BMTC ನೌಕರರ ಖಾತೆಗೆ 11 ತಿಂಗಳ ಬದಲಾಗಿ, 26 ತಿಂಗಳ ಹಿಂಬಾಕಿ ಹಣ ಜಮೆ, ಮುಂದೇನಾಯ್ತು?
ಬೆಂಗಳೂರು: ಮೇ 20ರಂದು ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ನಡೆಯಲಿದೆ. ಇದಕ್ಕು ಮುನ್ನವೇ ಬಿಎಂಟಿಸಿ ನೌಕರರ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ ಬಿಡುಗಡೆ ಆಗಿದೆ. ಈ ವೇಳೆ ಹಣ ಅರ್ಹ ನೌಕರರಿಗೆ ಜಮೆ ಆಗುವ ಮುನ್ನ ತಾಂತ್ರಿಕ ಸಮಸ್ಯೆ ಕಂಡು ಬಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಚರ್ಚೆ ಆಗುತ್ತಿದೆ. ಅದಕ್ಕೀಗ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ.
ಯಶವಂತಪುರ ಘಟಕ-26ರಲ್ಲಿ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ ಪಾವತಿ ವೇಳೆ ನೌಕರರಿಗೆ 26 ತಿಂಗಳ ಪೂರ್ಣ ಹಿಂಬಾಕಿ ಮೊತ್ತ ಜಮೆ ಆಗಿದೆ. ಬಿಲ್ಲಿಂಗ್ ಕ್ಲರ್ಕ್ ಅವರಿಂದ ಉಂಟಾದ ಅನಪೇಕ್ಷಿತ ಡೇಟಾ ಎಂಟ್ರಿ ದೋಷದಿಂದ ಸುಮಾರು 100 ನಿರ್ವಾಹಕರ ಖಾತೆಗಳಿಗೆ ಮೊದಲ ಕಂತಿನ 11 ತಿಂಗಳ ಹಿಂಬಾಕಿ ಮೊತ್ತದ ಬದಲಾಗಿ 26 ತಿಂಗಳ ಪೂರ್ಣ ಹಿಂಬಾಕಿ ಮೊತ್ತ ಜಮೆಯಾಗಿರುತ್ತದೆ.

ಇತರೆ ಸಿಬ್ಬಂದಿಗಳಾದ ಚಾಲಕರು, ಚಾಲಕ-ನಿರ್ವಾಹಕರು, ಮೆಕ್ಯಾನಿಕ್‌ಗಳು ಹಾಗೂ ಆಡಳಿತ ಸಿಬ್ಬಂದಿಗೆ ನಿಯಮಾನುಸಾರ 11 ತಿಂಗಳ ಮೊದಲ ಕಂತಿನ ಮೊತ್ತವೇ ಜಮೆಯಾಗಿರುತ್ತದೆ. ಇದರಿಂದ ಒಂದಷ್ಟು ಗೊಂದಲ, ಸಮಸ್ಯೆಗಳು ಉಂಟಾಗಿದೆ.
ಸದರಿ ಈ ವ್ಯತ್ಯಾಸ ಗಮನಕ್ಕೆ ಬಂದ ತಕ್ಷಣ, ಘಟಕ ವ್ಯವಸ್ಥಾಪಕರು ಕೇಂದ್ರ ಕಚೇರಿಗೆ ಮಾಹಿತಿ ನೀಡಿ ತುರ್ತು ಕ್ರಮ ಕೈಗೊಂಡಿದ್ದಾರೆ. ಸಂಬಂಧಿತ ನಿರ್ವಾಹಕರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ಪಾರದರ್ಶಕವಾಗಿ ವಿವರಿಸಲಾಗಿದೆ. ಹೆಚ್ಚುವರಿಯಾಗಿ ಜಮೆಯಾಗಿರುವ ಮೊತ್ತವನ್ನು ಹಿಂತಿರುಗಿಸಲು ಸಹಕರಿಸುವಂತೆ ಕೋರಿದ್ದಾರೆ.
ನೌಕರರಿಂದ ಬಿಎಂಟಿಸಿ ಘಟಕಕ್ಕೆ ಹಣ ವಾಪಾಸ್
ಹೆಚ್ಚುವರಿ ಮೊತ್ತ ಮರುಪಾವತಿ ಪ್ರಕ್ರಿಯೆಯನ್ನು ಇಲಾಖೆಗೆ ಸಂಬಂಧಿಸಿದ ಚೌಡೇಶ್ವರಿ ದೇವಸ್ಥಾನ ಬಸ್ ನಿಲ್ದಾಣ ಕಚೇರಿಯ ಕ್ಯೂಆರ್ ಸ್ಕ್ಯಾನರ್/ಖಾತೆಯ ಮೂಲಕ ಸ್ವೀಕರಿಸಲಾಗುತ್ತಿದೆ. ಮರುಪಾವತಿಸಿದ ಪ್ರತಿಯೊಬ್ಬ ಸಿಬ್ಬಂದಿಗೂ ಅಧಿಕೃತ ರಶೀದಿ ನೀಡಲಾಗುತ್ತಿದೆ ಎಂದು ಸಾರಿಗೆ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವಿಡಿಯೋ ಮೂಲಕ 'ಎಲ್ಲ ಹಣ ನೌಕರರದ್ದೇ' ಎಂದು ಹೇಳಲಾಗುತ್ತಿದೆ. '26 ತಿಂಗಳ ಮೊತ್ತ ನೌಕರರದ್ದೇ', ಮರಳಿ ಚೌಡೇಶ್ವರಿ ದೇವಸ್ಥಾನದ ಸ್ಕ್ಯಾನರ್ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ನೌಕರರಿಗೆ ಸರಿಯಾದ ರಶೀದಿಗಳನ್ನು ನೀಡುತ್ತಿಲ್ಲ ಎಂಬ ತಪ್ಪು ಮಾಹಿತಿ ಪ್ರಸಾರ ಮಾಡಲಾಗುತ್ತಿದೆ. ಅದಕ್ಕೆ ಕಿವಿಕೊಡದಂತೆ ಅಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.
ಪಾರದರ್ಶಕ ವ್ಯವಹಾರ, ಸುಸೂತ್ರ ಹಣ ಜಮೆಗೆ ಕ್ರಮ
ಈ ಸಂಪೂರ್ಣ ಪ್ರಕ್ರಿಯೆ ಇಲಾಖೆಯ ಅಧಿಕೃತ ಮೇಲ್ವಿಚಾರಣೆಯಲ್ಲೇ ನಡೆಯುತ್ತಿದೆ. ಎಲ್ಲಾ ಹಣಕಾಸು ವ್ಯವಹಾರಗಳನ್ನು ದಾಖಲಾತಿಯೊಂದಿಗೆ ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ. ಈವರೆಗೆ 35 ಸಿಬ್ಬಂದಿಯಿಂದ ಹೆಚ್ಚುವರಿ ಜಮೆಯಾದ ಮೊತ್ತವನ್ನು ಹಿಂಪಡೆಯಲಾಗಿದೆ. ಸಂಬಂಧಿದ ಘಟಕದ ಖಾತೆಗೆ ಜಮೆ ಮಾಡಲಾಗಿದೆ. ಉಳಿದ ಮರು ಪಾವತಿ ಪ್ರಕ್ರಿಯೆಯೂ ಸುಗಮವಾಗಿ ನಡೆಯುತ್ತಿದೆ. ಇಂದೇ ಸಂಜೆಯೊಳಗೆ ಸಂಪೂರ್ಣವಾಗಿ ಸುವ್ಯವಸ್ಥಿತಗೊಳ್ಳುವ ನಿರೀಕ್ಷೆಯಿದೆ ವಿವರಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿಯಲ್ಲಿ ಗೊಂದಲ ಉಂಟಾಗದಂತೆ, ನಿಖರ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಸ್ಪಷ್ಟನೆ ನೀಡಿದ್ದೇವೆ ಎಂದು ಬಿಎಂಟಿಸಿ ಹಿರಿಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














Click it and Unblock the Notifications