ಪ್ರವಾಸಿಗರಿಗೆ ಮಾಹಿತಿ; ಚಿತ್ರದುರ್ಗದಲ್ಲಿ ಆಟೋ ದರ ಪರಿಷ್ಕರಣೆ
ಚಿತ್ರದುರ್ಗ, ಜುಲೈ 11; ಮುಂಗಾರು ಮಳೆಯ ಅವಧಿಯಲ್ಲಿ ಕೋಟೆ ನಾಡು ಚಿತ್ರದುರ್ಗಕ್ಕೆ ಪ್ರವಾಸ ಹೋಗುವ ಪ್ರವಾಸಿಗರಿಗೆ ಮಾಹಿತಿ ಒಂದಿದೆ. ಚಿತ್ರದುರ್ಗದಲ್ಲಿ ಆಟೋ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಲಾಗಿದೆ, ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಿ ಕಾರ್ಯದರ್ಶಿ ಪ್ರಮುತೇಶ್ ಈ ಕುರಿತು ಮಾಹಿತಿ ನೀಡಿದ್ದಾರೆ. 2023ರ ಜನವರಿ 23ರಂದು ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಹೊಸ ದರ ನಿಗದಿಪಡಿಸಿರುವ ಕುರಿತು ಆಟೋರಿಕ್ಷಾಗಳಿಗೆ ಮೀಟರ್ ಮಾಪಾನಾಂಕ ನಿರ್ಣಯ ಮಾಡಿಸಿಕೊಂಡು 2023ರ ಸೆಪ್ಟೆಂಬರ್ 15ರ ಒಳಗಾಗಿ ವಾಹನಗಳಿಗೆ ಅಳವಡಿಸಿಕೊಳ್ಳಬೇಕು ಎಂದು ಸೂಚನೆ ಕೊಟ್ಟಿದ್ದಾರೆ.
ಆಟೋಗಳ ಪ್ರಯಾಣ ದರದ ಮಾಹಿತಿ; ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಆಟೋರಿಕ್ಷಾ ಪ್ರಯಾಣ ದರವನ್ನು ಮೊದಲ 1.5 ಕಿ. ಮೀ. ಗೆ ರೂ.30 ನಿಗದಿಪಡಿಸಿ ನಂತರದ ಪ್ರತಿ 1 ಕಿ. ಮೀ. ಮತ್ತು ಭಾಗಶಃಕ್ಕೆ ರೂ.15 ದರ ನಿಗದಿಪಡಿಸಿ ಪರಿಷ್ಕರಿಸಲಾಗಿರುತ್ತದೆ.
ಪರಿಷ್ಕೃತ ದರಕ್ಕೆ ಅನುಗುಣವಾಗಿ ಚಿತ್ರದುರ್ಗ ಜಿಲ್ಲೆಯ ತಾಲ್ಲೂಕು ವ್ಯಾಪ್ತಿಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಅವರು 2023ರ ಜುಲೈ 15 ರಿಂದ ಸೆಪ್ಟೆಂಬರ್ 15 ರವರೆಗೆ ಚಾಲ್ತಿ ಆಟೋರಿಕ್ಷಾಗಳಿಗೆ ಮೀಟರ್ ಸತ್ಯಾಪನೆ ಮತ್ತು ಮುದ್ರೆ ಮಾಡಿಕೊಡುವ ಕಾರ್ಯವನ್ನು ಆಯಾಯಾ ತಾಲ್ಲೂಕು ಕೇಂದ್ರಗಳಲ್ಲಿ ನಿಗದಿಪಡಿಸಿಕೊಳ್ಳುವ ದಿನಾಂಕಕ್ಕೆ ಅನುಗುಣವಾಗುವಂತೆ ಆಟೋರಿಕ್ಷಾ ಚಾಲಕರು ತಮ್ಮ ವಾಹನಗಳಿಗೆ ನೂತನ ದರಕ್ಕೆ ಅನುಗುಣವಾಗಿ ಕಡ್ಡಾಯವಾಗಿ ಆಟೋರಿಕ್ಷಾ ಮೀಟರ್‌ಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳಬೇಕು.
ಆಟೋ ಚಾಲಕರು, ಮಾಲೀಕರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಕನಿಷ್ಠ ಮೊದಲ 1.5 ಕಿ. ಮೀ. ಗೆ ರೂ. 30 ನಂತರದ ಪ್ರತಿ ಒಂದು ಕಿ. ಮೀ. ಗೆ ಹಾಗೂ ಭಾಗಶಃ ರೂ.15, ಕಾಯುವ ದರ ಪ್ರಥಮ 15 ನಿಮಿಷ ಕಾಯುವಿಕೆಗೆ ಉಚಿತ. ನಂತರ 15 ನಿಮಿಷ ಅಥವಾ ಭಾಗಶಃ ರೂ.5.
ಪ್ರಯಾಣಿಕರ ಸರಕಿಗೆ ಮೊದಲ 20 ಕೆಜಿಗೆ ಉಚಿತ. ನಂತರದ ಪ್ರತಿ 20 ಕೆಜಿ ಅಥವಾ ಭಾಗಶಃ ರೂ.5, ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ಮೀಟರ್‌ಗೆ ಒಂದೂವರೆ ಪಟ್ಟು ಆಟೋರಿಕ್ಷಾ ಪ್ರಯಾಣದರ ನಿಗದಿಪಡಿಸಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications