ಬೆಂಗಳೂರಿನಲ್ಲಿ ಒಂದೇ ದಿನ 15 ಲಕ್ಷ ಸಸಿ ನೆಡಲು ಸಿದ್ಧತೆ; ಈ ಮೂರು ಬಡಾವಣೆಯಲ್ಲಿ ಹಸಿರು ಕ್ರಾಂತಿ

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಒಟ್ಟಾರೆ ಪರಿಸರ ಮತ್ತು ಹಸಿರನ್ನ ಹೆಚ್ಚಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ನಗರದ ಮೂರು ಪ್ರಮುಖ ಬಿಡಿಎ ಬಡಾವಣೆಗಳನ್ನು ಸಂಪೂರ್ಣ ಹಸಿರಾಗಿಸುವ ನಿಟ್ಟಿನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 15 ಲಕ್ಷ ಸಸಿಗಳನ್ನು ನೆಡುವ ಬೃಹತ್ ಅಭಿಯಾನಕ್ಕೆ ಪ್ರಾಧಿಕಾರವು ಈಗಿನಿಂದಲೇ ಭರಪೂರ ಸಿದ್ಧತೆ ಆರಂಭಿಸಿದೆ. ನಗರದ ಇತಿಹಾಸದಲ್ಲೇ ಬೃಹತ್ ಯೋಜನೆ ಎನ್ನಲಾದ 'ಮೆಗಾ ಪ್ಲಾಂಟೇಶನ್ ಡ್ರೈವ್'ನಡಿ ಈ ಕಾರ್ಯ ನಡೆಯಲಿದೆ.

ಯಾವುದು ಆ 3 ಬಿಡಿಎ ಬಡಾವಣೆ?

ನಗರದ ವಿವಿಧ ದಿಕ್ಕುಗಳಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಹಾಗೂ ವಿಸ್ತಾರವಾದ ಪ್ರದೇಶವನ್ನು ಹೊಂದಿರುವ ಮೂರು ಪ್ರಮುಖ ವಲಯಗಳ ಬಡಾವಣೆಗಳನ್ನು ಬಿಡಿಎ ಈ ಹಸಿರು ಕ್ರಾಂತಿಗಾಗಿ ವಿಶೇಷವಾಗಿ ಆಯ್ಕೆ ಮಾಡಿಕೊಂಡಿದೆ.

BDA

* ಡಾ. ಶಿವರಾಮ ಕಾರಂತ ಬಡಾವಣೆ: ಉತ್ತರ ಬೆಂಗಳೂರು ಭಾಗದಲ್ಲಿರುವ ಈ ಬೃಹತ್ ಲೇಔಟ್‌ನಲ್ಲಿ ಗಿಡಗಳನ್ನು ನೆಟ್ಟು ಪರಿಸರವನ್ನು ಸುಂದರಗೊಳಿಸಲಾಗುತ್ತದೆ.

* ನಾಡಪ್ರಭು ಕೆಂಪೇಗೌಡ ಬಡಾವಣೆ: ಪಶ್ಚಿಮ ಬೆಂಗಳೂರಿನಲ್ಲಿ ತಲೆಎತ್ತಿರುವ ಈ ಅತ್ಯಾಧುನಿಕ ಬಡಾವಣೆಯ ನೂರಾರು ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗುತ್ತದೆ.

* ಬನಶಂಕರಿ 6ನೇ ಹಂತ: ದಕ್ಷಿಣ ಬೆಂಗಳೂರಿನ ಈ ವಲಯದಲ್ಲೂ ಹಸಿರೀಕರಣವನ್ನು ವೃದ್ಧಿಸಲು ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಮೂರು ಬಡಾವಣೆಗಳ ರಸ್ತೆ ಬದಿಗಳು, ಉದ್ಯಾನವನಗಳು ಮತ್ತು ತೆರೆದ ಪ್ರದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಇಡೀ ಬಡಾವಣೆಗಳನ್ನು ಸಂಪೂರ್ಣ ಪರಿಸರಸ್ನೇಹಿಯನ್ನಾಗಿ ಮಾಡುವುದು ಪ್ರಾಧಿಕಾರದ ಮೂಲ ಉದ್ದೇಶವಾಗಿದೆ.

ಇ-ಖಾತಾ ತಿದ್ದುಪಡಿಗೆ ಹೊಸ ಫಾರ್ಮುಲಾ! ಉಪ ಆಯುಕ್ತರ ಹೆಗಲಿಗೆ ಮಹತ್ವದ ಜವಾಬ್ದಾರಿ
ಇ-ಖಾತಾ ತಿದ್ದುಪಡಿಗೆ ಹೊಸ ಫಾರ್ಮುಲಾ! ಉಪ ಆಯುಕ್ತರ ಹೆಗಲಿಗೆ ಮಹತ್ವದ ಜವಾಬ್ದಾರಿ

ಪೂರ್ವ ಬೆಂಗಳೂರನ್ನು ಅಭಿಯಾನದಿಂದ ಹೊರಗಿಡಲು ಕಾರಣವೇನು?

ನಗರದ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾಗಗಳ ಬಡಾವಣೆಗಳಿಗೆ ಈ ಯೋಜನೆಯ ಲಾಭ ಸಿಗುತ್ತಿದ್ದರೂ, ಪೂರ್ವ ಬೆಂಗಳೂರನ್ನು ಮಾತ್ರ ಈ ಮೆಗಾ ಅಭಿಯಾನದಿಂದ ಸಂಪೂರ್ಣವಾಗಿ ಹೊರಗಿಟ್ಟಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ. ಆದರೆ ಬಿಡಿಎ ಮೂಲಗಳ ಪ್ರಕಾರ ಇದಕ್ಕೆ ಬಲವಾದ ಕಾರಣಗಳಿವೆ. ಪೂರ್ವ ಬೆಂಗಳೂರಿನಲ್ಲಿ, ಅದರಲ್ಲೂ ಮುಖ್ಯವಾಗಿ ಹೊರವರ್ತುಲ ರಸ್ತೆಗಿಂತ (Outer Ring Road) ಆಚೆಗಿನ ಪ್ರದೇಶಗಳಲ್ಲಿ ಯಾವುದೇ ಬಿಡಿಎ ಅನುಮತಿ ಇಲ್ಲದ ಅಸಂಖ್ಯಾತ ಅನಧಿಕೃತ ಬಡಾವಣೆಗಳು ನಿರ್ಮಾಣವಾಗಿವೆ. ಪೂರ್ವ ಬೆಂಗಳೂರಿನ ಈ ಭಾಗಗಳಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ವತಃ ಯಾವುದೇ ಹೊಸ ಅಧಿಕೃತ ಬಡಾವಣೆಗಳನ್ನು ಅಭಿವೃದ್ಧಿಪಡಿಸಿಲ್ಲ. ಬಿಡಿಎ ಅಧೀನದಲ್ಲಿ ಜಾಗ ಲಭ್ಯವಿಲ್ಲದ ಕಾರಣ, ಈ ವಲಯವನ್ನು ಪ್ರಸ್ತುತ ಹಸಿರೀಕರಣ ಅಭಿಯಾನದಿಂದ ಹೊರಗಿಡಬೇಕಾದ ಅನಿವಾರ್ಯತೆ ಎದುರಾಗಿದೆ.

ಜೂನ್ 27 'ಕೆಂಪೇಗೌಡ ಜಯಂತಿ'ಯಂದು ಚಾಲನೆ

ಇಷ್ಟೊಂದು ಬೃಹತ್ ಮಟ್ಟದಲ್ಲಿ ಒಂದೇ ದಿನ 15 ಲಕ್ಷ ಸಸಿಗಳನ್ನು ನೆಡುವುದು ಸಾಮಾನ್ಯವಾದ ಮಾತಲ್ಲ. ಇದಕ್ಕಾಗಿಯೇ ಬಿಡಿಎ ಅತ್ಯಂತ ವ್ಯವಸ್ಥಿತವಾದ ಜಂಟಿ ಕಾರ್ಯತಂತ್ರವನ್ನು ರೂಪಿಸಿದ್ದು, ಖಾಸಗಿ ವಲಯ ಹಾಗೂ ಸ್ವಯಂಸೇವಕ ಸಂಸ್ಥೆಗಳನ್ನು ಈ ಯೋಜನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಬೃಹತ್ ಯೋಜನೆಗೆ ತಗಲುವ ಆರ್ಥಿಕ ವೆಚ್ಚವನ್ನು ಸರಿದೂಗಿಸಲು ಬಿಡಿಎ ಪ್ರಮುಖ ಖಾಸಗಿ ಡೆವಲಪರ್ಸ್ ಮತ್ತು ಕಾರ್ಪೊರೇಟ್ ಕಂಪನಿಗಳೊಂದಿಗೆ ಕೈಜೋಡಿಸಿದೆ. ಈ ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯ ಅಡಿಯಲ್ಲಿ ಗಿಡಗಳನ್ನು ಒದಗಿಸಲು ಆರ್ಥಿಕ ನೆರವು ನೀಡುತ್ತಿವೆ.

ಕೇವಲ ಗಿಡ ನೆಟ್ಟು ಫೋಟೋ ತೆಗೆಸಿಕೊಳ್ಳುವ ಸಂಸ್ಕೃತಿಗೆ ಬ್ರೇಕ್ ಹಾಕಿರುವ ಬಿಡಿಎ, ನೆಟ್ಟ ಸಸಿಗಳು ಮರವಾಗಿ ಬೆಳೆಯುವಂತೆ ನೋಡಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದೆ. ಇದಕ್ಕಾಗಿ ವಿವಿಧ ಎನ್‌ಜಿಒಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಸಸಿಗಳನ್ನು ನೆಟ್ಟ ದಿನದಿಂದ ಮುಂದಿನ ಮೂರು ವರ್ಷಗಳ ಕಾಲ ಅವುಗಳಿಗೆ ನೀರು ಹಾಕುವುದು, ಬೇಲಿ ಹಾಕುವುದು ಮತ್ತು ಸಂಪೂರ್ಣವಾಗಿ ಪೋಷಿಸುವ ಜವಾಬ್ದಾರಿಯನ್ನು ಈ ಸ್ವಯಂಸೇವಕ ಸಂಸ್ಥೆಗಳು ವಹಿಸಿಕೊಳ್ಳಲಿವೆ. ಬೆಂಗಳೂರಿನ ಇತಿಹಾಸದಲ್ಲಿ ಮೈಲಿಗಲ್ಲಾಗಲಿರುವ ಈ ಅಭಿಯಾನಕ್ಕೆ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಜನ್ಮದಿನವಾದ ಜೂನ್ 27ರಂದು (ನಾಡಪ್ರಭು ಕೆಂಪೇಗೌಡ ಜಯಂತಿ) ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. ಈ ಮೂಲಕ ಕೆಂಪೇಗೌಡರ ಜಯಂತಿಗೆ ಹಸಿರು ಸಸಿಗಳನ್ನ ನೆಡುವ ಮೂಲಕ ಅರ್ಥಪೂರ್ಣ ಗೌರವ ಸಲ್ಲಿಸಲು ಬಿಡಿಎ ನಿರ್ಧರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+