ಬೆಳಗಾವಿ-ಕೊಲ್ಹಾಪುರ ಹೊಸ ರೈಲು ಮಾರ್ಗ; ಪಿಇಟಿ ಸಮೀಕ್ಷೆಗೆ ಒಪ್ಪಿಗೆ
ಬೆಳಗಾವಿ, ಜನವರಿ 22: ರೈಲ್ವೆ ಸಚಿವಾಲಯ ಕರ್ನಾಟಕದಲ್ಲಿನ ಹೊಸ ರೈಲು ಮಾರ್ಗವೊಂದರ ಪಿಇಟಿ ಸಮೀಕ್ಷೆಗೆ ಒಪ್ಪಿಗೆ ನೀಡಿದೆ. ಧಾರವಾಡ-ಕೊಲ್ಹಾಪುರ ರೈಲು ಮಾರ್ಗ ಯೋಜನೆಯ ಭಾಗವಾಗಿ ಹೊಸ ಮಾರ್ಗ ನಿರ್ಮಾಣವಾಗುವ ನಿರೀಕ್ಷೆ ಇದೆ.
ಬೆಳಗಾವಿ-ಕೊಲ್ಹಾಪುರ ನಡುವಿನ ನೂತನ ಬ್ರಾಡ್‌ಗೇಜ್ ರೈಲು ಮಾರ್ಗದ ಪ್ರಾಥಮಿಕ ಇಂಜಿನಿಯರಿಂಗ್ ಕಮ್ ಟ್ರಾಫಿಕ್ ಸಮೀಕ್ಷೆಗೆ ಸಚಿವಾಲಯ ಒಪ್ಪಿಗೆ ನೀಡಿದೆ. 6 ತಿಂಗಳಿನಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಿ ವರದಿ ನೀಡಬೇಕಿದೆ.

ಗಂಟೆಗೆ 160 ಕಿ. ಮೀ. ವೇಗದಲ್ಲಿ ರೈಲು ಚಲಿಸುವಂತೆ ನೂತನ ರೈಲು ಮಾರ್ಗ ನಿರ್ಮಾಣ ಮಾಡುವ ಮಾದರಿಯಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಯಾವುದೇ ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಇಲಾಖೆ ಒಪ್ಪಿಗೆ ನೀಡುವ ಮೊದಲು ಪಿಇಟಿ ಸಮೀಕ್ಷೆಯನ್ನು ನಡೆಸಲಾಗುತ್ತದೆ.
ಯೋಜನೆಯ ವಿವರ; ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಇರುವ ಸವಾಲುಗಳು, ಮಾರ್ಗದಿಂದ ಆಗುವ ಸಂಚಾರ ಉಪಯೋಗ, ತಾಂತ್ರಿಕ ವಿಷಯಗಳು ಸೇರಿದಂತೆ ಹಲವು ಮಾಹಿತಿಗಳನ್ನು ಸಂಗ್ರಹ ಮಾಡಲು ಇಲಾಖೆ ಪಿಇಟಿ ಸಮೀಕ್ಷೆಯನ್ನು ಮಾಡುತ್ತದೆ. ಇವುಗಳಲ್ಲಿ ಸ್ಯಾಟಲೈಟ್‌ಗಳ ಮೂಲಕ ಕೆಲವು ಮಾಹಿತಿ ಸಂಗ್ರಹ ಮಾಡಿ ವರದಿ ಸಿದ್ಧಪಡಿಸಲಾಗುತ್ತದೆ.
ಹಲವಾರು ಅಂಕಿ-ಸಂಖ್ಯೆಗಳನ್ನು ಒಳಗೊಂಡಿರುವ ಈ ಸಮೀಕ್ಷೆಗಾಗಿ ರೈಲ್ವೆ ಇಲಾಖೆ ಅನುಭವಿ ಸಂಸ್ಥೆಗೆ ಗುತ್ತಿಗೆ ನೀಡುತ್ತದೆ. ವಿವರವಾದ ಸಮೀಕ್ಷೆ ನಡೆಸಿದ ನಂತರ ಈ ರೈಲು ಯೋಜನೆ ಕಾರ್ಯ ಸಾಧುವೇ? ಎಂದು ಇಲಾಖೆ ತೀರ್ಮಾನ ಕೈಗೊಂಡು ಹೊಸ ಮಾರ್ಗ ನಿರ್ಮಾಣದ ಕುರಿತು ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ.
ಈ ಸಮೀಕ್ಷೆ ಧಾರವಾಡ-ಕೊಲ್ಹಾಪುರ ನೂತನ ರೈಲು ಮಾರ್ಗದ ವಿನ್ಯಾಸದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಹೊಸ ಮಾರ್ಗ ನಿರ್ಮಾಣದಿಂದ ಇಲಾಖೆಗೆ ಆರ್ಥಿಕವಾಗಿ ಆಗುವ ಲಾಭಗಳ ಬಗ್ಗೆಯೂ ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹ ಮಾಡಲಾಗುತ್ತದೆ.
ರೈಲ್ವೆಯ ಸಂಪರ್ಕ ವಿಚಾರಕ್ಕೆ ಬೆಳಗಾವಿ ಜಿಲ್ಲೆಯದು ಅನೇಕ ಬೇಡಿಕೆ ಇದೆ. ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾರ್ಗವಿಲ್ಲ. ಈ ಮಾರ್ಗಕ್ಕೆ ಅನುಮತಿ ಸಿಕ್ಕಿದ್ದರೂ ಸಹ ನಿರೀಕ್ಷೆಯಂತೆ ಕಾಮಗಾರಿ ನಡೆಯುತ್ತಿಲ್ಲ. ಬೆಂಗಳೂರು-ಬೆಳಗಾವಿ ನಡುವಿನ ವಂದೇ ಭಾರತ್ ರೈಲು ಸಂಚಾರ ಇನ್ನೂ ಆರಂಭವಾಗಿಲ್ಲ.
ಬೆಳಗಾವಿ-ಕೊಲ್ಹಾಪುರ-ಕರಾಡ ಹೊಸ ಮಾರ್ಗ ನಿರ್ಮಾಣದ ಘೋಷಣೆಯಾಗಿತ್ತು. 200 ಕಿ. ಮೀ. ಮಾರ್ಗ ಇದಾಗಿದೆ. ಧಾರವಾಡ-ಬೆಳಗಾವಿ-ಕೊಲ್ಹಾಪುರ-ಕರಾಡ ನೇರ ರೈಲು ಮಾರ್ಗ ನಿರ್ಮಾಣದಿಂದ ಕೈಗಾರಿಕೆಗಳಿಗೆ ಸಹ ಉತ್ತೇಜನ ನೀಡಲಾಗುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications