ರೇಣುಕಾಸ್ವಾಮಿ ಕೇಸ್: ಇನ್ಮುಂದೆ ವಾರದಲ್ಲಿ 4 ದಿನ ವಿಚಾರಣೆ ಕಡ್ಡಾಯ, ಈಡೇರುತ್ತಾ ದರ್ಶನ್ ಆಸೆ?
ಇಡೀ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಪ್ರಕ್ರಿಯೆ ಇದೀಗ ಅತ್ಯಂತ ವೇಗದ ಘಟ್ಟಕ್ಕೆ ತಲುಪಿದೆ. ನಟ ದರ್ಶನ್ ತೂಗುದೀಪ ಹಾಗೂ ನಟಿ ಪವಿತ್ರಾ ಗೌಡ ಸೇರಿದಂತೆ ಇತರರು ಆರೋಪಿಗಳಾಗಿರುವ ಈ ಹೈಪ್ರೊಫೈಲ್ ಪ್ರಕರಣದ ತ್ವರಿತ ವಿಚಾರಣೆಗೆ ಬೆಂಗಳೂರಿನ ಸಿಸಿಎಚ್ 59ರ ಸೆಷನ್ಸ್ ನ್ಯಾಯಾಲಯವು ಗ್ರೀನ್ ಸಿಗ್ನಲ್ ನೀಡಿದೆ. ಇನ್ನು ಮುಂದೆ ಈ ಕೇಸ್‌ನ ವಿಚಾರಣೆಯು ವಾರದಲ್ಲಿ ಕನಿಷ್ಠ ನಾಲ್ಕು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ.
ನಿರಂತರ ವಿಚಾರಣೆಗೆ ಕೋರ್ಟ್ ಅಸ್ತು
ಇತ್ತೀಚೆಗಷ್ಟೇ ದರ್ಶನ್ ಪರ ವಕೀಲರು ಪ್ರಕರಣದ ವಿಚಾರಣೆ ತಡವಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ್ದ ದೇಶದ ಅತ್ಯುನ್ನತ ನ್ಯಾಯಾಲಯವು, ಯಾವುದೇ ಕಾರಣಕ್ಕೂ ಕಾಲಹರಣ ಮಾಡದೆ ಒಂದು ವರ್ಷದ ಒಳಗೆ ಇಡೀ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸಬೇಕು ಎಂದು ಕಟ್ಟುನಿಟ್ಟಿನ ಗಡುವು ವಿಧಿಸಿತ್ತು.

ಸುಪ್ರೀಂಕೋರ್ಟ್‌ನ ಈ ಖಡಕ್ ನಿರ್ದೇಶನದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸೆಷನ್ಸ್ ನ್ಯಾಯಾಲಯವು, ಪ್ರಕರಣವನ್ನು ಚುರುಕುಗೊಳಿಸಲು ಮುಂದಾಗಿದೆ. ನ್ಯಾಯಾಲಯದಲ್ಲಿ ನಡೆದ ವಾದ-ವಿವಾದಗಳ ವೇಳೆ ಸರ್ಕಾರದ ವಿಶೇಷ ಅಭಿಯೋಜಕರು, "ಸುಪ್ರೀಂಕೋರ್ಟ್ ನೀಡಿರುವ ಗಡುವಿನ ಪ್ರಕಾರ ಒಂದು ವರ್ಷದೊಳಗೆ ಈ ಪ್ರಕರಣದ 60 ಪ್ರಮುಖ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಬೇಕಿದೆ. ಆದ್ದರಿಂದ ಈ ಕೇಸ್ ಅನ್ನು ಪ್ರತಿದಿನ ವಿಚಾರಣೆಗೆ ತೆಗೆದುಕೊಳ್ಳಬೇಕು ಮತ್ತು ಯಾವುದೇ ಕಾರಣಕ್ಕೂ ಮುಂದೂಡಬಾರದು" ಎಂದು ವಾದ ಮಂಡಿಸಿದ್ದರು.
ಉಭಯ ಪಕ್ಷಗಳ ವಾದವನ್ನು ಆಲಿಸಿದ ನ್ಯಾಯಾಧೀಶರು, ವಾರದಲ್ಲಿ ನಾಲ್ಕು ದಿನಗಳ ಕಾಲ ಕಡ್ಡಾಯವಾಗಿ ಸಾಕ್ಷಿಗಳ ವಿಚಾರಣೆ ನಡೆಸಲು ಆದೇಶಿಸಿದ್ದಾರೆ. ಅಷ್ಟೇ ಅಲ್ಲದೆ, ಒಂದು ವೇಳೆ ಪರಿಸ್ಥಿತಿ ಎದುರಾದರೆ ವಾರದಲ್ಲಿ 5ನೇ ದಿನವೂ ವಿಚಾರಣೆಗೆ ಹಾಜರಾಗಲು ಸಿದ್ಧರಿರಬೇಕು ಎಂದು ವಕೀಲರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
59ನೇ ಸಿಸಿಎಚ್ ಕೋರ್ಟ್‌ಗೆ ವರ್ಗಾವಣೆ
ಈ ಮೊದಲು ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯು ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಆದರೆ, ಪ್ರಕರಣದ ತ್ವರಿತ ವಿಲೇವಾರಿಗಾಗಿ ಇದನ್ನು ಈಗ 59ನೇ ಸಿಸಿಎಚ್ ಕೋರ್ಟ್‌ಗೆ ಅಧಿಕೃತವಾಗಿ ವರ್ಗಾಯಿಸಲಾಗಿದೆ. ಪೊಲೀಸ್ ತನಿಖಾಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ಹಾಗೂ ಅದರಲ್ಲಿ ಉಲ್ಲೇಖಿಸಲಾಗಿರುವ ತಾಂತ್ರಿಕ ಮತ್ತು ಪ್ರತ್ಯಕ್ಷ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ವಿರುದ್ಧದ ಆಫಿಶಿಯಲ್ ಟ್ರಯಲ್ ಶೀಘ್ರದಲ್ಲೇ ಆರಂಭವಾಗಲಿದೆ.
ಕೋರ್ಟ್‌ನ ಈ ಹೊಸ ಆದೇಶದಿಂದಾಗಿ ನಟ ದರ್ಶನ್ ಸೇರಿದಂತೆ ಜೈಲಿನಲ್ಲಿರುವ ಹಾಗೂ ಜಾಮೀನಿನ ಮೇಲೆ ಹೊರಬಂದಿರುವ ಎಲ್ಲ ಆರೋಪಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ನ್ಯಾಯಾಲಯದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಬೇಕಾಗುತ್ತದೆ. ಸುಪ್ರೀಂಕೋರ್ಟ್ ಗಡುವಿನ ಹಿನ್ನೆಲೆಯಲ್ಲಿ ಮುಂದಿನ ಕೆಲವು ತಿಂಗಳುಗಳು ಈ ಪ್ರಕರಣದ ಆರೋಪಿಗಳಿಗೆ ಅತ್ಯಂತ ನಿರ್ಣಾಯಕವಾಗಲಿವೆ.













Click it and Unblock the Notifications