲ್ ರಷ್, ಖಾಸಗಿ ಬಸ್‌ಗಳಿಗೆ "ಶಕ್ತಿ" ಹೊಡೆತ?
ಮೈಸೂರು, ಜೂನ್ 14: ಇತ್ತೀಚೆಗಷ್ಟೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯವನ್ನು ಒದಗಿಸಿದೆ. ಈ "ಶಕ್ತಿ" ಯೋಜನೆ ಮೈಸೂರಿನ ಖಾಸಗಿ ಬಸ್‌ಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು, ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆಟೋ, ಟ್ಯಾಕ್ಸಿಗಳೂ ಹೆಚ್ಚಿನ ಓಡಾಟ ನಡೆಸಿಲ್ಲ. ಚಾಲಕರು, ಟ್ಯಾಕ್ಸಿ ಚಾಲಕರ ಸಂಪಾದನೆ ಅರ್ಧಕರ್ಧ ಕಡಿಮೆ ಆಗಿದೆ ಎನ್ನುವ ಮಾತುಗಳು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೇಳಿಬಂದಿವೆ.
ರಾಜ್ಯದಲ್ಲಿ ಸ್ಟೇಜ್ ಕ್ಯಾರೇಜ್ ವತಿಯಿಂದ ಸುಮಾರು 3 ಸಾವಿರ ಖಾಸಗಿ ಬಸ್‌ಗಳು ಓಡಾಟ ನಡೆಸುತ್ತವೆ. ಮೈಸೂರು, ಮಂಡ್ಯ, ಮಡಿಕೇರಿ, ಮಂಗಳೂರು, ಉಡುಪಿ, ಚಿತ್ರದುರ್ಗ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಈ ಖಾಸಗಿ ಬಸ್‌ಗಳು ಕಂಡುಬರುತ್ತವೆ. ಆದರೆ, ಶಕ್ತಿ ಯೋಜನೆಯಿಂದ ಮೈಸೂರು ನಗರದಲ್ಲಿ ಖಾಸಗಿ ಬಸ್‌ಗಳ ಅರ್ಧದಷ್ಟು ಸೀಟು ಖಾಲಿ ಇರಲಿದ್ದು, ಶೇಕಡಾ 60ರಷ್ಟು ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ನತ್ತ ವಾಲಿದ್ದಾರೆ.

ಇನ್ನು ಜೂನ್ 11ರಂದು ರಾಜ್ಯಾದ್ಯಂತ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದೆ. ಇದರಿಂದ ರಾಜ್ಯದಲ್ಲಿನ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಲಾಭವನ್ನು ಪಡೆಯುತ್ತಿದ್ದಾರೆ. ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಜಮಾಯಿಸಿ ಸರ್ಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
4ನೇ ದಿನವೂ ಬಸ್‌ಗಳು ಫುಲ್ ರಷ್
ಇನ್ನು 4ನೇ ದಿನವೂ ಅಂದರೆ ಮಂಗಳವಾರ (ಜೂನ್ 14) ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿ ಸಂತೋಷಪಟ್ಟಿದ್ದಾರೆ. ಇನ್ನು ನಿನ್ನೆಯೂ ಸಹ ನಗರ ಹಾಗೂ ಗ್ರಾಮಾಂತರ ಬಸ್ ನಿಲ್ದಾಣದ ತುಂಬಾ ಮಹಿಳೆಯರೇ ಹೆಚ್ಚು ಕಂಡುಬಂದರು. ಹೀಗೆ "ಶಕ್ತಿ" ಯೋಜನೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.
ಮಹಿಳೆಯರು ಉಚಿತ ಟಿಕೆಟ್ ಪಡೆದುಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚಾರ ಶುರು ಮಾಡಿದ್ದಾರೆ. ಈ ಯೋಜನೆಗೆ ಪರ-ವಿರೋಧ ಚರ್ಚೆ ನಡುವೆಯೂ ಅನೇಕ ಮಹಿಳೆಯರು ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯಾದರೂ ನೂಕು ನುಗ್ಗಲಿನಲ್ಲಿ ಪ್ರಯಾಣಿಕರು ಬಸ್‌ನಲ್ಲಿ ಸಂಚರಿಸುವಂತಾಯಿತು.
ಮೈಸೂರು, ಹಾಸನ, ಹುಣಸೂರು ಕಡೆಗೆ ಪ್ರಯಾಣಿಕರು ದುಪ್ಪಟ್ಟು ಹೆಚ್ಚಿದ್ದರಿಂದ ಹೆಚ್ಚಿನ ವಾಹನಗಳ ಅವಶ್ಯಕತೆ ಕಂಡು ಬಂತಾದರೂ ವಾಹನಗಳು ಲಭ್ಯವಿರಲಿಲ್ಲ. ಮಧ್ಯಾಹ್ನ 2 ಗಂಟೆಯಾದರೂ ಎಲ್ಲಾ ವಾಹನಗಳು ಭರ್ತಿಯಾಗಿ ಪ್ರಯಾಣಿಕರು ಪ್ರಯಾಣ ಮಾಡುವಂತಾಯಿತು.
"ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಲು ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿರುವುದು ಖುಷಿಯ ವಿಚಾರವಾಗಿದೆ. ಇದು ಉದ್ಯೋಗಸ್ಥ ಮಹಿಳೆಯರು ಸೇರಿದಂತೆ ವಿದ್ಯಾರ್ಥಿನಿಯರು ಹಾಗೂ ಇತರರಿಗೆ ವರದಾನ ಆಗಿದೆ. ಈ ಯೋಜನೆ ದುರುಪಯೋಗ ಆಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ," ಎಂದು ಖಾಸಗಿ ಕಂಪನಿ ಉದ್ಯೋಗಿ ಮೀನಾ ತಿಳಿಸಿದ್ದಾರೆ.
1.70 ಲಕ್ಷ ಮಹಿಳೆಯರ ಪ್ರಯಾಣ
ಸಾಮಾನ್ಯವಾಗಿ ಸೋಮವಾರದಂದು ಬೆಳಗಿನ ವೇಳೆ ಬೇಡಿಕೆ ಇರುತ್ತದೆ. ಆದರೆ, ಈ ಸೋಮವಾರ ಏಕಕಾಲಕ್ಕೆ ಸಾವಿರಾರು ಮಂದಿ ಪ್ರಯಾಣಿಕರು ನಿಲ್ದಾಣದಲ್ಲಿ ನೆರೆದಿದ್ದರು. ಆದರೆ, ಮಧ್ಯಾಹ್ನದ ವೇಳೆಗೆ ಈ ಸಂಖ್ಯೆ ಸಾಕಷ್ಟು ತಗ್ಗಿತ್ತು. ಮತ್ತೆ ಸಂಜೆ ಪ್ರಯಾಣಿಕರ ಸಂದಣಿ ಹೆಚ್ಚಿತು. ಬಹುತೇಕ ಬಸ್‌ಗಳಲ್ಲಿ ಸೀಟುಗಳು ಭರ್ತಿಯಾಗಿ ಸಾಕಷ್ಟು ಮಂದಿ ಪ್ರಯಾಣಿಕರು ನಿಂತೇ ಪ್ರಯಾಣಿಸುತ್ತಿದ್ದ ದೃಶ್ಯ ಕಂಡುಬಂದಿತ್ತು.
"ನಮ್ಮ ವಿಭಾಗದ ಬಸ್‌ಗಳಲ್ಲಿ ಪ್ರತಿ ದಿನ 1.50 ಲಕ್ಷ ಮಹಿಳಾ ಪ್ರಯಾಣಿಕರು ಓಡಾಡುತ್ತಾರೆ. ಈ ಪೈಕಿ ಇದೀಗ 20 ಸಾವಿರ ಮಹಿಳೆಯರು ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಿದ್ದಾರೆ. ಮೈಸೂರು ವಿಭಾಗದಲ್ಲಿ 871 ಬಸ್‌ಗಳನ್ನು ಬಿಡಲಾಗಿದೆ," ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications