1700 ಕೋಟಿ ವೆಚ್ಚದ ಕಾಮಗಾರಿ ಮಿಷನ್: ಬಾಕಿ ವೈಟ್ ಟಾಪಿಂಗ್ ಕಾಮಗಾರಿಗೆ ವೇಗ: ಜಿಬಿಎ
ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಪೂರ್ಣಗೊಳಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾಗಿದೆ. ಐದು ನಗರ ಪಾಲಿಕೆಗಳಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಅರ್ಧದಷ್ಟು ಕೆಲಸ ಮುಗಿದಿದೆ. ಬಾಕಿ ಉಳಿದ ವಿವಿಧ ರಸ್ತೆ ಕಾಮಗಾರಿಗಳು ಹಾಗೂ ವೈಟ್ ಟಾಪಿಂಗ್ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಖಡಕ್ ಸೂಚನೆ ನೀಡಿದ್ದಾರೆ.
ಜಿಬಿಎ ವ್ಯಾಪ್ತಿಯಲ್ಲಿ ಬಿ-ಸ್ಮೈಲ್ ವತಿಯಿಂದ ಕೈಗೆತ್ತಿಕೊಂಡಿರುವ ವೈಟ್ ಟಾಪಿಂಗ್ ಹಾಗೂ ಸಂಚಾರಯುಕ್ತ (ಬಫರ್) ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಸಿತು. ನಗರದಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ವೈಟ್ ಟಾಪಿಂಗ್ ಕಾಮಗಾರಿ ಶೇ.51ರಷ್ಟು ಪೂರ್ಣ
800 ಕೋಟಿ ರೂ. ವೆಚ್ಚದಲ್ಲಿ 58.60 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 28.18 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಈವರೆಗೆ ಶೇ. 56.1 ರಷ್ಟು ಪ್ರಗತಿ ಸಾಧಿಸಲಾಗಿದೆ.
ಅಲ್ಲದೆ, 900 ಕೋಟಿ ರೂ. ವೆಚ್ಚದಲ್ಲಿ 66.28 ಕಿ.ಮೀ ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಇದರಲ್ಲಿ 26.40 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಶೇ. 46.43 ರಷ್ಟು ಪ್ರಗತಿ ಸಾಧಿಸಲಾಗಿದೆ. ಒಟ್ಟು 1700 ಕೋಟಿ ರೂ. ವೆಚ್ವದ ಕಾಮಗಾರಿ ಪೈಕಿ ಶೇ. 51 ರಷ್ಟು ಪ್ರಗತಿ ಸಾಧಿಸಲಾಗಿದೆ. ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ವಿವಿಧ ಪ್ರದೇಶಗಳಲ್ಲಿ ರಸ್ತೆಗಳ ಅಗಲೀಕರಣ
ನಾಗವಾರ, ಟ್ಯಾನರಿ, ದಿಣ್ಣೂರು ಹಾಗೂ ಹಾಲಿಡೇ ವಿಲೇಜ್ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ರಸ್ತೆ ಅಗಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಆಯಾ ನಗರ ಪಾಲಿಕೆಗಳ ಹಿರಿಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಅಗಲೀಕರಣಕ್ಕೆ ಅಗತ್ಯವಿರುವ ಜಾಗಗಳಿಗೆ ಟಿಡಿಆರ್ (TDR) ನೀಡುವ ಮೂಲಕ ತ್ವರಿತಗತಿಯಲ್ಲಿ ರಸ್ತೆ ಅಗಲೀಕರಣ ಕಾರ್ಯ ಪೂರ್ಣಗೊಳಿಸಿ ಬಳಿಕ ವೈಟ್ ಟಾಪಿಂಗ್ ಕಾಮಗಾರಿ ನಡೆಸಬೇಕು.
ನಗರದಲ್ಲಿ ಎಲ್ಲೆಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆಯೋ, ಆ ರಸ್ತೆಗಳಲ್ಲಿ ಯಾವುದೇ ಗುಂಡಿಗಳು ಇಲ್ಲದಂತೆ ನೋಡಿಕೊಳ್ಳಬೇಕು. ಇನ್ನೂ ಕಾಮಗಾರಿ ಪ್ರಾರಂಭವಾಗದ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ತುರ್ತು ಕ್ರಮವಹಿಸಿ ಎಂದರು.
ಸಂಚಾರಯುಕ್ತ (ಬಫರ್) ರಸ್ತೆ ಕಾಮಗಾರಿಗಳಿಗೆ ಡೆಡ್‌ಲೈನ್
ಇನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ 68 ಕಿಲೋ ಮೀಟರ್ ಉದ್ದದ 9 ಸಂಚಾರಯುಕ್ತ (ಬಫರ್) ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಸಂಬಂಧ ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡಬೇಕು. ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಡೆಡ್‌ಲೈನ್ ವಿಧಿಸಿದರು.
ಮಳೆಗಾಲ: ಒಣಗಿದ ಮರ, ಕೊಂಬೆ ತೆರವು
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆ-ಗಾಳಿಗೆ ಧರೆಗುರುಳುವ ಮರ ಹಾಗೂ ರೆಂಬೆ ಕೊಂಬೆಗಳನ್ನು ತೆರವುಗೊಳಿಸುವ ಕಾರ್ಯ ಬರದಿಂದ ಸಾಗಿದೆ. ಬೆಂಗಳೂರು ನಗರವು ಜನನಿಬಿಡ ಹಾಗೂ ಹೆಚ್ಚಾಗಿ ವಾಹನ ಓಡಾಡುವುದರಿಂದ ಮರಗಳು ರಸ್ತೆಗೆ ಬಿದ್ದಲ್ಲಿ ಕ್ಷಣಾರ್ಧದಲ್ಲಿ ಸಂಚಾರದಟ್ಟಣೆ ಉಂಟಾಗುತ್ತದೆ. ಹೀಗಾಗಿ ತೆರವು ಕಾರ್ಯವನ್ನು ಚುರುಕುಗೊಳಿಸಲಾಗಿದೆ. ತೆರವುಗೊಳಿಸುವ ತಂಡವು ತುರ್ತಾಗಿ ಸ್ಥಳಕ್ಕೆ ಆಗಮಿಸಿ ಮರಗಳನ್ನು ತೆರವು ಮಾಡಬೇಕು. ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಾಲಿಕೆಯ ಆಯುಕ್ತ ಜಗದೀಶ್.ಜಿ ತಿಳಿಸಿದ್ದಾರೆ.
ನಗರದ ಉದ್ಯಾನವನಗಳು, ಸಾರ್ವಜನಿಕ ಸ್ಥಳಗಳು, ಆಟದ ಮೈದಾನಗಳು, ಇನ್ನಿತರ ಸ್ಥಳಗಲ್ಲಿ ಅಪಾಯಕಾರಿ ಹಾಗೂ ಒಣಗಿದ ಮರ ಮತ್ತು ರೆಂಬೆ ಕೊಂಬೆಗಳನ್ನು ವಿಭಾಗವಾರು ಗುರುತಿಸಲಾಗುತ್ತದೆ. ಪಟ್ಟಿ ಮಾಡಿದ ಸ್ಥಳಗಳಲ್ಲಿ ತೆರವು ಕಾರ್ಯ ಈಗಾಗಲೇ ಕೈಗೊಂಡಿದ್ದು, ಸವಾರರು, ಸಾರ್ವಜನಿಕರು ಭೀತಿ ಇಲ್ಲದೇ ಸಂಚಾರ ಮಾಡಬಹುದಾಗಿದೆ.













Click it and Unblock the Notifications