KSRTC: 40 ಐರಾವತ ಬಸ್ ಖರೀದಿ ಮಾಡಲಿದೆ ಕೆಎಸ್ಆರ್‌ಟಿಸಿ
ಬೆಂಗಳೂರು, ಮೇ 12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ಯ ಐಷಾರಾಮಿ ಬಸ್‌ಗಳಲ್ಲಿ 'ಐರಾವತ' ಸಹ ಒಂದು. ದೂರ ಪ್ರಯಾಣಕ್ಕೆ ಐರಾವತ, ಐರಾವತ ಕ್ಲಬ್ ಕ್ಲಾಸ್ ಬಸ್‌ಗಳನ್ನು ಬಳಕೆ ಮಾಡಲಾಗುತ್ತಿದೆ. ಈಗ ಹೊಸ ಬಸ್‌ಗಳ ಖರೀದಿಗೆ ನಿಗಮ ಮುಂದಾಗಿದೆ.
ಕಳೆದ 4 ವರ್ಷಗಳಲ್ಲಿ ಕೆಎಸ್ಆರ್‌ಟಿಸಿ ಯಾವುದೇ ಹೊಸ 'ಐರಾವತ' ಮಾದರಿ ಬಸ್‌ಗಳನ್ನು ಖರೀದಿ ಮಾಡಿಲ್ಲ. ಈಗ ಹಳೆಯದಾಗಿರುವ ಬಸ್ ಗಳನ್ನು ಬದಲಾವಣೆ ಮಾಡಲು ಒಟ್ಟು 40 ಬಸ್‌ಗಳನ್ನು ಖರೀದಿ ಮಾಡಲು ಟೆಂಡರ್ ಕರೆದಿದೆ.

ಕೆಎಸ್ಆರ್‌ಟಿಸಿ ಈಗ 'ಐರಾವತ ಕ್ಲಬ್ ಕ್ಲಾಸ್' ಮತ್ತು 'ಐರಾವತ ಸ್ಲೀಪರ್' ಮಾದರಿಯ ಹೊಸ 40 ಬಸ್‌ಗಳನ್ನು ಖರೀದಿ ಮಾಡುತ್ತಿದೆ. ಹಳೆಯ ಐರಾವತ ಬಸ್‌ಗಳನ್ನು ಬದಲಾವಣೆ ಮಾಡುವಂತೆ ಪ್ರಯಾಣಿಕರು ಬೇಡಿಕೆಯನ್ನು ಇಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸುಮಾರು 5 ವರ್ಷಗಳ ಬಳಿಕ ಐರಾವತ ಮಾದರಿ ಬಸ್‌ಗಳನ್ನು ಖರೀದಿ ಮಾಡಲಾಗುತ್ತಿದೆ.
ಹೊಸ ಬಸ್‌ನ ವಿಶೇಷತೆಗಳು: ಹೊಸ 40 'ಐರಾವತ' ಮಾದರಿ ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೇ ಹಳೆಯ ಬಸ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 13 ಲಕ್ಷ ಕಿ. ಮೀ. ಓಡಿದ ಬಳಿಕ ನಿಗಮ ಹಳೆಯ ಎಸಿ ಬಸ್‌ಗಳನ್ನು ಬದಲಾವಣೆ ಮಾಡುತ್ತದೆ. ಈ ನಿಯಮಗಳ ಅನ್ವಯವೇ ಈಗ ಐರಾವತ ಬಸ್ ಖರೀದಿಗೆ ಟೆಂಡರ್ ಕರೆಯಲಾಗಿದೆ.
ಕೆಎಸ್ಆರ್‌ಟಿಸಿ 8234 ಬಸ್‌ಗಳನ್ನು ಹೊಂದಿದೆ. ಇವುಗಳಲ್ಲಿ 475 ಪ್ರಿಮಿಯಂ ಮಾದರಿ ಬಸ್‌ಗಳು. ಇವುಗಳಲ್ಲಿ 'ಐರಾವತ' ಮತ್ತು 'ಐರಾವತ ಕ್ಲಬ್ ಕ್ಲಾಸ್' ಎಸಿ ಬಸ್‌ಗಳು ಸೇರಿವೆ. ದೂರ ಪ್ರಯಾಣಕ್ಕೆ ಅನುಕೂಲವಾಗಲು ಈ ಮಾದರಿ ಬಸ್‌ಗಳನ್ನು ಪರಿಚಯಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೊಸ ಬಸ್‌ಗಳು 15 ಮೀಟರ್ ಉದ್ದವಿದ್ದು, BS VI ಇಂಜಿನ್ ಹೊಂದಿವೆ. ಎಲ್ಲಾ ಬಸ್‌ಗಳು 40 ಸೀಟುಗಳನ್ನು ಮಾತ್ರ ಹೊಂದಿವೆ. ಪ್ರತಿ ಸೀಟಿನಲ್ಲಿಯೂ ಎಸಿ ನಿಯಂತ್ರಣ ಸೌಲಭ್ಯವನ್ನು ಬಸ್‌ಗಳು ಹೊಂದಿವೆ. ಉತ್ತಮ ಕುಷನ್, ಪುಶ್ ಬ್ಯಾಕ್ ಸೌಲಭ್ಯವನ್ನು ಸೀಟುಗಳು ಹೊಂದಿದ್ದು, ಉತ್ತಮ ಪ್ರಯಾಣದ ಅನುಭವ ನೀಡುತ್ತವೆ.
'ಐರಾವತ ಸ್ಲೀಪರ್' ಆವೃತ್ತಿಯ ಬಸ್ ದಿಂಬಿನ ಸೌಲಭ್ಯ ಹೊಂದಿದ್ದು, ಬ್ಯಾಗ್ ಇಡುವ ಸೌಲಭ್ಯವನ್ನು ಒಳಗೊಂಡಿವೆ. ಈ ಬಸ್ 3 ಸಿಸಿಟಿವಿ ಕ್ಯಾಮರಾಗಳನ್ನು ಒಳಗೊಂಡಿದೆ. ಮುಂದೆ ಒಂದು ಕ್ಯಾಮರಾ ಸಂಚಾರ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಹಿಂಬದಿಯಲ್ಲಿ ಮತ್ತೊಂದು ಕ್ಯಾಮರಾ, ಒಂದು ಬಸ್ ಹತ್ತು ಸ್ಥಳದಲ್ಲಿ ಪ್ರಯಾಣಿಕರ ಚಲನವಲನದ ಮೇಲೆ ನಿಗಾವಹಿಸಲಿದೆ.
ಐರಾವತ ಕ್ಲಬ್ ಕ್ಲಾಸ್ ಬಸ್‌ಗಳು 'ಮಗುವಿನಂತೆ ನಿದ್ರಿಸಿ' ಎಂಬ ಟ್ಯಾಗ್ ಲೈನ್ ಒಳಗೊಂಡಿದೆ. ಮಲ್ಟಿ ಆಕ್ಸೆಲ್ ಮಾದರಿಯ ಈ ಬಸ್‌ಗಳು ಆರಾಮದಾಯಕ ಪ್ರಯಾಣಕ್ಕೆ ಪ್ರಸಿದ್ಧಿಯನ್ನು ಪಡೆದಿವೆ. ಈಗ ಐರಾವತ ಸ್ಲೀಪರ್ ಬಸ್‌ಗಳನ್ನು ಸಹ ಕೆಎಸ್‌ಆರ್‌ಟಿಸಿ ಪರಿಚಯಿಸುತ್ತಿದೆ.
ಐರಾವತ ಮಾದರಿಯ ಬಸ್‌ಗಳು ಯಾವಾಗ ಆಗಮಿಸಲಿವೆ?. ಯಾವ-ಯಾವ ಮಾರ್ಗದ ಹಳೆಯ ಐರಾವತ ಬಸ್‌ಗಳನ್ನು ಬದಲಾವಣೆ ಮಾಡಲಾಗುತ್ತದೆ ಎಂದು ಕೆಎಸ್ಆರ್‌ಟಿಸಿಯ ಅಧಿಕಾರಿಗಳು ಖಚಿತವಾದ ಮಾಹಿತಿ ನೀಡಿಲ್ಲ. ಆದರೆ ಶೀಘ್ರದಲ್ಲಿಯೇ ಐರಾವತ ಹಳೆ ಮಾದರಿಯ ಬಸ್‌ಗಳು ಬದಲಾಗಲಿವೆ.
ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್ ಮಾದರಿಯ ಬಸ್‌ಗಳು ಒಂದು ಕಾಲದಲ್ಲಿ ಕೆಎಸ್ಆರ್‌ಟಿಸಿ ಐಷಾರಾಮಿ ಬಸ್‌ಗಳಾಗಿದ್ದವು. ಈಗ ಅಂಬಾರಿ ಉತ್ಸವ ಸೇರಿದಂತೆ ಹಲವು ಮಾದರಿಯ ಬಸ್‌ಗಳು ನಿಗಮಕ್ಕೆ ಸೇರಿದೆ. ಆದರೆ ಐರಾವತ ಮಾದರಿ ಬಸ್‌ಗಳಿಗೆ ಇರುವ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.












Click it and Unblock the Notifications