Kodagu Waterfalls: ಕೊಡಗಿನ ಮಳೆಗಾಲದ ಜಲಬೆಡಗಿಯರಿಗೆ ಮನಸೋಲದವರಿಲ್ಲ

ಮಡಿಕೇರಿ, ಜುಲೈ 12: ಕೊಡಗಿನಲ್ಲಿ ಮುಂಗಾರು ಮಳೆ ಶುರುವಾಯಿತೆಂದರೆ ವಾತಾವರಣವೇ ಬದಲಾಗಿ ಬಿಡುತ್ತದೆ. ಸದಾ ಮಂಜು ಮುಸುಕಿದ ವಾತಾವರಣದಲ್ಲಿ ಮೈನಡುಗಿಸುವ ಚಳಿ, ಬೀಸುವ ಗಾಳಿ ಅದರಾಚೆಗೆ ಧೋ ಎಂದು ಸುರಿಯುವ ಪ್ರಕೃತಿಗೆ ನವಚೇತನ ತಂದೊಡ್ಡುತ್ತದೆ. ಇದರ ನಡುವೆ ಬೇಸಿಗೆಯಲ್ಲಿ ಸದ್ದೇ ಮಾಡದೆ ಹೆಬ್ಬಂಡೆಗಳ ಸಂದಿಯಲ್ಲಿ ಕ್ಷೀಣವಾಗಿ ಹೋದ ಜಲಧಾರೆಗಳಿಗೆ ಭೋರ್ಗರೆಯುವ ಬಯಕೆ ಹುಟ್ಟಿ ಬಿಡುತ್ತವೆ.

ಮಲೆನಾಡಿನ ಮಳೆಗಾಲದ ನಿಸರ್ಗದ ಸೊಬಗಿಗೆ ಜೀವ ತುಂಬುವ ಜಲಪಾತಗಳನ್ನು ದಟ್ಟ ಕಾಡಿನ ನಡುವೆ, ರಸ್ತೆಯ ಇಕ್ಕೆಲಗಳಲ್ಲಿ, ಬೆಟ್ಟದ ಮೇಲೆ, ಕಂದಕದಡಿಯಲ್ಲಿ ಹೀಗೆ ಎಲ್ಲೋ ಒಂದು ಕಡೆಯಲ್ಲಿ ನೋಡಿ ಆನಂದಿಸುವುದೇ ವಿಶಿಷ್ಟ ಅನುಭವ.. ಇನ್ನು ಇಲ್ಲಿರುವ ಜಲಪಾತಗಳನ್ನು ಸುಲಭವಾಗಿ ನೋಡಿ ಬರಲು ಸಾ‍ಧ್ಯವಿಲ್ಲ ಹೀಗಾಗಿ ಒಂದಷ್ಟು ಶ್ರಮವಂತು ಪಡಲೇಬೇಕು.

Kodagu tourist Places It Is The Time To Visit Kodagu District Waterfalls

ಹಾಗೆನೋಡಿದರೆ ಕೊಡಗು ಜಿಲ್ಲೆಯ ಬೆಟ್ಟಗುಡ್ಡ, ತೋಟಗಳ ನಡುವೆ, ಕಾಡಿನಲ್ಲಿ ಹತ್ತಾರು ಜಲಪಾತಗಳು ಅಡಗಿ ಕುಳಿತಿವೆ. ಅವು ಬೇಸಿಗೆಯಲ್ಲಿ ಮಾಯವಾಗಿ ಮಳೆಗಾಲದಲ್ಲಿ ಮಳೆಸುರಿದಾಗ ಮಾತ್ರ ದರ್ಶನ ನೀಡುತ್ತವೆ. ಇಂತಹ ಜಲಪಾತಗಳ ಪೈಕಿ ಕೆಲವೇ ಕೆಲವು ಮಾತ್ರ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದರೆ ಇನ್ನು ಕೆಲವು ಅಜ್ಞಾತವಾಗಿ ಉಳಿದು ಹೋಗಿವೆ.

ಅಬ್ಬಿ ಮತ್ತು ಅಬ್ಬಿಕೊಲ್ಲಿ ಜಲಪಾತ

ಇನ್ನು ಕೊಡಗಿನಾದ್ಯಂತ ಇರುವ ಜಲಪಾತಗಳನ್ನು ನೋಡುತ್ತಾ ಹೋದರೆ ಮಡಿಕೇರಿ ಬಳಿಯಿರುವ ಪರಿಚಿತ ಜಲಪಾತವಾಗಿರುವ ಅಬ್ಬಿಜಲಪಾತ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿದೆ ಕಾರಣ ಮಡಿಕೇರಿ ನಗರಕ್ಕೆ ಹತ್ತಿರವಿರುವುದರಿಂದ ಪ್ರವಾಸಿಗರು ಸುಲಭವಾಗಿ ತೆರಳಬಹುದಾಗಿದೆ. ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಈ ಜಲಪಾತ ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುತ್ತದೆ.

Kodagu tourist Places It Is The Time To Visit Kodagu District Waterfalls

ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳಿದರೆ ಮಳೆಗಾಲದಲ್ಲಿ ದಾರಿಯುದ್ದಕ್ಕೂ ಬೆಟ್ಟಗಳ ಮೇಲೆ ಪುಟ್ಟ ಜಲಧಾರೆಗಳು ಕಾಣಸಿಗುತ್ತವೆಯಾದರೂ ಅವುಗಳ ನಡುವೆ ಜೋಡುಪಾಲದ ಬಳಿಯಿರುವ ಉಂಬುಳ್ ಗುಂಡಿ ಜಲಪಾತ ಸುತ್ತಲಿನ ಬೆಟ್ಟಗುಡ್ಡಗಳಿಂದ ಹರಿದು ಬರುವ ನದಿಯಿಂದ ಸೃಷ್ಟಿಯಾಗಿದೆ. ಅಲ್ಲಿಂದ ಮುಂದಕ್ಕೆ ರಸ್ತೆ ಬದಿಯಲ್ಲಿಯೇ ಅಬ್ಬಿಕೊಲ್ಲಿ ಜಲಪಾತವಿದೆ.

ಬೆಟ್ಟದ ಮೇಲಿನ ಕಲ್ಯಾಳ ಜಲಪಾತ

ಇನ್ನು ಮುಂದೆ ಸಂಪಾಜೆಯತ್ತ ತೆರಳಿದಾಗ ಕೊಯನಾಡು ಸಿಗುತ್ತದೆ. ಇಲ್ಲಿರುವ ಸೇತುವೆಯ ಎಡಭಾಗದ ರಸ್ತೆಯಲ್ಲಿ ಸುಮಾರು ಐದು ಕಿ.ಮೀ. ಸಾಗಿದರೆ ಕಲ್ಯಾಳ ಜಲಪಾತ ಸಿಗುತ್ತದೆ. ಇದರ ನೋಟ ದೂರದಿಂದಲೇ ಲಭ್ಯವಾಗುತ್ತದೆ. ಇನ್ನು ಸಂಪಾಜೆ ವ್ಯಾಪ್ತಿಯಲ್ಲಿ ಲೈನ್ಕಜೆ ಜಲಪಾತವೂ ಇದೆ. ಇದೆಲ್ಲದರ ನಡುವೆ ಮಡಿಕೇರಿಯಿಂದ ಸೋಮವಾರಪೇಟೆ ಕಡೆಗಿನ ರಸ್ತೆಯಲ್ಲಿ ಹೊರಟರೆ ಹಟ್ಟಿಹೊಳೆಯಿಂದ 8ಕಿ.ಮೀ. ದೂರ ಹೋದರೆ ಮುಕ್ಕೋಡ್ಲು ಜಲಪಾತವಿದೆ.

ಈ ವ್ಯಾಪ್ತಿಯಲ್ಲಿ ಹಾಲೇರಿಯಲ್ಲಿ ಕುಪ್ಪೆಹೊಳೆ ಎಂಬ ಪುಟ್ಟಜಲಪಾತವಿದೆ. ಅಲ್ಲಿಂದ ಗರ್ವಾಲೆಗೆ ತೆರಳಿದರೆ ಮೂರು ಕಿ.ಮೀ.ದೂರದಲ್ಲಿ ಮೇದುರಜಲಪಾತವಿದೆ. ಸೋಮವಾರಪೇಟೆಗೆ ತೆರಳಿ ಅಲ್ಲಿಂದ ಶಾಂತಳ್ಳಿ ರಸ್ತೆಯಲ್ಲಿ 8 ಕಿ.ಮೀ. ದೂರದಲ್ಲಿ ಅಬ್ಬಿಮಠ ಬಾಚಳ್ಳಿ ಜಲಪಾತವನ್ನು ನೋಡಬಹುದಾಗಿದೆ.

Kodagu tourist Places It Is The Time To Visit Kodagu District Waterfalls

ಭಾಗಮಂಡಲ ಸುತ್ತಮುತ್ತ ಜಲಸಿರಿ

ಶಾಂತಳ್ಳಿಗೆ ತೆರಳಿ ಅಲ್ಲಿಂದ ಮುಂದೆ ಹೋದರೆ ಹಂಚಿನಳ್ಳಿ ಸಿಗುತ್ತದೆ. ಅಲ್ಲಿ ಬಲಕ್ಕೆ ನಾಲ್ಕು ಕಿ.ಮೀ. ಸಾಗಿದರೆ ಮಲ್ಲಳ್ಳಿ ಜಲಪಾತ ಸ್ವಾಗತಿಸುತ್ತದೆ. ವೀರಾಜಪೇಟೆಗೆ ತೆರಳಿದರೆ ಅಲ್ಲಿಂದ 55ಕಿ.ಮೀ. ದೂರದಲ್ಲಿ ಇರ್ಪು ಜಲಪಾತವಿದೆ. ಮಡಿಕೇರಿಯಿಂದ ನಾಪೋಕ್ಲುಗೆ ತೆರಳಿ ಅಲ್ಲಿಂದ ಭಾಗಮಂಡಲ ರಸ್ತೆಯಲ್ಲಿ ಬಲ್ಲಮಾವಟಿಗೆ ತೆರಳಿದರೆ ಅಲ್ಲಿಂದ ಎಡಕ್ಕೆ ಪೆರೂರು ಕಡೆಗೆ ಹೆಜ್ಜೆ ಹಾಕಿದರೆ ದೇವರಗುಂಡಿ ಜಲಪಾತವನ್ನು ತಲುಪಬಹುದು.

ಭಾಗಮಂಡಲಕ್ಕೆ ತೆರಳಿದರೆ ಸುತ್ತಮುತ್ತ ಕೆಲವು ಜಲಪಾತಗಳನ್ನು ನಾವು ನೋಡಬಹುದು. ಭಾಗಮಂಡಲ ಆಸ್ಪತ್ರೆಯ ಹಿಂಭಾಗದ ರಸ್ತೆಯಲ್ಲಿ 3ಕಿ.ಮೀ ತೆರಳಿದರೆ ತಣ್ಣಿಮಾನಿ ಪಾರೆಕಟ್ಟು ಜಲಪಾತ ಸಿಗುತ್ತದೆ. ಭಾಗಮಂಡಲದಿಂದ ಕರಿಕೆಯತ್ತ ತೆರಳಿದರೆ ಬಾಚಿಮಲೆ ಜಲಪಾತ ಸಿಗುತ್ತದೆ. ಭಾಗಮಂಡಲದಿಂದ ಮಡಿಕೇರಿ ರಸ್ತೆಯಲ್ಲಿ ತೆರಳಿದರೆ ಪೋಲಮಾನಿ ಬಳಿ ದಾಸನಕಾಡು ಜಲಪಾತ ಅಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿ ಬೋಳುಗಲ್ಲು ಮೊಟ್ಟೆ ಜಲಪಾತವನ್ನು ವೀಕ್ಷಿಸಬಹುದಾಗಿದೆ.

ಬೆಟ್ಟದ ಮೇಲಿಂದ ಇಳಿಯುವ ನೀಲಕಂಡಿ

ನಾಪೋಕ್ಲುವಿನಿಂದ ಚೆಯ್ಯಂಡಾಣೆಗೆ ತೆರಳಿದರೆ ಅಲ್ಲಿಂದ 2ಕಿ.ಮೀ. ದೂರದಲ್ಲಿ ಚೇಲಾವರದಲ್ಲಿ ಮೂರು ಜಲಪಾತಗಳನ್ನು ವೀಕ್ಷಿಸಬಹುದಾಗಿದೆ. ಕಕ್ಕಬೆಗೆ ತೆರಳಿದರೆ ಅಲ್ಲಿಂದ ಯುವಕಪಾಡಿಯ ನಾಲ್ಕುನಾಡು ಅರಮನೆ ಸಮೀಪಕ್ಕೆ ಬಂದರೆ ಇಲ್ಲೊಂದು ಜಲಪಾತ ಕಾಣಸಿಗುತ್ತದೆ. ಅಲ್ಲಿಂದ 4ಕಿ.ಮೀ. ಸಾಗಿದರೆ ಮಾದಂಡ ಅಬ್ಬಿ ಜಲಪಾತವನ್ನು ನೋಡಬಹುದು.

ಕಕ್ಕಬ್ಬೆಯಿಂದ ಕಬ್ಬಿನಕಾಡು ಎಂಬಲ್ಲಿಗೆ ತೆರಳಿ ಅಲ್ಲಿಂದ ಬಲಕ್ಕೆ ಏರು ಹಾದಿಯಲ್ಲಿ 4ಕಿ.ಮೀ. ಸಾಗಿದರೆ ಅಪ್ಪಾರಂಡ ಸುರೇಶ್ ಚಂಗಪ್ಪ ಅವರ ಮನೆ ಸಿಗುತ್ತದೆ. ಅಲ್ಲಿಂದ ಮತ್ತೆ 3ಕಿ.ಮೀ. ನಡೆದರೆ ಬೆಟ್ಟಗುಡ್ಡಗಳ ನಡುವೆ ಧುಮ್ಮಿಕ್ಕುವ ನೀಲಕಂಡಿ ಜಲಪಾತ ಸಿಗುತ್ತದೆ. ಇದೆಲ್ಲದರ ನಡುವೆ ಮಡಿಕೇರಿಯಿಂದ ಸಿದ್ದಾಪುರ ರಸ್ತೆಯಲ್ಲಿ ತೆರಳಿದರೆ ಚೆಟ್ಟಳ್ಳಿ ಬಳಿ ಮುಖ್ಯ ರಸ್ತೆಯಲ್ಲಿಯೇ ಚೆಟ್ಟಳ್ಳಿ ಫಾಲ್ಸ್ ಸಿಗುತ್ತದೆ.

ಜಲಪಾತ ವೀಕ್ಷಣೆಗೆ ಪೂರ್ವ ಸಿದ್ಧತೆ ಅಗತ್ಯ

ಕೊಡಗಿನಲ್ಲಿ ಹಲವಾರು ಜಲಪಾತಗಳು ದಟ್ಟಕಾಡಿನ ನಡುವೆ, ಇನ್ಯಾರದ್ದೋ ಕಾಫಿ, ಏಲಕ್ಕಿ ತೋಟಗಳ ನಡುವೆ ಇರುವುದರಿಂದ ಎಲ್ಲ ಜಲಪಾತಗಳತ್ತ ಸುಲಭವಾಗಿ ತೆರಳಲು ಸಾಧ್ಯವಿಲ್ಲ. ಒಂದು ವೇಳೆ ಬೆಟ್ಟಗುಡ್ಡಗಳ ನಡುವಿನ ಜಲಪಾತಗಳತ್ತ ತೆರಳಬೇಕಾದರೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡು ಹೋಗುವುದು ಮತ್ತು ಸ್ಥಳೀಯರ ಮಾರ್ಗದರ್ಶನ ಪಡೆದುಕೊಳ್ಳುವುದು ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+