ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ಸಾಂಗ್ಲಿ ತನಕ ವಿಸ್ತರಣೆ, ವೇಳಾಪಟ್ಟಿ
ಬೆಳಗಾವಿ, ಮಾರ್ಚ್ 04: ಕೇಂದ್ರ ರೈಲ್ವೆ ಸಚಿವಾಲಯ ಬೆಂಗಳೂರು-ಮೀರಜ್ ನಡುವಿನ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಹಾರಾಷ್ಟ್ರದ ಸಾಂಗ್ಲಿ ತನಕ ವಿಸ್ತರಣೆ ಮಾಡಲು ಅನುಮತಿ ನೀಡಿದೆ. ಬೆಂಗಳೂರಿನಿಂದ ಸಂಚಾರ ನಡೆಸುವ ಅತ್ಯಂತ ಪ್ರಯಾಣಿಕರ ದಟ್ಟಣೆಯ ರೈಲುಗಳಲ್ಲಿ ಇದು ಸಹ ಒಂದಾಗಿದೆ.
ರೈಲು ನಂಬರ್ 16589/90 ಬೆಂಗಳೂರು ಮೀರಜ್ ನಡುವೆ ಸಂಚಾರ ನಡೆಸುತ್ತದೆ. ಇದನ್ನು ಸಾಂಗ್ಲಿ ತನಕ ವಿಸ್ತರಣೆ ಮಾಡಲಾಗುತ್ತದೆ. ಬೆಂಗಳೂರಿನಿಂದ ಹೊರಡುವ ರೈಲು ಹುಬ್ಬಳ್ಳಿ-ಧಾರವಾಡ, ಗೋಕಾಕ್, ಬೆಳಗಾವಿ ತನಕ ಸಂಚಾರ ನಡೆಸುತ್ತಿದೆ.

ಬೆಂಗಳೂರಿನಿಂದ 23:00 ಹೊರಡುವ ರೈಲು ಮರುದಿನ 12:10ಕ್ಕೆ ಮೀರಜ್ ತಲುಪುತ್ತದೆ. ರೈಲು ಮೀರಜ್‌ನಿಂದ ಸಂಜೆ 15:35ಕ್ಕೆ ಹೊರಟು, ಮರುದಿನ ಬೆಳಗ್ಗೆ 06:15ಕ್ಕೆ ಬೆಂಗಳೂರು ನಗರಕ್ಕೆ ತಲುಪುತ್ತದೆ.
ಚೆನ್ನೈ-ಎಗ್ಮೋರ್-ಮಂಗಳೂರು ಸೆಂಟ್ರಲ್ ಹೊರತುಪಡಿಸಿದರೆ ಅತಿ ಹೆಚ್ಚು ಜನಸಂದಣಿ ಇರುವ ರೈಲು ಬೆಂಗಳೂರು-ಮೀರಜ್ ನಡುವಿನ ರೈಲಾಗಿದೆ. ಇದನ್ನು ಸಾಂಗ್ಲಿ ತನಕ ವಿಸ್ತರಣೆ ಮಾಡಿದ್ದರಿಂದ ಇನ್ನಷ್ಟು ಜನರಿಗೆ ಅನುಕೂಲವಾಗಲಿದೆ.
ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ ಜಂಕ್ಷನ್, ಕಡೂರು, ಬೀರೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಎಸ್ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ಬೆಳಗಾವಿ, ಪಚ್ಚಾಪುರ, ಗೋಕಾಕ್ ರಸ್ತೆ, ಘಟಪ್ರಭ, ಚಿಕ್ಕೋಡಿ ರಸ್ತೆ, ರೇಬ್ಯಾಗ್, ಚಿಂಚ್ಲಿ, ಕುಡಚಿ ಮೂಲಕ ಮೀರಜ್‌ಗೆ ತಲುಪಲಿದೆ.
ವಂದೇ ಭಾರತ್ ರೈಲು ವಿಸ್ತರಣೆ: ಸದ್ಯ ಕೆಎಸ್ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆಗೆ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ. ಪ್ರಾಯೋಗಿಕ ಸಂಚಾರವೂ ಸಹ ಪೂರ್ಣಗೊಂಡಿದೆ. ಆದರೆ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.
ವಂದೇ ಭಾರತ್ ರೈಲು ನಿರ್ವಹಣೆಗೆ ಬೇಕಾದ ಮೂಲ ಸೌಕರ್ಯವನ್ನು ಬೆಳಗಾವಿ ನಿಲ್ದಾಣದಲ್ಲಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ರೈಲು ಸಂಚಾರವನ್ನು ವಿಸ್ತರಣೆ ಮಾಡಲಾಗುತ್ತದೆ.
ಬೆಳಗಾವಿಗೆ ರೈಲು ಸಂಪರ್ಕದ ಕುರಿತು ವಿವಿಧ ಬೇಡಿಕೆ ಇಡಲಾಗಿದೆ. ಬೆಳಗಾವಿ ಸಂಸದೆ ಮಂಗಲ ಸುರೇಶ್ ಅಂಗಡಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿ, ಬಹುದಿನಗಳಿಂದ ಬಾಕಿ ಉಳಿದಿರುವ ಕರಾಡ- ನಿಪ್ಪಾಣಿ -ಬೆಳಗಾವಿ ರೈಲು ಮಾರ್ಗದ ಕಾಮಗಾರಿಯನ್ನು ಆರಂಭಿಸಿ ಪೂರ್ಣಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ.
ಈ ರೈಲು ಮಾರ್ಗ ಪೂರ್ಣಗೊಂಡರೆ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಸಾವಿರಾರು ಜನರಿಗೆ ಅನುಕೂಲವಾಗಲಿದೆ. ಕರಾಡ -ನಿಪ್ಪಾಣಿ-ಬೆಳಗಾವಿ, ಶೇಡಬಾಳ-ಅಥಣಿ-ವಿಜಯಪುರ, ಬೆಳಗಾವಿ -ಕೊಲ್ಲಾಪುರ, ಬೆಳಗಾವಿ-ಕಿತ್ತೂರು-ಧಾರವಾಡ ಮತ್ತು ಹಾಸನ- ಮಂಗಳೂರು ಮಾರ್ಗದಲ್ಲಿ ರೈಲು ಸೇವೆ ಆರಂಭಿಸುವಂತೆಯೂ ಮನವಿ ಸಲ್ಲಿಕೆ ಮಾಡಲಾಗಿದೆ.












Click it and Unblock the Notifications