ಕೊಡಗಿನ ರುದ್ರರಮಣೀಯ ಈ ನಾಲ್ಕು ಜಲಪಾತಗಳು: ಮಿಸ್ ಮಾಡದೇ ಭೇಟಿ ನೀಡಿ
ಮಡಿಕೇರಿ, ಜೂನ್ 28: ಕೊಡಗಿನಲ್ಲಿ ಹತ್ತಾರು ಜಲಪಾತಗಳಿದ್ದು, ಅವುಗಳ ಪೈಕಿ ಕೆಲವೇ ಕೆಲವು ಜಲಪಾತಗಳಿಗಷ್ಟೆ ರಸ್ತೆ ಸೌಲಭ್ಯವಿದೆ. ಉಳಿದಂತೆ ಹೆಚ್ಚಿನ ಜಲಪಾತಗಳನ್ನು ನೋಡಬೇಕಾದರೆ ಬೆಟ್ಟಗುಡ್ಡ ಹತ್ತಬೇಕು, ಕಾಡು ಹಾದಿಯಲ್ಲಿ ನಡೆಯಬೇಕು. ಇದರ ನಡುವೆಯೂ ನಾಲ್ಕು ಜಲಪಾತಗಳು ನಮ್ಮನ್ನು ಹೆಚ್ಚು ಆಕರ್ಷಿಸುತ್ತಿವೆ. ಅವು ಇಲ್ಲಿರುವ ಜಲಪಾತಗಳ ನಡುವೆ ಭಿನ್ನವಾಗಿ ಕಂಗೊಳಿಸುತ್ತಿವೆ.
ಕೊಡಗಿನ ಮುಖ್ಯ ಪಟ್ಟಣ ಮಡಿಕೇರಿ ನಗರಕ್ಕೆ ಬಂದಿಳಿದವರಿಗೆ ಅಬ್ಬಿ ಜಲಪಾತವನ್ನು ವೀಕ್ಷಿಸಲು ತೆರಳಲು ಕಷ್ಟವಾಗುವುದರಿಲ್ಲ. ಇದು ನಗರಕ್ಕೆ ಸುಮಾರು ಎಂಟು ಕಿ.ಮೀ. ದೂರದಲ್ಲಿದ್ದು, ಸ್ವಂತ ವಾಹನಗಳಲ್ಲಿ ಅಥವಾ ಆಟೋದಲ್ಲಿಯೂ ತೆರಳಬಹುದಾಗಿದೆ. ಜಲಪಾತದ ಸಮೀಪದ ವಾಹನದ ನಿಲ್ದಾಣದಿಂದ ಕಾಫಿ ತೋಟದ ನಡುವಿನ ಹಾದಿಯಲ್ಲಿ ಮೆಟ್ಟಿಲುಗಳನ್ನು ಇಳಿಯುತ್ತಾ ಹೋದರೆ ಅಬ್ಬಿ ಜಲಪಾತದ ಸಮೀಪಕ್ಕೆ ತಲುಪಬಹುದು.
ಈ ಜಲಪಾತವು ವಿಶಾಲ ಬಂಡೆಗಳ ನಡುವೆ ಸುಮಾರು ಎಂಬತ್ತು ಅಡಿಯಷ್ಟು ಎತ್ತರದಿಂದ ಧುಮುಕುತ್ತಾ ತನ್ನ ವೈಭವವನ್ನು ಪ್ರದರ್ಶಿಸುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಫಾಲ್ಸ್ ಗೆ ಇಟ್ಟು ಜೆಸ್ಸಿ ಫಾಲ್ಸ್ ಎಂದು ಕರೆದಿದ್ದರಂತೆ. ಆದರೆ ಜನ ಪಾತ್ರ ಅಬ್ಬಿ ಜಲಪಾತವೆಂದೇ ಕರೆಯುವುದು ರೂಢಿ.
ಮಳೆಗಾಲದಲ್ಲಿ ಕುಂಬದ್ರೋಣ ಮಳೆ ಸುರಿದು ನದಿ ಉಕ್ಕಿಹರಿದಾಗ ಜಲಪಾತ ರೌದ್ರಾವತಾರ ತಾಳುತ್ತದೆ. ಈ ವೇಳೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಜಲಪಾತದ ಸೌಂದರ್ಯವನ್ನು ವೀಕ್ಷಿಸುತ್ತಾರೆ. ಇಲ್ಲಿ ಜಲಪಾತವನ್ನು ವೀಕ್ಷಿಸಲು ತೂಗುಸೇತುವೆಯಿದ್ದು ಇಲ್ಲಿಂದ ನಿಂತು ನೀರು ಧಮ್ಮಿಕ್ಕುವುದನ್ನು ನೋಡುವುದೇ ಕಣ್ಣಿಗೆ ಎಲ್ಲಿಲ್ಲದ ಮಜಾ..

ನಿಸರ್ಗದ ನಡುವಿನ ಸುಂದರ ಜಲಪಾತ
ಕೊಡಗಿನ ತಾಲೂಕು ಕೇಂದ್ರಗಳಲ್ಲಿ ಒಂದಾದ ಸೋಮವಾರಪೇಟೆಗೆ ಸೇರಿದ ಮಲ್ಲಳ್ಳಿ ಜಲಪಾತವು ಅತಿ ಎತ್ತರದಿಂದ ವಿವಿಧ ಹಂತಗಳಲ್ಲಿ ಧುಮುಕುತ್ತಿದ್ದು ಇದನ್ನು ನೋಡಲು ತೆರಳಬೇಕಾದರೆ ಸೋಮವಾರಪೇಟೆಯಿಂದ ಶಾಂತಳ್ಳಿಗೆ ತೆರಳಿ ಅಲ್ಲಿಂದ ಮುಂದೆ ಹೋದರೆ ಹಂಚಿನಳ್ಳಿ ಸಿಗುತ್ತದೆ. ಅಲ್ಲಿ ಬಲಕ್ಕೆ ನಾಲ್ಕು ಕಿ.ಮೀ. ಸಾಗಿದರೆ ಮಲ್ಲಳ್ಳಿ ಜಲಪಾತವನ್ನು ತಲುಪಬಹುದು. ಈ ಜಲಪಾತವು ನೂರೈವತ್ತು ಅಡಿಯಷ್ಟು ಎತ್ತರದಿಂದ ಎಂಬತ್ತು ಅಡಿ ಅಗಲವಾಗಿ ಧುಮುಕುತ್ತದೆ.
ವೀರಾಜಪೇಟೆಗೆ ತೆರಳಿ ಅಲ್ಲಿಂದ 55ಕಿ.ಮೀ. ದೂರ ಸಾಗಿದರೆ ಇರ್ಪು ಜಲಪಾತವಿದೆ. ಈ ಜಲಪಾತವನ್ನು ನೋಡಬೇಕಾದರೆ ಗೋಣಿಕೊಪ್ಪ ಕುಟ್ಟ ಮಾರ್ಗದಲ್ಲಿ ಇರ್ಪು ಎಂಬಲ್ಲಿಗೆ ತೆರಳಬೇಕು. ಇರ್ಪುವಿನ ರಾಮೇಶ್ವರ ದೇಗುಲದಿಂದ ಮುಕ್ಕಾಲು ಕಿ.ಮೀ. ದೂರದಲ್ಲಿ ಇರ್ಪು ಜಲಪಾತವಿದೆ. ಪವಿತ್ರ ಜಲಧಾರೆಯಾಗಿರುವ ಇದು ಪ್ರಥಮ ಹಂತದಲ್ಲಿ ಸುಮಾರು ಎಪ್ಪತ್ತು ಅಡಿ ಎತ್ತರದಿಂದ ಧುಮುಕಿ ಬಳಿಕ ಚಿಕ್ಕಾತಿ ಚಿಕ್ಕ ಜಲಪಾತವಾಗಿ ಹರಿದು ಹೋಗುತ್ತದೆ.
ಮಳೆಗಾಲದಲ್ಲಿ ತೆರಳುವುದು ಅಪಾಯಕಾರಿ
ಇನ್ನು ನಾಪೋಕ್ಲುವಿನಿಂದ ಚೆಯ್ಯಂಡಾಣೆಗೆ ತೆರಳಿದರೆ ಅಲ್ಲಿಂದ 2ಕಿ.ಮೀ. ದೂರದಲ್ಲಿ ಚೇಲಾವರ ಗ್ರಾಮ ಸಿಗುತ್ತದೆ. ಚೇಲಾವರದಲ್ಲಿ ನಯನಮನೋಹರ ಮೂರು ಜಲಧಾರೆಗಳಿವೆ. ತಡಿಯಂಡಮೋಳ್ ಪರ್ವತ ಶ್ರೇಣಿಯ ಬೆಟ್ಟದಿಂದ ಹರಿದು ಬರುವ ಬಲಿಯಟ್ರನದಿ ಹಾಗೂ ಚೋಮನಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ಸೃಷ್ಟಿಯಾಗಿರುವ ಈ ಜಲಧಾರೆಗಳು ಖಾಸಗಿ ತೋಟದಲ್ಲಿದೆ.

ಬಲಿಯಟ್ರನದಿಯಿಂದ ಸೃಷ್ಟಿಯಾಗಿರುವ ಜಲಪಾತವು ನೂರು ಅಡಿಯಷ್ಟು ಎತ್ತರದಿಂದ ಎಂಬತ್ತು ಅಡಿಯಷ್ಟು ಅಗಲವಾಗಿ ಧುಮುಕುತ್ತದೆ. ಮತ್ತೊಂದು ಸೋಮನನದಿಯಿಂದ ಸೃಷ್ಟಿಯಾಗಿರುವ ಜಲಧಾರೆಯು ಐವತ್ತು ಅಡಿಯಷ್ಟು ಎತ್ತರದಿಂದ ಮೂರು ಹಂತವಾಗಿ ಧುಮುಕುತ್ತದೆ. ಇಲ್ಲಿಯೇ ಮತ್ತೊಂದು ಪುಟ್ಟ ಜಲಪಾತವೂ ಇದೆ. ಈ ಎಲ್ಲ ಜಲಪಾತಗಳು ಹೆಬ್ಬಂಡೆಗಳ ಮೇಲೆ ಭೋರ್ಗರೆದು ಧುಮುಕುತ್ತವೆ. ಇವುಗಳನ್ನು ನೋಡಲು ತೆರಳಬೇಕಾದರೆ ಎಚ್ಚರಿಕೆಯಿಂದ ತೆರಳಬೇಕಾಗುತ್ತದೆ. ನಡುಮಳೆಗಾಲದಲ್ಲಿ ಮಳೆ ಸುರಿಯುತ್ತಿರುವ ವೇಳೆ ಹೋಗುವುದು ಅಪಾಯಕಾರಿ. ಮಳೆಗಾಲ ನಂತರ ತೆರಳಿದರೆ ಒಳ್ಳೆಯದು.












Click it and Unblock the Notifications