Bengaluru- Bali Flights: ಕನ್ನಡಿಗರಿಗೆ ಸಿಹಿ ಸುದ್ದಿ; ಬೆಂಗಳೂರು-ಬಾಲಿ ನಡುವೆ ನೇರ ವಿಮಾನಯಾನ ಆರಂಭಿಸಿದ ಇಂಡಿಗೋ
ಬೆಂಗಳೂರು, ಮಾರ್ಚ್ 30: ಭಾರತೀಯರ ತುಂಬಾ ಅಚ್ಚು ಮೆಚ್ಚಿನ ವಿದೇಶಿ ಪ್ರವಾಸಿಗರ ಪಟ್ಟಿಯಲ್ಲಿ 'ಬಾಲಿ' ಸ್ಥಳಕ್ಕೆ ಅದರದ್ದೆ ಆದ ಸ್ಥಾನವಿದೆ. ಸಣ್ಣ ಸ್ಥಳವಾದರೂ ಕೂಡ ಒಮ್ಮೆಯಾದರೂ ಬಾಲಿಗೆ ಹೋಗಿ ಬರಬೇಕು ಎಂದು ತಮ್ಮ ಬಕೆಟ್ ಲಿಸ್ಟ್‌ನಲ್ಲಿ ಬಾಲಿ ಹೆಸರು ಸೇರಿಸಿಕೊಂಡಿರುವ ಪ್ರವಾಸಿಗರು ಹೆಚ್ಚಿದ್ದಾರೆ.
ಇವರ ಕನಸುಗಳನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುವ ವಿಮಾನಯಾನ ಸಂಸ್ಥೆ ಇಂಡಿಗೋ ಮಾರ್ಚ್ 29 ರ ಶುಕ್ರವಾರ ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಇಂಡೋನೇಷ್ಯಾದ ಬಾಲಿ ನಡುವೆ ನೇರ ವಿಮಾನಯಾನವನ್ನು ಪ್ರಾರಂಭಿಸಿದೆ. ಈ ಮೂಲಕ ಬೆಂಗಳೂರು- ಬಾಲಿ ನಡುವೆ ಅಂತರರಾಷ್ಟ್ರೀಯ ಸಂಪರ್ಕವನ್ನು ಹೆಚ್ಚಿಸಿದೆ.

ಇಂಡೋನೇಷ್ಯಾದ ಜಕಾರ್ತಾದ ನಂತರ ಬಾಲಿ ಈಗ ಇಂಡೋನೇಷಿಯಾದ ಎರಡನೇ ದೊಡ್ಡ ತಾಣವಾಗಿದೆ. ಈಗ ಆರಂಭವಾಗಿರುವ ಹೊಸ ಅಂತರರಾಷ್ಟ್ರೀಯ ಸಂಪರ್ಕವು ಬಾಲಿಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರಿಗೆ ವಿಶೇಷವಾಗಿ ಕನ್ನಡಿಗರಿಗೆ ಹೊಸ ಅವಕಾಶ ಕಲ್ಪಿಸಿದ್ದು, ತಮ್ಮ ಪ್ರವಾಸವನ್ನು ಸುಲಭ ಮಾಡಿಕೊಳ್ಳಬಹುದು. ಜೊತೆಗೆ ಕನಸಿನ ಬಾಲಿ ಪ್ರಯಾಣವನ್ನು ಮತ್ತಷ್ಟು ಆರಾಮಾದಾಯಕ ಮಾಡಿಕೊಳ್ಳಬಹುದು.
ಖಾಸಗಿ ವಿಮಾನಯಾನ ಸಂಸ್ಥೆ ಇಂಡಿಗೋ, ಕಳೆದ ತಿಂಗಳು ಪತ್ರಿಕಾ ಪ್ರಕಟಣೆಯಲ್ಲಿ ಮಾರ್ಚ್ 29 ರಿಂದ ಬಾಲಿಯಲ್ಲಿರುವ ಟೆಕ್ ಹಬ್ ಮತ್ತು ಡೆನ್‌ಪಾಸರ್ ನಡುವೆ ದೈನಂದಿನ ನೇರ ವಿಮಾನವನ್ನು ಆರಂಭಿಸುವುದಾಗಿ ಘೋಷಿಸಿತ್ತು. ಇಂಡಿಗೋ ನೆಟ್‌ವರ್ಕ್‌ನಲ್ಲಿ ಇದು 33 ನೇ ಅಂತರರಾಷ್ಟ್ರೀಯ ಮತ್ತು 119 ನೇ ತಾಣವಾಗಿದೆ. ಇಂಡಿಗೋ 2023 ರಲ್ಲಿ ಜಕಾರ್ತಾದಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಬಾಲಿ ಹೊಸ ಸೇರ್ಪಡೆಯಾಗಿದೆ.

ಬೆಂಗಳೂರು - ಬಾಲಿ ವಿಮಾನದ ವೇಳಾಪಟ್ಟಿ
ವಿಮಾನ 6E 1605: 6ಇ 1605 ಸಂಖ್ಯೆಯ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ 12.50 ಕ್ಕೆ ಹೊರಟು 10.20 ಕ್ಕೆ ಡೆನ್‌ಪಾಸರ್‌ಗೆ (ಬಾಲಿ ) ಆಗಮಿಸಲಿದೆ.
ವಿಮಾನ 6E 1606: ಹಿಂದಿರುಗುವ ವಿಮಾನ, 6E 1606, ಡೆನ್‌ಪಾಸರ್‌ನಿಂದ ಬೆಳಗ್ಗೆ 11.20 ಕ್ಕೆ ಟೇಕ್ ಆಫ್ ಆಗಿ ಮಧ್ಯಾಹ್ನ 3.15 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದೆ.
"ಭಾರತದ ಆದ್ಯತೆಯ ವಿಮಾನಯಾನ ಸಂಸ್ಥೆ ಇಂಡಿಗೋ, ಮಾರ್ಚ್ 29, 2024 ರಿಂದ ಇಂಡೋನೇಷ್ಯಾದ ಬಾಲಿಯಲ್ಲಿರುವ ಡೆನ್‌ಪಾಸರ್‌ನಿಂದ ಕಾರ್ಯಾಚರಣೆ ಪ್ರಾರಂಭಿಸಲು ಸಿದ್ಧವಾಗಿದೆ. ಈ ಹೊಸ ಸಂಪರ್ಕವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ" ಎಂದು ಇಂಡಿಗೋದ ಜಾಗತಿಕ ಮಾರಾಟದ ಮುಖ್ಯಸ್ಥ ವಿನಯ್ ಮಲ್ಹೋತ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಲಿ/ ಡೆನ್‌ಪಾಸರ್
ಡೆನ್‌ಪಾಸರ್, ಐತಿಹಾಸಿಕ ಮತ್ತು ಸಾಂಸ್ಕೃತಿಕ ತಾಣಗಳು, ದೇವಾಲಯಗಳು, ವಸ್ತುಸಂಗ್ರಹಾಲಯಗಳು ಮತ್ತು ಮಾರ್ಕೆಟ್‌ಗಳಿಗೆ ಸಕತ್ ಫೇಮಸ್ ಆಗಿದೆ. ಇದು ಬಾಲಿಗೆ ಮುಖ್ಯ ಗೇಟ್‌ವೇ ಆಗಿದ್ದು, ದ್ವೀಪದ ವಿವಿಧ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಡೆನ್ಪಾಸರ್ ದ್ವೀಪದ ದಕ್ಷಿಣ ಭಾಗದಲ್ಲಿದೆ ಬಾಲಿ. ಇಲ್ಲಿಗೆ ಸಮೀಪದ ಪುರ ಬ್ಲಾಂಜಾಂಗ್ ದೇವಾಲಯವು 10 ನೇ ಶತಮಾನದ ಶಾಸನ ಮತ್ತು ಕಲ್ಲಿನ ಕಂಬ ಹೊಂದಿದೆ. ಬಾಲಿ ಮ್ಯೂಸಿಯಂನಲ್ಲಿ ಕಾಲಿಟ್ಟರೆ ಸಾಂಪ್ರದಾಯಿಕ ವೇಷಭೂಷಣಗಳು ಮತ್ತು ಧಾರ್ಮಿಕ ವಸ್ತುಗಳನ್ನು ಒಳಗೊಂಡಂತೆ ಬಲಿನೀಸ್ ಸಾಂಸ್ಕೃತಿಕ ಕಲಾಕೃತಿಗಳ ದೊಡ್ಡ ಸಂಗ್ರಹವೇ ನಿಮ್ಮ ಕಣ್ಣಮುಂದೆ ಬರಲಿದೆ.












Click it and Unblock the Notifications