ಪ್ರಯಾಣಿಕರ ಸಂಖ್ಯೆ ಹುಬ್ಬಳ್ಳಿಗಿಂತ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚು
ಹುಬ್ಬಳ್ಳಿ, ಜೂನ್ 10: ರಾಜ್ಯದ ಅತಿ ಹೆಚ್ಚು ಪ್ರಯಾಣಿಕರ ದಟ್ಟಣೆಯ 3ನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯನ್ನು ಹುಬ್ಬಳ್ಳಿ ಕಳೆದುಕೊಂಡಿದೆ. ಹುಬ್ಬಳ್ಳಿಗಿಂತ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಪ್ರಯಾಣಿಕರು ಆಗಮಿಸುತ್ತಿದ್ದಾರೆ. ಬೆಳಗಾವಿಗೆ ಆಗಮಿಸುವ ವಿಮಾನಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.
ತಿಂಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ಪ್ರಯಾಣಿಕರು ಆಗಮಿಸಿದ್ದಾರೆ. ಆದರೆ ವರ್ಷವಾರು ಪ್ರಯಾಣಿಕರ ದಟ್ಟಣೆಯಲ್ಲಿ ಹುಬ್ಬಳ್ಳಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಕಳೆದ ಮೂರು ತಿಂಗಳಿನಲ್ಲಿ ಸತತವಾಗಿ ಬೆಳಗಾವಿಗೆ ಆಗಮಿಸುವ ವಿಮಾನ, ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಬೆಳಗಾವಿಗೆ ಫೆಬ್ರವರಿಯಲ್ಲಿ 518 ವಿಮಾನ ಆಗಮಿಸಿದ್ದು, 29,530 ಪ್ರಯಾಣಿಕರು, ಮಾರ್ಚ್‌ನಲ್ಲಿ 532 ವಿಮಾನ ಆಗಮಿಸಿದ್ದು, 30,290 ಪ್ರಯಾಣಿಕರು ಮತ್ತು ಏಪ್ರಿಲ್‌ನಲ್ಲಿ 508 ವಿಮಾನಗಳು ಆಗಮಿಸಿದ್ದು, 31,060 ಪ್ರಯಾಣಿಕರು ಆಗಮಿಸಿದ್ದಾರೆ.
ಹುಬ್ಬಳ್ಳಿಯ ಅಂಕಿ-ಅಂಶ: ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಫೆಬ್ರವರಿಯಲ್ಲಿ 363 ವಿಮಾನ ಆಗಮಿಸಿದ್ದು, 27,870 ಪ್ರಯಾಣಿಕರು, ಮಾರ್ಚ್‌ನಲ್ಲಿ 352 ವಿಮಾನ ಆಗಮಿಸಿದ್ದು, 22,817 ಪ್ರಯಾಣಿಕರು ಮತ್ತು ಏಪ್ರಿಲ್‌ನಲ್ಲಿ 352 ವಿಮಾನಗಳು ಆಗಮಿಸಿದ್ದು, 23,488 ಪ್ರಯಾಣಿಕರು ಭೇಟಿ ನೀಡಿದ್ದಾರೆ.
2023ರ ಕೊನೆಯ ತಿಂಗಳುಗಳಿಂದಲೂ ಬೆಳಗಾವಿಗೆ ಆಗಮಿಸುವ ವಿಮಾನ, ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬೆಳಗಾವಿಗೆ ನವೆಂಬರ್‌ನಲ್ಲಿ 531 ವಿಮಾನ ಆಗಮಿಸಿದ್ದು, 32,059 ಪ್ರಯಾಣಿಕರು, ಡಿಸೆಂಬರ್‌ನಲ್ಲಿ 591 ವಿಮಾನ ಆಗಮಿಸಿದ್ದು, 35,242 ಪ್ರಯಾಣಿಕರು ಮತ್ತು 2024ರ ಜನವರಿಯಲ್ಲಿ 544 ವಿಮಾನಗಳು ಆಗಮಿಸಿದ್ದು, 26,614 ಪ್ರಯಾಣಿಕರು ಭೇಟಿ ಕೊಟ್ಟಿದ್ದಾರೆ.
ಇದೇ 2023ರ ಕೊನೆಯ ತಿಂಗಳುಗಳಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ನವೆಂಬರ್‌ನಲ್ಲಿ 445 ವಿಮಾನ ಆಗಮಿಸಿದ್ದು, 31,447 ಪ್ರಯಾಣಿಕರು, ಡಿಸೆಂಬರ್‌ನಲ್ಲಿ 382 ವಿಮಾನ ಆಗಮಿಸಿದ್ದು, 34,557 ಪ್ರಯಾಣಿಕರು ಮತ್ತು 2024ರ ಜನವರಿಯಲ್ಲಿ 398 ವಿಮಾನಗಳು ಆಗಮಿಸಿದ್ದು, 31,502 ಪ್ರಯಾಣಿಕರು ಆಗಮಿಸಿದ್ದಾರೆ.
2023-24ನೇ ಸಾಲಿನಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಒಟ್ಟು 3.58 ಲಕ್ಷ ಪ್ರಯಾಣಿಕರು ಆಗಮಿಸಿದ್ದಾರೆ. 2022-23ನೇ ಸಾಲಿಗೆ ಹೋಲಿಕೆ ಮಾಡಿದರೆ ಇದು ಶೇ 11.2ರಷ್ಟು ಕುಸಿತವಾಗಿದೆ.
ಬೆಳಗಾವಿಯ ಸಾಂಬ್ರಾದಲ್ಲಿರುವ ವಿಮಾನ ನಿಲ್ದಾಣಕ್ಕೆ 2023-24ರಲ್ಲಿ 3.12 ಲಕ್ಷ ಪ್ರಯಾಣಿಕರ ಆಗಮಿಸಿದ್ದಾರೆ. ಡಿಸೆಂಬರ್ ಬಳಿಕ ಹುಬ್ಬಳ್ಳಿ, ಬೆಳಗಾವಿ ನಡುವೆ ಪ್ರಯಾಣಿಕರು, ವಿಮಾನಗಳ ಹಾರಾಟದಲ್ಲಿ ಕೆಲವು ಏರುಪೇರುಗಳಾಗುತ್ತಿವೆ.
2023-24ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ 5,290 ವಿಮಾನಗಳು ಆಗಮಿಸಿವೆ. ಆದರೆ 2022-23ಕ್ಕೆ ಹೋಲಿಕೆ ಮಾಡಿದರೆ ಇದು ಶೇ 7.9ರಷ್ಟು ಕಡಿಮೆ. ಬೆಳಗಾವಿಗೆ 6,297 ವಿಮಾನಗಳು ಇದೇ ಅವಧಿಯಲ್ಲಿ ಆಗಮಿಸಿದ್ದು, ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಶೇ 10.3ರಷ್ಟು ಏರಿಕೆ ಕಂಡಿದೆ.
2023ರ ಏಪ್ರಿಲ್‌ನಲ್ಲಿ ಹುಬ್ಬಳ್ಳಿಗೆ 568 ವಿಮಾನಗಳು ಆಗಮಿಸಿವೆ. ಆದರೆ ಈ ವರ್ಷ 352 ವಿಮಾನಗಳು ಬಂದಿವೆ. ಬೆಳಗಾವಿಗೆ ಕಳೆದ ವರ್ಷ 482 ವಿಮಾನಗಳು ಬಂದಿದ್ದವು. ಆದರೆ ಈ ವರ್ಷದ ಏಪ್ರಿಲ್‌ನಲ್ಲಿ 508 ವಿಮಾನಗಳು ಆಗಮಿಸಿವೆ.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಉತ್ತರ ಕರ್ನಾಟಕಕ್ಕೆ ಹೆಚ್ಚು ವಿಮಾನಗಳ ಸಂಪರ್ಕ ಬೇಕು ಎಂಬ ಬೇಡಿಕೆಯೂ ಇದೆ. ಇದರಲ್ಲಿ ಹುಬ್ಬಳ್ಳಿ-ಅಹಮದಾಬಾದ್ ವಿಮಾನ ಸೇವೆಯೂ ಸೇರಿದೆ.












Click it and Unblock the Notifications