ಹುಬ್ಬಳ್ಳಿ-ಮುಂಬೈ ವಿಮಾನ ಜುಲೈ 15ರಿಂದ ಮತ್ತೆ ಆರಂಭ, ವೇಳಾಪಟ್ಟಿ
ಹುಬ್ಬಳ್ಳಿ, ಜುಲೈ 14: ಉತ್ತರ ಕರ್ನಾಟಕ ಭಾಗದ ಜನರ ಬಹುದಿನದ ಬೇಡಿಕೆಗೆ ಒಪ್ಪಿಗೆ ಸಿಕ್ಕಿದೆ. ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಮುಂಬೈ ನಡುವಿನ ನೇರ ವಿಮಾನ ಸೇವೆಯನ್ನು ಪುನಃ ಆರಂಭಿಸಲಿದೆ. ಎರಡು ನಗರಗಳ ನಡುವಿನ ವಿಮಾನ ಸೇವೆ ಮಾರ್ಚ್‌ನಲ್ಲಿ ಸ್ಥಗಿತಗೊಂಡಿತ್ತು.
ಇಂಡಿಗೋ ಸಂಸ್ಥೆ ಜುಲೈ 15ರಿಂದಲೇ ಹುಬ್ಬಳ್ಳಿ-ಮುಂಬೈ ನಡುವಿನ ನೇರ ವಿಮಾನ ಸೇವೆಯನ್ನು ಪುನಃ ಆರಂಭಿಸಲಿದೆ. ವಿಮಾನದ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಬುಕ್ಕಿಂಗ್ ಸಹ ಆರಂಭವಾಗಿದೆ.

2024ರ ಫೆಬ್ರವರಿಯಲ್ಲಿ ಇಂಡಿಗೋ ಪ್ರಕಟಣೆಯೊಂದನ್ನು ಹೊರಡಿಸಿ ಮಾರ್ಚ್ 30ರ ತನಕ ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ ಸೇವೆ ರದ್ದುಗೊಳಿಸಲಾಗಿದೆ. ಬುಕ್ಕಿಂಗ್ ಸಹ ರದ್ದುಗೊಳಿಸಲಾಗಿದೆ ಎಂದು ಮಾಹಿತಿ ನೀಡಿತ್ತು. ಆದರೆ ವಿಮಾನ ಸೇವೆ ಆರಂಭಿಸಬೇಕು ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು.
ವಿಮಾನದ ವೇಳಾಪಟ್ಟಿ: ಇಂಡಿಗೋ ಹುಬ್ಬಳ್ಳಿ-ಮುಂಬೈ ನಡುವೆ 186 ಸೀಟುಗಳ ಎ320 ಮಾದರಿ ವಿಮಾನದ ಹಾರಾಟ ನಡೆಸಲಿದೆ. ಈ ಹಿಂದೆಯೂ ಇದೇ ಮಾದರಿ ವಿಮಾನ ಎರಡು ನಗರಗಳ ನಡುವೆ ಸಂಚಾರ ನಡೆಸುತ್ತಿತ್ತು.
ವಿಮಾನ 6ಇ 736 ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಂಬೈನಿಂದ ಮಧ್ಯಾಹ್ನ 3 ಗಂಟೆಗೆ ಹೊರಡಲಿದೆ. ಹುಬ್ಬಳ್ಳಿಗೆ ಸಂಜೆ 4.10ಕ್ಕೆ ಆಗಮಿಸಲಿದೆ. ಪ್ರತಿದಿನ ಈ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಲಾಗಿದೆ.
ವಿಮಾನ 6ಇ 737 ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸಂಜೆ 4.40ಕ್ಕೆ ಹೊರಡಲಿದೆ. ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈಗೆ 5.50ಕ್ಕೆ ತಲುಪಲಿದೆ. ಇಂಡಿಗೋ ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದು.
ಧಾರವಾಡ ಸಂಸದ, ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪ್ರಹ್ಲಾದ್ ಜೋಶಿ ಇಂಡಿಗೋ ಸಂಸ್ಥೆಯ ಜೊತೆಗೆ ನಿರಂತರವಾಗಿ ವಿಮಾನ ಸೇವೆ ಪುನರ್ ಆರಂಭಿಸಲು ಮಾತುಕತೆ ನಡೆಸುತ್ತಿದ್ದರು.
ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ಇಂಡಿಗೋ ನಿರ್ವಹಣಾ ಸಮಿತಿಯು ನನ್ನ ಪ್ರಸ್ತಾವನೆಯ ಮೇರೆಗೆ ಮುಂಬೈ-ಹುಬ್ಬಳ್ಳಿ- ಮುಂಬೈ ನಡುವಿನ ತಮ್ಮ ವಿಮಾನ ಸಂಚಾರದ ಸೇವೆಯನ್ನು ಪುನರಾರಂಭಿಸುತ್ತಿದೆ. ಜುಲೈ 15 ರಿಂದ ದೈನಂದಿನ ವಿಮಾನಗಳು ನಿರಂತರವಾಗಿ ಕಾರ್ಯನಿರ್ವಹಿಸಲಿವೆ. ನಮ್ಮ ಪ್ರಸ್ತಾವನೆಯನ್ನು ಕಾರ್ಯಗತಗೊಳಿಸಲು ಸಹಕರಿಸಿದ್ದಕ್ಕಾಗಿ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಇಂಡಿಗೋ ನಿರ್ವಹಣಾ ಸಮಿತಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.
ಹುಬ್ಬಳ್ಳಿ-ಮುಂಬೈ ನಡುವಿನ ನೇರ ವಿಮಾನ ಸೇವೆಗೆ ಉತ್ತಮ ಸ್ಪಂದನೆ ಇತ್ತು. ಆದರೆ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮುಂಬೈನಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ಕೇಂದ್ರ ವಿಮಾನಯಾನ ನಿರ್ದೇಶನಾಲಯದ ಸೂಚನೆಯಂತೆ ಇಂಡಿಗೋ ತಾತ್ಕಾಲಿಕವಾಗಿ ಹುಬ್ಬಳ್ಳಿ-ಮುಂಬೈ ವಿಮಾನ ಸೇವೆ ರದ್ದುಗೊಳಿಸಿತ್ತು.
ಮುಂಬೈನಲ್ಲಿ ಲಭ್ಯವಿರುವ ಸ್ಲಾಟ್‌ಗಳಿಗಿಂತ ಹೆಚ್ಚುವರಿ ವಿಮಾನಗಳು ಸಂಚಾರ ನಡೆಸುತ್ತಿವೆ. ಆದ್ದರಿಂದ ವಿಮಾನಗಳ ನಡುವಿನ ಅಂತರ ತೀರಾ ಕಡಿಮೆ ಇದೆ. ಅನಿವಾರ್ಯವಾಗಿ ವಿಮಾನ ಸೇವೆ ರದ್ದುಗೊಳಿಸಲಾಗುತ್ತಿದೆ ಎಂದು ಇಂಡಿಗೋ ಫೆಬ್ರವರಿಯಲ್ಲಿ ಹೇಳಿತ್ತು.
ವಿಮಾನ ಸೇವೆ ರದ್ದುಗೊಳಿಸುವ ಕುರಿತು ಮಾತನಾಡಿದ್ದ ಹುಬ್ಬಳ್ಳಿ ವಿಮಾನ ನಿಲ್ದಾಣದ ಇಂಡಿಗೋ ಸ್ಟೇಷನ್ ಮ್ಯಾನೇಜರ್ ಸಚಿನ್ ಶೆಟ್ಟಿ, "ಆದಷ್ಟು ಬೇಗ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಮುಂಬೈ ನಡುವಿನ ವಿಮಾನ ಸೇವೆಯನ್ನು ಆರಂಭಿಸಲಿದೆ" ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದರು. ಈಗ ವಿಮಾನ ಸೇವೆ ಮತ್ತೆ ಆರಂಭವಾಗುತ್ತಿದೆ.
ಹುಬ್ಬಳ್ಳಿಯಿಂದ ಅಹಮದಾಬಾದ್, ಕೊಚ್ಚಿ, ಗೋವಾ ಮತ್ತು ಜೈಪುರ, ಕೋಲ್ಕತ್ತಾ, ಜೋಧ್‌ಪುರ್ ನಡುವೆಯೂ ವಿಮಾನ ಸೇವೆ ಆರಂಭಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದ್ದಾರೆ.












Click it and Unblock the Notifications