ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀಬ್ರಾ ರಾಕ್ಸ್ ಮೇಲೆ ಮಳೆಯೊಂದಿಗೆ ಸರಸ

By * ಪ್ರಶಾಂತ್ ಬೀಚಿ, ತಾಂಜಾನಿಯಾ
|
Google Oneindia Kannada News

Kilimanjaro Mountain Expedition (part 4)
ಎಂದಿನಂತೆ ನಮ್ಮ ದಿನ ಶುರುವಾಯಿತು. ಯಾವುದೇ ಆತುರವಿಲ್ಲದ ಕಾರಣ ಎಲ್ಲರೂ ನಿಧಾನವಾಗಿಯೆ ತಯಾರಾಗುತ್ತಿದ್ದರು. ಈ ದಿನದ ಪ್ಲಾನಿನ ಪ್ರಕಾರ ನಾವು ಇಲ್ಲೆ ಹತ್ತಿರದಲ್ಲಿ ಇದ್ದ ಜೀಬ್ರಾ ರಾಕ್ಸ್ ಬಳಿ ಹೋಗಿ ವಾಪಸ್ ಬರುವುದಾಗಿತ್ತು. ಎಲ್ಲರೂ ಹೊಟ್ಟೆಗೆ ಬ್ರೆಡ್ ಮತ್ತು ಟೀ ಇಳಿಸಿ ಹೊರಟು ನಿಂತಾಗ ಸುಮಾರು ಎಂಟುವರೆ ಗಂಟೆ. ಮೊದಲ ಮೂರು ದಿನ ಮಳೆ ಕಾಣದ ನಾವು, ಮಳೆಯನ್ನೆ ಮರೆತು ಬಿಟ್ಟಿದ್ದೆವು. ಚಳಿ ತಡೆಗಟ್ಟಲು ಏನು ಬೇಕೊ ಅದನ್ನೆಲ್ಲಾ ಬ್ಯಾಗಿನಲ್ಲಿ ತುರುಕಿ, ಕೋಲು ಹಿಡಿದು ಹೊರಟೆವು. ಚಳಿ ಬಹಳ ಇದ್ದಿದ್ದರಿಂದ ತಲೆಯಿಂದ ಕಾಲಿನವರೆಗು ಎಲ್ಲಾ ಪ್ಯಾಕ್. ಕಡಿಮೆ ಭಾರದ ಬ್ಯಾಗನ್ನು ಹೊತ್ತು ನಿಧಾನವಾಗಿ ಹೊರಟೆವು. ಸುಮಾರು ಮೂರುತಾಸಿನ ದಾರಿಯನ್ನು ನಡುಗುತ್ತಾ ಶುರುಮಾಡಿದೆವು. ಹಿಂದಿನ ದಾರಿಯಂತೆ ಸುಗಮವಾಗಿರಲಿಲ್ಲ, ಬರೀ ಕಲ್ಲು ತುಂಬಿದ್ದ ದಾರಿ ಆಕಾಶವನ್ನೆ ನೋಡುತ್ತಿತ್ತು. ಒಬ್ಬರ ಹಿಂದೆ ಒಬ್ಬರಾಗಿ ಇರುವೆಯ ಹಿಂಡಿನಂತೆ ನೆಡೆದೆವು. ಸ್ವಲ್ಪ ದೂರಕ್ಕೆ ಎಲ್ಲರೂ ಸುಸ್ತಾಗತೊಡಗಿದೆವು. ಕಾರಣ, ದಾರಿ ಕಠಿಣವಾಗಿತ್ತು ಮತ್ತು ಗಾಳಿಯಲ್ಲಿ ಆಮ್ಲಜನಕ ಕಡಿಮೆ ಇತ್ತು. ನಾವು ಹೋಗುತ್ತಿದ್ದ ದಾರಿ ಮವೇನ್‌ಜಿ ತುದಿಯಕಡೆಗೆ ಸಾಗುತ್ತಿತ್ತು.

ಮವೇನ್‌ಜಿ ಮತ್ತು ಕಿಬೊಎನ್ನುವುದು ಕಿಲಿಮಂಜಾರೊ ಪರ್ವತದ ಎರಡು ಉನ್ನತ ಸ್ಥಾನಗಳು. ಮವೇನ್‌ಜಿ ಮೇಲೆ ಕೂಡ ಮಂಜು ಕೂಡಿರುತ್ತದೆ ಆದರೆ ಅದನ್ನು ತಲುಪುವುದು ಬಹಳ ಕಷ್ಟ. ಕಡಿದಾದ ಬೆಟ್ಟಗಳನ್ನು, ಹಗ್ಗದ ಸಹಾಯದಿಂದ ಹತ್ತಲು ಬರುವವರಿಗೆ ಮಾತ್ರ ಅಲ್ಲಿಗೆ ತಲುಪಲು ಸಾಧ್ಯವಾಗುತ್ತದೆ. ಬಹಳಷ್ಟು ಕಡಿಮೆ ಜನ ಈ ತುದಿಯನ್ನು ಹತ್ತಲು ಹೋಗುತ್ತಾರೆ ಅದರಲ್ಲಿ ತುದಿ ತಲುಪುವುದು ವರ್ಷಕ್ಕೆ ಒಬ್ಬರು ಅಥವ ಇಬ್ಬರು. ಹಗ್ಗ ಬಳಸಿ ಬಂಡೆಯನ್ನು ಹತ್ತಬೇಕಾದ್ದರಿಂದ ಅದನ್ನು ಹತ್ತುವಾಗ ಅಥವ ಇಳಿಯುವಾಗ ಪ್ರಾಣ ಕಳೆದುಕೊಳ್ಳುವ ಅವಕಾಶ ಬಹಳ. ಹತ್ತಲು ಹೋದವರಲ್ಲಿ ಸತ್ತವರೆ ಜಾಸ್ತಿ. ಆದುದರಿಂದ ಈ ತುದಿಯನ್ನು ನಾವು ದೂರದಿಂದಲೆ ಬಹಳವಾಗಿ ಆನಂದಿಸಿದೆವು.

ದಾರಿಯ ಉದ್ದಕ್ಕೂ ನಮಗೆ ಮವೇನ್‌ಜಿ ಕಾಣಿಸುತ್ತಿತ್ತು ಆದರೆ ಎರಡು ಗಂಟೆ ಕಳೆದರೂ ಜೀಬ್ರಾ ಕಾಣಿಸುತ್ತಿರಲಿಲ್ಲ. ನಮ್ಮ ಗೈಡ್ ದೂರದಲ್ಲಿ ಕಾಣಿಸುತ್ತಿದ್ದ ಕಡಿದಾದ ಬೆಟ್ಟಗಳ ಸಾಲುಗಳನ್ನು ತೋರಿಸಿ ಹೇಳಿದ ಅದೇ ಜೀಬ್ರಾ ರಾಕ್ಸ್ ಎಂದು ಹೇಳಿದರು. ದಾರಿಯಲ್ಲಿ ಮಳೆ ಹನಿಗಳು ಬೀಳುತ್ತಿದ್ದರೂ, ಅದು ಮಂಜಿನ ಹನಿಗಳು ಎಂದು ಅನ್ನಿಸುವಷ್ಟು ಮಂಜು ಕವಿದಿತ್ತು. ಸಮಯ ಹನ್ನೊಂದು ದಾಟಿದ್ದರೂ ಮಂಜಿನ ಮುಸುಕು ಸರಿದಿರಲಿಲ್ಲ. ನಾವುಗಳು ಮೋಡಗಳನ್ನು ಸೀಳಿಕೊಂಡು ಹೋಗುತ್ತಿದ್ದೆವು. ಮೂರುಗಂಟೆಗಳ ಪ್ರಯಾಣದ ನಂತರ ಜೀಬ್ರಾ ರಾಕ್ಸ್ ಹತ್ತಿರಕ್ಕೆ ಬಂದೆವು. ಬಂಡೆಯ ಮೇಲೆ ಕಪ್ಪು-ಬಿಳಿ ಬಣ್ಣದ ಪಟ್ಟೆಗಳು ತುಂಬಿಕೊಂಡಿದ್ದವು. ಜಿಬ್ರಾ ಮೈಮೇಲೆ ಇರುವಂತೆಯೆ, ಬಂಡೆಯ ಮೇಲೆ ಬಣ್ಣವಿತ್ತು. ಪ್ರಕೃತಿ ನಿರ್ಮಿತ ಬಣ್ಣ ಇದಾಗಿತ್ತು. ಬಂಡೆಯ ಹತ್ತಿರ ಹೋಗಿ ನೋಡಿದರೆ ಅದು ಅಳಿಸಲಾಗದಂತಹ ಬಣ್ಣ. ಬಂಡೆಯ ಮೇಲಿನ ಕೆಲವು ಸಸ್ಯಗಳು ಮಳೆಗೆ ಈ ರೀತಿಯ ಬಿಳಿಯ ಬಣ್ಣವನ್ನು ಬಿಡುತ್ತವೆ, ಇದು ಒಂದು ರೀತಿಯ ಪಾಚಿ ಆದರೆ ಇದರ ಬಣ್ಣ ಹೋಗುವುದಿಲ್ಲ ಎಂದು ನಮ್ಮ ಜೊತೆಗೆ ಬಂದಿದ್ದಂತಹ ಸಸ್ಯ ಶಾಸ್ತ್ರದ ಉಪನ್ಯಾಸಕರು ಹೇಳಿದರು.

ಅಲ್ಲಿ ನಿಂತು ಕೆಲವು ಚಿತ್ರಗಳನ್ನು ತೆಗೆಯುತ್ತಿದ್ದಾಗಲೇ ಶುರುವಾಯಿತು ಮಳೆ. ಕೆಲವರು ರೈನ್ ಕೋಟ್ ತಂದಿದ್ದರು ಆದರೆ ಬಹಳಷ್ಟು ಜನ ತಂದಿರಲಿಲ್ಲ. ಮಳೆಗೆ ತಪ್ಪಿಸಿಕೊಳ್ಳಲು ಅಲ್ಲಿ ಎಲ್ಲೂ ಜಾಗವಿಲ್ಲ. ದೂರ ದೂರದವರೆಗೂ ಮರವಿಲ್ಲ, ಸೂರೆನ್ನುವ ಪದ ಕೂಡ ಹತ್ತಿರ ಸುಳಿಯುತ್ತಿರಲಿಲ್ಲ. ಇದ್ದ ಒಂದೇ ದಾರಿಯೆಂದರೆ ಬೇಗ ಬೇಗ ನಡೆದು ನಾವಿದ್ದ ಗುಡಿಸಲು ಸೇರುವುದು. ಹತ್ತುವಾಗ ಆಕಾಶನೋಡುತ್ತಿದ್ದ ಬೆಟ್ಟ, ಈಗ ಪಾತಾಳ ನೋಡುತ್ತಿದೆ. ಮಳೆಗೆ ಕಲ್ಲುಗಳು ಜಾರುತ್ತಿವೆ ಇಂಥಹ ಪರಿಸ್ಥಿತಿಯಲ್ಲಿ ಜೋರಾಗಿ ಓಡುವುದು ಅಪಾಯವನ್ನು ಎಳೆದುಕೊಂಡಂತೆ. ಮಳೆಯಲ್ಲಿ ನೆನೆದರೆ ಒಂದು ತೊಂದರೆ ಬೇಗ ಓಡಿದರೆ ಇನ್ನೊಂದು ತೊಂದರೆ. ಬೇರೆ ದಾರಿ ಇಲ್ಲದೆ ಹರ ಸಾಹಸ ಮಾಡಿ ಮೂರು ಗಂಟೆಗಳಲ್ಲಿ ಹತ್ತಿದ್ದ ಬೆಟ್ಟವನ್ನು ಒಂದು ಗಂಟೆಯಲ್ಲಿ ಇಳಿದೆವು. ಮಳೆ ಮತ್ತು ಚಳಿಗೆ ಕುಸಿದು ಹೋಗಿದ್ದ ಎಲ್ಲರೂ ನಡುಗುತ್ತಿದ್ದೆವು. ನಮ್ಮ ನಮ್ಮ ಕೋಣೆಗೆ ಹೋಗಿ ಬಟ್ಟೆ ಬದಲಾಯಿಸಿ, ಊಟದ ಶಾಸ್ತ್ರ ಮುಗಿಸಿ ಮಲಗಿದೆವು.

ರಾತ್ರಿ ಊಟಕ್ಕೆ ಬಂದವರಲ್ಲಿ ಅರ್ಧ ಜನ ನಿಜವಾಗಿಯೂ ಅರ್ಧವಾಗಿದ್ದರು. ಬಹಳಷ್ಟು ಜನಕ್ಕೆ ಮಾತ್ರೆಗಳನ್ನು ಕೊಡಬೇಕಾಯಿತು. ಮೊದಲೆ ಜ್ವರದಿಂದ ಬಳಲುತ್ತಿದ್ದ ಹುಡುಗ ಅಲ್ಲಿನ ವಾತಾವರಣಕ್ಕೆ ಮಲಗಿದ್ದಲ್ಲೆ ಎರಡು ಬಾರಿ ವಾಂತಿ ಮಾಡಿಕೊಂಡಿದ್ದ. ಅವನ ಜ್ವರ ಕಡಿಮೆ ಆಗುವ ರೀತಿ ಕಾಣಿಸುತ್ತಿರಲಿಲ್ಲ. ಹಾಗಾಗಿ ಮಾರನೆ ದಿನ ನಾವು ಪ್ರಯಾಣವನ್ನು ಮುಂದುವರೆಸುವಾಗ ಅವನನ್ನು ಹಿಂದೆ ಕಳುಹಿಸಲು ಎರ್ಪಾಡು ಮಾಡಿಕೊಂಡಿದ್ದರು. ಎಲ್ಲರಿಗೂ ಬೆಳಗ್ಗೆ ಏಳುವರೆ ಗಂಟೆಗೆ ಊಟದ ಕೋಣೆಗೆ ಬಂದು ಸೇರಲು ತಿಳಿಸಿ ಮಲಗಲು ಹೋದೆವು.

ಮಾರನೆ ದಿನ ಎದ್ದಾಗ ಮುಖ ತೊಳೆಯಲು ಕೂಡ ಆಗುತ್ತಿರಲಿಲ್ಲ. ಚಳಿಗೆ ಎಲ್ಲರೂ ನಲುಗಿ ಹೋಗಿದ್ದರು. ಈ ಜಾಗಕ್ಕೆ ಬಂದ ದಿನ ನಾನು ಮುಖ ತೊಳೆಯಲು ಹೋಗಿ ನೀರು ಮುಟ್ಟಿದ್ದೆ. ಮೊದಲನೆ ಸಲ ನೀರು ಹಾಕಿಕೊಂಡಾಗ ಅಂಥ ತೊಂದರೆ ಆಗಲಿಲ್ಲ, ಎರಡು ಮೂರು ಸಲು ನೀರು ಹಾಕಿಕೊಂಡೆ, ಮುಖ ಎನ್ನುವುದು ಹಾಗೆ ಮರಗಟ್ಟಿತ್ತು. ಕೈ ಬೆಂಕಿಯಲ್ಲಿ ಇಟ್ಟಂತೆ ಉರಿಯತೊಡಗಿತು. ಸುಮಾರು ಇಪ್ಪತ್ತು ನಿಮಿಷಗಳ ಕಾಲ ಉರಿಯುತ್ತಿದ್ದ ಕೈ, ಬಿಸಿನೀರಿನಲ್ಲಿ ಇಡುವ ತನಕ ಸುಮ್ಮನಾಗಲಿಲ್ಲ. ಇದನ್ನು ಅನುಭವಿಸಿದ್ದ ನಾನು ಮತ್ತೆಂದು ಚಳಿಯಲ್ಲಿ ತಣ್ಣೀರಿನ ಜೊತೆಗೆ ಸರಸವಾಡಲಿಲ್ಲ. ಹೊರಡುವ ದಿನ ಸ್ವಲ್ಪ ಬಿಸಿ ನೀರನ್ನು ಪಡೆದುಕೊಂಡು ಹಲ್ಲು ಉಜ್ಜಿ ಮುಖ ತೊಳೆದುಕೊಂಡೆ. ಬೆಳಗಿನ ಮಾಮೂಲಿ ತಿಂಡಿಯನ್ನು ತಿಂದು ಹೊರಡಲು ಸಿದ್ದರಾದೆವು.

ಸರಿ ಸುಮಾರು ಒಂಬತ್ತು ಗಂಟೆಗೆ ಎಲ್ಲರೂ ಹೊರಟೆವು. ಪೂರ್ತಿಯಾಗಿ ಅನಾರೋಗಿಯಾಗಿದ್ದ ಒಬ್ಬ ಬಾಲಕನನ್ನು ವಾಪಸ್ ಕಳಿಸುವ ವ್ಯವಸ್ಥೆ ಮಾಡಿ ಅಲ್ಪ ಸ್ವಲ್ಪ ಅನಾರೋಗಿಯಾಗಿದ್ದ ಬಹಳ ಮಂದಿಯೊಂದಿಗೆ ಪ್ರಯಾಣ ಶುರುವಾಯಿತು. ಚಳಿಗೆ ಹೆದರಿ ಎಲ್ಲರೂ ಚೆನ್ನಾಗಿಯೆ ಪ್ಯಾಕ್ ಆಗಿದ್ದರು. ತಮ್ಮ ತಮ್ಮ ಸಣ್ಣ ಬ್ಯಾಗನ್ನು ಹೊತ್ತುಕೊಂಡು ಕೋಲನ್ನು ನೆಲಕ್ಕೆ ಚುಚ್ಚುತ್ತಾ ಒಬ್ಬರ ಹಿಂದೆ ಒಬ್ಬರು ಹೋಗುತ್ತಿದ್ದೆವು. ಕೇವಲ ಒಂದು ಗಂಟೆಯ ನಡಿಗೆಯ ನಂತರ ನಮಗೆ ಬಿಸಿಲು ಜಾಸ್ತಿ ಎನಿಸತೊಡಗಿತು. ಸುತ್ತ ಮುತ್ತ ಇದ್ದ ಮರವೆಲ್ಲ ಮಾಯವಾಗಿ ಕಡಿದಾದ ಬೆಟ್ಟಗಳು ಮತ್ತು ಹುಲ್ಲುಗಾವಲು ಕಾಣಿಸಿತು. ನಮ್ಮ ಮೈ ಮೇಲಿದ್ದ ಹೆಚ್ಚಿನ ಬಟ್ಟೆಯನ್ನೆಲ್ಲಾ ಬಿಚ್ಚಿ ಬ್ಯಾಗಿಗೆ ತುರುಕಿಕೊಂಡೆವು. ಎರಡು ಮೂರು ಬೆಟ್ಟಗಳನ್ನು ದಾಟಿದ ಮೇಲೆ ನಮಗೆ ಕಾಣಿಸಿದ್ದು ವಿಶಾಲವಾದ ಮರುಭೂಮಿ. ದೂರ ದೂರದವರೆಗೂ ಮರಗಳ ಸುಳಿವಿಲ್ಲ, ಹುಲ್ಲಿನ ಕುರುಹಿಲ್ಲ. ಹಸಿರು ಎನ್ನುವುದು ಕಾಣಸಿಗದಂತಹ ಪ್ರದೇಶ. ಬರುಡು ಭೂಮಿಯಲ್ಲಿ, ಮಣ್ಣು ಮತ್ತು ಕಲ್ಲಿನ ರಾಶಿಗಳು ಬಿಟ್ಟರೆ ಬೇರೇನು ಕಾಣಸಿಗದಾಗಿತ್ತು. ಬಹಳಷ್ಟು ಕಿಲೋಮೀಟರ್‌ವರೆಗೂ ದಾರಿ ಕಾಣಿಸುತ್ತಿತ್ತು, ಅದನ್ನು ಸೆಡಲ್ ನೆಡಿಗೆ ಎಂದು ಕರೆಯುತ್ತಾರೆ. ಇಲ್ಲಿ ನಮಗೆ ವಿಶೇಷವಾಗಿ ಏನೂ ಕಾಣದೆ ಇದ್ದರೂ ಕಿಲಿಮಂಜಾರೊ ಇಲ್ಲೆ ಹತ್ತಿರದೆಲ್ಲಿದೆ ಎಂದು ಕಾಣಿಸುತ್ತಿತ್ತು. ಅದರ ಮೇಲೆ ಹರಡಿದ್ದ ಮಂಜು ಗೆಡ್ಡೆಗಳು ಕೈ ಚಾಚಿದರೆ ಸಿಗುತ್ತವೆ ಎನ್ನುವ ಹಾಗೆ ಭಾವನೆ ಬರುತ್ತಿತ್ತು. ದಾರಿಯ ಉದ್ದಕ್ಕೂ ಕಾಣಸಿಗುವ ಕಿಲಿಮಂಜಾರೊದ ಕಿರೀಟ ಮನಸ್ಸಿಗೆ ಏನೊ ಒಂದು ತರಹದ ಹುಮ್ಮಸ್ಸನ್ನು ಕೊಡುತ್ತಿತ್ತು. ಈ ಮರುಭೂಮಿಯಲ್ಲಿ ನಾಲ್ಕು ತಾಸುಗಳು ನಡೆದ ನಂತರ ಸಿಕ್ಕಿದ್ದು ಕಿಬೊ ಗುಡಿಸಲು. ಕಿಬೊ ಹಟ್ ನಮ್ಮ ಪ್ರಯಾಣದ ಕೊನೆಯ ಉಳಿದುಕೊಳ್ಳುವ ಜಾಗ. ಇಲ್ಲಿಗೆ ನಾವು ತಲುಪಿದ್ದು ಸಂಜೆ ನಾಲ್ಕು ಗಂಟೆಗೆ, ಇಲ್ಲಿ ರಾತ್ರಿ ನಾವು ಉಳಿಯುವ ಹಾಗಿಲ್ಲ. ತಾಪಮಾನ ಎರಡು ಡಿಗ್ರಿಯಿಂದ ಮೈನಸ್ ಐದು ಡಿಗ್ರಿವರೆಗು ಇರುತ್ತದೆ. ಕಿಲಿಮಂಜಾರೊ ತುಟ್ಟ ತುದಿಯನ್ನು ತಲುಪುವ ಕೊನೆಯ ಈ ಪ್ರಯಾಣ ಶುರುವಾಗುವುದು ರಾತ್ರಿಯಲ್ಲಿ. ಬೆಳಿಗ್ಗೆ ಸೂರ್ಯ ಉದಯಿಸುವ ಸಮಯಕ್ಕೆ ನಾವು ವಾಪಸ್ ಬರಬೇಕು, ಇಲ್ಲದಿದ್ದರೆ ಅದು ಇನ್ನೊಂದು ಅನಾಹುತಕ್ಕೆ ದಾರಿಯಾಗುತ್ತದೆ. ಸೂರ್ಯನ ಕಿರಣಗಳು ಮಂಜಿನ ಮೇಲೆ ಬಿದ್ದು ಅದನ್ನು ನಾವು ಬರಿಗಣ್ಣಿನಿಂದ ನೋಡಿದರೆ ದೃಷ್ಟಿ ಕಳೆದುಕೊಳ್ಳುವ ಸಂಬಾವನೆ ಜಾಸ್ತಿ ಮತ್ತು ಸಮುದ್ರ ಮಟ್ಟದಿಂದ ಆರುಸಾವಿರ ಮೇಲಿರುವ ನಮಗೆ ಸೂರ್ಯನ ಕಿರಣಗಳು ಜಾಸ್ತಿಯೆ ತೊಂದರೆ ಕೊಡುತ್ತವೆ. ಈ ರೀತಿ ಬಹಳಷ್ಟು ತೊಂದರೆಗಳಿರುವ ಕಾರಣ ನಮ್ಮ ಪ್ರಯಾಣವನ್ನು ಅದೇ ದಿನ ರಾತ್ರಿ ಹನ್ನೊಂದು ಗಂಟೆಗೆ ಶುರುಮಾಡಬೇಕಿತ್ತು.

ನಾವು ಕಿಬೊ ತಲುಪಿದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಚಳಿ ಬಹಳವಿದ್ದರಿಂದ ತಲುಪಿದ ತಕ್ಷಣ ಬಿಸಿ ಬಿಸಿ ಟೀ ಕುಡಿದು, ಮಲಗಲು ಹೋದೆವು. ಏಳುಗಂಟೆಗೆ ಊಟಕ್ಕೆ ಬರಬೇಕು ಎಂದು ಎಲ್ಲರಿಗು ತಿಳಿಸಿದರು. ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡು ಏಳುಗಂಟೆಗೆ ಊಟಕ್ಕೆ ಬಂದರೆ, ಬಹಳ ಕಡಿಮೆ ಜನ ಅಲ್ಲಿದ್ದರು. ಎಲ್ಲರನ್ನು ಕರೆದುಕೊಂಡು ಬರುವುದರೊಳಗೆ ಏಳುವರೆ. ಬಹಳಷ್ಟು ಜನ ಆಗಲೆ ಸುಸ್ತಾಗಿದ್ದರು. ಊಟ ಮುಗಿಸಿ ಎರಡು ಗುಂಪುಗಳನ್ನು ಮಾಡಿದೆವು. ಒಂದು ಗುಂಪು ರಾತ್ರಿ ಹತ್ತುವರೆಗೆ ಹೊರಟರೆ ಇನ್ನೊಂದು ಗುಂಪು ರಾತ್ರಿ ಹನ್ನೊಂದಕ್ಕೆ ಹೊರಡುತ್ತದೆ. ಹಾಗಾಗಿ ಎಲ್ಲರೂ ಹತ್ತು ಗಂಟೆಗೆ ಭೇಟಿಯಾಗಿ ಮೊದಲ ಗುಂಪನ್ನು ಕಳಿಸಿದ ಮೇಲೆ ಎರಡನೆ ಗುಂಪನ್ನು ಹೊರಡಿಸುವುದಾಗಿ ತಿಳಿಸಿದರು. ಕಠಿಣವಾದ ಈ ಪ್ರಯಾಣವನ್ನು ಎಲ್ಲರಿಗು ಮಿತವಾಗಿ ವಿವರಿಸಿ ಮಲಗಲು ಕಳಿಸಿದರು. ಎರಡು ಗಂಟೆಯ ನಿದ್ದೆಯ ನಂತರ ಸುಮಾರು ಇಪ್ಪತ್ತು ಗಂಟೆಗಳ ನಡಿಗೆ ನಮ್ಮ ಮುಂದಿದ್ದ ಗುರಿ. ಪ್ರಪಂಚದ ಅತೀ ಎತ್ತರದ ಸ್ವಾವಲಂಬಿ ಪರ್ವತವನ್ನು ಆಕ್ರಮಿಸುವ ಕಾತರದಿಂದ ನಿದ್ದೆಗೆ ಹೋದೆವು.

(ಮುಂದುವರಿಯುತ್ತದೆ...)

« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 1)
« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 2)
« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 3)
ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 5) »
ಕಿಲಿಮಂಜಾರೋ ಪರ್ವತಾಹೋಹಣ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X