ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ದಿನದ ಪುಳಕ, ಚಳಿಯ ನಡುಕ

By * ಪ್ರಶಾಂತ್ ಬೀಚಿ, ತಾಂಜಾನಿಯಾ
|
Google Oneindia Kannada News

Prashanth BC with co-mountaineer
ಮೊದಲ ದಿನ ಶುರುವಾಗಿದ್ದು ಬೆಳಿಗ್ಗೆ ಎಂಟು ಗಂಟೆಗೆ ಆದರೂ ನಾವು ಕಿಲಿಮಂಜಾರೊ ಪರ್ವತಾರೋಹಣದ ಗೇಟ್ ಪ್ರವೇಶಿಸಿದ್ದು ಮಧ್ಯಾಹ್ನದ ಒಂದು ಗಂಟೆಗೆ. ಇಪ್ಪತ್ತೆರಡು ಜನ ಒಂದು ವ್ಯಾನಿನಲ್ಲಿ ಕುಳಿತು ಒಂಬತ್ತುವರೆಗೆ ಅರುಷದಿಂದ ಮೋಶಿಗೆ ಮತ್ತು ಮೋಶಿಯಿಂದ ಕಿಲಿಮಂಜಾರೊ ಪರ್ವತದ ತಳಪದಿಗೆ ಬರಲು ಎರಡು ಗಂಟೆಗಳೆ ಆಯಿತು. ಅಲ್ಲಿ ನಮ್ಮೆಲ್ಲರ ವಿಳಾಸ ಮತ್ತು ಜಾತಕವನ್ನು ಬರೆದು, ನಮ್ಮ ಲಗೇಜುಗಳ ವಿಲೆವಾರಿ ಮಾಡಲು ಮತ್ತೆರಡು ಗಂಟೆ. ಹೀಗೆ ಎಲ್ಲ ಮುಗಿಸಿ ಹೊರಟ ನಮಗೆ ಊಟದ ಪ್ಯಾಕ್ ಕೊಟ್ಟರು. ಎರಡು ಬ್ರೆಡ್‌ನ ತುಂಡು, ಒಂದು ಮೊಸಂಬಿ ಮತ್ತು ಕೇಕ್. ಪರ್ವತ ಹತ್ತಲು ಶುರುಮಾಡುವ ಆತುರದಲ್ಲಿ ಊಟದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ, ಕೊಟ್ಟಿದ್ದನ್ನು ತಿಂದು ತಮ್ಮ ತಮ್ಮ ಸಣ್ಣ ಬ್ಯಾಗನ್ನು ಹೆಗಲಿಗೆ ಏರಿಸಿಕೊಂಡು ಹೊರಟೆವು. ನಮ್ಮ ಹಿಂದೆ ದೊಡ್ಡ ದೊಡ್ಡ ಬ್ಯಾಗನ್ನು ತಲೆಯಮೇಲೆ ಮತ್ತು ಹೆಗಲ ಮೇಲೆ ಏರಿಸಿಕೊಂಡು ನಮ್ಮ ಪೋರ್ಟರ್‌ಗಳು ಬಂದರು. ಪೋರ್ಟರ್ ಎಂದರೆ, ಪೊಗದಸ್ತಾಗಿರುವ ಹುಡುಗರು. ನಮ್ಮ ಜಾಸ್ತಿ ಲಗೇಜನ್ನು ಹೊತ್ತುಕೊಂಡು ನಮಗಿಂತ ವೇಗವಾಗಿ ನಾವು ತಲುಪಬೇಕಾದ ಸ್ಥಳವನ್ನು ತಲುಪುವ ಸೂಪರ್ ಮ್ಯಾನ್‌ಗಳು. ಮೊದಲ ದಿನದ ಮೊದಲ ಹೆಜ್ಜೆಗಳು ಜೋರಾಗಿಯೆ ಇದ್ದವು. ನಮ್ಮ ಸಣ್ಣ ಬ್ಯಾಗಿನಲ್ಲಿದ್ದ ನೀರಿನ ಬಾಟಲ್‌ಗಳು ನಡೆಯುತ್ತಾ ನಡೆಯುತ್ತಾ ಭಾರವಾಗತೊಡಗಿದವು. ಸಾಧ್ಯವಾದಷ್ಟು ನೀರನ್ನು ಕುಡಿದು ಉಳಿದಿದ್ದನ್ನು ಚೆಲ್ಲಿ ಖಾಲಿ ಬಾಟಲಿಯನ್ನು ನಮ್ಮ ಬ್ಯಾಗಿಗೆ ತುರುಕಿಕೊಂಡೆವು. ಕಾಡಿನ ಯಾವುದೇ ಭಾಗದಲ್ಲೂ ಒಂದು ಚಾಕ್‌ಲೇಟ್ ಪೇಪರ್ ಕೂಡ ಎಸೆಯುವಂತಿಲ್ಲ. ನೈಸರ್ಗಿಕವಾದ ಸ್ಥಳದಲ್ಲಿ ಯಾವುದೇ ಬಾಧೆ ಬಾರದಿರಲಿ ಎನ್ನುವುದನ್ನು ಬಹಳ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಈ ಪರ್ವತಕ್ಕೆ ಬರುವ ಎಲ್ಲರಿಗೂ ಇದರ ಬಗ್ಗೆ ತಿಳಿ ಹೇಳುತ್ತಾರೆ ಮತ್ತು ಹಾಗೆ ಎಲ್ಲರೂ ಅದನ್ನು ಪಾಲಿಸುತ್ತಾರೆ.

ಮೊದಲ ದಿನದ ನಮ್ಮ ಪ್ರಯಾಣ ಬಹಳ ಸಾಧಾರಣವಾಗಿತ್ತು. ಸುಮಾರು ನಾಲ್ಕು ಗಂಟೆಗಳ ಪ್ರಯಾಣದ ನಂತರ ನಮಗೆ ಮೊದಲ ಸಂಜೆ ಉಳಿದುಕೊಳ್ಳುವ ಗುಡಿಸಲುಗಳು ಸಿಗುತ್ತವೆ ಎಂದು ತಿಳಿದಿತ್ತು. ನಾವು ನಡೆಯುತ್ತಿದ್ದ ರಸ್ತೆ ಅಷ್ಟೊಂದು ಕಠಿಣವಾಗಿರದಿದ್ದರೂ, ಆಯಾಸ ಬಹಳವಾಗಿತ್ತು. ನಿಧಾನವಾಗಿ ಎತ್ತೆತ್ತರಕ್ಕೆ ಹೋಗುತ್ತಿದ್ದೆವು, ಸುತ್ತಲೂ ಕಾಡು ಎನ್ನುವುದು ದಟ್ಟವಾಗಿತ್ತು. ಎಲ್ಲಿ ನೋಡಿದರೂ ಬರೀ ಹಸಿರು ಬಣ್ಣದ ತೋರಣಗಳು ಮರಕ್ಕೆ ನೇತು ಬಿದ್ದಿದ್ದವು. ಆ ಮರಗಳ ಸಂದಿಯಿಂದ ಬರುತ್ತಿದ್ದ ತಣ್ಣನೆಯ ಗಾಳಿ ನಮ್ಮ ಬೆವರನ್ನು ಮಾಯಮಾಡಿತ್ತು. ದಾರಿಯಲ್ಲಿ ಸುಮಾರು ನದಿಗಳು ಸಿಕ್ಕವು, ಅವುಗಳ ಮೇಲೆ ಕಟ್ಟಿದ್ದ ಸೇತುವೆ ಬಹಳ ಅಂದವಾಗಿ ಕಾಣಿಸುತ್ತಿತ್ತು. ಸುಮಾರು ಸಣ್ಣ ಸಣ್ಣ ಜಲಪಾತಗಳು ಕಂಡವು, ಅವನ್ನೆಲ್ಲಾ ದೂರದಿಂದಲೆ ನೋಡಿ ಸಂತೋಷಪಟ್ಟೆವು. ಸಮತಟ್ಟಾದ ನೆಲದಲ್ಲಿ ಹೋಗುತ್ತಾ ನಿಧಾನವಾಗಿ ದಿಬ್ಬಣಗಳು ಬರುತ್ತಿದ್ದವು, ಹತ್ತುತ್ತಾ ಹತ್ತುತ್ತಾ ಇನ್ನೇನು ಸುಸ್ತಾದೆವು, ಮುಂದೆ ಹೋಗಲು ಆಗುವುದಿಲ್ಲ ಎನ್ನುವಾಗ ಮತ್ತೆ ಸಮತಟ್ಟಾದ ನೆಲ ಬರುತ್ತಿತ್ತು. ದಾರಿಯನ್ನು ಬಹಳ ಯೋಚಿಸಿಯೆ ಮಾಡಿದ್ದರು. ಸುಮಾರು ಎರಡು ಗಂಟೆಗಳು ನೆಡೆದ ಮೇಲೆ ಪಿಕ್‌ನಿಕ್ ಪಾಯಿಂಟ್ ಎಂದು ಬರೆದಿದ್ದ ಫಲಕಕಾಣಿಸಿತು. ಎಲ್ಲರೂ ಅಲ್ಲಿ ಹೋಗಿ ಕುಳಿತೆವು, ನಮ್ಮ ನಮ್ಮ ಬ್ಯಾಗಿನಲ್ಲಿದ್ದ ಬಿಸ್ಕತ್ತು, ಚಾಕ್‌ಲೆಟ್, ಪಾನೀಯ ಎಲ್ಲವನ್ನು ಸೇವಿಸಿದೆವು. ಅಲ್ಲೆ ಪಕ್ಕದಲ್ಲಿದ್ದ ಒಂದು ಚೀಲದೊಳಗೆ ಕಸವನ್ನೆಲ್ಲ ಹಾಕಿ ಮತ್ತೆ ಮುಂದುವರೆದೆವು.

ಮೊದಲ ದಿನದ ಎಲ್ಲಾ ಕಡೆ ನಮಗೆ ದಟ್ಟವಾಗಿದ್ದ ಅರಣ್ಯ ಕಾಣಿಸುತ್ತಿತ್ತು. ಎಲ್ಲೂ ಕೂಡ ಸೂರ್ಯನ ಸುಳಿವೂ ಕೂಡ ಸಿಗಲಿಲ್ಲ. ಮರಗಳು ಹಸಿರಾಗಿದ್ದೂ ಅದರ ತೊಗಟೆಯ ಮೇಲೆ ಹಸಿರಿನ ಪಾಚಿಯ ತರಹ ಮತ್ತೊಂದು ಸಸ್ಯರಾಶಿ ಕಾಣಿಸುತ್ತಿತ್ತು. ಎಲ್ಲಾ ರಂಬೆಯ ಮೇಲೆ ಹಸಿರಿನ ಪರದೆ ಹರಡಿಕೊಂಡಿತ್ತು. ಮರ ತನ್ನ ಬೇರಿನಿಂದ ನೀರನ್ನು ಹೀರಿ ಮೇಲಕ್ಕೆ ಎಳೆದುಕೊಳ್ಳುವಾಗ ಅದರ ತೊಗಟೆಯ ಮೂಲಕ ನೀರನ್ನು ಕದ್ದು ಈ ಸಸ್ಯಗಳು ಬೆಳೆಯುತ್ತವೆ ಎಂದು ನಮ್ಮ ಜೊತೆಗೆ ಬಂದಿದ್ದ ಒಬ್ಬ ಸಸ್ಯಶಾಸ್ತ್ರದ ಪಂಡಿತರು ಹೇಳಿದರು. ದಾರಿಯಲ್ಲಿ ಕಾಣುವ ಪ್ರತೀ ಸಸ್ಯವನ್ನು ಅವರು ಹತ್ತಿರದಿಂದ ನೋಡಿ ಅದರ ಬಗ್ಗೆ ಏನೇನೊ ಹೇಳುತ್ತಿದ್ದರು, ಎಲ್ಲದಕ್ಕೂ ಹೂಂ ಎನ್ನುತ್ತ ನಾನು ನಡೆಯುತ್ತಿದ್ದೆ. ಬಹಳ ವಿಷಯಗಳು ನನ್ನ ತಲೆಯ ಮೇಲೆ ಅಲ್ಲ ಆ ಪರ್ವತದ ಮೇಲಿನಿಂದ ಹೋಗುತ್ತಿತ್ತು. ಆದರೂ ಅವರಿಂದ ಬಹಳ ವಿಷಯವನ್ನು ತಿಳಿದುಕೊಂಡೆ. ಪ್ರಕೃತಿಯಲ್ಲಿ ಏನೆಲ್ಲಾ ವಿಚಿತ್ರಗಳು ನೆಡೆಯುತ್ತವೆ ಎಂದು ತಿಳಿಯಲು ಪ್ರಕೃತಿಯ ಸಂಗಡ ಸರಸವಾಡಲೇಬೇಕು. ನೈಸರ್ಗಿಕ ಎನ್ನುವುದು ಸ್ವಾಭಾವಿಕ ಎಂದು ನಾನು ತಿಳಿದುಕೊಂಡಿದ್ದೆ, ಆದರೆ ಪ್ರತಿಯೊಂದು ಸಸ್ಯ ಕೂಡ ತನ್ನದೆ ಬುದ್ದಿವಂತಿಕೆಯಿಂದ ಬೆಳೆಯುತ್ತವೆ ಎನ್ನುವ ವಿಚಾರ ನನಗೆ ತಿಳಿದಿರಲೇ ಇಲ್ಲ.

ಮೊದಲ ದಿನದ ಪ್ರಯಾಣ ನಮಗೆಲ್ಲಾ ವಾರ್ಮ್ ಅಪ್ ಮಾಡಿಸಿದ ಹಾಗಿತ್ತು. ಮುಂದಿನ ದಿನದ ಪ್ರಯಾಣಕ್ಕೆ ನಮ್ಮನ್ನು ಸಿದ್ದಪಡಿಸಿತ್ತು. ನಿಧಾನವಾಗಿ ನಡೆಯುತ್ತಾ ಬಂದ ನಮಗೆ ಸುಮಾರು ಸಂಜೆ ಆರು ಗಂಟೆಯ ಸಮಯಕ್ಕೆ ಗುಡಿಸಲುಗಳು ಕಂಡವು. ಅಲ್ಲೆ ಇದ್ದ ಫಲಕದ ಮೇಲೆ ಬರೆದಿತ್ತು ಮಂಡಾರ ಹಟ್, ಸಮುದ್ರ ಮಟ್ಟದಿಂದ 2700 ಮೀಟರ್. ಅಲ್ಲಿಯ ತನಕ ಚಳಿ ಕಾಣಿಸದ ನಮಗೆ ನಿಧಾನವಾಗಿ ಚಳಿ ಹತ್ತತೊಡಗಿತು. ನಮ್ಮ ಬ್ಯಾಗುಗಳನ್ನೆಲ್ಲಾ ಅಲ್ಲೆ ಇದ್ದ ಒಂದು ಬೆಂಚಿನ ಮೇಲೆ ಇಟ್ಟು ಪಕ್ಕದಲ್ಲೆ ಕುಳಿತುಕೊಂಡೆವು. ನಿಧಾನವಾಗಿ ಟೋಪಿ, ಸ್ವೆಟರ್, ಕೈಗೆ ಗ್ಲೌಸ್ ಎಲ್ಲಾ ಬಂದವು. ನಾವು ಉಳಿದುಕೊಳ್ಳಲು ಗುಡಿಸಲನ್ನು ಗೊತ್ತುಮಾಡಿದರು. ನಮ್ಮ ನಮ್ಮ ಗುಡಿಸಲಿಗೆ ಹೋಗಿ ಬ್ಯಾಗುಗಳನ್ನೆಲ್ಲ ಇಟ್ಟುಕೊಂಡು ಏಳು ಗಂಟೆಗೆ ಊಟಕ್ಕೆ ಬರಲು ತಿಳಿಸಿದರು. ನಾಲ್ಕು ಜನಕ್ಕೆ ಒಂದು ಗುಡಿಸಲು ಕೊಟ್ಟರೆ ಆರು ಜನ ಇರುವ ಕೆಲವು ಗುಡಿಸಲು ಇದ್ದವು. ನಮ್ಮ ನಮ್ಮ ಜೊತೆಗಾರರ ಜೊತೆಗೆ ನಾವು ಗುಡಿಸಲಿಗೆ ಹೋದೆವು. ನಮ್ಮ ದೊಡ್ಡ ಬ್ಯಾಗನ್ನು ಪೋರ್ಟರ್ ಹತ್ತಿರದಿಂದ ಪಡೆದುಕೊಂಡು ಉಣ್ಣೆಯ ಬಟ್ಟೆಗಳನ್ನು ಹಾಕಿಕೊಂಡೆವು. ಎಲ್ಲರೂ ಊಟದ ಕೋಣೆಗೆ ಬರುವಾಗ ತಲೆಯಿಂದ ಕಾಲಿನವರೆಗೂ ಮುಚ್ಚಿಕೊಂಡಿದ್ದರು. ಅಲ್ಲೆ ಇದ್ದ ಥರ್ಮೊಮೀಟರ್ ನಲ್ಲಿ ನೋಡಿದರೆ 12 ಡಿಗ್ರಿ! ಗೊತ್ತಾದ ಮೇಲೆ ಇನ್ನೂ ಚಳಿಯಾಗತೊಡಗಿತು. ಊಟದ ಕೋಣೆಗೆ ಹೋಗಿ ಬಿಸಿ ಬಿಸಿ ಸೂಪ್ ಕುಡಿದೆವು, ಏನೋ ಸುಖ ಸಿಕ್ಕಂತ್ತಾಗಿ ಮತ್ತೆ ಮತ್ತೆ ಹಾಕಿಸಿಕೊಂಡು ಕುಡಿದೆವು. ಅದರ ಹಿಂದೆಯೆ ಬಂದಿತು ಬಿಸಿ ಬಿಸಿ ನೂಡಲ್ಸ್, ಅದರ ಹಿಂದೆ ಹಣ್ಣು, ಅದರ ಹಿಂದೆ ಬಿಸಿ ಬಿಸಿ ಕಾಫಿ. ಎಲ್ಲವನ್ನು ತಿಂದು ಕುಡಿದು ಮತ್ತೆ ನಮ್ಮ ನಮ್ಮ ಗುಡಿಸಲಿಗೆ ಹೋಗುವಾಗ ಇದ್ದ ಚಳಿ 10 ಡಿಗ್ರಿ. ನಡುಗುತ್ತಾ ನಮ್ಮ ನಮ್ಮ ಗುಡಿಸಲಿಗೆ ಸೇರಿಕೊಂಡು ತಂದಿದ್ದ ಸ್ಲೀಪಿಂಗ್ ಬ್ಯಾಗ್ ತೆಗೆದು ಅದರೊಳಗೆ ಹಾವಿನಂತೆ ಸೇರಿಕೊಂಡೆವು. ನಮಗಾಗಿದ್ದ ಸುಸ್ತಿಗೆ, ಅಲ್ಲಿದ್ದ ಚಳಿಗೆ ನಿದ್ದೆ ಬಾರದಿದ್ದರೆ ಹೇಗೆ? ರಾತ್ರಿ ಎಂಟುವರೆಗೆ ನಿದ್ದೆ ಎನ್ನುವುದು ನಮ್ಮನ್ನೆ ಹೊದ್ದು ಮಲಗಿತ್ತು.

ಮುಂದುವರಿಯುತ್ತದೆ...

« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 1)
ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 3) »
ಕಿಲಿಮಂಜಾರೋ ಪರ್ವತಾಹೋಹಣ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X