ಇ-ಖಾತಾ ತಿದ್ದುಪಡಿಗೆ ಹೊಸ ಫಾರ್ಮುಲಾ! ಉಪ ಆಯುಕ್ತರ ಹೆಗಲಿಗೆ ಮಹತ್ವದ ಜವಾಬ್ದಾರಿ
ಬೆಂಗಳೂರು: ರಾಜಧಾನಿಯ ಆಸ್ತಿ ಮಾಲೀಕರಿಗೆ ಖಾತಾ ಸೇವೆ ನೀಡುತ್ತಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇ-ಖಾತಾ ನಿರ್ವಹಣೆಯಲ್ಲಿ ಬದಲಾವಣೆಗೆ ಮುಂದಾಗಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಇ-ಖಾತಾ ತಿದ್ದುಪಡಿಯ ಜವಾಬ್ದಾರಿಯನ್ನು ಉಪ ಆಯುಕ್ತರಿಗೆ ನೀಡಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ನಿರ್ದೇಶಿಸಿದ್ದಾರೆ.
ಸೋಮವಾರ ಜಿಬಿಎ ವ್ಯಾಪ್ತಿಯಲ್ಲಿ ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಇಂದು ನಡೆದ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇ-ಖಾತಾದಲ್ಲಿ ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ವಲಯ ಜಂಟಿ ಆಯುಕ್ತರಿಗೆ ನೀಡಲಾಗಿತ್ತು. ಅವರ ಕಾರ್ಯವ್ಯಾಪ್ತಿ ಹೆಚ್ಚಿರುವ ಕಾರಣ, ಆ ಜವಾಬ್ದಾರಿಯನ್ನು ಆಯಾ 5 ವಲಯದ ಉಪ ಆಯುಕ್ತರಿಗೆ ವಹಿಸಬೇಕು ಎಂದು ಅವರು ತಿಳಿಸಿದರು.

ಪರಿಣಾಮಕಾರಿ ಇ-ಖಾತಾ ಸೇವೆ ಒದಗಿಸಿ
ಪ್ರತಿ ನಗರ ಪಾಲಿಕೆಯಿಂದ ಬಂದಿರುವ ಸಲಹೆಗಳ ಆಧಾರದ ಮೇಲೆ ಕಂದಾಯ ವಿಭಾಗದ ಉಪ ಆಯುಕ್ತರಿಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು. ವಿಶೇಷ ಅಭಿಯಾನದ ರೂಪದಲ್ಲಿ ಬಾಕಿ ಇರುವ ಎಲ್ಲಾ ತಿದ್ದುಪಡಿ ಹಾಗೂ ದೂರುಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ ನಾಗರಿಕರಿಗೆ ಇ-ಖಾತಾ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಒದಗಿಸಲು ಸಾಧ್ಯವಾಗಲಿದೆ.
ಖಾತಾ ಸಂಬಂಧಿ ದೂರುಗಳ ತ್ವರಿತ ಪರಿಹಾರ
ಇ-ಖಾತಾಗೆ ಸಂಬಂಧಿಸಿದಂತೆ ಖಾತಾ ಬದಲಾವಣೆ, ಮಾಲೀಕರ ಹೆಸರಿನ ತಿದ್ದುಪಡಿ ಹಾಗೂ ಇತರ ವಿವರಗಳ ತಿದ್ದುಪಡಿ ಕುರಿತಾಗಿ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ತಿದ್ದುಪಡಿ ಮಾಡ್ಯೂಲ್ ಅನ್ನು ಇನ್ನಷ್ಟು ವೇಗಗೊಳಿಸಿ, ಸರಿಪಡಿಸಿದ ಇ-ಖಾತಾಗಳನ್ನು ಶೀಘ್ರದಲ್ಲಿ ವಿತರಿಸುವುದರ ಜೊತೆಗೆ ದೂರುಗಳ ತ್ವರಿತ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಆಸ್ತಿ ತೆರಿಗೆಯಲ್ಲಿ ಸಾಧನೆ
ನಗರದಲ್ಲಿ ಇ-ಖಾತಾ ಹಾಗೂ ಆಸ್ತಿ ತೆರಿಗೆ ಸಂಗ್ರಹಣೆಗೆ ಸಂಬಂಧಿಸಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 2026ರ ಜೂನ್ ತಿಂಗಳ ಪ್ರಸ್ತುತ ದಿನಾಂಕದವರೆಗೆ 3000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸುಮಾರು 2,800 ಕೋಟಿ ರೂ. ಸಂಗ್ರಹಿಸಲಾಗಿತ್ತು. ಇದಕ್ಕೆ ಹೋಲಿಸಿದರೆ ಈ ವರ್ಷ ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜೊತೆಗೆ ಮತ್ತಷ್ಟು ಪರಿಣಾಮಕಾರಿಯಾಗಿ ಆಸ್ತಿ ತೆರಿಗೆ ಸಂಗ್ರಹಿಸುವಂತೆ ಸೂಚಿಸಿದರು.
ಇ-ಖಾತಾ ವ್ಯವಸ್ಥೆಯನ್ನು ಇನ್ನಷ್ಟು ಸರಳೀಕರಿಸಲು ಹಾಗೂ ಸಾರ್ವಜನಿಕರಿಗೆ ಸುಲಭ ಸೇವೆ ಒದಗಿಸುವ ಉದ್ದೇಶದಿಂದ ಪ್ರತಿ ನಗರ ಪಾಲಿಕೆಯ ಕಾರ್ಯವೈಖರಿಯನ್ನು ಸಮಗ್ರವಾಗಿ ಪರಿಶೀಲಿಸಲಾಗಿದೆ. ಸಾಫ್ಟ್‌ವೇರ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ತರಬೇಕಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು. ಈ ನಿಟ್ಟಿನಲ್ಲಿ ಹೊಸ ಖಾತೆಗಾಗಿ ಸಲ್ಲಿಸಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ತೆರಿಗೆ ವ್ಯಾಪ್ತಿಗೆ ತರಬೇಕು. ಜೊತೆಗೆ ಬಿ-ಖಾತಾದಿಂದ ಎ-ಖಾತಾಗೆ ಬದಲಾವಣೆಗಾಗಿ ಬಂದಿರುವ ಅರ್ಜಿಗಳನ್ನು ಸಹ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್ ಅವರು ಮಾತನಾಡಿ, ಹೆಚ್ಚಿನ ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರು ಹಾಗೂ ಪರಿಷ್ಕರಣೆ ಪ್ರಕರಣಗಳಿಂದ ಪಾಲಿಕೆಗಳಿಗೆ ಬರಬೇಕಿರುವ ತೆರಿಗೆಯನ್ನು ಪರಿಣಾಮಕಾರಿಯಾಗಿ ವಸೂಲಿ ಮಾಡುವ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಇ-ಖಾತಾ ಅಭಿಯಾನದ ಜಾಗೃತಿ ಮೂಡಿಸಿ
ಜಿಬಿಎ ವ್ಯಾಪ್ತಿಯಲ್ಲಿ ಭೂ ಗ್ಯಾರಂಟಿ ಯೋಜನೆಯಡಿ ಹಮ್ಮಿಕೊಂಡಿರುವ 'ನನ್ನ ಇ-ಖಾತಾ ನನ್ನ ಅಭಿಯಾನ' ವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಇ-ಖಾತಾ ಅಭಿಯಾನದ ಕುರಿತು ನಾಗರಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.













Click it and Unblock the Notifications