KSRTC: ಶೀಘ್ರದಲ್ಲೇ ಬೆಂಗಳೂರಿನಿಂದ ಅಹಮದಾಬಾದ್ ಮತ್ತು ಪುರಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆ
ಬೆಂಗಳೂರು, ಜುಲೈ. 11: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಸುದೀರ್ಘವಾದ ದೈನಂದಿನ ಸೇವೆಗಳನ್ನು ಪ್ರಾರಂಭಿಸಲು ಸಜ್ಜಾಗಿದೆ. ಯುರೋಪಿಯನ್ ಶೈಲಿಯ ಹವಾನಿಯಂತ್ರಿತ ಸ್ಲೀಪರ್ ಬಸ್‌ಗಳು ಬೆಂಗಳೂರನ್ನು ಅಹಮದಾಬಾದ್ ಮತ್ತು ಒಡಿಶಾದ ಪುರಿಗೆ ಸಂಪರ್ಕ ಕಲ್ಪಿಸಲಿವೆ.
ಇದು ಕೆಎಸ್‌ಆರ್‌ಟಿಸಿಯ ನೂತನ ಯೋಜನೆಯಾಗಿದ್ದು, ಸುದೀರ್ಘ ಪ್ರಯಾಣದ ಸೇವೆಗಳನ್ನು ಪ್ರಾರಂಭಿಸುತ್ತಿದೆ. ಎರಡೂ ನಗರಗಳು ಬೆಂಗಳೂರಿನಿಂದ ಸುಮಾರು 1,500 ಕಿ.ಮೀ. ದೂರದಲ್ಲಿವೆ. ಪ್ರಸ್ತುತ, ಬೆಂಗಳೂರು - ಮುಂಬೈ ಮತ್ತು ಬೆಂಗಳೂರು - ಶಿರಡಿ ಲಾಂಗ್ ಡಿಸ್ಟೆನ್ಸ್ ಕೆಎಸ್‌ಆರ್‌ಟಿಸಿ ಮಾರ್ಗಗಳಾಗಿವೆ. ಎರಡು ನಗರಗಳಿಗೆ ಸುಮಾರು 1,000 ಕಿ.ಮೀ. ದೂರದ ಮಾರ್ಗವಿದೆ.

ಖಾಸಗಿ ವಲಯದಿಂದ ಬೇಡಿಕೆ ಮತ್ತು ಸ್ಪರ್ಧೆಯ ಹಿನ್ನೆಲೆಯಲ್ಲಿ ಈ ವಿಸ್ತರಣೆ ಯೋಜನೆ ಬಂದಿದೆ. "ಬೆಂಗಳೂರಿನಿಂದ ದೂರದ ಸ್ಥಳಗಳಿಗೆ ಬಸ್ ಸೇವೆಗಳಿಗೆ ಬಲವಾದ ಬೇಡಿಕೆಯಿದೆ. ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ಗಳಿಗೆ ಹೆಚ್ಚು ಬೇಡಿಕೆಯಿದೆ. ಹೀಗಾಗಿ ನಾವು ಹೊಸ ಮಾರ್ಗಗಳನ್ನು ಹುಡುಕಲು ಬಯಸುತ್ತೇವೆ" ಎಂದಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಅವರನ್ನು ಡೆಕ್ಕನ್ ಹೆರಾಲ್ಡ್ ಉಲ್ಲೇಖಿಸಿದೆ.
ಅನೇಕ ಖಾಸಗಿ ಬಸ್ ಸಂಸ್ಥೆಗಳು ಈಗಾಗಲೇ ಬೆಂಗಳೂರಿನಿಂದ ಅಹಮದಾಬಾದ್, ಇಂದೋರ್, ಭೋಪಾಲ್, ಜೈಪುರ, ಜೈತರನ್, ಜೋಧ್‌ಪುರ ಮತ್ತು ಜೈಸಲ್ಮೇರ್ ಸೇರಿದಂತೆ ದೂರದ ಸ್ಥಳಗಳಿಗೆ ಬಸ್ ಸೇವೆಗಳನ್ನು ನೀಡುತ್ತಿದ್ದಾರೆ. ಬೆಂಗಳೂರಿನಿಂದ ಸುಮಾರು 2,000 ಕಿಮೀ ದೂರದಲ್ಲಿರುವ ಜೈಸಲ್ಮೇರ್ ಬಸ್ ಸೇವೆಯು ಭಾರತದ ಅತಿ ಉದ್ದದ ಬಸ್ ಮಾರ್ಗವಾಗಿದೆ.
ಆದರೂ ಕೂಡ ಒಡಿಶಾದ ಪ್ರಮುಖ ಯಾತ್ರಾ ಕ್ಷೇತ್ರವಾದ ಪುರಿಗೆ ಬೆಂಗಳೂರಿನಿಂದ ನೇರ ಬಸ್ ಸೇವೆ ಇಲ್ಲ. ಈ ಹೊಸ ಸೇವೆಗಳನ್ನು ಪ್ರಾರಂಭಿಸಲು, ಕೆಎಸ್‌ಆರ್‌ಟಿಸಿಗೆ ಗುಜರಾತ್, ಮಹಾರಾಷ್ಟ್ರ, ಒಡಿಶಾ ಮತ್ತು ಆಂಧ್ರಪ್ರದೇಶ, ಮಾರ್ಗಗಳ ಉದ್ದಕ್ಕೂ ಇರುವ ರಾಜ್ಯಗಳ ರಸ್ತೆ ಸಾರಿಗೆ ನಿಗಮಗಳಿಂದ ಅನುಮೋದನೆಯ ಅಗತ್ಯವಿದೆ.
"ಆರ್‌ಟಿಸಿಗಳೊಂದಿಗೆ ಮಾತುಕತೆಯನ್ನು ಪ್ರಾರಂಭಿಸಲಾಗಿದೆ ಮತ್ತು ಮುಂದುವರಿದ ಹಂತದಲ್ಲಿದೆ. ಶೀಘ್ರದಲ್ಲೇ ಸಕಾರಾತ್ಮಕ ಫಲಿತಾಂಶವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಸೀಮಿತ ಸೇವೆಗಳನ್ನು ಪ್ರಾರಂಭಿಸಿದರೆ ಆರ್‌ಟಿಸಿಗಳು ಸಾಮಾನ್ಯವಾಗಿ ಆಕ್ಷೇಪಣೆಗಳನ್ನು ಎತ್ತುವುದಿಲ್ಲ" ಎಂದು ಅನ್ಬುಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಅಸ್ತಿತ್ವದಲ್ಲಿರುವ ಬೆಂಗಳೂರು - ಮುಂಬೈ ಮತ್ತು ಬೆಂಗಳೂರು - ಶಿರಡಿ ದೂರದ ಮಾರ್ಗಗಳಂತೆಯೇ ಈ ಹೊಸ ಮಾರ್ಗಗಳು ಲಾಭದಾಯಕವಾಗುತ್ತವೆ ಎಂದು ಕೆಎಸ್‌ಆರ್‌ಟಿಸಿ ವಿಶ್ವಾಸ ಹೊಂದಿದೆ. ಇದು ಪ್ರತಿ ಮಾರ್ಗಕ್ಕೆ ಎರಡು ಬಸ್‌ಗಳನ್ನು ನಿಯೋಜಿಸಲಾಗುತ್ತದೆ. ಬಸ್ಸಿನಲ್ಲಿ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಪ್ರಯಾಣ ದರ 2,500 ರೂಪಾಯಿಯಾಗಿದ್ದು, ಪ್ರಯಾಣದ ಸಮಯ 27 ರಿಂದ 28 ಗಂಟೆಗಳಿರುತ್ತದೆ.
ಅಂಬಾರಿ ಉತ್ಸವ
ಅಂಬಾರಿ ಉತ್ಸವ ಬ್ರಾಂಡ್ ಅಡಿಯಲ್ಲಿ, ಕೆಎಸ್‌ಆರ್‌ಟಿಸಿ 20 ಮಲ್ಟಿ ಆಕ್ಸಲ್, ಎಸಿ ಸ್ಲೀಪರ್ ಬಸ್‌ಗಳನ್ನು ಖರೀದಿಸುತ್ತಿದೆ. ಮೇ ತಿಂಗಳಿನಲ್ಲಿ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಒಪ್ಪಂದ ಅಂತಿಮಗೊಳ್ಳಲಿದೆ. "ಒಂದು ಕಂಪನಿ ಮಾತ್ರ ಟೆಂಡರ್‌ನಲ್ಲಿ ಭಾಗವಹಿಸಿದೆ. ನಾವು ಅದನ್ನು ಮೌಲ್ಯಮಾಪನ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅಂತಿಮಗೊಳಿಸುತ್ತೇವೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಪ್ರಸ್ತುತ 474 ವೋಲ್ವೋ ಬಸ್‌ಗಳನ್ನು ಹೊಂದಿದೆ. ಮಾರ್ಚ್ 2025 ರ ವೇಳೆಗೆ 60 ವಾಹನಗಳನ್ನು ಸ್ಥಗಿತಗೊಳ್ಳಲಿದೆ. ಅಂಬಾರಿ ಉತ್ಸವ ಬಸ್‌ಗಳು ಅಂಬಾರಿ ಡ್ರೀಮ್ ಕ್ಲಾಸ್‌ಗೆ ಹೋಲಿಸಿದರೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿವೆ. 16 ಹೊಸ ಎಸಿ ಸ್ಲೀಪರ್ ಬಸ್‌ಗಳು ಮಂಗಳೂರು, ಕುಂದಾಪುರ, ಮುರ್ಡೇಶ್ವರ, ಹೈದರಾಬಾದ್ ಮತ್ತು ಎರ್ನಾಕುಲಂ ಮಾರ್ಗಗಳಿಗೆ ಸೇವೆ ಸಲ್ಲಿಸಲಿವೆ. ಕರಾವಳಿ ಕರ್ನಾಟಕದ ಮಾರ್ಗಗಳಿಗೆ 10 ರಿಂದ 12 ಬಸ್‌ಗಳ ಅಗತ್ಯವಿದೆ.












Click it and Unblock the Notifications