Royal Enfield: ಆಂಧ್ರಪ್ರದೇಶದಲ್ಲಿ ರಾಯಲ್ ಎನ್‌ಫೀಲ್ಡ್‌ನಿಂದ ₹2,500 ಕೋಟಿ ಬೃಹತ್ ಹೂಡಿಕೆ, 15000 ಉದ್ಯೋಗ ಸೃಷ್ಟಿ
ಅಮರಾವತಿ: ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆಯಾದ 'ರಾಯಲ್ ಎನ್‌ಫೀಲ್ಡ್' (Royal Enfield) ಆಂಧ್ರಪ್ರದೇಶಕ್ಕೆ ಲಗ್ಗೆ ಇಟ್ಟಿದೆ. ತಿರುಪತಿ ಜಿಲ್ಲೆಯ ಸತ್ಯವೇಡು ಮಂಡಲದ ವನೇಲೂರು ಮತ್ತು ರಾಳ್ಳಕುಪ್ಪಂ ಗ್ರಾಮಗಳಲ್ಲಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಹಮ್ಮಿಕೊಂಡಿರುವ ಬೃಹತ್ ಸಂಯೋಜಿತ ಮೋಟಾರ್‌ಸೈಕಲ್ ಉತ್ಪಾದನಾ ಯೋಜನೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಹಸಿರು ನಿಶಾನೆ ತೋರಿದ್ದಾರೆ.
ವಾರ್ಷಿಕ 9 ಲಕ್ಷ ಬೈಕ್‌ಗಳ ಉತ್ಪಾದನೆ
ಈ ಕುರಿತು ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಒ ಬಿ.ಗೋವಿಂದರಾಜನ್ ನೇತೃತ್ವದ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗಾಗಿ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಸರಿಸುಮಾರು 2,500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಈ ನೂತನ ಪ್ಲಾಂಟ್ ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ಬಳಿಕ ವಾರ್ಷಿಕವಾಗಿ 9 ಲಕ್ಷ ಮೋಟಾರ್ ಸೈಕಲ್‌ಗಳನ್ನು ಉತ್ಪಾದಿಸುವ ಬೃಹತ್ ಸಾಮರ್ಥ್ಯವನ್ನು ಹೊಂದಿರಲಿದೆ.

15,000 ಉದ್ಯೋಗಾವಕಾಶ ಸೃಷ್ಟಿ
ಈ ಬೃಹತ್ ಯೋಜನೆಯು ಅತ್ಯಾಧುನಿಕ ಉತ್ಪಾದನಾ ಘಟಕ, ಸ್ವಂತ ಟೆಸ್ಟಿಂಗ್ ಟ್ರ್ಯಾಕ್ (ಪರೀಕ್ಷಾರ್ಥ ಚಾಲನಾ ಟ್ರ್ಯಾಕ್), ಆರ್ ಅಂಡ್ ಡಿ (R&D) ಸಂಶೋಧನಾ ಕೇಂದ್ರ ಮತ್ತು ಮೀಸಲಾದ ವೆಂಡರ್ ಪಾರ್ಕ್ ಪರಿಸರ ವ್ಯವಸ್ಥೆಯನ್ನು ಒಳಗೊಂಡಿರಲಿದೆ. ಈ ಕೈಗಾರಿಕಾ ಯೋಜನೆಯ ಮೂಲಕ ಸ್ಥಳೀಯವಾಗಿ ಸುಮಾರು 15,000 ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಈ ಭಾಗದ ಆರ್ಥಿಕ ಪ್ರಗತಿಗೆ ಭಾರಿ ಕೊಡುಗೆ ನೀಡಲಿದೆ.
24 ತಿಂಗಳ ಪ್ರಾಜೆಕ್ಟ್ 18 ತಿಂಗಳಲ್ಲೇ ಮುಕ್ತಾಯ
ಕಂಪನಿಯು ಈ ಯೋಜನೆಯನ್ನು ಮುಗಿಸಲು 24 ತಿಂಗಳ ಕಾಲಾವಕಾಶವನ್ನು ಪ್ರಸ್ತಾಪಿಸಿತ್ತು. ಆದರೆ, ಆಂಧ್ರಪ್ರದೇಶ ಸರ್ಕಾರದ 'ಸ್ಪೀಡ್ ಆಫ್ ಡೂಯಿಂಗ್ ಬ್ಯುಸಿನೆಸ್' (Speed of Doing Business) ನೀತಿಯಡಿಯಲ್ಲಿ ಎಲ್ಲಾ ಪರವಾನಗಿಗಳನ್ನು ಅತ್ಯಂತ ವೇಗವಾಗಿ ನೀಡಲಾಗುವುದು. ಹೀಗಾಗಿ ಈ ಯೋಜನೆಯನ್ನು 24 ತಿಂಗಳ ಬದಲಿಗೆ ಕೇವಲ 18 ತಿಂಗಳಲ್ಲೇ ಮುಗಿಸಿ ಉತ್ಪಾದನೆ ಆರಂಭಿಸಬೇಕು ಎಂದು ಚಂದ್ರಬಾಬು ನಾಯ್ಡು ಅವರು ಕಂಪನಿಗೆ ಸೂಚಿಸಿದ್ದಾರೆ. "ನಮ್ಮ ಸರ್ಕಾರದ ವೇಗಕ್ಕೆ ತಕ್ಕಂತೆ ರಾಯಲ್ ಎನ್‌ಫೀಲ್ಡ್ ಕೂಡ ಅಷ್ಟೇ ವೇಗವಾಗಿ ಪ್ರಾಜೆಕ್ಟ್ ಕೆಲಸ ಮುಗಿಸಬೇಕು" ಎಂದು ಅವರು ತಿಳಿಸಿದ್ದಾರೆ.
ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ತನ್ನ ಚೊಚ್ಚಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 'ಫ್ಲೈಯಿಂಗ್ ಫ್ಲೀ C6' (FF.C6) ಕುರಿತು ಸಿಎಂ ಚಂದ್ರಬಾಬು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭವಿಷ್ಯದ ಪರಿಸರಸ್ನೇಹಿ ಇವಿ ಪ್ರಯಾಣಕ್ಕೆ ಆಂಧ್ರಪ್ರದೇಶದ ಹಸಿರು ಇಂಧನ ಪರಿಸರ ವ್ಯವಸ್ಥೆ ಅತ್ಯಂತ ಸೂಕ್ತವಾಗಿದೆ ಎಂದು ನಾಯ್ಡು ಹೇಳಿದ್ದಾರೆ. ಆಂಧ್ರಪ್ರದೇಶದಲ್ಲಿ ದೊಡ್ಡ ಮಟ್ಟದ ಸೌರಶಕ್ತಿ, ಪವನ ಶಕ್ತಿ, ಪಂಪ್ಡ್ ಸ್ಟೋರೇಜ್ ಮತ್ತು ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್ (BESS) ಅಭಿವೃದ್ಧಿಪಡಿಸಲಾಗುತ್ತಿದ್ದು, ಭವಿಷ್ಯದ ಪರಿಸರಸ್ನೇಹಿ ವಾಹನಗಳ ತಯಾರಿಕೆಗೆ ಆಂಧ್ರಪ್ರದೇಶವು ಭಾರತದಲ್ಲೇ ಪ್ರಮುಖ ಹಬ್ ಆಗಿ ಹೊರಹೊಮ್ಮಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.













Click it and Unblock the Notifications