ಬೆಂಗಳೂರು-ತಿರುಪತಿ ನಡುವೆ ಮತ್ತೊಂದು ವಿಮಾನ, ವೇಳಾಪಟ್ಟಿ
ಬೆಂಗಳೂರು, ಆಗಸ್ಟ್ 23: ಬೆಂಗಳೂರು-ತಿರುಪತಿ ನಡುವೆ ಸಂಚಾರ ನಡೆಸುವ ತಿಮ್ಮಪ್ಪನ ಭಕ್ತರಿಗೆ ಸಿಹಿಸುದ್ದಿ. ಆಗಸ್ಟ್ 24ರ ಗುರುವಾರದಿಂದ ಉದ್ಯಾನ ನಗರಿ ಬೆಂಗಳೂರು ಮತ್ತು ತಿರುಪತಿ ನಡುವೆ ಮತ್ತೊಂದು ವಿಮಾನ ಸೇವೆ ಆರಂಭವಾಗುತ್ತಿದೆ.
ವಿಮಾನಯಾನ ಸಚಿವಾಲಯ ಬೀದರ್-ಬೆಂಗಳೂರು ವಿಮಾನವನ್ನು ತಿರುಪತಿ ತನಕ ವಿಸ್ತರಣೆ ಮಾಡಲು ಒಪ್ಪಿಗೆ ನೀಡಿದೆ. ಬೀದರ್ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಈ ಕುರಿತು ಮಾಹಿತಿ ನೀಡಿದ್ದಾರೆ. ಬೀದರ್ ಮತ್ತು ಅಕ್ಕಪಕ್ಕದ ಜಿಲ್ಲೆಗಳ ಜನರು ಸಹ ತಿರುಪತಿಗೆ ಭೇಟಿ ನೀಡಲು ಅನುಕೂಲವಾಗಿದೆ.

ಬೀದರ್-ಬೆಂಗಳೂರು-ತಿರುಪತಿ ನಡುವಿನ ವಿಮಾನ ಗುರುವಾರದಿಂದ ವಾರದಲ್ಲಿ 5 ದಿನ ಸಂಚಾರ ನಡೆಸಲಿದೆ. ಬೀದರ್ ವಿಮಾನ ನಿಲ್ದಾಣ ಆರಂಭವಾದ ಬಳಿಕ ಮೊದಲ ವಿಮಾನ ವಿಸ್ತರಣೆ ಇದಾಗಿದೆ. ಬೀದರ್‌ನ ಜನರು ಸಹ ಬೆಂಗಳೂರು ವಿಮಾನವನ್ನು ತಿರುಪತಿ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಸಂಸದ ಭಗವಂತ ಖೂಬಾ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸತತ ಪ್ರಯತ್ನದಿಂದ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಬೀದರ್-ತಿರುಪತಿಗೆ ವಿಮಾನ ಸೇವೆ ಆರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ. ಇದರಿಂದ ಕ್ಷೇತ್ರದ ಭಕ್ತರು ತಿರುಪತಿಗೆ ಭೇಟಿ ನೀಡಲು ಹೆಚ್ಚಿನ ಅನುಕೂಲವಾಗಿದೆ ಎಂದು ಹೇಳಿದ್ದಾರೆ.
ವಿಮಾನದ ವೇಳಾಪಟ್ಟಿ; ಬೀದರ್-ಬೆಂಗಳೂರು ವಿಮಾನ ವಾರದ 5 ದಿನ (ಸೋಮವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ) ತಿರುಪತಿ ತನಕ ಸಂಚಾರ ನಡೆಸಲಿದೆ. ಆಗಸ್ಟ್ 24ರಿಂದ ಈ ಸೇವೆ ಲಭ್ಯವಿದ್ದು, ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಸೋಮವಾರ ಮತ್ತು ಶುಕ್ರವಾರ ಬೀದರ್‌ನಿಂದ ಸಂಜೆ 5.30ಕ್ಕೆ ಹೊರಡುವ ವಿಮಾನ, ಬೆಂಗಳೂರಿಗೆ 6.45ಕ್ಕೆ ಆಗಮಿಸಲಿದೆ. ಸಂಜೆ 7.10ಕ್ಕೆ ಹೊರಟು, 8 ಗಂಟೆಗೆ ತಿರುಪತಿ ತಲುಪಲಿದೆ. ರಾತ್ರಿ 8.25ಕ್ಕೆ ತಿರುಪತಿಯಿಂದ ಹೊರಟು, 9.15ಕ್ಕೆ ಬೆಂಗಳೂರಿಗೆ ಬರಲಿದೆ.
ಗುರುವಾರ, ಶನಿವಾರ ಮತ್ತು ಭಾನುವಾರದಂದು ಬೀದರ್‌ನಿಂದ ವಿಮಾನ ಸಂಜೆ 4.50ಕ್ಕೆ ಹೊರಟು ಬೆಂಗಳೂರು ನಗರಕ್ಕೆ 6.05ಕ್ಕೆ ತಲುಪಲಿದೆ. 6.30ಕ್ಕೆ ಬೆಂಗಳೂರಿನಿಂದ ಹೊರಟು, 7.20ಕ್ಕೆ ತಿರುಪತಿಗೆ ತಲುಪಲಿದೆ. 7.45ಕ್ಕೆ ತಿರುಪತಿಯಿಂದ ಹೊರಟು, 8.35ಕ್ಕೆ ಬೆಂಗಳೂರಿಗೆ ಆಗಮಿಸಲಿದೆ.
ಸಚಿವ ಭಗವಂತ ಖೂಬಾ ಬೀದರ್ ವಿಮಾನ ಸೇವೆಯ ಬಗ್ಗೆ ಮಾತನಾಡಿದ್ದಾರೆ, "ಬೀದರ್‌ನಿಂದ ವಿಮಾನ ಸೇವೆ ಆರಂಭಿಸಲು ಅನೇಕ ತೊಡಕುಗಳು ಎದುರಾಗಿದ್ದವು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಸಮನ್ವಯ ಸಾಧಿಸಿ ಸೇವೆ ಆರಂಭಿಸಲಾಗಿದೆ" ಎಂದು ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಬೀದರ್ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಗಳ ನಿರಂತರ ಹಾರಾಟಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭಗವಂತ ಖೂಬಾ ಹೇಳಿದ್ದರು. ಸ್ಟಾರ್ ಏರ್‌ಲೈನ್ಸ್ ಮತ್ತು ಇಂಡಿಗೋ ಸಂಸ್ಥೆಯ ಜೊತೆಗೆ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ ನಗರಗಳಿಗೆ ಬೀದರ್‌ನಿಂದ ವಿಮಾನ ಸೇವೆ ಆರಂಭವಾಗಲಿದೆ ಎಂದು ಭರವಸೆ ನೀಡಿದ್ದರು.
2020ರಲ್ಲಿ ಆರಂಭಗೊಂಡ ಬೀದರ್ ವಿಮಾನ ನಿಲ್ದಾಣ ಮೂರು ವರ್ಷಗಳನ್ನು ಪೂರೈಸಿದೆ. ಜಿಎಂಆರ್ ಸಂಸ್ಥೆ ವಿಮಾನ ನಿಲ್ದಾಣದ ನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ.












Click it and Unblock the Notifications