7 ದಿನವೂ ಬೆಳಗಾವಿ-ಮುಂಬೈ ವಿಮಾನ ಸಂಚಾರ, ವೇಳಾಪಟ್ಟಿ
ಬೆಳಗಾವಿ, ಅಕ್ಟೋಬರ್ 16; ಗಡಿನಾಡು ಬೆಳಗಾವಿಗೆ ಸ್ಟಾರ್ ಏರ್ ಸಿಹಿಸುದ್ದಿ ನೀಡಿದೆ. ಬೆಳಗಾವಿ-ಮುಂಬೈ ನಡುವಿನ ವಿಮಾನ ಸೇವೆಯನ್ನು 7 ದಿನಗಳಿಗೆ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಬೆಳಗಾವಿ ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಿದೆ.
ಬೆಳಗಾವಿ-ಮುಂಬೈ ಮಾರ್ಗದ ವಿಸ್ತರಿತ ವಿಮಾನ ಸೇವೆಗೆ ಭಾನುವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ಈ ಹಿಂದೆ ವಾರದಲ್ಲಿ 4 ದಿನ ಉಭಯ ನಗರಗಳನ್ನು ಸ್ಟಾರ್ ಏರ್ ಸಂಪರ್ಕಿಸುತ್ತಿತ್ತು. ಈಗ ವಾರದ 7 ದಿನ ಸಹ ವಿಮಾನ ಸಂಚಾರ ಆರಂಭವಾಗಿದೆ.

ಸ್ಟಾರ್ ಏರ್ (ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ) ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣ ಮತ್ತು ಮುಂಬೈ ನಡುವೆ ವಿಮಾನ ಸಂಚಾರ ನಡೆಸುತ್ತಿತ್ತು. ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಕಾರಣ ವಿಮಾನ ಸೇವೆ ವಿಸ್ತರಣೆ ಮಾಡಲಾಗಿದೆ.
ಈಗ ಬೆಳಗಾವಿ-ಮುಂಬೈ ನಡುವೆ ವಿಮಾನ ಹೆಚ್ಚುವರಿಯಾಗಿ (ಭಾನುವಾರ, ಸೋಮವಾರ ಮತ್ತು ಶುಕ್ರವಾರ) ಸಹ ಸಂಚಾರ ನಡೆಸಲಿದೆ. ವಾರದ 7 ದಿನವೂ ಬೆಳಗಾವಿ ಮತ್ತು ಸುತ್ತಮುತ್ತಲಿನ ಜನರು ವಿಮಾನದ ಮೂಲಕ ಮುಂಬೈಗೆ ಸಂಚಾರ ನಡೆಸಬಹುದು ಎಂದು ಬೆಳಗಾವಿ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ವಿಮಾನದ ವೇಳಾಪಟ್ಟಿ; ಬೆಳಗಾವಿ-ಮುಂಬೈ ನಡುವಿನ ಸ್ಟಾರ್ ಏರ್ ವಿಮಾನದ ವೇಳಾಪಟ್ಟಿ ಹೀಗಿದೆ. ಮುಂಬೈನಿಂದ ಮಧ್ಯಾಹ್ನ 12.15ಕ್ಕೆ ಹೊರಡುವ ವಿಮಾನ, 1.25ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಬೆಳಗಾವಿಯಿಂದ 1.55ಕ್ಕೆ ಹೊರಟು 3.10ಕ್ಕೆ ಮುಂಬೈ ನಗರವನ್ನು ತಲುಪಲಿದೆ.
ಸ್ಟಾರ್ ಏರ್ ಮತ್ತು ಇಂಡಿಗೋ ಸಂಸ್ಥೆಗಳು ಬೆಳಗಾವಿ ಮತ್ತು ದೇಶದ ವಿವಿಧ ನಗರಗಳನ್ನು ಸಂಪರ್ಕಿಸುತ್ತವೆ. ಬೆಳಗಾವಿ-ಇಂಡೋರ್, ಬೆಳಗಾವಿ-ಅಹಮದಾಬಾದ್, ಬೆಳಗಾವಿ-ಜೈಪುರ, ಬೆಳಗಾವಿ-ಸೂರತ್, ಬೆಳಗಾವಿ-ಮುಂಬೈ, ಬೆಳಗಾವಿ-ಬೆಂಗಳೂರು ಮತ್ತು ಬೆಳಗಾವಿ-ತಿರುಪತಿ ನಡುವೆ ಸ್ಟಾರ್ ಏರ್ ವಿಮಾನ ಸಂಪರ್ಕವಿದೆ.
ಉಡಾನ್ ಯೋಜನೆಯಡಿ ಆಯ್ಕೆಗೊಂಡಿರುವ ಬೆಳಗಾವಿ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆ ಬೆಳಗಾವಿ-ನವದೆಹಲಿ, ಬೆಳಗಾವಿ-ಹೈದರಾಬಾದ್, ಬೆಳಗಾವಿ-ಬೆಂಗಳೂರು ನಡುವೆ ವಿಮಾನ ಸಂಪರ್ಕವನ್ನು ಕಲ್ಪಿಸಿದೆ.
ಬೆಳಗಾವಿ-ದೆಹಲಿ ನಡುವಿನ ನೇರ ವಿಮಾನವನ್ನು ಸ್ಥಗಿತಗೊಳಿಸಲಾಗಿತ್ತು. ಸ್ಥಳೀಯ ಜನಪ್ರತಿನಿಧಿಗಳು ಕೇಂದ್ರ ಸಚಿವರ ತನಕ ಹೋಗಿ ಮತ್ತೆ ಈ ವಿಮಾನ ಸೇವೆಯನ್ನು ಪುನಃ ಆರಂಭಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ರಾಜ್ಯದ ಅತ್ಯಂತ ಹಳೆಯ ವಿಮಾನ ನಿಲ್ದಾಣಗಳಲ್ಲಿ ಒಂದು. 2022ರಲ್ಲಿ ಈ ವಿಮಾನ ನಿಲ್ದಾಣ ರಾಜ್ಯದ ಅತಿ ದಟ್ಟಣೆಯ ವಿಮಾನ ನಿಲ್ದಾಣದಲ್ಲಿ 3ನೇ ಸ್ಥಾನದಲ್ಲಿತ್ತು. ಬೆಳಗಾವಿ ವಿಮಾನ ನಿಲ್ದಾಣ ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ಮಹಾರಾಷ್ಟ್ರ, ಗೋವಾದ ಜನರಿಗೆ ಸಹ ಸಹಾಯಕವಾಗಿದೆ.
ಭವಿಷ್ಯದ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬೆಳಗಾವಿ ವಿಮಾನ ನಿಲ್ದಾಣದ ನವೀಕರಣಕ್ಕೆ 230 ಕೋಟಿ ಯೋಜನಾ ವರದಿ ತಯಾರು ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ.
ಈ ಯೋಜನೆಯಡಿ ಪ್ರಯಾಣಿಕರ ಟರ್ಮಿನಲ್ ಕಟ್ಟಡ ವಿಸ್ತರಣೆ, ಮೂರು ಏರೋ ಬ್ರಿಡ್ಜ್‌ಗಳು ಹಾಗೂ ಏರೋ ಕ್ರಾಫ್ಟ್ ನಿಲ್ದಾಣ, ವಾಹನ ಪಾರ್ಕಿಂಗ್ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈ ಕಾಮಗಾರಿ ಆರಂಭವಾದ ಬಳಿಕ 36 ತಿಂಗಳಿನಲ್ಲಿ ಪೂರ್ಣಗೊಳಿಸುವ ಗುರಿ ಇದೆ.












Click it and Unblock the Notifications