KKRTC; ಸಂಡೂರು-ಬಳ್ಳಾರಿ-ಬೆಂಗಳೂರು ಎಸಿ ಸ್ಲೀಪರ್ ಬಸ್; ದರ, ಸಮಯ
ಬಳ್ಳಾರಿ, ಜನವರಿ 16: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಬಳ್ಳಾರಿ ವಿಭಾಗದ ಸಂಡೂರು ಘಟಕ ಸಂಡೂರು-ಬೆಂಗಳೂರು ನಡುವೆ ಜನವರಿ 17ರಿಂದ ಹವಾನಿಯಂತ್ರಿತ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಿದೆ.
ಸಂಡೂರಿನಿಂದ ಹೊರಡುವ ಬಸ್ ಬೆಂಗಳೂರಿಗೆ (ವಯಾ ದೋಣಿಮಲೈ, ವಿದ್ಯಾನಗರ, ತೋರಣಗಲ್ಲು, ಕುಡುತಿನಿ, ಬಳ್ಳಾರಿ, ಚಳ್ಳಕೆರೆ) ಮೂಲಕ ಸಂಚಾರ ನಡೆಸಲಿದೆ. ನೂತನ ಬಸ್ ಸೇವೆ ಬುಧವಾರ ಆರಂಭವಾಗಲಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ತಿಳಿಸಿದ್ದಾರೆ.

ವೇಳಾಪಟ್ಟಿ, ದರ; ಹವಾನಿಯಂತ್ರಿತ ಸ್ಲೀಪರ್ ಬಸ್ ಸಂಡೂರಿನಿಂದ ರಾತ್ರಿ 9.30ಕ್ಕೆ ಹೊರಟು, ದೋಣಿಮಲೈಗೆ ರಾತ್ರಿ 10.15ಕ್ಕೆ, ವಿದ್ಯಾನಗರ (ಜೆಎಸ್‍ಡಬ್ಲ್ಯೂ)ಗೆ ರಾತ್ರಿ 10.35ಕ್ಕೆ, ಬಳ್ಳಾರಿಗೆ ರಾತ್ರಿ 11.30ಕ್ಕೆ ಆಗಮಿಸಿಸಲಿದೆ. ಬೆಂಗಳೂರು ನಗರವನ್ನು ಬೆಳಗ್ಗೆ 6ಗಂಟೆಗೆ ತಲುಪಲಿದೆ.
ಈ ಬಸ್ ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು, ಬಳ್ಳಾರಿಗೆ ಬೆಳಗ್ಗೆ 5.45ಕ್ಕೆ ಆಗಮಿಸಲಿದೆ. ವಿದ್ಯಾನಗರ ಬೆಳಗ್ಗೆ 6.30ಕ್ಕೆ, ದೋಣಿಮಲೈಗೆ ಬೆಳಗ್ಗೆ 7 ಗಂಟೆಗೆ ಹಾಗೂ ಸಂಡೂರಿಗೆ ಬೆಳಗ್ಗೆ 7.30ಕ್ಕೆ ಆಗಮಿಸಲಿದೆ.
ಈ ಬಸ್‌ಗೆ ಸಂಡೂರಿನಿಂದ ರೂ. 1,000, ದೋಣಿಮಲೈನಿಂದ ರೂ. 960, ವಿದ್ಯಾನಗರದಿಂದ ರೂ.920 ಹಾಗೂ ಬಳ್ಳಾರಿಯಿಂದ ರೂ. 830 ದರವನ್ನು ನಿಗದಿ ಮಾಡಲಾಗಿದೆ. ಪ್ರಯಾಣಿಕರು ಬಸ್‌ನ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಪ್ರಯಾಣಿಕರು ಮುಂಗಡ ಆಸನಗಳನ್ನು ಆನ್‍ಲೈನ್ ಮೂಲಕ ಕಾಯ್ದಿರಿಸಲು www.ksrtc.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಪ್ರತಿಷ್ಠಿತ ಎಸಿ ಸ್ಲೀಪರ್ ಬಸ್ ಇದಾಗಿದೆ.
ಸಂಡೂರು-ಹೈದರಾಬಾದ್ ಬಸ್; ಬಳ್ಳಾರಿ ವಿಭಾಗದ ಸಂಡೂರು ಘಟಕ ಅಕ್ಟೋಬರ್‌ನಲ್ಲಿ ಸಂಡೂರಿನಿಂದ ಹೈದರಾಬಾದ್‌ಗೆ (ವಯಾ ದೋಣಿಮಲೈ, ವಿದ್ಯಾನಗರ, ಬಳ್ಳಾರಿ, ಆಲೂರು, ಕರ್ನೂಲ್ ಮಾರ್ಗದಲ್ಲಿ) ಎಸಿ ಸ್ಲೀಪರ್ ಬಸ್ ಸಂಚಾರ ಆರಂಭಿಸಿತ್ತು.
ಈ ಬಸ್ ಸಂಡೂರಿನಿಂದ ರಾತ್ರಿ 7ಕ್ಕೆ ಹೊರಟು, ಬಳ್ಳಾರಿಗೆ ರಾತ್ರಿ 10ಕ್ಕೆ ಆಗಮಿಸಿ (ವಯಾ ಆಲೂರು, ಕರ್ನೂಲ್ ಮಾರ್ಗವಾಗಿ) ಹೈದರಾಬಾದ್‌ಗೆ ಬೆಳಗ್ಗೆ 6.10ಕ್ಕೆ ತಲುಪಲಿದೆ. ಪ್ರಯಾಣ ದರ ಸಂಡೂರಿನಿಂದ ರೂ.1,290 ಹಾಗೂ ಬಳ್ಳಾರಿಯಿಂದ ರೂ.1,120 ನಿಗದಿ ಮಾಡಲಾಗಿದೆ. ಹೈದರಾಬಾದ್‌ನಿಂದ ರಾತ್ರಿ 9.46ಕ್ಕೆ ಹೊರಟು, ಬಳ್ಳಾರಿಗೆ 6.15ಕ್ಕೆ ತಲುಪಲಿದೆ. ಪ್ರಯಾಣ ದರ ಬಳ್ಳಾರಿಗೆ ರೂ.1,120) ಹಾಗೂ ಸಂಡೂರಿಗೆ ರೂ.1,290 ಆಗಿದೆ.
ಕೆಕೆಆರ್‌ಟಿಸಿ ಬೆಂಗಳೂರು-ಸಿಂಧನೂರು ನಡುವೆ ಕಲ್ಯಾಣ ರಥ ಹೆಸರಿನ ಐಷಾರಾಮಿ ವೋಲ್ವೋ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿತ್ತು. ಈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ವಿವಿಧ ಜಿಲ್ಲೆಗಳಿಂದ ಬೆಂಗಳೂರು ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಲಾಗುತ್ತಿದೆ.












Click it and Unblock the Notifications