Shreyas Iyer: ನಾಳೆ ಮತ್ತೆ ಸೂರ್ಯೋದಯವನ್ನ ನೋಡುತ್ತೇನೆ: ಶ್ರೇಯಸ್‌ ಅಯ್ಯರ್ ಹೀಗೆ ಹೇಳಿದ್ಯಾಕೆ?

Shreyas Iyer: ಧರ್ಮಶಾಲಾದಲ್ಲಿ ಭಾನುವಾರ (ಮೇ 17) ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಪಂಜಾಬ್‌ ಕಿಂಗ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಪ್ಲೇಆಫ್ ಟಿಕೆಟ್ ಪಡೆದರೆ, ಪಂಜಾಬ್‌ಗೆ ಈ ಹಾದಿ ಮತ್ತಷ್ಟು ಕಠಿಣವಾಗಿದೆ. ಇನ್ನೂ ಪಂದ್ಯದ ಬಳಿಕ ಶ್ರೇಯಸ್‌ ಅಯ್ಯರ್ ನೀಡಿದ ಅಚ್ಚರಿ ಹೇಳಿಕೆ ಹಾಗೂ ಪ್ರೀತಿ ಝಿಂಟಾ ಜೊತೆ ನಡೆದ ಗಂಭೀರ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಐಪಿಎಲ್ 2026ರ ಪ್ಲೇ-ಆಫ್ ರೇಸ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಭಾನುವಾರ ಭಾರಿ ಹಿನ್ನಡೆಯಾಗಿದ್ದು, ಸತತ 6ನೇ ಸೋಲನುಭವಿಸಿದೆ. ಧರ್ಮಶಾಲಾದಲ್ಲಿ ನಡೆದ ಈ ಹಣಾಹಣಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 23 ರನ್‌ಗಳ ಅಂತರದಿಂದ ಪರಾಭವಗೊಂಡಿತು.

Shreyas Iyer Reacts After PBKS Loss vs RCB in IPL 2026 Serious Chat With Preity Zinta Goes Viral

ಅಯ್ಯರ್, ಕೊಹ್ಲಿ ಮಿಂಚಿನ ಆಟ

ಟಾಸ್‌ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡವು ವಿರಾಟ್ ಕೊಹ್ಲಿ ಅವರ ಸ್ಫೋಟಕ ಅರ್ಧಶತಕ, ವೆಂಕಟೇಶ್ ಅಯ್ಯರ್ ಸಿಡಿಸಿದ ಅಜೇಯ 73 ರನ್‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಬಳಿಕ 223 ರನ್‌ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಪಂಜಾಬ್ 8 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಸೋಲಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡದ ಪ್ಲೇ-ಆಫ್ ಹಾದಿ ಈಗ ಮತ್ತಷ್ಟು ಕಠಿಣವಾಗಿದೆ.

ರಸಿಖ್, ಭುವಿ ಮಾರಕ ಬೌಲಿಂಗ್ ದಾಳಿ

ಆರ್‌ಸಿಬಿ ಪರ ರಸಿಖ್ ಸಲಾಮ್ ದಾರ್ ಮೂರು ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಎರಡು ವಿಕೆಟ್ ಪಡೆದು ಪಂಜಾಬ್ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕಿದರು. ಸೋಲಿನ ಬಳಿಕ ಪಂಜಾಬ್ ತಂಡದ ಮುಖ್ಯ ಕೋಚ್ ಡ್ರೆಸ್ಸಿಂಗ್ ರೂಮ್‌ನಲ್ಲಿ ತೀವ್ರ ನಿರಾಸೆ ವ್ಯಕ್ತಪಡಿಸಿದರೆ, ನಾಯಕ ಶ್ರೇಯಸ್ ಅಯ್ಯರ್ ಮೈದಾನದಲ್ಲೇ ತಂಡದ ಸಹ-ಮಾಲೀಕಿ ಪ್ರೀತಿ ಝಿಂಟಾ ಅವರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದು ಕಂಡುಬಂತು.

ಶ್ರೇಯಸ್ ಅಯ್ಯರ್ ಅಚ್ಚರಿ ಹೇಳಿಕೆ

ಪಂದ್ಯದ ನಂತರ ಮಾತನಾಡಿದ ಶ್ರೇಯಸ್ ಅಯ್ಯರ್, "ಆರ್‌ಸಿಬಿ ತಂಡದ ಆಟಗಾರರು ಅದ್ಭುತವಾದ ಆರಂಭವನ್ನು ಪಡೆದರು ಮತ್ತು ಪವರ್‌ಪ್ಲೇ ಮುಗಿದ ತಕ್ಷಣ ಬೌಲರ್‌ಗಳ ಮೇಲೆ ಸವಾರಿ ಮಾಡಲು ಶುರು ಮಾಡಿದರು. ಅವರು 222 ರನ್‌ಗಳ ಬೃಹತ್ ಮೊತ್ತ ಪೇರಿಸಿದ್ದು ನಿಜಕ್ಕೂ ಅದ್ಭುತ ಪ್ರದರ್ಶನ. ನಮಗೆ ಬೌಲಿಂಗ್‌ನಲ್ಲಿ ಅಷ್ಟಾಗಿ ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ನಾವು ಬ್ಯಾಟಿಂಗ್ ಮಾಡುವಾಗ ಪವರ್‌ಪ್ಲೇ ಅವಧಿಯಲ್ಲೇ ವಿಕೆಟ್‌ ಕಳೆದುಕೊಂಡಿದ್ದು ತುಂಬಾ ಹೊಡೆತ ಬಿದ್ದಿತು," ಎಂದು ಒಪ್ಪಿಕೊಂಡರು.

"ನಮ್ಮ ತಂಡವು ಬೇಗನೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಪ್ರಸಕ್ತ ಸೀಸನ್‌ನಲ್ಲಿ ನಮಗೆ ಹೆಚ್ಚು ರನ್ ಗಳಿಸಿಕೊಡುತ್ತಿದ್ದವರು ಪ್ರಭ್‌ಸಿಮ್ರನ್ ಮತ್ತು ಪ್ರಿಯಾಂಶ್. ಅವರು ಪವರ್‌ಪ್ಲೇನಲ್ಲಿ ನೀಡುತ್ತಿದ್ದ ಅಂತಹ ಭರ್ಜರಿ ಆರಂಭಗಳು ಈ ಬಾರಿ ನಮಗೆ ಸಿಗಲಿಲ್ಲ. ಅದರ ಜೊತೆಗೆ ನಾನು ಕೂಡ ಕ್ರೀಸ್‌ಗೆ ಬಂದ ಕೂಡಲೇ ಬೇಗನೆ ವಿಕೆಟ್‌ ಒಪ್ಪಿಸಿದೆ. ಇದರಿಂದ ನನಗೆ ನಿಜಕ್ಕೂ ತುಂಬಾ ನಿರಾಸೆಯಾಗಿದೆ. ಆದರೆ ಶಶಾಂಕ್, ಸ್ಟೋಯಿನಿಸ್ ಮತ್ತು ಮಧ್ಯಮ ಕ್ರಮಾಂಕದ ಇತರ ಕೆಲವು ಆಟಗಾರರು ನೀಡಿದ ಆಕ್ರಮಣಕಾರಿ ಪ್ರದರ್ಶನವನ್ನು ಮೆಚ್ಚಲೇಬೇಕು," ಎಂದು ಅವರು ಹೇಳಿದರು.

"ನಾಳೆ ಮತ್ತೆ ಸೂರ್ಯೋದಯವನ್ನು ನೋಡಲಿದ್ದೇನೆ"

ಮುಂದುವರೆದು ಮಾತನಾಡಿದ ಅವರು "ಫಲಿತಾಂಶ ಏನೇ ಇರಲಿ, ನಾನು ಯಾವಾಗಲೂ ಸಕಾರಾತ್ಮಕವಾಗಿರುತ್ತೇನೆ. ಇದು ಮುಗಿದುಹೋದ ವಿಷಯ. ನಾಳೆ ಮತ್ತೆ ಸೂರ್ಯೋದಯವನ್ನು ನೋಡಲಿದ್ದೇನೆ. ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ," ಎಂದು ಹೇಳಿದರು. ಒಟ್ಟಿನಲ್ಲಿ ಶ್ರೇಯಸ್‌ ಅಯ್ಯರ್ ಅವರ ಈ ಹೇಳಿಕೆ ಹಾಗೂ ಪ್ರೀತಿ ಝಿಂಟಾ ನಡುವೆ ನಡೆದ ಗಂಭೀರ ಚರ್ಚೆ ಇದೀಗ ಸಖತ್ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+