Hosapete Railway Station: ಮಾ. 12ರಂದು 13 ಕೋಟಿ ರೂ. ವೆಚ್ಚದ ವಿನೂತನ ಶೈಲಿಯ ರೈಲ್ವೆ ನಿಲ್ದಾಣವನ್ನ ಉದ್ಘಾಟಿಸಲಿರೋ ಮೋದಿ
ಹಂಪಿ, ಮಾರ್ಚ್, 12: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಅನ್ನು ಉದ್ಘಾಟನೆ ಮಾಡಲಿದ್ದಾರೆ. ಇದರ ಜೊತೆಗೆ 13 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿರುವ ಹೊಸಪೇಟೆಯ ರೈಲ್ವೆ ನಿಲ್ದಾಣವನ್ನು ಸಹ ಲೋಕಾರ್ಪಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ (ಮಾರ್ಚ್ 12) ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದು, ಈ ವೇಳೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹಾಗೂ ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ವಿನೂತನ ಶೈಲಿಯ ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಸಹ ಉದ್ಘಾಟನೆ ಮಾಡಲಿದ್ದಾರೆ.

ಗತವೈಭವ ಸಾರುವ ರೈಲ್ವೆ ನಿಲ್ದಾಣ
ಈ ರೈಲು ನಿಲ್ದಾಣದ ಪ್ರವೇಶ ದ್ವಾರದ ಬಳಿ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ಚಲಾವಣೆಯಲ್ಲಿದ್ದ ನಾಣ್ಯಗಳ ಮಾಹಿತಿಯನ್ನು ನೀಡಲಾಗಿದ್ದು, ಇವುಗಳು ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವಂತಿವೆ. ಇನ್ನು ರೈಲು ನಿಲ್ದಾಣದ ಮುಂಭಾಗದಲ್ಲಿ ಹಂಪಿ ಕಲ್ಲಿನ ರಥಗಳ ಮಾದರಿಯಲ್ಲಿರುವ ಪ್ರವೇಶ ದ್ವಾರಗಳು ನೋಡುಗರನ್ನು ಮನಸೋರೆಗೊಳಿಸುವಂತಿವೆ.
ಮೋದಿಯವರಿಂದ ಕರ್ನಾಟಕ ಪ್ರವಾಸ
ಒಟ್ಟಾರೆಯಾಗಿ ಹೇಳುವುದಾದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರ್ನಾಟಕ ಪ್ರವಾಸವು, ವಿವಿಧ ಅಭಿವೃದ್ಧಿ ಯೋಜನೆಗಳ ಲೋಕಾರ್ಪಣೆಗೆ ಸಾಕ್ಷಿಯಾಗಲಿದೆ. ಇನ್ನು ಅಂದೇ ಹಲವು ಕಾರ್ಯಕ್ರಗಳಲ್ಲಿ ಭಾಗಿಯಾಗಲಿರುವ ಅವರು, ಹಾಗೆಯೇ ಹುಬ್ಬಳ್ಳಿಯ ಶ್ರೀ ಸಿದ್ಧರೂಢ ಸ್ವಾಮಿ ರೈಲು ನಿಲ್ದಾಣದಲ್ಲಿ ನಿರ್ಮಾಣವಾದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್ ಅನ್ನು ಕೂಡ ಉದ್ಘಾಟನೆ ಮಾಡಲಿದ್ದಾರೆ.

ಲೋಕಾರ್ಪಣೆಗೆ ಸಿದ್ಧವಾದ ಪ್ಲಾಟ್‌ಫಾರ್ಮ್
ಈ ರೈಲ್ವೆ ಪ್ಲಾಟ್‌ಪಾರ್ಮ್‌ನ ಅಭಿವೃದ್ಧಿ ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣವಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12 ರಂದು ಹುಬ್ಬಳ್ಳಿ-ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ಲಾಟ್‌ಫಾರ್ಮ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರೈಲ್ವೆ ಪ್ಲಾಟ್ಫಾರ್ಮ್ನ ಉದ್ದ ಎಷ್ಟು?
ಮೋದಿಯವರು ಐಐಟಿ-ಧಾರವಾಡದ ಶಾಶ್ವತ ಕ್ಯಾಂಪಸ್ ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌ಫಾರ್ಮ್ ಅವನ್ನು ಕೂಡ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಹಿತಿ ನೀಡಿದ್ದಾರೆ. ಈ ಮೊದಲು 1ನೇ ಪ್ಲಾಟ್‌ಫಾರ್ಮ್ 550 ಮೀಟರ್ ಉದ್ದ ಇತ್ತು. ಇದನ್ನು ವಿಸ್ತರಿಸಿ 10 ಮೀಟರ್ ಅಗಲದೊಂದಿಗೆ 1505 ಮೀಟರ್‌ವರೆಗೆ ವಿಸ್ತರಣೆ ಮಾಡಲಾಗಿದೆ.
ಇದು ವಿಶ್ವದಲ್ಲಿಯೇ ಅತಿ ಉದ್ದದ ಪ್ಲಾಟ್ಫಾರಂ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈವರೆಗೂ ಈಶಾನ್ಯ ರೈಲ್ವೆ ವಲಯದ ಗೋರಖ್‌ಪುರ ನಿಲ್ದಾಣದಲ್ಲಿರುವ 1366 ಮೀಟರ್ ಉದ್ದವಿರುವ ಪ್ಲಾಟ್ಫಾರಂ ಪ್ರಥಮ ಸ್ಥಾನವನ್ನು ಪಡೆದಿತ್ತು. ಇದೀಗ ಹುಬ್ಬಳ್ಳಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರೈಲ್ವೆ ಪ್ಲಾಟ್ಫಾರಂ ಈ ಸ್ಥಾನವನ್ನು ಹಿಂದಿಕ್ಕಿ ಪ್ರಥಮ ಸ್ಥಾನವನ್ನು ಅಲಂಕರಿಸಲಿದೆ.












Click it and Unblock the Notifications