ಮಂಗಳೂರಿಗೆ ಹಬ್ಬದ ವಿಶೇಷ ವಾರದ ರೈಲು; ವೇಳಾಪಟ್ಟಿ
ಮಂಗಳೂರು, ಸೆಪ್ಟೆಂಬರ್ 28; ಮುಂಬರುವ ಹಬ್ಬಗಳ ಹಿನ್ನಲೆಯಲ್ಲಿ ಉಂಟಾಗುವ ಪ್ರಯಾಣಿಕರ ದಟ್ಟಣೆ ನಿವಾರಣೆ ಮಾಡಲು ದಕ್ಷಿಣ ರೈಲ್ವೆ ವಿಶೇಷ ರೈಲುಗಳನ್ನು ಓಡಿಸಲಿದೆ. ಕರ್ನಾಟಕದ ಕರಾವಳಿ ಮಂಗಳೂರು ಮತ್ತು ತಮಿಳುನಾಡು ರಾಜಧಾನಿ ಚೆನ್ನೈ ನಡುವೆ ವಿಶೇಷ ರೈಲನ್ನು ಘೋಷಣೆ ಮಾಡಲಾಗಿದೆ.
ಹಬ್ಬದ ವಿಶೇಷ ರೈಲುಗಳು ವಾರಕ್ಕೊಮ್ಮೆ ಮಂಗಳೂರು ಜಂಕ್ಷನ್ ಮತ್ತು ತಮ್ಬರಂ ನಡುವೆ ಸಂಚಾರ ನಡೆಸಲಿವೆ ಎಂದು ಪ್ರಕಟಣೆ ಹೇಳಿದೆ. ಇವು ವಿಶೇಷ ರೈಲುಗಳಾಗಿರುವ ಕಾರಣ ಪ್ರಯಾಣ ದರವೂ ಸಹ ಹೆಚ್ಚಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ವೇಳಾಪಟ್ಟಿ; ತಮ್ಬರಂ-ಮಂಗಳೂರು ಜಂಕ್ಷನ್-ತಮ್ಬರಂ ವಿಶೇಷ ದರದ ವಾರದ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ಸಹ ನೈಋತ್ಯ ರೈಲ್ವೆ ಬಿಡುಗಡೆ ಮಾಡಿದೆ. ಹಬ್ಬದ ಸಂದರ್ಭದಲ್ಲಿ ಸಂಚಾರ ನಡೆಸುವ ಪ್ರಯಾಣಿಕರು ವಿಶೇಷ ರೈಲು ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ರೈಲು ನಂಬರ್ 06049 ತಮ್ಬರಂ-ಮಂಗಳೂರು ಜಂಕ್ಷನ್ ವಾರದ ವಿಶೇಷ ರೈಲು ತಮ್ಬರಂ ನಿಂದ 13:30ಕ್ಕೆ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 27ರ ತನಕ 5 ಬಾರಿ (ಶುಕ್ರವಾರ) ಸಂಚಾರ ನಡೆಸಲಿದೆ. ಈ ರೈಲು ಮಂಗಳೂರು ಜಂಕ್ಷನ್‌ಗೆ 7.30ಕ್ಕೆ ತಲುಪಲಿದೆ.
ರೈಲು ನಂಬರ್ 06050 ಮಂಗಳೂರು ಜಂಕ್ಷನ್-ತಮ್ಬರಂ ವಾರದ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ 12:00 ಗಂಟೆಗೆ ಹೊರಟು ತಮ್ಬರಂಗೆ 5:00 ಗಂಟೆಗೆ ತಲುಪಲಿದೆ. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 28ರ ತನಕ 5 ಬಾರಿ (ಶನಿವಾರ) ಸಂಚಾರ ನಡೆಸಲಿದೆ.
ಈ ವಿಶೇಷ ರೈಲು ಎರಡು ಎಸಿ ಫಸ್ಟ್ ಕ್ಲಾಸ್, ಎರಡು ಎಸಿ ಟು-ಟೈರ್ ಕೋಚ್, 9 ಸ್ಲೀಪರ್ ಕ್ಲಾಸ್ ಬೋಗಿ, 5 ಸಾಮಾನ್ಯ ಬೋಗಿ, ಎರಡು ಸೆಕೆಂಡ್ ಕ್ಲಾಸ್ (ದಿವ್ಯಾಂಗ ಬೋಗಿ) ಒಳಗೊಂಡಿದೆ. ಈ ವಿಶೇಷ ರೈಲಿನ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.
ವಾರದ ವಿಶೇಷ ರೈಲು ತಮ್ಬರಂನಿಂದ ಹೊರಟು ಚೆನ್ನೈ ಇಗ್‌ಮೋರ್, ಪೆರಂಬೂರ್, ಅರಕ್ಕೋಣಂ, ಕಟ್ಪಾಡಿ, ಜೋರಾರ್‌ಪಟ್ಟಿ, ಸೇಲಂ, ಈರೋಡ್, ತಿರುಪ್ಪೂರ್, ಕೊಯಮತ್ತೂರು, ಪಾಲಕ್ಕಾಡ್, ಶರ್ನೋರ್, ಕೋಯಿಕ್ಕೋಡ್, ತಿಲ್ಲಚೆರಿ, ಕಣ್ಣೂರು, ಕಾಸರಗೋಡು ಮೂಲಕ ಮಂಗಳೂರು ಜಂಕ್ಷನ್ ತಲುಪಲಿದೆ.
ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ರೈಲು ವಿಸ್ತರಣೆ; ನೈಋತ್ಯ ರೈಲ್ವೆ ಹುಬ್ಬಳ್ಳಿ-ರಾಮೇಶ್ವರಂ ನಡುವಿನ ವಿಶೇಷ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ರೈಲುಗಳ ಸಂಖ್ಯೆ 07355/ 07356 ಎಸ್.ಎಸ್.ಎಸ್ ಹುಬ್ಬಳ್ಳಿ-ರಾಮೇಶ್ವರಂ-ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ಎಕ್ಸ್‌ಪ್ರೆಸ್ ವಿಶೇಷ ರೈಲು ಸೇವೆಯ ಸಮಯ, ನಿಲುಗಡೆ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಹುಬ್ಬಳ್ಳಿಯಿಂದ ಪ್ರತಿ ಶನಿವಾರ ಸಂಚಾರ ನಡೆಸುವ ರೈಲು ಸಂಖ್ಯೆ 07355 ಎಸ್.ಎಸ್.ಎಸ್ ಹುಬ್ಬಳ್ಳಿ- ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು 7/10/2023 ರಿಂದ 30/12/2023 ರ ತನಕ ಮುಂದುವರಿಸಲಾಗುತ್ತಿದೆ. ಈ ಮೊದಲು 30/9/2023ರ ತನಕ ಓಡಿಸಲು ಸೂಚಿಸಲಾಗಿತ್ತು.
ರಾಮೇಶ್ವರಂನಿಂದ ಪ್ರತಿ ಭಾನುವಾರ ಸಂಚಾರ ನಡೆಸುವ ರೈಲು ಸಂಖ್ಯೆ 07356 ರಾಮೇಶ್ವರಂ- ಎಸ್.ಎಸ್.ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲನ್ನು 8/10/23 ರಿಂದ 31/12/23ರ ತನಕ ವಿಸ್ತರಣೆ ಮಾಡಲಾಗಿದೆ. ಈ ಮೊದಲು 1/10/2023 ರವರೆಗೆ ಓಡಿಸಲು ಸೂಚಿಸಲಾಗಿತ್ತು.












Click it and Unblock the Notifications