ಧಾರವಾಡ-ಬೆಳಗಾವಿ ನಡುವೆ ವಿಶೇಷ ರೈಲು, ವೇಳಾಪಟ್ಟಿ
dharwad, belagavi, indian railways, transport, ಧಾರವಾಡ, ಬೆಳಗಾವಿ, ಭಾರತೀಯ ರೈಲ್ವೆ, ಸಾರಿಗೆ
ಧಾರವಾಡ, ಮಾರ್ಚ್ 01; ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗ ಧಾರವಾಡ-ಬೆಳಗಾವಿ-ಧಾರವಾಡ ನಡುವೆ ವಿಶೇಷ ರೈಲನ್ನು ಮಾರ್ಚ್ 6ರಿಂದ ಓಡಿಸಲಿದೆ. ಇದು ಕಾಯ್ದಿರಿಸದ ವಿಶೇಷ ರೈಲು ಸೇವೆಯಾಗಿದ್ದು, ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಈ ರೈಲು ಆರಂಭಿಸಲಾಗಿದೆ.
ಈ ವಿಶೇಷ ರೈಲು ಸೆಪ್ಟೆಂಬರ್ ತನಕ ಸಂಚಾರ ನಡೆಸಲಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ. ಅಲ್ಲದೇ ಕೆಲವು ರೈಲುಗಳ ಸಂಚಾರ ರದ್ದುಗೊಳಿಸಿ ಸಹ ಆದೇಶ ಹೊರಡಿಸಲಾಗಿದೆ. ಧಾರವಾಡ-ಹುಬ್ಬಳ್ಳಿ-ಧಾರವಾಡ ನಡುವಿನ ಪ್ಯಾಸೆಂಜರ್ ರೈಲು ಸೇವೆ ಮಾರ್ಚ್ 6ರಿಂದ ಸ್ಥಗಿತಗೊಳ್ಳಲಿದೆ.
ರೈಲು ನಂಬರ್ 07357 ಧಾರವಾಡ-ಬೆಳಗಾವಿ, ರೈಲು ಸಂಖ್ಯೆ 07358 ಬೆಳಗಾವಿ-ಧಾರವಾಡ ನಡುವೆ ಮಾರ್ಚ್ 6 ರಿಂದ ಸೆಪ್ಟೆಂಬರ್ ತನಕ ಸಂಚಾರ ನಡೆಸಲಿದೆ. ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ರೈಲು ಸೇವೆ ವಿಸ್ತರಣೆ ಮಾಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಉಭಯ ನಗರಗಳ ನಡುವೆ ಪ್ರತಿದಿನ ನೂರಾರು ಜನರು ಸಂಚಾರ ನಡೆಸುತ್ತಾರೆ. ಆದರೆ ಧಾರವಾಡ-ಬೆಳಗಾವಿ ನಡುವೆ ನೇರ ರೈಲು ಮಾರ್ಗವಿಲ್ಲ.

ವೇಳಾಪಟ್ಟಿ; ಧಾರವಾಡ-ಬೆಳಗಾವಿ ನಡುವೆ ರೈಲು ನಂಬರ್ 07357 ಸಂಚಾರ ನಡೆಸಲಿದೆ. ಧಾರವಾಡದಿಂದ ಬೆಳಗ್ಗೆ 8.15ಕ್ಕೆ ರೈಲು ಹೊರಟು ಬೆಳಗಾವಿಯನ್ನು 10.45ಕ್ಕೆ ತಲುಪುತ್ತದೆ. ಈ ರೈಲು ಮಾರ್ಚ್ 6, 2023 ರಿಂದ ಸೆಪ್ಟೆಂಬರ್ 6ರ ತನಕ ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆಯ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಬೆಳಗಾವಿ-ಧಾರವಾಡ ನಡುವೆ ರೈಲು ಸಂಖ್ಯೆ 07358 ಸಂಚಾರ ನಡೆಸಲಿದೆ. ಈ ರೈಲು ಬೆಳಗಾವಿಯಿಂದ ಸಂಜೆ 7.30ಕ್ಕೆ ಹೊರಟು 9.55ಕ್ಕೆ ಧಾರವಾಡಕ್ಕೆ ತಲುಪಲಿದೆ. ಈ ಮಾರ್ಗದಲ್ಲಿ ಅಳ್ನಾವರ, ಲೋಂಡಾ ಮತ್ತು ಖಾನಾಪುರದಲ್ಲಿ ನಿಲುಗಡೆ ಇದೆ. ಈ ವಿಶೇಷ ರೈಲು 22 ಬೋಗಿಗಳನ್ನು ಹೊಂದಿದೆ. (11 ಸ್ಲೀಪರ್ ಕೋಚ್, 7 ಸಾಮಾನ್ಯ ಬೋಗಿ, ಎರಡು 2 ಟೈರ್ ಎಸಿ ಕೋಚ್, 1 ಎಸಿ ಕೋಚ್).

ರೈಲುಗಳು ರದ್ದು; ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ರೈಲು ನಂಬರ್ 07363/07364 ಧಾರವಾಡ-ಹುಬ್ಬಳ್ಳಿ-ಧಾರವಾಡ ಪ್ಯಾಸೆಂಜರ್ ರೈಲು ಮಾರ್ಚ್ 6ರಿಂದ ರದ್ದಾಗಲಿದೆ.
ರೈಲು ಸಮಯ ಬದಲಾವಣೆ; ನೈಋತ್ಯ ರೈಲ್ವೆ ಮಾರ್ಚ್ 1ರಿಂದ ಅನ್ವವಾಗುವಂತೆ ಕೆ. ಎಸ್. ಆರ್ ಬೆಂಗಳೂರಿನಿಂದ ಹೊರಡು ರೈಲು ಸಂಖ್ಯೆ 17391 ಕೆ. ಎಸ್. ಆರ್ ಬೆಂಗಳೂರು-ಎಸ್. ಎಸ್. ಎಸ್ ಹುಬ್ಬಳ್ಳಿ ಪ್ರತಿದಿನದ ಎಕ್ಸ್‌ಪ್ರೆಸ್ ರೈಲಿನ ವೇಗವನ್ನು ಹೆಚ್ಚಿಸುವ ಸಲುವಾಗಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಆಗಮಿಸುವ ರೈಲಿನ ಸಮಯದಲ್ಲಿ ಬದಲಾಣೆ ಮಾಡಿದೆ.
ಈ ರೈಲು ಬೆಳಗ್ಗೆ 9.35ರ ಬದಲಾಗಿ 9.5ಗಂಟೆಗೆ ಎಸ್. ಎಸ್. ಎಸ್. ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ. ಕೆ. ಎಸ್. ಆರ್. ಬೆಂಗಳೂರು ಮತ್ತು ಎಸ್. ಎಮ್. ವಿ ಹಾವೇರಿ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ರೈಲು ಸೇವೆ ವಿಸ್ತರಣೆ; ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಹೈದರಾಬಾದ್-ಯಶವಂತಪುರ ನಡುವೆ ಸಂಚರಿಸುವ ವಿಶೇಷ ರೈಲುಗಳ (07265/07266) ಸೇವೆಯನ್ನು ಬೇಡಿಕೆಯ ಮೇರೆಗೆ ವಿಸ್ತರಿಸಲು ದಕ್ಷಿಣ ಮಧ್ಯ ರೈಲ್ವೆ ವಲಯ ತೀರ್ಮಾನಿಸಿದೆ.
ರೈಲು ಸಂಖ್ಯೆ 07265 ಹೈದರಾಬಾದ್ - ಯಶವಂತಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಾರ್ಚ್ 7 ರಿಂದ 28, 2023ರ ತನಕ ವಿಸ್ತರಣೆ ಮಾಡಲಾಗಿದೆ. ರೈಲು ಸಂಖ್ಯೆ 07266 ಯಶವಂತಪುರ-ಹೈದರಾಬಾದ್ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಮಾರ್ಚ್ 8 ರಿಂದ 29ರ ತನಕ ವಿಸ್ತರಣೆ ಮಾಡಲಾಗಿದೆ.












Click it and Unblock the Notifications