ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಫ್ರಿಕಾದ ಕಿಲಿಮಾಂಜರೋ ಪರ್ವತಾರೋಹಣ

By Staff
|
Google Oneindia Kannada News

Mount Kilimanjaro in Africa
ಮರಗಟ್ಟಿಸುವ ಚಳಿ, ಕಾಡಿನಿಂದ ಕೂಡಿದ ಕಡಿದಾದ ಪ್ರದೇಶದಿಂದ ಆವೃತವಾಗಿರುವ ಆಫ್ರಿಕಾದ 'ಮೌಂಟ್ ಎವರೆಸ್ಟ್' ಕಿಲಿಮಾಂಜರೋವನ್ನು ಹತ್ತುವುದು ಸಾಹಸಿಗಳಿಗೆ ಮಾತ್ರ ಸಾಧ್ಯ. ಪೂರ್ವ ತಯಾರಿ ನಡೆಸದಿದ್ದರೆ ಹತ್ತುವುದು ಅಸಾಧ್ಯ. ಇಂಥ ಅಸಾಧ್ಯವನ್ನು ಸಾಧ್ಯವಾಗಿಸಿದ ಕನ್ನಡಿಗ ಪ್ರಶಾಂತ್ ಬೀಚಿ ತಮ್ಮ ಅನುಭವವನ್ನು ಹಂತಹಂತವಾಗಿ ದಟ್ಸ್ ಕನ್ನಡದ ಓದುಗರಿಗೆ ಇಲ್ಲಿ ತೆರೆದಿಟ್ಟಿದ್ದಾರೆ. ಈ ಸಾಹಸಗಾಥೆ ಸರಣಿರೂಪದಲ್ಲಿ ಪ್ರಕಟವಾಗಲಿದೆ.

***

ಆಫ್ರಿಕಾ ಖಂಡ ಸುಮ್ಮನೆ ಕುಳಿತಿರುವ ಅತೀ ಶ್ರೀಮಂತ ಬಡವ ಮತ್ತು ಬುದ್ದಿವಂತ ಪೆದ್ದು. ತನ್ನನ್ನು ತಾನು ತಿಳಿಯದಂತಹ ಒಂದು ಮಾಣಿಕ್ಯ. ಇಲ್ಲಿಯವರೆಗೂ ಆಫ್ರಿಕಾದ ಬಗ್ಗೆ ಎಷ್ಟು ತಿಳಿವಳಿಕೆ ಇದೆಯೋ ಅದಕ್ಕಿಂತ ಜಾಸ್ತಿ ತಿಳಿಯುವುದಿದೆ ಮತ್ತು ಹುಡುಕುವುದಿದೆ. ಭಾರತವನ್ನು ದೋಚಿದ ಹಾಗೆ ಆಫ್ರಿಕಾವನ್ನೂ ದೋಚಿದ ಮಹನೀಯರಲ್ಲಿ ಪಾಶ್ಚಿಮಾತ್ಯ ದೇಶಗಳೆ ಮುಂದಿವೆ. ಅವರು ದೋಚಲಾಗದೆ ಬಿಟ್ಟ ಜಾಗ ಈಗಲೂ ಬೇರೆ ದೇಶಗಳು ದೋಚುತ್ತಿವೆ. ಇಲ್ಲಿರುವ ನೈಸರ್ಗಿಕ ಸಂಪನ್ಮೂಲ ಬೇರಾವ ಖಂಡದಲ್ಲೂ ಸಿಗದು. ಇಂತಹ ಆಫ್ರಿಕಾದಲ್ಲಿ ಇರುವ ದೇಶ ತಾನ್ಜಾನಿಯ. ತಾನ್ಜಾನಿಯ ಪೂರ್ವ ಆಫ್ರಿಕಾದ ಒಂದು ಸುಂದರ ದೇಶ. ನೈಸರ್ಗಿಕ ಸಂಪನ್ಮೂಲವೆ ಈ ದೇಶದ ಶಕ್ತಿ. ಇಲ್ಲಿ ಸಿಗುವ ತಾನ್ಜನೈಟ್ ಹರಳು ಪ್ರಪಂಚದ ಮೂಲೆ ಮೂಲೆಗಳಿಗೂ ಸಾಗುತ್ತವೆ. ಬೇರಲ್ಲೂ ಸಿಗದ ಈ ಹರಳಿಗೆ ವಜ್ರದಷ್ಟೆ ಬೆಲೆ ಇದೆ. ಇದು ಬಿಟ್ಟರೆ ಈ ದೇಶದಲ್ಲಿರುವ ಗೋರೊಂಗೋರೊ ರಾಷ್ಟ್ರೀಯ ಉದ್ಯಾನವನ ಪ್ರಪಂಚದ ಒಂದು ನೈಸರ್ಗಿಕ ಅದ್ಭುತ ಎನ್ನುವುದು ಬಹಳ ಜನರಿಗೆ ತಿಳಿದಿಲ್ಲ. ಈ ದೇಶದ ಕಿರೀಟಕ್ಕೆ ಮತ್ತೊಂದು ಗರಿ ಎಂದರೆ ಕಿಲಿಮಂಜಾರೊ ಪರ್ವತ.

ಕಿಲಿಮಂಜಾರೊ ಪರ್ವತ ಆಫ್ರಿಕಾದ ಬಹಳ ಎತ್ತರದ ಪರ್ವತ. ಇದು ಸ್ವಂತ ಶಕ್ತಿಯ ಮೇಲೆ ನಿಂತಿರುವ ಪ್ರಪಂಚದ ಅತೀ ಎತ್ತರದ ಪರ್ವತ ಕೂಡ. ಪ್ರಪಂಚದ ಎಲ್ಲಾ ಜ್ವಾಲಮುಖಿ ಪರ್ವತಗಳಲ್ಲಿ ಅತೀ ವಿಶಾಲವಾಗಿರುವ ಮತ್ತು ಎತ್ತರವಿರುವ ಪರ್ವತ ಎನ್ನುವ ಪ್ರಶಂಸೆ ಇದಕ್ಕೆ ಸಲ್ಲುತ್ತದೆ. ಇಷ್ಟೆಲ್ಲಾ ವಿಶೇಷ ಇದ್ದರೂ ತನ್ನ ಪ್ರಶಂಸೆ ಅಹಂಕಾರವಾಗದಿರಲಿ ಎಂದು ತಲೆಯ ಮೇಲೆ ಯಾವಾಗಲೂ ಮಂಜನ್ನು ಇಟ್ಟುಕೊಂಡಿದೆ. ವಿಜ್ಞಾನಿಗಳ ಪ್ರಕಾರ ಇದರ ತಲೆಯ ಮೇಲಿರುವ ಮಂಜು ಕರಗುತ್ತಿದೆ, ಹೀಗೆ ಸಾಗಿದರೆ ಇನ್ನು ಇಪ್ಪತ್ತೈದು ವರ್ಷಗಳಲ್ಲಿ ನಾವು ಈ ಪರ್ವತದ ಮೇಲೆ ಮಂಜನ್ನು ಕಾಣಲಾಗುವುದಿಲ್ಲ. ಇದಕ್ಕೆಲ್ಲಾ ಕಾರಣ ವಿಶ್ವದಾದ್ಯಂತ ಹೆಚ್ಚುತ್ತಿರುವ ಉಷ್ಣತೆ. ಈ ಪರ್ವತದ ಒಂದು ವಿಶೇಷವೆ ಈ ಮಂಜುಗಡ್ಡೆ, ಇದೇ ಇಲ್ಲ ಎಂದರೆ ಈ ಪರ್ವತ ಹತ್ತುವುದರಲ್ಲಿ ಅಂತಹ ಮಜಾ ಇರುವುದಿಲ್ಲ. ನಾವು ತಾನ್ಜಾನಿಯಾದಲ್ಲಿ ಇದ್ದು ಸುಮಾರು ನಾಲ್ಕು ವರೆ ವರ್ಷವಾಯಿತು, ಆದರೂ ಈ ಪರ್ವತ ಹತ್ತಲಾಗುತ್ತಿಲ್ಲವಲ್ಲ ಎನ್ನುವ ಕೊರಗು ಕಾಡುತ್ತಿತ್ತು, ಕಾರಣ ಬಹಳಷ್ಟು. ಮೊದಲನೆಯಾದಾಗಿ, ಇದನ್ನು ಬೇರೆ ದೇಶದವರು ಹತ್ತಬೇಕಾದರೆ ಸುಮಾರು ಅರವತ್ತು ಸಾವಿರದಿಂದ ಎಪ್ಪತ್ತು ಸಾವಿರ ರೂ ಖರ್ಚು ತಗಲುತ್ತದೆ. ಎರಡನೆಯದು ಸಮಯ, ಸುಮಾರು ಆರು ದಿನಗಳು ಹತ್ತಿ ಇಳಿಯಲು ಬೇಕು, ನಂತರ ಸುಧಾರಿಸಿಕೊಳ್ಳಲು ಮತ್ತೆ ಆರು ದಿನ.

ಉಳಿದ ತೊಂದರೆಗಳಲ್ಲಿ, ಮೂರನೆಯದು ಆರೋಗ್ಯ. ಆರು ದಿನಗಳಲ್ಲಿ ಸುಮಾರು ಅರವತ್ತು ಕಿಲೋ ಮೀಟರ್ ನೆಡೆಯಬೇಕು. ಅದೇನು ಸಮತಟ್ಟಾದ ನೆಲವಲ್ಲ, ಬೆಟ್ಟ, ಕಾಡು, ಮರುಭೂಮಿ, ಮಂಜು ಈ ರೀತಿ ಕಷ್ಟಕರವಾದ ಮಾರ್ಗಗಳು. ತಾಪಮಾನ -14 ಡಿಗ್ರಿಯಲ್ಲಿ ಮತ್ತು ಸಮುದ್ರ ಮಟ್ಟದಿಂದ ಆರು ಸಾವಿರ ಮೀಟರ್ ಎತ್ತರದಲ್ಲಿ ನೆಡೆಯುವುದು ಸುಮ್ಮನೆ ಮಾತಲ್ಲ. ಬೆಟ್ಟ ಹತ್ತುವಾಗ ಬಹಳ ಜೋರಾಗಿ ಬೀಸುವ ತಣ್ಣನೆ ಗಾಳಿಗೆ ಐದು ಜೊತೆ ಬಟ್ಟೆ ಅದರ ಮೇಲಿನ ನೀರು ನಿರೋಧಕ ಜಾಕೆಟ್ ಕೂಡ ತಡೆಯುವುದಿಲ್ಲ. ಗಾಳಿಏನೊ ಬೇಕಾದಷ್ಟಿದೆ ಆದರೆ ಅದರಲ್ಲಿ ಆಮ್ಲಜನಕ ಬಹಳ ಕಡಿಮೆ. ಉಸಿರಾಡುವುದೆ ಕಷ್ಟವಾಗಿಬಿಡುತ್ತದೆ. ಪರ್ವತದ ತುದಿ ಮುಟ್ಟುವ ದಿನ ಸುಮಾರು ಹತ್ತೊಂಬತ್ತು ಗಂಟೆಗಳ ಕಾಲ ನೆಡೆಯಬೇಕು, ಸುಸ್ತಾಗುತ್ತದೆ ಎಂದು ಪರ್ವತದ ಮೇಲೆ ಎಲ್ಲಾದರೂ ಮಲಗಿಕೊಂಡರೆ ಅಥವ ಸಣ್ಣಗೆ ಹಾಗೆ ನಿದ್ರೆಗೆ ಜಾರಿದರೆ ನಮಗೆ ಗೊತ್ತಿಲ್ಲದೆ ನಮ್ಮ ಜೀವ ಹಾರಿ ಹೋಗಿರುತ್ತದೆ. ಮಲಗಿದಾಗ ಚಳಿಗೆ ನಮ್ಮ ರಕ್ತದ ಚಲನೆ ಅಷ್ಟಾಗಿ ಸರಿಯಾಗಿರುವುದಿಲ್ಲ, ಆಮ್ಲಜನಕ ಕಡಿಮೆ ಇರುವುದರಿಂದ ಉಸಿರಾಟಕ್ಕೆ ತೊಂದರೆ ಆಗಿ, ನಿರಾಯಾಸವಾಗಿ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಪರ್ವತದ ತುದಿ ಮುಟ್ಟುವ ದಿನ ಎಷ್ಟು ಸುಸ್ತಾಗಿರುತ್ತದೆ ಎಂದರೆ -15 ಡಿಗ್ರಿ ಚಳಿಯಲ್ಲು ನಿದ್ದೆ ಮಾಡಬಹುದಾದ ಸುಸ್ತು.

ಈ ಪರ್ವತ ಹತ್ತುವುದು ಸುಲಭದ ಮಾತಲ್ಲ ಎನ್ನುವುದು ನಮಗೆಲ್ಲಾ ತಿಳಿದಿತ್ತು. ಆದರೂ ಸ್ವಲ್ಪ ಸ್ವಲ್ಪ ದುಡ್ಡನ್ನು ಇದಕ್ಕಾಗಿಯೆ ಎಂದು ಕೂಡಿಸಿಡುತ್ತಾ ಬಂದೆವು. ನಮ್ಮ ಅದೃಷ್ಟ ಎನ್ನುವಂತೆ ನನ್ನ ಮಡದಿ ಕೆಲಸ ಮಾಡುತ್ತಿದ್ದ ಶಾಲೆಯಿಂದ ಮಕ್ಕಳನ್ನು ಈ ಪರ್ವತ ಹತ್ತಲು ಕರೆದುಕೊಂಡು ಹೋಗುತ್ತಾರೆ ಎಂದು ವಿಷಯ ತಿಳಿಯಿತು. ನನ್ನ ಹೆಂಡತಿ ಹೇಗೋ ಉಪಾಯ ಮಾಡಿ ನನ್ನನ್ನು ಅವರೊಳಗೆ ಸೆರಿಕೊಳ್ಳಲು ಶಾಲೆಯನ್ನು ಒಪ್ಪಿಸಿದಳು. ಸುಮಾರು ಎಪ್ಪತ್ತು ಸಾವಿರ ರೂಪಾಯಿಯ ಈ ಪ್ರಯಾಣ ನಮಗೆ ಶಾಲೆ ಕಡೆಯಿಂದ ಕೇವಲ ಇಪ್ಪತ್ತು ಸಾವಿರಕ್ಕೆ ಮುಗಿಯಿತು, ಹಣದ ತೊಂದರೆ ನಿವಾರಣೆಯಾಯಿತು. ನಾನು ನನ್ನ ಕಂಪೆನಿಯಲ್ಲಿ ವಿಷಯ ತಿಳಿಸಿದಾಗ ಹೇಗೋ ಅಲ್ಲಿಯೂ ಕೂಡ ಒಂದು ವಾರದ ರಜೆ ಸಿಕ್ಕಿತು. ನಮ್ಮ ಬಾಸ್, ನನ್ನನ್ನು ನೋಡಿ ನೀನು ಹತ್ತಿದರೆ ನಾನು ರಜೆ ಕೊಟ್ಟಿದ್ದಕ್ಕೂ ಸಾರ್ಥಕ ಆಗುತ್ತದೆ, ಪ್ರಯತ್ನ ಮಾಡು. ಇದುವರೆಗೂ ನಮ್ಮ ಕಂಪನಿಯಿಂದ ಯಾರೂ ಆ ಪರ್ವತವನ್ನು ಹತ್ತಿಲ್ಲ. ಎಂದು ಹೇಳಿ ಬೇರೇನು ಯೋಚಿಸದೆ ರಜೆಗೆ ಒಪ್ಪಿದರು. ಈಗ ಇರುವ ಪ್ರಶ್ನೆ ನಮ್ಮ ಆರೋಗ್ಯ ಮತ್ತು ಅದಕ್ಕೆ ಬೇಕಾದ ತಯಾರಿ. ತಯಾರಿ ಇಲ್ಲದೆ ಕಿಲಿಮಂಜಾರೋ ಹತ್ತುವುದು, ಕೈ ಕಾಲು ಇಲ್ಲದವ ಈಜಾಡಲು ನೀರಿಗೆ ದುಮುಕಿದ ಹಾಗೆ. ಒಂದೆ ವಾಕ್ಯದಲ್ಲಿ ಹೇಳಬೇಕಾದರೆ ಅಸಾಧ್ಯ.

ಈಗ ನಮ್ಮ ಮುಂದಿದ್ದ ಕೆಲಸಗಳು ಎರಡು. ಒಂದು ಪರ್ವತಾರೋಹಣಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಳ್ಳುವುದು ಅಥವ ಬಾಡಿಗೆಗೆ ತೆಗೆದುಕೊಳ್ಳುವುದು. ಎರಡನೆಯದು ಅಭ್ಯಾಸ. ನಾನಿದ್ದ ಊರು ಅರುಷ. ಇದು ಒಂದು ಹಿಲ್ ಸ್ಟೇಷನ್, ಇದರ ಸುತ್ತಾ ಸಣ್ಣ ಸಣ್ಣ ಬೆಟ್ಟಗಳು ಬಹಳಷ್ಟಿದೆ. ಇವುಗಳಲ್ಲೆಲ್ಲ ಎತ್ತರವಾದ ಒಂದು ಬೆಟ್ಟ ಎಂದರೆ ಓಲ್ ಗಿಲಾಯಿ. ಕಿಲಿಮಂಜಾರೊ ಹತ್ತುವ ಮೊದಲು ಕಡಿಮೆ ಎಂದರೂ ಮೂರು ಸಾರಿ ಈ ಬೆಟ್ಟವನ್ನು ಹತ್ತಿ ಇಳಿಯಬೇಕು ಎಂದು ಶಾಲೆಯ ಕಡೆಯಿಂದ ತಿಳಿಸಿದ್ದರು. ಅರುಷದಿಂದ ಹನ್ನೆರಡು ಕಿಲೋಮೀಟರ್ ದೂರದಲ್ಲಿ ಡುಲೂಟಿ ಎನ್ನುವ ಒಂದು ಸರೋವರ ಇದೆ, ಅಲ್ಲಿಗೆ ಎರಡು ಸರಿಯಾದರೂ ನೆಡೆದು ಹೋಗಿ ಬರಬೇಕು ಎಂದು ತಿಳಿಸಿದ್ದರು. ಪರ್ವತ ಹತ್ತುವ ಎರಡು ತಿಂಗಳ ಮೊದಲು ಶುರುವಾಯಿತು ನಮ್ಮ ಅಭ್ಯಾಸ. ಮೊದಲ ಸಾರಿ ಓಲ್ ಗಿಲಾಯಿ ಬೆಟ್ಟ ಹತ್ತಲು ಹೋದೆವು, ಮನೆಯಿಂದ ಬೆಳಿಗ್ಗೆ ಎಂಟುಗಂಟೆಗೆ ಎಲ್ಲಾ ತಯಾರಿಯೊಂದೆಗೆ ಹೊರಟ ನಾವು ಆ ಬೆಟ್ಟದ ತಳ ತಲುಪಿದಾಗ ಹನ್ನೊಂದು ಗಂಟೆ. ಮೂರು ತಾಸುಗಳ ನಡಿಗೆ ನಮ್ಮನ್ನು ಸುಸ್ತಾಗಿಸಿತ್ತು ಆದರೆ ನಾವು ಬೆಟ್ಟ ಹತ್ತುವುದು ಇನ್ನೂ ಶುರುವಾಗಿರಲೆ ಇಲ್ಲ. ಸ್ವಲ್ಪ ದಣಿವಾರಿಸಿಕೊಂಡು ಬೆಟ್ಟ ಹತ್ತಲು ಶುರುಮಾಡಿದೆವು. ನಿಸರ್ಗ ಎಷ್ಟು ಸುಂದರ ಹಾಗು ಪ್ರತಿಯೊಂದು ತಿರುವಿನಲ್ಲೂ ಒಂದೊಂದು ಹೊಸತನ ನಮ್ಮನ್ನು ಮೇಲೇರಲು ಪ್ರೋತ್ಸಾಹಿಸುತ್ತಿತ್ತು. ಸುಮಾರು ಇಪ್ಪತ್ತು ಜನರ ನಮ್ಮ ಗುಂಪು ನಿಧಾನವಾಗಿ ಮೇಲೇರುತ್ತಿತ್ತು. ಸುಸ್ತಾಗಿ ಅಲ್ಲಲ್ಲೆ ಕೂರುವರ ಸಂಖ್ಯೆ ಜಾಸ್ತಿಯಾಗುತ್ತಿತ್ತು. ಸುಸ್ತಾದಾಗ ಯಾರೂ ಕುಳಿತುಕೊಳ್ಳಬಾರದು, ನಿಂತೇ ಸುಧಾರಿಸಿಕೊಳ್ಳಬೇಕು ಎಂದು ಹೇಳಿದ್ದ ನಮ್ಮ ಮುಖ್ಯಸ್ಥರ ಮಾತು ಮಾತಾಗಿಯೆ ಉಳಿಯಿತು. ನಡೆಯುತ್ತಾ ದಾರಿ ಸಣ್ಣದಾಯಿತು, ಮೊದಲು ಮೂರು ಜನ ಜೊತೆಗೆ ಹೋಗಬಹುದಾಗಿದ್ದ ರಸ್ತೆ ಈಗ ಒಬ್ಬರ ಹಿಂದೆ ಒಬ್ಬರು ಹೋಗುವಷ್ಟು ಕಿರಿದಾಗಿತ್ತು. ನಮ್ಮ ಪಕ್ಕದಲ್ಲಿದ್ದ ಗಿಡಗಳನ್ನು ಹಿಡಿದು ನಿಧಾನವಾಗಿ ಹತ್ತುತ್ತಾ ಹೋದೆವು. ಅಲ್ಲೆ ಇದ್ದ ದೊಡ್ಡ ಮರ ತೋರಿಸಿ, ಆ ಮರ ದಾಟಿದರೆ ಈ ಬೆಟ್ಟ ಹತ್ತಿದಂತೆ, ಎಂದು ಯಾರೋ ಹೇಳಿದರು. ಇನ್ನೇನು ಇಲ್ಲೆ ಇದೆ ಮರ ಎಂದು ಓಡಿ ಹೋದ ನಮಗೆ, ಮರ ಸಿಕ್ಕಿದ್ದು ನಲವತ್ತು ನಿಮಿಷಗಳ ನಂತರ. ಬೆಟ್ಟಗಳೆ ಹಾಗೆ ಇಲ್ಲೇ ಇದೆ ಎನ್ನುವ ವಸ್ತು ಎಲ್ಲೋ ಇರುತ್ತದೆ. ಬೆಟ್ಟದ ತುದಿ ತಲುಪಿ ವಾಪಸ್ ಮನೆಗೆ ಹೋದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಕೇವಲ ಬೆಟ್ಟ ಹತ್ತಲು ಹೈರಾಣೆಯಾದ ನಮಗೆ ಕಿಲಿಮಂಜಾರೊ ಪರ್ವತ ಏರಲು ಸಾಧ್ಯವೆ?

ಅದಾದ ಆರು ದಿನಗಳ ನಂತರ ಅರುಷದಿಂದ ಡುಲುಟಿ ಸರೋವರದ ತನಕ ನೆಡೆದು ವಾಪಸ್ ಬರುವ ಅಭ್ಯಾಸ. ಬೆಟ್ಟ ಏರುಮುಖವಾಗಿತ್ತು, ಹಾಗಾಗಿ ಸುಸ್ತಾಯಿತು, ಇವತ್ತು ಸಮತಟ್ಟದ ನೆಲ ಹಾಗಾಗಿ ತೊಂದರೆಯಾಗುವುದಿಲ್ಲ ಎಂದು ಹೊರಟೆವು. ಬೆಳಿಗ್ಗೆ ಎಂಟು ಗಂಟೆಗೆ ಶುರುಮಾಡಿದ ಪ್ರಯಾಣ, ನಿಧಾನವಾಗಿ ಮುಂದುವರೆಯುತ್ತಾ ಹೋಯಿತು. ಸಣ್ಣದಾಗಿ ಮಳೆ ಹನಿಗಳು ನಮಗೆ ನೀರನ್ನು ಚಿಮುಕಿಸುತ್ತಿದ್ದವು. ನಡೆಯುತ್ತಾ ನಡೆಯುತ್ತಾ ಮಳೆಯ ಹನಿಗಳ ಮಧ್ಯೆ ಬೆವರು ಸುರಿಯಲಾರಂಭಿಸಿ ಮಳೆಯಲ್ಲೂ ನಮಗೆ ಚಳಿ ಕಾಣಿಸದಾಯಿತು. ಅಂತೂ ಸರೋವರ ತಲುಪಿದಾಗ ಕೂತರೆ ಸಾಕು ಅನ್ನಿಸತೊಡಗಿತ್ತು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮತ್ತೆ ಹಿಂತಿರುಗಲು ಆದೇಶ ಬಂದಿತು. ಸುಮಾರು ಹನ್ನೆರಡು ಕಿಲೋ ಮೀಟರು ನಡೆದು ಮತ್ತಷ್ಟೇ ದೂರ ವಾಪಸ್ ಹೋಗುವುದು ನಮಗೆ ಬಹಳ ಕಷ್ಟವೆನಿಸಿತು. ಸುಮಾರು ನಾಲ್ಕು ಕಿಲೋ ಮೀಟರ ನೆಡೆದು ಅಲ್ಲಿಂದ ಬಸ್ಸಿನಲ್ಲಿ ಮನೆಗೆ ಹೋದೆವು. ಮನೆ ತಲುಪಿದಾಗ ಮೂರು ಗಂಟೆ. ಈ ಸಾರಿ ಅಷ್ಟೊಂದು ಸುಸ್ತಾಗುವುದಿಲ್ಲ ಎಂದು ಊಹಿಸಿದ್ದ ನಮಗೆ ಹಿಂದಿಗಿಂತ ಸುಸ್ತಾದ ಅನುಭವ. ಇದಾದ ಒಂದು ವಾರದ ನಂತರ, ನಾನು ಕೆಲವು ಹುಡುಗರೊಂದಿಗೆ ಸೈಕಲ್ ಮೇಲೆ ಅದೇ ಹನ್ನೆರಡು ಕಿಲೋಮೀಟರ್ ಹೋಗಿ ಬಂದೆ.

ಹೀಗೆ ನಮ್ಮ ಅಭ್ಯಾಸ ವಾರದಿಂದ ವಾರಕ್ಕೆ ಕಠಿಣಮಾಡಿಕೊಳ್ಳುತ್ತ ಬಂದೆವು. ಅಭ್ಯಾಸದ ಜೊತೆಗೆ ನಾವೂ ಕೂಡ ಬಲಿಷ್ಠರಾಗುತ್ತ ಹೋದೆವು. ಇಷ್ಟೆಲ್ಲಾ ಅಭ್ಯಾಸ ಮಾಡಿದರು, ಇದು ಏನೂ ಸಾಲದು ಎಂದು ಹೇಳುತ್ತಿದ್ದರು ಶಾಲೆಯ ಟ್ರೈನರ್. ಇನ್ನೇನು ನಾವು ಕಿಲಿಮಂಜಾರೊಗೆ ಹೋಗುವ ದಿನ ಹತ್ತಿರ ಬರುತ್ತಿತ್ತು. ಪ್ರತಿಯೊಬ್ಬರೂ ಎರಡೆರಡು ಜೊತೆ ಶೂ, ಹತು ಜೊತೆ ಕಾಲು ಚೀಲ, ಆರು ಜೊತೆ ಶರ್ಟ್ ಮತ್ತು ಪ್ಯಾಂಟ್, ಉಣ್ಣೆಯ ಬಟ್ಟೆ ಎರಡು ಜೊತೆ, ನೀರು ನಿರೋಧಕ ಬಟ್ಟೆಗಳು ಒಂದು ಜೊತೆ, ಕೈಗೆ ಗ್ಲೌಸ್ ಮೂರು ಜೊತೆ ಅದರ ಮೇಲೆ ನೀರು ಹೋಗದಂತೆ ಪ್ಲಾಷ್ಟಿಕ್ ಗ್ಲೌಸ್ ಒಂದು ಜೊತೆ, ಮಲಗಲು ಸ್ಲೀಪಿಂಗ್ ಬ್ಯಾಗ್, ಕಣ್ಣು ಮತ್ತು ಬಾಯಿ ಮಾತ್ರ ಕಾಣುವಂತಹ ಟೋಪಿಗಳು ಮೂರು, ತಲೆಗೆ ಬಿಸಿಲು ಬೀಳದಿರುವಂತಹ ಟೋಪಿ ಒಂದು. ಒಳಗೆ ಹಾಕುವ ಬಟ್ಟೆಗಳು ಆರು ಜೊತೆ, ತಿನ್ನಲು ಚಾಕ್‌ಲೆಟ್ಸ್, ಬಿಸ್ಕಟ್ಸ್, ಕುಡಿಯಲು ಶಕ್ತಿವರ್ಧಕ ಪಾನೀಯಗಳು, ಗ್ಲುಕೋಸ್. ನಡೆಯಲು ಸಹಾಯವಾಗುವಂತಹ ಕೋಲುಗಳು, ತಲೆಗೆ ಸಿಕ್ಕಿಸ್ಕೊಳ್ಳುವ ಟಾರ್ಚ್, ವಾಂತಿ ಬರದ ಹಾಗೆ ತಡೆಯುವ ಮಾತ್ರೆಗಳು, ಜ್ವರ, ತಲೆನೋವಿನ ಮಾತ್ರೆಗಳು, ಕಾಲು, ಮೈಕೈ ನೋವಿಗೆ ಮುಲಾಮು. ಶೀತ ಜಾಸ್ತಿಯಾದರೆ ಗಂಟಲಿಗೆ ಬ್ರಾಂಡಿ ಇಳಿಸಿಕೊಳ್ಳಲು ಸಣ್ಣದಾದ ಬಾಟಲ್. ಹೀಗೆ ಎಲ್ಲವನ್ನೂ ಮರೆಯದೆ ಸಿದ್ದಮಾಡಿಕೊಂಡೆವು.

ಅಂತೂ ಇಂತೂ ನಾವು ಹೊರಡುವ ದಿನ ಬಂದೆಬಿಟ್ಟಿತು. ಎಲ್ಲವನ್ನೂ ಸರಿಯಾಗಿ ಜೋಡಿಸಿಕೊಂಡು, ಮತ್ತೊಮ್ಮೆ ಯೋಚಿಸಿಕೊಳ್ಳುತ್ತಾ ಮಲಗಿಕೊಂಡೆವು. ಮಾರನೆ ದಿನ ಬೆಳಿಗ್ಗೆ ಬಸ್ ಹತ್ತಿ ಮೋಶಿ ಎನ್ನುವ ಎಪ್ಪತ್ತು ಕಿಲೋ ಮೀಟರ್ ದೂರ ಇರುವ ಉರನ್ನು ತಲುಪಿ ಅಲ್ಲಿಂದ ಇಪ್ಪತ್ತೈದು ಕಿಲೋಮೀಟರ ದೂರದಲ್ಲಿರುವ ಕಿಲಿಮಂಜಾರೊ ತಳಕ್ಕೆ ಹೋಗಬೇಕಿತ್ತು. ಅಲ್ಲಿಂದ ಶುರುವಾಗುವ ನಮ್ಮ ಪ್ರಯಾಸದ ಪ್ರಯಾಣ ಆರು ದಿನದವರೆಗೂ ಇತ್ತು. ಎಲ್ಲವನ್ನು ಯೋಚಿಸುತ್ತ ಯಾವಾಗ ನಿದ್ರೆಗೆ ಜಾರಿದೆವೋ ತಿಳಿಯಲಿಲ್ಲ.

(ಸಾಹಸಗಾಥೆ ಮುಂದುವರಿಯಲಿದೆ...)

ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 2) »ಆಫ್ರಿಕಾದ ಕಿಲಿಮಂಜಾರೋ ಪರ್ವತಾರೋಹಣ (ಭಾಗ 2) »

ಕಿಲಿಮಂಜಾರೋ ಪರ್ವತಾಹೋಹಣ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X