Vande Bharat Train: ಸೆ. 15ರಂದು 10 ವಂದೇ ಭಾರತ್ ರೈಲಿಗೆ ಚಾಲನೆ, ಕರ್ನಾಟಕಕ್ಕೆ ಒಂದು ರೈಲು
ಬೆಂಗಳೂರು, ಸೆಪ್ಟೆಂಬರ್ 09: ಭಾರತೀಯ ರೈಲ್ವೆ 10 ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ಈ ತಿಂಗಳು ಆರಂಭಿಸಲಿದೆ. ಸದ್ಯದ ಮಾಹಿತಿ ಪ್ರಕಾರ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳಿಗೆ ಸೆಪ್ಟೆಂಬರ್ 15ರಂದು ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್‌ನಲ್ಲಿ ಚಾಲನೆ ನೀಡಲಿದ್ದಾರೆ. 10 ರೈಲುಗಳ ಪೈಕಿ ಕರ್ನಾಟಕಕ್ಕೆ ಒಂದು ರೈಲು ಸಿಕ್ಕಿದೆ. ರಾಜ್ಯದಲ್ಲಿ ಸದ್ಯ 6ಕ್ಕೂ ಅಧಿಕ ಈ ಮಾದರಿಯ ರೈಲುಗಳು ಸಂಚಾರವನ್ನು ನಡೆಸುತ್ತಿವೆ.
ಮಾಹಿತಿಗಳ ಪ್ರಕಾರ ಉತ್ತರ ಕರ್ನಾಟಕ ಭಾಗಕ್ಕೆ ಹೊಸ ವಂದೇ ಭಾರತ್ ರೈಲು ಸಿಕ್ಕಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ ಮತ್ತು ಮಹಾರಾಷ್ಟ್ರದ ಪುಣೆ ನಡುವೆ ಹೊಸ ವಂದೇ ಭಾರತ್ ರೈಲು ಸಂಚಾರ ನಡೆಸಲಿದೆ. ಈ ರೈಲಿಗೆ ಸಹ ನರೇಂದ್ರ ಮೋದಿ ಹಸಿರು ನಿಶಾನೆಯನ್ನು ತೋರಿಸಲಿದ್ದಾರೆ.

ಎಸ್‌ಎಸ್‌ಎಸ್ ಹುಬ್ಬಳ್ಳಿ-ಪುಣೆ ನಡುವಿನ ವಂದೇ ಭಾರತ್ ರೈಲಿನ ತಾತ್ಕಾಲಿಕ ವೇಳಾಪಟ್ಟಿ, ಬೋಗಿ ಸಂಯೋಜನೆ, ನಿಲ್ದಾಣಗಳನ್ನು ಸಹ ಅಂತಿಮಗೊಳಿಸಲಾಗಿದೆ. ಎರಡು ದಿನದಲ್ಲಿ ಪ್ರಾಯೋಗಿಕ ಸಂಚಾರ ಸಹ ಆರಂಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಈ ರೈಲಿನಿಂದ ಉಭಯ ನಗರಗಳ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.
ಕರ್ನಾಟಕಕ್ಕೆ 3 ರೈಲು: ಕರ್ನಾಟಕದಲ್ಲಿ ಬೇರೆ-ಬೇರೆ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮಾಹಿತಿಯಂತೆ ರಾಜ್ಯಕ್ಕೆ 3 ಹೊಸ ವಂದೇ ಭಾರತ್ ರೈಲು ಮಂಜೂರಾಗಿದೆ. ಒಂದು ರೈಲು ಸೇವೆಗೆ ಸೆಪ್ಟೆಂಬರ್ 15ರಂದು ಚಾಲನೆ ಸಿಗಲಿದೆ.
ಪ್ರಸ್ತುತ ಹುಬ್ಬಳ್ಳಿಗೆ ವಂದೇ ಭಾರತ್ ರೈಲು ಸಂಪರ್ಕವಿದೆ. ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ಹುಬ್ಬಳ್ಳಿ ಮೂಲಕ ಸಂಚಾರ ನಡೆಸುತ್ತಿದೆ. ಈಗ ಹುಬ್ಬಳ್ಳಿಯಿಂದಲೇ ಹೊರಡುವ 8 ಬೋಗಿಯ ರೈಲು ಪುಣೆಯನ್ನು ಸಂಪರ್ಕಿಸಲಿದೆ. ಸಾಮಾಜಿಕ ಜಾಲತಾಣಲದಲ್ಲಿ ರೈಲಿನ ತಾತ್ಕಾಲಿಕ ವೇಳಾಪಟ್ಟಿ ಹರಿದಾಡುತ್ತಿದೆ.
ಹುಬ್ಬಳ್ಳಿ-ಪುಣೆ ನಡುವಿನ ಸುಮಾರು 558 ಕಿ. ಮೀ. ಮಾರ್ಗದಲ್ಲಿ 8 ಬೋಗಿಯ ವಂದೇ ಭಾರತ್ ರೈಲು ಸಂಚಾರವನ್ನು ನಡೆಸಲಿದೆ. ಈ ರೈಲು ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಸತಾರಾ, ಪುಣೆಯಲ್ಲಿ ನಿಲ್ದಾಣಗಳನ್ನು ಹೊಂದಿದೆ. ಸೋಮವಾರ ಹೊರತುಪಡಿಸಿ ವಾರದ ಎಲ್ಲಾ ದಿನ ರೈಲು ಓಡಲಿದೆ.
ಕೆಎಸ್‌ಆರ್ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವಿನ ಬಿಳಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಈ ಮಾರ್ಗದ ಪ್ರಾಯೋಗಿಕ ಸಂಚಾರವೂ 2023ರ ನವೆಂಬರ್‌ನಲ್ಲಿ ಪೂರ್ಣಗೊಂಡಿದೆ. ಆದರೆ ರೈಲು ಸೇವೆ ವಿಸ್ತರಣೆ ಆಗಿಲ್ಲ.
ಆದರೆ ಹುಬ್ಬಳ್ಳಿ-ಪುಣೆ ರೈಲು ಬೆಳಗಾವಿಯಲ್ಲಿ ನಿಲುಗಡೆ ಹೊಂದಿದೆ. ಈ ಮೂಲಕ ವಂದೇ ಭಾರತ್ ರೈಲು ಸೇವೆ ಬೇಕು ಎಂಬ ಗಡಿಜಿಲ್ಲೆಯ ಜನರ ಬೇಡಿಕೆಗೂ ಮುನ್ನಣೆ ಸಿಕ್ಕಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸೇವೆಯನ್ನು ಶೀಘ್ರವೇ ಆರಂಭಿಸಿ ಎಂದು ಮತ್ತೊಮ್ಮೆ ಬೇಡಿಕೆಯನ್ನು ಇಡಲಾಗಿದೆ.












Click it and Unblock the Notifications