ಫೆ.2ರಿಂದ ಹುಬ್ಬಳ್ಳಿ-ಪುಣೆ ನಡುವೆ ಮತ್ತೆ ವಿಮಾನ, ವೇಳಾಪಟ್ಟಿ
ಹುಬ್ಬಳ್ಳಿ, ಜನವರಿ 17: ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿ. ಹುಬ್ಬಳ್ಳಿಯಿಂದ ನಿಂತು ಹೋಗಿದ್ದ ವಿಮಾನ ಸೇವೆ ಫೆಬ್ರವರಿ 2ರಿಂದ ಮತ್ತೆ ಆರಂಭವಾಗಲಿದೆ. ಇದರಿಂದಾಗಿ ಹುಬ್ಬಳ್ಳಿ ಮತ್ತು ಪುಣೆ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.
ಇಂಡಿಗೋ ವಿಮಾನಯಾನ ಸಂಸ್ಥೆ ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ ಮಾರ್ಗದಲ್ಲಿ ಫೆಬ್ರವರಿ 2ರಿಂದ ವಾರಕ್ಕೆ ನಾಲ್ಕು ವಿಮಾನಗಳ ಹಾರಾಟವನ್ನು ನಡೆಸಲಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.

ಈ ಕುರಿತು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ. 'ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ-ಪುಣೆ-ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸುವ ವಿಮಾನಗಳು ಪುನರಾರಂಭವಾಗಿದೆ. ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ' ಎಂದು ಹೇಳಿದ್ದಾರೆ.
"ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾಧಿತ್ಯ ಸಿಂಧಿಯಾ ಹಾಗೂ ಇಂಡಿಗೋ ಸಂಸ್ಥೆಯ ಆಡಳಿತ ವರ್ಗದವರಿಗೆ ಧನ್ಯವಾದಗಳು' ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನರಾರಂಭವಾಗಿದೆ.
— Pralhad Joshi (@JoshiPralhad) January 16, 2024
ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ.
ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ಶ್ರೀ @rajnathsingh ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ… pic.twitter.com/E1TNE3WSom
ವಿಮಾನ ಸೇವೆ ನಿಂತು ಹೋಗಿತ್ತು: ವಾಣಿಜ್ಯೋದ್ಯಮಿಗಳು, ಜನರ ಬೇಡಿಕೆಯಂತೆ 2023ರ ಫೆಬ್ರವರಿಯಲ್ಲಿ ಹುಬ್ಬಳ್ಳಿ-ಪುಣೆ ವಿಮಾನವನ್ನು ಆರಂಭಿಸಲಾಗಿತ್ತು. ಆದರೆ ಬಳಿಕ ವಿಮಾನ ಸೇವೆ ನಿಲ್ಲಿಸಲಾಗಿತ್ತು. ಈಗ ಕೇಂದ್ರ ಸಚಿವರ ಮನವಿಯಂತೆ ವಿಮಾನ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ.
ಹುಬ್ಬಳ್ಳಿ-ದೆಹಲಿ ನಡುವಿನ ವಿಮಾನ ಸೇವೆಯ ಬಳಿಕ ಹುಬ್ಬಳ್ಳಿ-ಪುಣೆ ನಡುವೆ ನೇರ ವಿಮಾನ ಬೇಕು ಎಂದು ಬೇಡಿಕೆ ಇಡಲಾಗಿತ್ತು. ಈ ಕುರಿತು ಇಂಡಿಗೋ ಸಂಸ್ಥೆಗೆ ಸಹ ಮನವಿ ಸಲ್ಲಿಸಲಾಗಿತ್ತು. ಇಂಡಿಗೋ ಕಳೆದ ವರ್ಷ ಉಭಯ ನಗರಗಳ ನಡುವೆ ನೇರ ವಿಮಾನ ಸೇವೆಯನ್ನು ಆರಂಭಿಸಿತ್ತು.
ವಿಮಾನ ಸೇವೆ ಆರಂಭವಾದಾಗ ವಾರದಲ್ಲಿ ಎರಡು ದಿನಗಳ ಕಾಲ ವಿಮಾನ ಹಾರಾಟ ನಡೆಸುತ್ತಿತ್ತು. ಪ್ರತಿ ಶನಿವಾರ ಮತ್ತು ಭಾನುವಾರ ಹುಬ್ಬಳ್ಳಿಯಿಂದ 6ಇ7727 ಎಚ್‌ಬಿಎಕ್ಸ್ ವಿಮಾನ ಶನಿವಾರ ಸಂಜೆ 6.30 ಮತ್ತು ಭಾನುವಾರ ರಾತ್ರಿ 7.40ಕ್ಕೆ ಹೊರಡುತ್ತಿತ್ತು.
ಪುಣೆಯಿಂದ 6ಇ7716 ವಿಮಾನ ಶನಿವಾರ ರಾತ್ರಿ 8ಕ್ಕೆ ಮತ್ತು ಭಾನುವಾರ ರಾತ್ರಿ 9.10ಕ್ಕೆ ಹೊರಟು ಹುಬ್ಬಳ್ಳಿಗೆ ಆಗಮಿಸುತ್ತಿತ್ತು. ಈ ವಿಮಾನ ಸೇವೆಯಿಂದ ಎರಡು ನಗರಗಳ ನಡುವಿನ ವ್ಯಾಪಾರ ವಹಿವಾಟಿಗೆ ಅನುಕೂಲವಾಗಿತ್ತು. ಆದರೆ ವಿಮಾನ ಸೇವೆ ಬಳಿಕ ರದ್ದುಗೊಂಡಿತ್ತು.
ಕರ್ನಾಟಕದ ಹೆಚ್ಚು ಪ್ರಯಾಣಿಕರ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಸಹ ಒಂದು. ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ವಿಮಾನ ನಿಲ್ದಾಣವಿದು. ದೇಶದ ವಿವಿಧ ನಗರಗಳಿಗೆ ಇಲ್ಲಿಂದ ವಿಮಾನ ಸೇವೆ ಇದೆ.
260 ಕೋಟಿ ರೂ. ವೆಚ್ಚದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಫೆಬ್ರವರಿಯಲ್ಲಿ ಈ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ.
ಹೊಸ ಟರ್ಮಿನಲ್ ಕಟ್ಟಡ 20 ಸಾವಿರ ಚದರ ಮೀಟರ್ (ನೆಲ ಮತ್ತು ಮೊದಲ ಮಹಡಿ) ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿದೆ. ಪ್ರಯಾಣಿಕರ ದಟ್ಟಣೆ ಸಮಯದಲ್ಲಿ 2400 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯದ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತದೆ.
ಸದ್ಯ ಹುಬ್ಬಳ್ಳಿ ನಿಲ್ದಾಣದ ಟರ್ಮಿನಲ್ ಕಟ್ಟಡ 2400 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಟರ್ಮಿನಲ್ ಕಟ್ಟಡದ ಪಕ್ಕದಲ್ಲಿಯೇ ಹೊಸ ಟರ್ಮಿನಲ್ ನಿರ್ಮಾಣವಾಗಲಿದೆ. ಭವಿಷ್ಯದಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗುತ್ತಿದೆ.












Click it and Unblock the Notifications