ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂತಸದ ಉನ್ಮಾದವೇರಿಸಿದ ಸವನ್ನಾ ಕಾಡು

By * ಪ್ರಶಾಂತ್ ಬೀಚಿ, ತಾಂಜಾನಿಯಾ
|
Google Oneindia Kannada News

Prashanth BC with co-mountaineer
ಮಾರನೆ ದಿನ ಬೆಳಿಗ್ಗೆ ಎದ್ದಾಗ ಸುಮಾರು ಆರುವರೆ ಗಂಟೆಯಾಗಿತ್ತು. ಮರದಿಂದ ಮಾಡಿದ್ದ ಗುಡಿಸಲಿನಲ್ಲಿ ಗೊರಕೆ ಹೊಡೆದು ಎದ್ದ ನನಗೆ ಹೊರಗಿನ ಚಳಿಯ ಊಹೆ ಇರಲಿಲ್ಲ. ರಾತ್ರಿ ಮಲಗಿದ್ದ ಡ್ರೆಸ್ಸ್ ಹಾಗೆ ಇತ್ತು. ಎರಡು ಟೀ ಶರ್ಟ್, ಮೇಲೊಂದು ಸ್ವೆಟರ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲು ಚೀಲ, ಕೈಗೆ ಕವಚ, ಇದೆಲ್ಲದರ ಮೇಲೆ ಬೆಚ್ಚಗಿರುವ ಸ್ಲೀಪಿಂಗ್ ಬ್ಯಾಗ್ ಜಿಪ್ ಎಳೆದುಕೊಂಡು ಕೇವಲ ಸ್ವಲ್ಪ ಮುಖ ಹೊರಗೆ ಕಾಣುವ ಹಾಗೆ ಮಲಗಿದ್ದ ಎಲ್ಲರಿಗೂ ನಿದ್ದೆ ಎನ್ನುವುದು ಮರದ ದಿಮ್ಮೆಯಂತೆ ಆಗಿತ್ತು. ಆರುವರೆಗೆ ಎದ್ದ ನಾವು, ಬಾಗಿಲು ತೆಗೆದರೆ ಸುಯ್ಯನೆ ಬಂತು ತಣ್ಣನೆಯ ಗಾಳಿ. ಹೊರೆಗೆ ಏನೂ ಕಾಣಿಸುತ್ತಿರಲಿಲ್ಲ, ಬಾಗಿಲ ಮೂಲಕ ಬಂದ ಗಾಳಿ ನಮ್ಮನ್ನು ಸೆಟೆದು ನಿಲ್ಲುವಂತೆ ಮಾಡಿತ್ತು. ಈ ರೀತಿಯ ಪರಿಸ್ಥಿತಿಯಲ್ಲಿ, ಬಿಸಿ ನೀರಿಲ್ಲದೆ ಸ್ನಾನ ಮಾಡುವುದು ಅಸಾಧ್ಯವಾದ ಮಾತು. ನಮ್ಮ ನೈಸರ್ಗಿಕ ಕರೆಗಳನ್ನು ಮುಗಿಸಿಕೊಂಡು ಬಂದು, ಹಲ್ಲು ಉಜ್ಜಿ, ಮುಖ ತೊಳೆದುಕೊಂಡು ಬಂದು ಮತ್ತೆ ಬೆಚ್ಚಗಿನ ನಮ್ಮ ಉಡುಪುಗಳನ್ನು ಧರಿಸಿಕೊಂಡೆವು. ಸುಮಾರು ಏಳುಗಂಟೆ ನಲವತ್ತೈದು ನಿಮಿಷಕ್ಕೆ ಎಲ್ಲರೂ ಊಟದ ಜಾಗಕ್ಕೆ ತಲುಪಿ, ಬಿಸಿ ಬಿಸಿ ಗಂಜಿ, ಬ್ರೆಡ್-ಜಾಮ್ ಮತ್ತು ಕಾಫಿಯನ್ನು ಹೊಟ್ಟೆಗೆ ಇಳಿಸಿದೆವು. ನಮ್ಮ ದೊಡ್ಡ ಲಗೇಜನ್ನು ಪೋರ್ಟರ್‌ಗಳಿಗೆ ರವಾನಿಸಿ ಅಗತ್ಯವಿದ್ದ ಕಡಿಮೆ ವಸ್ತುಗಳನ್ನು ನಾವು ಹೊತ್ತುಕೊಂಡು, ನಮ್ಮ ನೆರವಿಗೆ ಬೇಕಾದ ಕೋಲುಗಳನ್ನು ಹಿಡಿದು ಹೊರಟಾಗ ಸಮಯ ಒಂಬತ್ತು ಗಂಟೆ. ಆ ಸಮಯದಲ್ಲೂ ಇದ್ದ ತಾಪಮಾನ ಹತ್ತು ಡಿಗ್ರಿ.

ನಿಧಾನವಾಗಿ ನಮ್ಮ ನಡಿಗೆ ಶುರುವಾಯಿತು, ಹಿಂದಿನ ದಿನ ನಿತ್ಯ ಹರಿದ್ವರ್ಣದ ಕಾಡನ್ನು ದಾಟಿ ಬಂದ ನಮಗೆ ಅಷ್ಟೊಂದು ದಟ್ಟವಾದ ಕಾಡು ಕಾಣಿಸುತ್ತಿರಲಿಲ್ಲ. ನಡೆಯುತ್ತಾ ನಡೆಯುತ್ತಾ ಕಾಡು ಕಡಿಮೆಯಾದಂತೆ ಕಾಣಿಸಿತು. ಸುಮಾರು ಒಂದು ಗಂಟೆಯ ಪ್ರಯಾಣದ ನಂತರ ಬಿಸಿಲು ಕಾಣಿಸತೊಡಗಿತು. ಹಾಗೆ ಬಿಸಿಲು ಜಾಸ್ತಿಯಾಯಿತು. ಮೈಮೇಲೆ ತೊಟ್ಟಿದ್ದ ಅಧಿಕ ಬಟ್ಟೆಗಳು ಒಂದೊಂದಾಗೆ ಕಳಚಿ ಬ್ಯಾಗನ್ನು ಸೇರತೊಡಗಿದವು. ಕೇವಲ ಎರಡು ಗಂಟೆಗಳಲ್ಲಿ ಹತ್ತು ಡಿಗ್ರಿಯಿಂದ ಸುಮಾರು ಮುವತ್ತು ಡಿಗ್ರಿ ತಾಪಮಾನಕ್ಕೆ ತಲುಪಿದ್ದೆವು. ಇಲ್ಲಿಂದ ಶುರುವಾಯಿತು ತಾಪತ್ರಯ. ಕೆಲವರಿಗೆ ಈ ತಾಪಮಾನದ ಬದಲಾವಣೆ ಸಹಿಸಲು ಆಗಲಿಲ್ಲ. ನಮ್ಮ ಗುಂಪಿನಲ್ಲಿ ಬಹಳ ಚುರುಕಿದ್ದ ಹುಡುಗ ನಡೆಯಲಾಗದೆ ತನ್ನ ವೇಗವನ್ನು ಕಡಿಮೆ ಮಾಡಿದ. ಎಲ್ಲರಿಗಿಂತ ಮುಂದಿರುತ್ತಿದ್ದವ, ನಿಧಾನವಾಗಿ ಕೊನೆಯ ಸ್ಥಾನಕ್ಕೆ ಬಂದ. ಅವನ ಜೊತೆಗೆ ನಾನು, ನವ್ಯ (ನನ್ನ ಹೆಂಡತಿ), ಮಿ. ಸಂಗೋಕ (ಸಸ್ಯಶಾಸ್ತ್ರದ ಉಪನ್ಯಾಸಕ) ಮತ್ತು ಒಬ್ಬ ಗೈಡ್ ನಿಧಾನವಾಗಿ ಬರುತ್ತಿದ್ದೆವು. ಎಲ್ಲಾ ಹುಡುಗರೂ ದೂರದಲ್ಲಿ ಕಾಣುತ್ತಿದ್ದ ಒಂದು ಪಿಕ್ ನಿಕ್ ಜಾಗದಲ್ಲಿ ಕುಳಿತು ತಮ್ಮ ತಮ್ಮ ಊಟದ ಪ್ಯಾಕೆಟ್‌ಅನ್ನು ಬಿಚ್ಚಿ ತಿನ್ನುತ್ತಿದ್ದರು. ನಾವು ಅಲ್ಲಿಗೆ ಹೋಗುವುದರೊಳಗೆ ಎಲ್ಲರೂ ಅವರವರ ಊಟವನ್ನು ಮುಗಿಸಿ ವಿಶ್ರಮಿಸುತ್ತಿದರು. ಸುಮಾರು ನಾಲ್ಕು ಗಂಟೆಯ ಪ್ರಯಾಣದ ನಂತರ ನಮಗೆ ಸಿಕ್ಕ ವಿಶ್ರಾಂತಿ ಅದಾಗಿತ್ತು. ನಾವೆಲ್ಲಾ ಬ್ರೆಡ್, ಕೇಕ್, ಹಣ್ಣಿದ್ದ ನಮ್ಮ ಊಟವನ್ನು ತಿನ್ನುತ್ತಿದ್ದರೆ, ಸುಸ್ತಾಗಿದ್ದ ಆ ಹುಡುಗ ಹಾಗೆಯೆ ಬೆಂಚಿನ ಮೇಲೆ ಮಲಗಿದ್ದ. ನಮ್ಮೆಲ್ಲರ ಒತ್ತಾಯದ ಮೇರೆಗೆ ಅವನು ತಿನ್ನಲು ಶುರುಮಾಡಿದ. ನಿಧಾನವಾಗಿ ಬಂದ ನಾವಷ್ಟೆ ಅಲ್ಲಿ ಉಳಿದುಕೊಂಡೆವು, ಉಳಿದವರು ನಡೆಯಲು ಶುರುಮಾಡಿದರು. ಬಹಳ ಸುಸ್ತಾಗಿದ್ದ ಹುಡುಗ ನೋಡು ನೋಡುತ್ತಲೆ ತಿಂದಿದ್ದ ಎಲ್ಲವನ್ನು ವಾಂತಿ ಮಾಡಿಕೊಂಡ. ಎಷ್ಟು ಸುಸ್ತಾಗಿದ್ದ ಎಂದರೆ, ವಾಂತಿಮಾಡಿಕೊಳ್ಳುವಾಗ ಬಗ್ಗಲೂ ಅವನಲ್ಲಿ ಶಕ್ತಿ ಇರಲಿಲ್ಲ. ನನಗೆ ಮತ್ತು ನವ್ಯನಿಗೆ ಹೊರಡಲು ಹೇಳಿ ಗೈಡ್ ಮತ್ತು ಇಬ್ಬರು ಉಪಾಧ್ಯಾಯರು ಅಲ್ಲೆ ಉಳಿದುಕೊಂಡರು. ನಾವು ಅವನ ಬಗ್ಗೆ ಯೋಚನೆ ಮಾಡುತ್ತಾ ನಿಧಾನವಾಗಿ ನಡೆಯುತ್ತಿದ್ದೆವು. ಸಣ್ಣ ಸಣ್ಣ ಬೆಟ್ಟಗಳು ಹತ್ತಿ ಇಳಿಯುತ್ತಿದ್ದೆವು. ಬೆಟ್ಟಗಳ ಪಕ್ಕದಲ್ಲಿ ಕಡಿದಾದ ರಸ್ತೆಯಲ್ಲಿ ನಿಧಾನವಾಗಿ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಾ, ಪ್ರತೀ ತಿರುವಿನಲ್ಲೂ ನಾವು ಬಂದ ದಾರಿಯನ್ನು ನೋಡುತ್ತಿದ್ದೆವು. ಒಂದು ಕಡೆ ನಿಂತು ನೋಡುತ್ತಿದ್ದಾಗ ನಾಲ್ಕುಜನ ಬರುತ್ತಿರುವುದು ಕಾಣಿಸಿತು. ನಿಧಾನವಾಗಿಯಾದರೂ ಪರವಾಗಿಲ್ಲ, ಬರುತ್ತಿದ್ದಾರಲ್ಲ ಎನ್ನುವ ಸಮಾಧಾನದಿಂದ ನಾವು ಮುಂದುವರೆದೆವು.

ನಾವು ನಡೆಯುತ್ತಿದ್ದ ಜಾಗದಲ್ಲಿ ಕಾಡುಗಳು ಬಹಳ ದೂರದವರೆಗೂ ಕಾಣಿಸುತ್ತಿತ್ತು. ಮಿ. ಸಂಗೋಕ ನಮ್ಮನ್ನು ಸೇರಿಕೊಂಡರು. ನಮ್ಮ ನಡಿಗೆ ಬಹಳ ನಿಧಾನವಾಗಿದ್ದರಿಂದ ಅವರು ಬಂದಿದ್ದು ನಮಗೂ ಖುಷಿಯಾಯಿತು. ಮತ್ತೆ ಅವರು ನಮಗೆ ಅನೇಕ ವಿಷಯಗಳನ್ನು ವಿವರಿಸತೊಡಗಿದರು. ಎರಡು ತರಹದ ಕಾಡುಗಳನ್ನು ದಾಟಿ ಬಂದ ನಮಗೆ ಆಗ ಕಾಣಿಸುತ್ತಿದ್ದುದು ಆಫ್ರಿಕಾದ ಬಹಳ ಹೆಸರುವಾಸಿಯಾದ ಕಾಡು ಸವನ್ನಾ ಕಾಡುಗಳು. ಈ ಸವನ್ನಾ ಕಾಡುಗಳು ಬೇರೆ ಖಂಡಗಳಲ್ಲಿ ಅಷ್ಟಾಗಿ ಕಾಣಬರುವುದಿಲ್ಲ. ಸವನ್ನಾ ಕಾಡುಗಳನ್ನು ನೋಡಬೇಕಾದರೆ ಆಫ್ರಿಕಾಗೆ ಬರಬೇಕು. ಸುಮಾರು ನಾಲ್ಕು ಅಡಿ ಎತ್ತರ ಬೆಳೆಯುವ ಸಸ್ಯಗಳು ನೂರಾರು ಎಕರೆ ಕಾಡುಗಳನ್ನು ಆವರಿಕೊಂಡಿರುತ್ತವೆ. ಈ ರೀತಿಯ ಕಾಡುಗಳು ಸಮತಟ್ಟಾದ ಭೂಮಿಯನ್ನು ಹೊಂದಿರುತ್ತದೆ, ಹಾಗಾಗಿ ದೂರದಲ್ಲಿರುವ ವ್ಯಕ್ತಿಯೂ ಕೂಡ ಕಾಣಸಿಗುತ್ತಾರೆ. ಕಿಲಿಮಂಜಾರೊ ಬೆಟ್ಟದಲ್ಲಿ ಸವನ್ನಾ ಕಾಡುಗಳೂ ಕೂಡ ಕಾಣಸಿಗುವುದು ಒಂದು ವಿಶೇಷ. ಸವನ್ನ ಕಾಡುಗಳು ತಾನ್ಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸುತ್ತದೆ. ನೂರಾರು ಎಕರೆ ಜಾಗದಲ್ಲಿ, ನಾಲ್ಕು ಅಡಿ ಎತ್ತರದ ಸಸ್ಯಗಳ ಮಧ್ಯೆ ಸಿಂಹ, ಚಿರತೆಗಳು ಕುಳಿತು ತಮ್ಮ ಬೇಟೆಗೆ ಹೊಂಚು ಹಾಕುತ್ತವೆ. ಸವನ್ನಾ ಕಾಡುಗಳು ಪ್ರಾಣಿಗಳಿಗೆ ಬೇಟೆಯಾಡಲು ಹೇಳಿ ಮಾಡಿಸಿದ ಕಾಡು. ಕಿಲಿಮಂಜಾರೊ ಪರ್ವತದಲ್ಲಿ ಸವನ್ನಾ ಕಾಡಿದ್ದರೂ ಪ್ರಾಣಿಗಳು ಕಾಣಬರುವುದಿಲ್ಲ. ಕಾರಣ ಇಲ್ಲಿಯ ವಾತಾವರಣ, ಪ್ರಾಣಿಗಳು ಬದುಕಲು ಬೇಕಾದ ವಾತಾವರಣ ಇಲ್ಲ. ಬಹಳ ಚಳಿ ಕಂಡು ಬಂದ ಮರುಗಳಿಗೆಯಲ್ಲೆ ಬಹಳ ಬಿಸಿಲು ಬರುತ್ತದೆ. ಸುಧಾರಿಸಿಕೊಳ್ಳಲು ಅವುಗಳಿಗೆ ಎತ್ತರವಾದ ಮರಗಳು ಸಿಗುವುದಿಲ್ಲ. ಪ್ರಾಣಿಗಳಿಗೆ ಬೇಕಾದ ಹಾಗೆ ನೀರಿನ ಕುರುಹು ಹತ್ತಿರದಲ್ಲಿ ಇಲ್ಲ. ಈ ಎಲ್ಲಾ ಅನಾನುಕೂಲಗಳಿಂದ ಇಲ್ಲಿ ಯಾವ ಪ್ರಾಣಿಗಳೂ ಕಾಣಸಿಗುವುದಿಲ್ಲ. ಆದರೂ ಸವನ್ನಾ ಕಾಡು ನೋಡುವುದೇ ಒಂದು ಆನಂದ.

ಊಟ ಮುಗಿಸಿ ಮೂರು ಗಂಟೆಗಳು ನಡೆದ ನಂತರ ಕಂಡ ಒಂದು ಸಣ್ಣ ಬೆಟ್ಟ ನಮಗೆ ಸಂತೋಷದ ಸುದ್ದಿ ಕೊಟ್ಟಿತು. ಆ ಬೆಟ್ಟದ ತುದಿ ಹತ್ತಿದರೆ ಅಲ್ಲಿಂದ ನಾವು ಉಳಿಯುವ ಎರಡನೆ ಗುಡಿಸಲು ಕಾಣಿಸುತ್ತದೆ ಎಂದು ಹೇಳಿದರು. ಆ ಬೆಟ್ಟವನ್ನು ಹತ್ತುವಾಗ ನಮಗೆ ಒಂದು ವಿಚಿತ್ರವಾದ ಮರಗಳು ಕಾಣಿಸಿದವು. ಸಾಧಾರಣವಾಗಿ ಕ್ಯಾಕ್ಟಸ್ ಸಸ್ಯಗಳು ಮೂರು ಅಥವ ನಾಲ್ಕು ಅಡಿ ಎತ್ತರದಲ್ಲಿ ಕಾಣಿಸುತ್ತವೆ ಆದರೆ ನಾವು ಕಂಡ ಮರ ಕೆಳಗಿನಿಂದ ಮೇಲಿನವರೆಗೂ ಕೋಲಿನಂತಿದ್ದು ಮೇಲೆ ಕ್ಯಾಕ್ಟಸ್ ಗಿಡದಂತೆ ಇತ್ತು. ಆ ಮರದ ಹೆಸರು ಸ್ನೇಸಿಯ ಎಂದು ತಿಳಿಯಿತು. ನೂರಾರು ಸಂಖ್ಯೆಯಲ್ಲಿ ನಮಗೆ ಸ್ನೇಸಿಯ ಮರಗಳು ಕಾಣಿಸುತ್ತಿದ್ದವು. ಆ ಬೆಟ್ಟವನ್ನು ಹತ್ತಿ ನೋಡಿದರೆ ಒಂದು ಕಂದರ, ಅದರ ಹಿಂಬದಿಯಲ್ಲೆ ಕೆಲವು ಮರದ ಗುಡಿಸಲುಗಳು ಕಾಣಿಸಿದವು, ಅದೆ ಹೊರೊಂಬೊ ಗುಡಿಸಲು. ಅಲ್ಲಿ ನಮ್ಮ ಎರಡನೆ ದಿನ ವಿಶ್ರಾಂತಿ. ದಾರಿಯ ಮಧ್ಯದಲ್ಲಿ ಬಹಳ ಬಿಸಿಲು ಕಂಡಿದ್ದ ನಮಗೆ ಗುಡಿಸಲಿನ ಹತ್ತಿರ ಬರುತ್ತಿದ್ದಂತೆ ತಾಪಮಾನ ಇಳಿಯುತ್ತಾ ಬಂತು. ಸಮಯ ಸುಮಾರು ನಾಲ್ಕು ಗಂಟೆಯಾಗಿತ್ತು, ತಾಪಮಾನ ಒಂಬತ್ತು ಡಿಗ್ರಿ ಇತ್ತು. ಎಲ್ಲರೂ ಒಂದು ಕಡೆ ಕುಳಿತು ನಮ್ಮ ನಮ್ಮ ಬ್ಯಾಗುಗಳನ್ನು ತೆಗೆದುಕೊಂಡು ನಾವು ಮಲಗಲು ಕೊಟ್ಟಿದ್ದ ಬಹಳ ದೊಡ್ಡದಾದ ಕೋಣೆಗೆ ಹೋಗಿ ನಮ್ಮ ನಮ್ಮ ಹಾಸಿಗೆಯನ್ನು ಗೊತ್ತು ಮಾಡಿದೆವು. ಅಲ್ಲೆ ಕೆಳಗೆ ಇದ್ದ ಊಟದ ಕೋಣೆಗೆ ಹೋಗಿ ಬಿಸಿ ಬಿಸಿ ಕಾಫಿ ಮತ್ತು ಹುರಿದ ಕಡ್ಲೆಬೀಜವನ್ನು ತಿನ್ನುತ್ತಿದ್ದೆವು, ಆ ಸಮಯಕ್ಕೆ ಬಂದರು ಗೈಡ್, ಉಪನ್ಯಾಸಕರು ಮತ್ತು ಸುಸ್ತಾಗಿದ್ದ ಬಾಲಕ. ಎಲ್ಲರು ಅವನನ್ನು ಚಪ್ಪಳೆಯೊಂದಿಗೆ ಬರಮಾಡಿಕೊಂಡೆವು. ಅಷ್ಟು ಸುಸ್ತಾಗಿದ್ದರೂ ತಾನೇ ನಡೆದು ಬಂದಿದ್ದಕ್ಕಾಗಿ ಎಲ್ಲರೂ ಅವನ ಬೆನ್ನು ತಟ್ಟಿ ಪ್ರೊತ್ಸಾಹಿಸಿದರು. ಬಹಳ ಸುಸ್ತಾಗಿದ್ದರಿಂದ ಅವನನ್ನು ಮಲಗಲು ಕಳಿಸಿದರು.

ನಾವು ಕಾಫಿ ಕುಡಿದು, ಮತ್ತೆ ನಮ್ಮ ಕವಚಕುಂಡಲಗಳನ್ನೆಲ್ಲ ಧರಿಸಿ ಹೊರಗೆ ಬಂದರೆ ಮೋಡಗಳೆಲ್ಲ ನಮ್ಮ ಕಾಲಕೆಳಗೆ ಹರಡಿತ್ತು. ಬೆಟ್ಟದಿಂದ ಕೆಳಗೆ ಹಾರಿದರೆ ಮೋಡಗಳ ಮೇಲೆ ಹೋಗಿ ಬೀಳುತ್ತೇವೆ ಎನ್ನುವ ಭಾವನೆ ಬರುತ್ತಿತ್ತು. ತಾಪಮಾನ ನೋಡಿದರೆ ನಾಲ್ಕು ಡಿಗ್ರಿ, ಸಮಯ ಕೇವಲ ಏಳು ಗಂಟೆ. ಜೀವನದಲ್ಲಿ ಈ ಸಮಯಕ್ಕೆ ಆ ತಾಪಮಾನ ನೋಡಿರಲೆ ಇಲ್ಲ. ನಡುಗುತ್ತಾ ಮತ್ತೆ ಊಟದ ಕೋಣೆಗೆ ಹೋದರೆ ಊಟಕ್ಕೆ ಎಲ್ಲಾ ಸಿದ್ದವಾಗಿತ್ತು. ಒಬ್ಬೊಬ್ಬರಾಗೆ ಊಟಕ್ಕೆ ಬರಲು ಶುರುಮಾಡಿದರು, ಒಬ್ಬರಿಗೊಬ್ಬರು ಗುರುತೆ ಸಿಗದಹಾಗಿತ್ತು ಅವರವರ ಡ್ರೆಸ್. ಕೆಲವರ ಮುಖ ಮಾತ್ರ ಕಾಣಿಸುತ್ತಿದ್ದರೆ, ಕೆಲವರದು ಕಣ್ಣು ಬಾಯಿ ಮಾತ್ರ ಕಾಣಿಸುತ್ತಿತ್ತು. ದೇಹದ ಯಾವುದೇ ಬಾಗಕ್ಕೆ ಗಾಳಿ ಸೋಕದಂತೆ ಪ್ರತಿಯೊಬ್ಬರು ಕಾಳಜಿ ವಹಿಸಿದ್ದರು. ಊಟಕ್ಕೆ ಕೂತ ನಮಗೆ ಸಿಕ್ಕಿದ್ದು ಬಿಸಿ ಬಿಸಿ ತರಕಾರಿ ಸೂಪು, ನೂಡಲ್ಸ್ ಮತ್ತು ಬೇಯಿಸಿದ ತರಕಾರಿ ತುಂಡುಗಳು. ತಡೆಯಲಾಗದ ಚಳಿಯಲ್ಲಿ ಹಸಿದ ಹೊಟ್ಟೆ ತುಂಬಿಸಿ ಹೊರಡುವ ಮುಂಚೆ ನಾಳೆಯ ಸೂಚನೆ ಇತ್ತು. ಚಳಿಗೆ ಮತ್ತು ಎತ್ತರ ಪ್ರದೇಶದ ವಾತಾವರಣಕ್ಕೆ ಹೊಂದಿಕೊಳ್ಳಲು ನಾವಿದ್ದ ಜಾಗದಲ್ಲೆ ಇನ್ನೊಂದು ದಿನ ಇರುತ್ತೇವೆ ಎಂದು ತಿಳಿಯಿತು. ಅಲ್ಲೆ ಹತ್ತಿರವಿದ್ದ ಜೀಬ್ರಾ ರಾಕ್ಸ್ ಎನ್ನುವ ಜಾಗಕ್ಕೆ ನಾಳೆ ಬೆಳಿಗ್ಗೆ ಎಂಟುಗಂಟೆಗೆ ಹೊರಟು ಮಧ್ಯಾನ್ಹದವೇಳೆಗೆ ವಾಪಸ್ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತೇವೆ ಎಂದು ತಿಳಿಯಿತು. ಅದರಂತೆ ಎಲ್ಲರು ಮಲಗಿ ಬೆಳಿಗ್ಗೆ ಎಂಟುಗಂಟೆಗೆ ಸಿದ್ದವಾಗಿ ಊಟದ ಕೋಣೆಗೆ ಬಂದು ಸೇರಬೇಕೆಂದು ಎಲ್ಲರಿಗು ತಿಳಿಸಿದರು. ಜೀಬ್ರಾ ರಾಕ್ಸ್ ಏನು? ಬೆಟ್ಟದ ತುಂಬಾ ಜೀಬ್ರಾಗಳು ಸುತ್ತುವರೆದಿರುತ್ತವೆಯೆ? ಇಲ್ಲಾ ಬಂಡೆಗಳೆಲ್ಲಾ ಜೀಬ್ರಾಕಾರದಲ್ಲಿ ಇರುತ್ತವಾ? ತಿಳಿಯಲಿಲ್ಲ. ಅದರ ಬಗ್ಗೆ ಕೇಳೋಣವೆಂದರೆ, ಹೇಳುವವರು ಮಲಗಲು ಹೋಗಿದ್ದರು. ಎಲ್ಲರೂ ಒಬ್ಬೊರಾಗಿ ಹೋಗುತ್ತಿದ್ದರು, ಹೊರಗೆ ಹೋಗಿ ತಾಪಮಾನ ನೋಡುವ ಶಕ್ತಿ ನನ್ನಲ್ಲಿರಲಿಲ್ಲವಾದ್ದರಿಂದ ಹೋಗಿ ಮಲಗಿಕೊಂಡೆ.

(ಮುಂದುವರಿಯುತ್ತದೆ...)

« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 1)
« ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 2)
ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 4) »
ಕಿಲಿಮಂಜಾರೋ ಪರ್ವತಾಹೋಹಣ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X