ಕರಾವಳಿ ಜನತೆಗೆ ಗುಡ್‌ನ್ಯೂಸ್: 57 ಕೋಟಿ ವೆಚ್ಚದಲ್ಲಿ ದಕ್ಷಿಣ ಕನ್ನಡದ ಈ 14 ರಸ್ತೆಗಳ ಅಭಿವೃದ್ಧಿ

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ರಸ್ತೆ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಲು ಕೇಂದ್ರ ಸರ್ಕಾರವು ಭಾರಿ ಕೊಡುಗೆಯೊಂದನ್ನು ನೀಡಿದೆ. ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ (CRIF) ಅಡಿಯಲ್ಲಿ ಜಿಲ್ಲೆಯ ಪ್ರಮುಖ ರಸ್ತೆಗಳ ಸುಧಾರಣೆಗಾಗಿ ಬರೋಬ್ಬರಿ 57 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳನ್ನು ಒಳಗೊಳ್ಳುವ ಈ ಬೃಹತ್ ಯೋಜನೆಯಡಿ ಒಟ್ಟು 82.94 ಕಿಲೋಮೀಟರ್ ಉದ್ದದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದು ಕರಾವಳಿಯ ಆರ್ಥಿಕ ಹಾಗೂ ಸಾಮಾಜಿಕ ಚಿತ್ರಣವನ್ನೇ ಬದಲಿಸುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಈ ವಿಶೇಷ ಅನುದಾನದಲ್ಲಿ ಜಿಲ್ಲೆಯ ಪ್ರಮುಖ ರಾಜ್ಯ ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ತಾಲೂಕುವಾರು ಹಂಚಿಕೆಯಾಗಿರುವ ಅನುದಾನ ಮತ್ತು ರಸ್ತೆಗಳ ವಿವರ ಹೀಗಿದೆ.

Dakshina Kannada

1. ಉಳ್ಳಾಲ ತಾಲೂಕು

ಕಾಟಪಾಡಿ-ಅಬ್ಬಕ್ಕ ಸರ್ಕಲ್ ರಸ್ತೆ (ರೂ. 4 ಕೋಟಿ ಜಂಟಿ ಯೋಜನೆ): ಚೆಂಬುಗುಡ್ಡೆಯಿಂದ ಮಚಾಲಿ ಹೋಟೆಲ್‌ವರೆಗಿನ 2.66 ಕಿ.ಮೀ ರಸ್ತೆ ಸುಧಾರಣೆ ಮತ್ತು ಇನ್ಫೋಸಿಸ್ ಸಮೀಪದ 1 ಕಿ.ಮೀ ರಸ್ತೆಯ ಅಭಿವೃದ್ಧಿ ಕಾಮಗಾರಿ.

2. ಬಂಟ್ವಾಳ ತಾಲೂಕು (ಒಟ್ಟು ರೂ. 7 ಕೋಟಿ)

ಸಜಿಪನಾಡು-ಬೋಳಿಯಾರ್ ರಸ್ತೆ (ರೂ. 2 ಕೋಟಿ): ರಸ್ತೆಯ ಅತ್ಯಂತ ಕಿರಿದಾದ ಹಾಗೂ ಹಾಳಾಗಿರುವ ಆಯ್ದ 2.88 ಕಿ.ಮೀ ಭಾಗಗಳ ಸಂಪೂರ್ಣ ಸುಧಾರಣೆ.

ಅನಂತಾಡಿ-ಮಾಂಗಿಲಪದವು-ಕೊಡಪದವು ರಸ್ತೆ (ರೂ. 5 ಕೋಟಿ) ಜಿಲ್ಲಾ ಮುಖ್ಯ ರಸ್ತೆಯ 3 ಕಿ.ಮೀ ವ್ಯಾಪ್ತಿಯನ್ನು ಸಂಪೂರ್ಣವಾಗಿ ಅಗಲೀಕರಣಗೊಳಿಸಿ (Widening) ಮೇಲ್ದರ್ಜೆಗೆ ಏರಿಸಲಾಗುವುದು.

3. ಮೂಡುಬಿದಿರೆ ಮತ್ತು ಬೆಳ್ತಂಗಡಿ ವಲಯ (ಒಟ್ಟು ರೂ. 28 ಕೋಟಿ)

ಮೂಡುಬಿದಿರೆ-ಬೆಳ್ತಂಗಡಿ- ಬಂಟ್ವಾಳ ಕ್ರಾಸ್ ಹೆದ್ದಾರಿ (ರೂ. 6 ಕೋಟಿ):ಹೊಸಂಗಡಿ ಪುಚ್ಚಮೊಗರು ಸೇತುವೆಯಿಂದ ಬೆಳ್ತಂಗಡಿ-ಬಂಟ್ವಾಳ ಕ್ರಾಸ್ ಜಂಕ್ಷನ್‌ವರೆಗಿನ 8.9 ಕಿ.ಮೀ ವ್ಯಾಪ್ತಿಯ ರಾಜ್ಯ ಹೆದ್ದಾರಿ ಅಭಿವೃದ್ಧಿ.

ವೇಣೂರು-ಅಂಡಿಂಜೆ-ನಾರಾವಿ ರಸ್ತೆ (ರೂ. 6 ಕೋಟಿ): ಪ್ರಮುಖ ಸಂಪರ್ಕ ಕೊಂಡಿಯಾದ ಈ ಜಿಲ್ಲಾ ಮುಖ್ಯ ರಸ್ತೆಯ 10 ಕಿ.ಮೀ ವ್ಯಾಪ್ತಿಯನ್ನು ಬಲಪಡಿಸುವುದು.

ಬೆಳ್ತಂಗಡಿ-ಮೂಡುಬಿದಿರೆ-ಮುಲ್ಕಿ ಹೆದ್ದಾರಿ (ರೂ. 5 ಕೋಟಿ): ಎಕ್ಸಲೆಂಟ್ ಕಾಲೇಜಿನಿಂದ ಮೂಡುಬಿದಿರೆ ಪೊಲೀಸ್ ಠಾಣೆ ರಸ್ತೆವರೆಗಿನ 5 ಕಿ.ಮೀ ವ್ಯಾಪ್ತಿಯ ರಾಜ್ಯ ಹೆದ್ದಾರಿಯ ನವೀಕರಣ ಹಾಗೂ ಸೋಮಂತಡ್ಕ-ಹೆಡ್ಯ ರಸ್ತೆ (ರೂ. 5 ಕೋಟಿ) ರಾಷ್ಟ್ರೀಯ ಹೆದ್ದಾರಿ-275 ಮತ್ತು ರಾಜ್ಯ ಹೆದ್ದಾರಿ-276 ಅನ್ನು ಸಂಪರ್ಕಿಸುವ 5.5 ಕಿ.ಮೀ ರಸ್ತೆಯ ಸುಧಾರಣೆ.

ಸುರತ್ಕಲ್-ಕಬಕ ರಾಜ್ಯ ಹೆದ್ದಾರಿ (ರೂ. 6 ಕೋಟಿ): ಬಜಪೆಯಿಂದ ಕೈಕಂಬದವರೆಗೆ ಮತ್ತು ಪೊಳಲಿ ಗೇಟ್‌ನಿಂದ ಅದೂರು ಸೇತುವೆಯವರೆಗಿನ ಒಟ್ಟು 10.5 ಕಿ.ಮೀ ರಸ್ತೆಯ ಮೇಲ್ದರ್ಜೆಗೇರಿಸುವುದು ಒಳಗೊಂಡಿದೆ.

ಪುತ್ತೂರು ಮತ್ತು ಸುಳ್ಯ ವಲಯ (ಒಟ್ಟು ರೂ. 18 ಕೋಟಿ)

ಪುಂಜಾಲಕಟ್ಟೆ-ಕುಡ್ಕೋಲಿ ರಸ್ತೆ (ರೂ. 6 ಕೋಟಿ): ಪಾಂಗಲ್ಪಾಡಿಯಿಂದ ಕುಡ್ಕೋಲಿವರೆಗಿನ 10.07 ಕಿ.ಮೀ ರಾಜ್ಯ ಹೆದ್ದಾರಿಯ ಅಭಿವೃದ್ಧಿ.

ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ (ರೂ. 6 ಕೋಟಿ): ಧಾರ್ಮಿಕ ಮತ್ತು ಪ್ರವಾಸಿ ಪ್ರಾಮುಖ್ಯತೆ ಹೊಂದಿರುವ ಈ ಹೆದ್ದಾರಿಯ ಆಯ್ದ 10.1 ಕಿ.ಮೀ ವ್ಯಾಪ್ತಿಯ ರಸ್ತೆ ಸುಧಾರಣೆ.

ಉಪ್ಪಿನಂಗಡಿ-ಪೆರಿಯಡ್ಕ-ಕೋಯ್ಲ ರಸ್ತೆ (ರೂ. 2 ಕೋಟಿ): ಕೃಷಿ ವಲಯಕ್ಕೆ ಪೂರಕವಾಗಿರುವ ಈ ರಸ್ತೆಯ 3 ಕಿ.ಮೀ ವ್ಯಾಪ್ತಿಯ ಅಭಿವೃದ್ಧಿ.

ಹಂತ್ಯಾರು-ಬೆಟ್ಟಂಪಾಡಿ ರಸ್ತೆ (ರೂ. 3 ಕೋಟಿ): ಗ್ರಾಮೀಣ ಭಾಗದ 4.5 ಕಿ.ಮೀ ರಸ್ತೆಯ ಸುಧಾರಣೆ.

ಕೇಪುಳು-ಪಡಿಲು ರಸ್ತೆ (ರೂ. 1 ಕೋಟಿ): 0.65 ಕಿ.ಮೀ ವ್ಯಾಪ್ತಿಯ ಸಣ್ಣ ರಸ್ತೆ ಸಂಪರ್ಕದ ನವೀಕರಣ ನಡೆಯಲಿದೆ.

ಕರಾವಳಿಯ ಆರ್ಥಿಕತೆ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕೆ ಬೂಸ್ಟ್

ಈ ಮಹತ್ವದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಂಡಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, "ಕೇಂದ್ರ ಸರ್ಕಾರದ ಸಿಆರ್‌ಐಎಫ್ (CRIF) ಯೋಜನೆಯಡಿ ಅನುಮೋದನೆಗೊಂಡಿರುವ ಈ ಕಾಮಗಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಆಂತರಿಕ ಸಂಪರ್ಕ ವ್ಯವಸ್ಥೆಯನ್ನು ಗಟ್ಟಿಗೊಳಿಸಲಿವೆ. ಹೆದ್ದಾರಿಗಳು ಹಾಗೂ ಜಿಲ್ಲಾ ಮುಖ್ಯ ರಸ್ತೆಗಳು ಸುಧಾರಣೆಯಾಗುವುದರಿಂದ ವಾಹನ ಸವಾರರಿಗೆ ಇಂಧನ ಮತ್ತು ಸಮಯ ಉಳಿತಾಯವಾಗಲಿದ್ದು, ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ" ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯು ಕೇವಲ ಶೈಕ್ಷಣಿಕ ಹಬ್ ಅಷ್ಟೇ ಅಲ್ಲದೆ, ಪ್ರವಾಸೋದ್ಯಮ ಮತ್ತು ಧಾರ್ಮಿಕ ಕ್ಷೇತ್ರಗಳಿಗೂ ಪ್ರಸಿದ್ಧಿಯಾಗಿದೆ. ಈ ಎಲ್ಲ 14 ರಸ್ತೆಗಳ ಕಾಮಗಾರಿಗಳು ಪೂರ್ಣಗೊಂಡರೆ, ಜಿಲ್ಲೆಯ ಗ್ರಾಮೀಣ ಭಾಗದ ಮಾರುಕಟ್ಟೆಗಳಿಗೆ ವೇಗ ಸಿಗಲಿದ್ದು, ಕರಾವಳಿಯ ಆರ್ಥಿಕ ಪ್ರಗತಿಗೆ ಇದು ದೊಡ್ಡ ಮಟ್ಟದಲ್ಲಿ ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+