ಮಂಗಳೂರು-ಹುಬ್ಬಳ್ಳಿ ವಿಮಾನ ಮಾರ್ಚ್ 10ರಿಂದ ರದ್ದು
2022ರ ಮೇನಲ್ಲಿ ಆರಂಭಗೊಂಡಿದ್ದ ಮಂಗಳೂರು-ಹುಬ್ಬಳ್ಳಿ ವಿಮಾನ ಸೇವೆಯನ್ನು ಮಾರ್ಚ್ 10ರಿಂದ ಸ್ಥಗಿತಗೊಳಿಸಲಾಗುತ್ತಿದೆ.
ಮಂಗಳೂರು, ಮಾರ್ಚ್ 08; ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜನರಿಗೆ ಕಹಿಸುದ್ದಿ. ವಾರದಲ್ಲಿ ಮೂರು ದಿನ ಹಾರಾಟ ನಡೆಸುತ್ತಿದ್ದ ಮಂಗಳೂರು-ಹುಬ್ಬಳ್ಳಿ ನಡುವಿನ ನೇರ ವಿಮಾನ ಸೇವೆ ರದ್ದಾಗುತ್ತಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ತೊಂದರೆಯಾಗಲಿದೆ.
ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಮಂಗಳೂರು-ಹುಬ್ಬಳ್ಳಿ ನಡುವಿನ ನೇರ ವಿಮಾನ ಸೇವೆ ಮಾರ್ಚ್ 10ರಿಂದ ಸ್ಥಗಿತವಾಗುತ್ತಿದೆ. ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದ ವಿಮಾನ ಹುಬ್ಭಳ್ಳಿ-ಪುಣೆ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

2022ರ ಮೇ ತಿಂಗಳಿನಲ್ಲಿ ಕರಾವಳಿ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ನಡುವೆ ಸಂಪರ್ಕ ಕಲ್ಪಿಸಲು ಮಂಗಳೂರು-ಹುಬ್ಬಳ್ಳಿ ವಿಮಾನ ಸೇವೆಯನ್ನು ಆರಂಭಿಸಲಾಗಿತ್ತು. ಇಂಡಿಗೋ ಸಂಸ್ಥೆ ಈ ಮಾರ್ಗದಲ್ಲಿ ವಿಮಾನ ಸೇವೆ ನೀಡುತ್ತಿತ್ತು. ಆದರೆ ಈಗ ಪ್ರಯಾಣಿಕರ ಕೊರತೆ ಕಾರಣ ವಿಮಾನ ಸೇವೆ ರದ್ದಾಗುತ್ತಿದೆ. ಹುಬ್ಬಳ್ಳಿಯಿಂದ ಮಂಗಳೂರಿಗೆ ಬರಲು ಜನರು ಬೇರೆ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ಮಂಗಳೂರು-ಹುಬ್ಬಳ್ಳಿ ನಡುವಿನ ನೇರ ವಿಮಾನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಸಂಚಾರ ನಡೆಸುತ್ತಿತ್ತು. ಸಂಜೆ 6.30ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ವಿಮಾನ, 7.35ಕ್ಕೆ ಮಂಗಳೂರಿಗೆ ಬರುತ್ತಿತ್ತು. ಮಂಗಳೂರಿನಿಂದ ರಾತ್ರಿ 8ಕ್ಕೆ ಹೊರಟು, 9.05ಕ್ಕೆ ಹುಬ್ಬಳ್ಳಿಗೆ ತಲುಪುತ್ತಿತ್ತು. ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಇಲ್ಲದ ಕಾರಣ ವಿಮಾನ ರದ್ದಾಗಿದೆ. ಅಲ್ಲದೇ ಬಹುಬೇಡಿಕೆಯ ಹುಬ್ಬಳ್ಳಿ-ಪುಣೆ ಮಾರ್ಗದಲ್ಲಿ ವಿಮಾನ ಸಂಚಾರ ನಡೆಸಲಿದೆ.

ವಿಮಾನವೇ ಇರಲಿಲ್ಲ; ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದ್ದು ಹಲವು ವರ್ಷಗಳು ಕಳೆದಿದ್ದರೂ 2022ರ ಮೇ ತನಕ ಮಂಗಳೂರು-ಹುಬ್ಬಳ್ಳಿ ನಡುವೆ ನೇರ ವಿಮಾನ ಇರಲಿಲ್ಲ. ಮೊದಲ ಬಾರಿಗೆ ವಿಮಾನ ಸೇವೆ ಆರಂಭವಾಗಿದ್ದು, ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದ ಜನರಿಗೆ ಅನುಕೂಲವಾಗಿತ್ತು. ತುರ್ತಾಗಿ ಸಂಚಾರ ನಡೆಸುವವರಿಗೆ ಇದು ಸಹಾಯಕವಾಗಿತ್ತು.
ಮೊದಲು ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಭಾನುವಾರ ಮಂಗಳೂರು-ಹುಬ್ಬಳ್ಳಿ ವಿಮಾನ ಸಂಚಾರ ನಡೆಸುತ್ತಿತ್ತು. ಹುಬ್ಬಳ್ಳಿಯಿಂದ ಸಂಜೆ 5:15 ಹೊರಡುತ್ತಿದ್ದ ವಿಮಾನ ಸಂಜೆ 6:15ಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುತ್ತಿತ್ತು. ಮಂಗಳೂರಿನಿಂದ ಸಂಜೆ 6:35ಕ್ಕೆ ಹೊರಟು ರಾತ್ರಿ 7:40ಕ್ಕೆ ಹುಬ್ಬಳ್ಳಿಗೆ ತಲುಪುತ್ತಿತ್ತು. ಆದರೆ ಬಳಿಕ ವೇಳಾಪಟ್ಟಿ ಬದಲಾವಣೆ ಮಾಡಲಾಗಿತ್ತು. ವಾರದಲ್ಲಿ ಮೂರು ದಿನ ಮಾತ್ರ ಹಾರಾಟ ಮಾಡುವಂತೆ ಮಾರ್ಪಾಡು ಮಾಡಲಾಗಿತ್ತು. ಆದರೆ ಈಗ ವಿಮಾನ ಸೇವೆಯನ್ನೇ ರದ್ದುಗೊಳಿಸಲಾಗಿದೆ.












Click it and Unblock the Notifications