ಕೆಎಸ್‌ಆರ್‌ಟಿಸಿಗೆ ಅದರ ಸಿಬ್ಬಂದಿಯೇ ದೊಡ್ಡ ಆಸ್ತಿ ಅನ್ನೋದು ಇದಕ್ಕೆ: 20 ನಿಮಿಷದಲ್ಲಿ ಮ್ಯಾಜಿಕ್, ಇಂಥ ಉದಾಹರಣೆ ಅಪರೂಪ
ಬೆಂಗಳೂರು: ಸಮಯ ಪರಿಪಾಲನೆ ಮತ್ತು ಜವಾಬ್ದಾರಿಯುತ ನಡೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತೊಮ್ಮೆ ಮಾದರಿಯಾಗಿದೆ. ಹಠಾತ್ ಎದುರಾದ ತಾಂತ್ರಿಕ ದೋಷವೊಂದನ್ನು ಕೇವಲ 20 ನಿಮಿಷಗಳಲ್ಲಿ ಬಗೆಹರಿಸಿ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಸಾರಿಗೆ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಕೆಎಸ್‌ಆರ್‌ಟಿಸಿ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದಾರೆ.
ಕೊನೆ ಕ್ಷಣದಲ್ಲಿ ಕೈಕೊಟ್ಟ ಇವಿ ಎಸಿ ವ್ಯವಸ್ಥೆ
ಪ್ರಯಾಣಿಕರೊಬ್ಬರು ಕೆಎಸ್‌ಆರ್‌ಟಿಸಿಯ 'ಇವಿ ಪವರ್ ಪ್ಲಸ್' (EV Power Plus) ಹವಾನಿಯಂತ್ರಿತ ಬಸ್‌ನಲ್ಲಿ ಪ್ರಯಾಣಿಸಲು ಸಜ್ಜಾಗಿದ್ದರು. ಆದರೆ ಬಸ್ ಹೊರಡಲು ಇನ್ನು ಕೇವಲ 10 ನಿಮಿಷ ಬಾಕಿ ಇದೆ ಎನ್ನುವಾಗ, ಬಸ್‌ನ ಹವಾನಿಯಂತ್ರಣ ವ್ಯವಸ್ಥೆ ಇದ್ದಕ್ಕಿದ್ದಂತೆ ಸ್ಥಗಿತಗೊಂಡಿತು. ಚಾಲಕ ಮತ್ತು ನಿರ್ವಾಹಕರು ಎಸಿ ಕಂಟ್ರೋಲ್ ಪ್ಯಾನೆಲ್ ಮೂಲಕ ಅದನ್ನು ಮರುಪ್ರಾರಂಭಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಸಿಬ್ಬಂದಿ ತೋರಿದ ಚುರುಕುತನ ಮತ್ತು ಸಮಯಪ್ರಜ್ಞೆ
ಬಸ್ ಕೆಟ್ಟುನಿಂತ ತಕ್ಷಣ ಸಾರಿಗೆ ಸಿಬ್ಬಂದಿ ಕೈಕಟ್ಟಿ ಕುಳಿತುಕೊಳ್ಳಲಿಲ್ಲ, ಬದಲಿಗೆ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿದರು. ಸಿಬ್ಬಂದಿ ತಕ್ಷಣವೇ ತಮ್ಮ ಡಿಪೋಗೆ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದರು. ಬಸ್ ಹೊರಡುವ ಸಮಯ ಆಗಿ ಹೋಗಿದ್ದರಿಂದ, "ಲೇಟ್ ಆಗುತ್ತೆ" ಎಂದು ಹೇಳಿದ ಸಿಬ್ಬಂದಿ ತಕ್ಷಣವೇ ಪರ್ಯಾಯ ಬಸ್ ಕಳುಹಿಸುವಂತೆ ಡಿಪೋ ಅಧಿಕಾರಿಗೆ ವಿನಂತಿಸಿದರು.
ಕೇವಲ 15 ನಿಮಿಷದಲ್ಲೇ ಬಂತು ಪರ್ಯಾಯ ಬಸ್
ಆ ಸಮಯಕ್ಕೆ ಮುಂದಿನ ವೇಳಾಪಟ್ಟಿಯ ಮತ್ತೊಂದು ಬಸ್ ನಿಲ್ದಾಣಕ್ಕೆ ಬಂದಿಳಿದಿತ್ತು. ಆ ಬಸ್‌ನ ಸಿಬ್ಬಂದಿ ಈ ಪ್ರಯಾಣಿಕರನ್ನು ಕರೆದೊಯ್ಯಲು ಸಿದ್ಧರಿದ್ದರೂ, ಮುಂಗಡ ಕಾಯ್ದಿರಿಸಿದ ಸೀಟುಗಳ ಗೊಂದಲವಾಗಬಾರದೆಂದು ನಮ್ಮ ಬಸ್ ಸಿಬ್ಬಂದಿ ಡಿಪೋದಿಂದಲೇ ಬರುವ ಪರ್ಯಾಯ ಬಸ್‌ಗಾಗಿ ಕಾಯಲು ನಿರ್ಧರಿಸಿದರು. ನಂಬಲು ಅಸಾಧ್ಯವಾದರೂ, ಡಿಪೋಗೆ ಕರೆ ಮಾಡಿದ ಕೇವಲ 15 ನಿಮಿಷಗಳಲ್ಲಿ ಕೆಎಸ್‌ಆರ್‌ಟಿಸಿ ಡಿಪೋದಿಂದ ಪರ್ಯಾಯ ಬಸ್ ನಿಲ್ದಾಣಕ್ಕೆ ಬಂದು ತಲುಪಿತು. ಮುಂಗಡ ಬುಕಿಂಗ್ ಮಾಡಿದ ಹಾಗೂ ಸ್ಥಳದಲ್ಲೇ ಟಿಕೆಟ್ ಪಡೆದ ಎಲ್ಲ ಪ್ರಯಾಣಿಕರನ್ನು ಹಳೆಯ ಬಸ್‌ನಲ್ಲಿದ್ದ ಅದೇ ಸೀಟ್ ನಂಬರ್‌ಗಳ ಪ್ರಕಾರವೇ ಹೊಸ ಬಸ್‌ಗೆ ಶಿಫ್ಟ್ ಮಾಡಲಾಯಿತು.
"ಬಸ್ ಕೆಟ್ಟುನಿಂತರೂ ನಾವು ನಿಗದಿತ ಸಮಯಕ್ಕಿಂತ ಕೇವಲ 20 ನಿಮಿಷ ತಡವಾಗಿ ಪ್ರಯಾಣ ಆರಂಭಿಸಿದೆವು. ಅಂತಿಮವಾಗಿ ಚಿತ್ರದುರ್ಗ ತಲುಪುವಾಗಲೂ ಕೇವಲ 20 ನಿಮಿಷಗಳಷ್ಟೇ ತಡವಾಗಿತ್ತು. ಸರ್ಕಾರಿ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಮಯದ ಬಗ್ಗೆ ಇಷ್ಟೊಂದು ಕಟ್ಟುನಿಟ್ಟಾಗಿ ಇರುತ್ತಾರೆ ಮತ್ತು ಡಿಪೋದಿಂದ ಇಷ್ಟು ಬೇಗ ಪರ್ಯಾಯ ಬಸ್ ಸಿಗುತ್ತದೆ ಎಂದು ನಾನು ಊಹಿಸಿರಲಿಲ್ಲ. ಕೆಂಪೇಗೌಡ ಬಸ್ ನಿಲ್ದಾಣದ (ಮೆಜೆಸ್ಟಿಕ್) ಹತ್ತಿರದಲ್ಲೇ ಡಿಪೋ ಇರುವುದು ನಿಜವಾದರೂ, ಇಷ್ಟು ವೇಗದ ನಿರ್ಧಾರ ನಿಜಕ್ಕೂ ಶ್ಲಾಘನೀಯ" ಎಂದು ಪ್ರಯಾಣಿಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಇದನ್ನು ಟೀಮ್ ಬಿಎಚ್‌ಪಿ.ಕಾಮ್ ವರದಿ ಮಾಡಿದೆ.
ಸಾರ್ವಜನಿಕ ಸಾರಿಗೆ ಸಂಸ್ಥೆಯೊಂದರಲ್ಲಿ ಇಂತಹ ತ್ವರಿತ ನಿರ್ಧಾರಗಳು ಮತ್ತು ಗ್ರಾಹಕಸ್ನೇಹಿ ನಡೆಗಳು ತೀರಾ ಅಪರೂಪವಾಗಿದ್ದು, ಕೆಎಸ್‌ಆರ್‌ಟಿಸಿ ಸಿಬ್ಬಂದಿಯ ಈ ಕರ್ತವ್ಯನಿಷ್ಠೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.













Click it and Unblock the Notifications