ದೇಶದಲ್ಲೇ ಎಐ ಹಾರ್ಡ್‌ವೇರ್ ಉತ್ಪಾದನೆ: ಅದಾನಿ ಗ್ರೂಪ್ ಜೊತೆ ಜೇಬಿಲ್ ಸಂಸ್ಥೆ ಮೈತ್ರಿ
ಅದಾನಿ ಸಮೂಹದ ಪ್ರಮುಖ ಸಂಸ್ಥೆಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಮತ್ತು ಜಾಗತಿಕ ಉತ್ಪಾದನಾ ಪರಿಹಾರಗಳ ಪೂರೈಕೆದಾರ ಸಂಸ್ಥೆಯಾದ ಜೇಬಿಲ್ ಇಂಕ್ (Jabil Inc.), ಭಾರತದಲ್ಲಿ ಸಂಪೂರ್ಣವಾಗಿ ಸಂಯೋಜಿತಗೊಂಡ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡೇಟಾ ಸೆಂಟರ್ ಮೂಲಸೌಕರ್ಯ ಉತ್ಪಾದನಾ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸುವ ಉದ್ದೇಶದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯೋಜನೆಗಳನ್ನು ಪ್ರಕಟಿಸಿವೆ.
ಈ ಪ್ರಸ್ತಾವಿತ ಜಂಟಿ ಮೈತ್ರಿಯು, ಅದಾನಿ ಸಮೂಹದ ಮೂಲಸೌಕರ್ಯ, ಹಸಿರು ಇಂಧನ (ಗ್ರೀನ್ ಎನರ್ಜಿ), ಲಾಜಿಸ್ಟಿಕ್ಸ್ ಮತ್ತು ಡೇಟಾ ಸೆಂಟರ್ ಸಾಮರ್ಥ್ಯಗಳನ್ನು ಜೇಬಿಲ್ ಸಂಸ್ಥೆಯ ಆರು ದಶಕಗಳ ಇಂಜಿನಿಯರಿಂಗ್ ಹಾಗೂ ಸುಧಾರಿತ ಉತ್ಪಾದನಾ ಪರಿಣತಿಯೊಂದಿಗೆ ಸಂಯೋಜಿಸಲಿದೆ. ಈ ಮೂಲಕ ಭಾರತವನ್ನು ಎಐ ಹಾರ್ಡ್‌ವೇರ್ ಉತ್ಪಾದನೆ ಮತ್ತು ರಫ್ತಿನ ಪ್ರಮುಖ ಜಾಗತಿಕ ಹಬ್ ಆಗಿ ರೂಪಿಸುವ ಗುರಿಯನ್ನು ಈ ಮೈತ್ರಿ ಹೊಂದಿದೆ.

ಕಂಪನಿಗಳ ಪ್ರಕಾರ, ಈ ಜಂಟಿ ಮೈತ್ರಿಯು ಜಾಗತಿಕ ಮಟ್ಟದ ಹೈಪರ್‌ಸ್ಕೇಲರ್‌ಗಳು, ಎಂಟರ್‌ಪ್ರೈಸ್ ಡೇಟಾ ಸೆಂಟರ್‌ಗಳು ಮತ್ತು ಕೊಲೊಕೇಶನ್ ಪೂರೈಕೆದಾರರ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಭಾರತದಲ್ಲಿ ಬೃಹತ್ ಪ್ರಮಾಣದ ಎಂಐ ರ್ಯಾಕ್ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಲಿದೆ. ಈ ಪ್ಲಾಟ್‌ಫಾರ್ಮ್ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನಗಳನ್ನು ಬಳಸಿಕೊಂಡು ಮುಂದಿನ ಪೀಳಿಗೆಯ ಲಿಕ್ವಿಡ್-ಕೂಲ್ಡ್ ಎಐ ರ್ಯಾಕ್‌ಗಳು, ಸರ್ವರ್‌ಗಳು, ಸ್ಟೋರೇಜ್ ಸಿಸ್ಟಮ್‌ಗಳು ಮತ್ತು ನೆಟ್‌ವರ್ಕಿಂಗ್ ಉಪಕರಣಗಳನ್ನು ತಯಾರಿಸುವ ನಿರೀಕ್ಷೆಯಿದೆ.
ಕೇವಲ ಕಂಪ್ಯೂಟಿಂಗ್ ಮೂಲಸೌಕರ್ಯವಷ್ಟೇ ಅಲ್ಲದೆ, ಈ ಪಾಲುದಾರಿಕೆಯು ಪವರ್ ಡಿಸ್ಟ್ರಿಬ್ಯೂಷನ್ ಯೂನಿಟ್‌ಗಳು (PDUs), ಕೂಲಂಟ್ ಡಿಸ್ಟ್ರಿಬ್ಯೂಷನ್ ಯೂನಿಟ್‌ಗಳು (CDUs), ಟ್ರಾನ್ಸ್‌ಫಾರ್ಮರ್‌ಗಳು, ಸ್ವಿಚ್‌ಗೇರ್‌ಗಳು, ಬಸ್‌ಬಾರ್‌ಗಳು ಮತ್ತು ಸುಧಾರಿತ ಥರ್ಮಲ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ಗಳಂತಹ ಪ್ರಮುಖ ಬಿಡಿಭಾಗಗಳನ್ನು ಒಳಗೊಂಡ ಸಮಗ್ರ ಎಐ ಹಾರ್ಡ್‌ವೇರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ. ಬೃಹತ್ ಪ್ರಮಾಣದ ಡೇಟಾ ಸೆಂಟರ್ ಸ್ಥಾಪನೆಗೆ ಕೊನೆಯ ಹಂತದವರೆಗಿನ ಹಾರ್ಡ್‌ವೇರ್ ಪರಿಹಾರಗಳನ್ನು ಒದಗಿಸಲು ಈ ಉಪಕ್ರಮವನ್ನು ರೂಪಿಸಲಾಗಿದೆ ಎಂದು ಕಂಪನಿಗಳು ತಿಳಿಸಿವೆ.
ಹೆಚ್ಚುತ್ತಿರುವ ಎಐ ಬಳಕೆ, ಕ್ಲೌಡ್ ತಂತ್ರಜ್ಞಾನದ ವಿಸ್ತರಣೆ ಮತ್ತು ಡೇಟಾ ಲೋಕಲೈಸೇಶನ್ (ಡೇಟಾವನ್ನು ದೇಶದೊಳಗೇ ಸಂಗ್ರಹಿಸುವುದು) ನಿಯಮಗಳ ಕಾರಣದಿಂದಾಗಿ ಭಾರತದ ಡೇಟಾ ಸೆಂಟರ್ ವಲಯವು ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುತ್ತಿರುವ ಸಮಯದಲ್ಲಿಯೇ ಈ ಜಂಟಿ ಮೈತ್ರಿಯ ಘೋಷಣೆ ಹೊರಬಿದ್ದಿದೆ. ಜಾಗತಿಕ ತಂತ್ರಜ್ಞಾನ ಕಂಪನಿಗಳ ಭಾರಿ ಹೂಡಿಕೆಯ ಬೆಂಬಲದೊಂದಿಗೆ, ಭಾರತದ ಡೇಟಾ ಸೆಂಟರ್ ಸಾಮರ್ಥ್ಯವು 2030ರ ವೇಳೆಗೆ 5 ಗಿಗಾವಾಟ್‌ನಿಂದ 8 ಗಿಗಾವಾಟ್‌ಗೆ ತಲುಪಬಹುದು ಎಂದು ಉದ್ಯಮದ ಅಂದಾಜುಗಳು ಸೂಚಿಸುತ್ತವೆ.
ಈ ಮೈತ್ರಿಯು, 2035ರ ವೇಳೆಗೆ 5 ಗಿಗಾವಾಟ್ ಸಾಮರ್ಥ್ಯದ, ಹಸಿರು ಇಂಧನ ಆಧಾರಿತ ಹಾಗೂ ಎಐ-ಸಜ್ಜಿತ ಹೈಪರ್‌ಸ್ಕೇಲ್ ಡೇಟಾ ಸೆಂಟರ್ ಅಭಿವೃದ್ಧಿಪಡಿಸಲು 100 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡುವುದಾಗಿ ಅದಾನಿ ಸಮೂಹವು ಈ ಹಿಂದೆ ಘೋಷಿಸಿದ್ದ ಬದ್ಧತೆಗೆ ಪೂರಕವಾಗಿದೆ. ದೇಶದಲ್ಲಿ ಸಂಪೂರ್ಣ ಎಐ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಈ ಉಪಕ್ರಮವನ್ನು ಪ್ರಮುಖ ಹೆಜ್ಜೆ ಎಂದು ಅದಾನಿ ಸಮೂಹವು ಪರಿಗಣಿಸಿದೆ. 2025ರ ಆರ್ಥಿಕ ವರ್ಷದಲ್ಲಿ 29.8 ಬಿಲಿಯನ್ ಯುಎಸ್ ಡಾಲರ್ ಆದಾಯವನ್ನು ವರದಿ ಮಾಡಿರುವ ಜೇಬಿಲ್ ಸಂಸ್ಥೆಯು, ಪವರ್ ಮ್ಯಾನೇಜ್‌ಮೆಂಟ್ ಮತ್ತು ಥರ್ಮಲ್ ಸೊಲ್ಯೂಷನ್ಸ್ ತಂತ್ರಜ್ಞಾನಗಳಲ್ಲಿ ಕಾರ್ಯತಂತ್ರದ ಸ್ವಾಧೀನ ಹಾಗೂ ಹೂಡಿಕೆಗಳ ಮೂಲಕ ಜಾಗತಿಕ ಎಐ ಮೂಲಸೌಕರ್ಯ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಂಡಿದೆ. ಈ ಪ್ರಸ್ತಾವಿತ ಜಂಟಿ ಉದ್ಯಮಕ್ಕೆ ಕಂಪನಿಯು ತನ್ನ ಸುಧಾರಿತ ಇಂಜಿನಿಯರಿಂಗ್ ಸಾಮರ್ಥ್ಯಗಳು ಮತ್ತು ಹೈಪರ್‌ಸ್ಕೇಲ್ ಡೇಟಾ ಸೆಂಟರ್ ಉತ್ಪಾದನಾ ಪರಿಣತಿಯನ್ನು ಕೊಡುಗೆಯಾಗಿ ನೀಡುವ ನಿರೀಕ್ಷೆಯಿದೆ.
ಜಾಗತಿಕವಾಗಿ ಎಐ ಕಂಪ್ಯೂಟಿಂಗ್‌ನಲ್ಲಿ ಹೂಡಿಕೆಗಳು ವೇಗವಾಗಿ ಹೆಚ್ಚುತ್ತಿರುವುದರಿಂದ, ಮುಂದಿನ ಏಳು ವರ್ಷಗಳಲ್ಲಿ ಒಟ್ಟಾರೆ ಎಐ ಮೂಲಸೌಕರ್ಯ ಮಾರುಕಟ್ಟೆಯ ಅವಕಾಶವು 3 ಟ್ರಿಲಿಯನ್ ಯುಎಸ್ ಡಾಲರ್‌ಗಳನ್ನು ಮೀರಬಹುದು ಎಂದು ಉಭಯ ಕಂಪನಿಗಳು ಅಂದಾಜಿಸಿವೆ. ಪ್ರಸ್ತುತ ಎರಡೂ ಸಂಸ್ಥೆಗಳು ಈ ಪಾಲುದಾರಿಕೆಯನ್ನು ಮುಂದುವರಿಸಲು ಅಗತ್ಯವಿರುವ ಕಾರ್ಯಾಚರಣೆಯ ಚೌಕಟ್ಟುಗಳು ಮತ್ತು ಅಧಿಕೃತ ದಾಖಲೆಗಳ ಸಿದ್ಧತೆಯ ಕೆಲಸಗಳಲ್ಲಿ ತೊಡಗಿವೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ, "ವಿಶ್ವವು ಪ್ರಸ್ತುತ 'ಇಂಟೆಲಿಜೆನ್ಸ್ ರೆವಲ್ಯೂಷನ್' (ಬುದ್ಧಿಮತ್ತೆಯ ಕ್ರಾಂತಿ) ಯುಗಕ್ಕೆ ಪ್ರವೇಶಿಸುತ್ತಿದೆ. ಇಂಧನ ಮತ್ತು ಕಂಪ್ಯೂಟಿಂಗ್ ಮೂಲಸೌಕರ್ಯಗಳನ್ನು ಸಂಯೋಜಿಸುವ ಸಾಮರ್ಥ್ಯ ಹೊಂದಿರುವ ದೇಶಗಳು ಮುಂದಿನ ಹಂತದ ತಾಂತ್ರಿಕ ಬೆಳವಣಿಗೆಯನ್ನು ನಿಯಂತ್ರಿಸಲಿವೆ. ಈ ಮೈತ್ರಿಯು ಭಾರತವು ಕೇವಲ ಎಐ ತಂತ್ರಜ್ಞಾನಗಳ ಗ್ರಾಹಕನಾಗಿ ಮಾತ್ರವಲ್ಲದೆ, ಎಐ ಮೂಲಸೌಕರ್ಯಗಳ ನಿರ್ಮಾತೃ ಮತ್ತು ರಫ್ತುದಾರನಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ" ಎಂದು ಹೇಳಿದ್ದಾರೆ.
ಜೇಬಿಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಮೈಕ್ ದಸ್ತೂರ್ ಮಾತನಾಡಿ, "ಜೇಬಿಲ್‌ನ ಇಂಜಿನಿಯರಿಂಗ್ ಹಾಗೂ ಉತ್ಪಾದನಾ ಸಾಮರ್ಥ್ಯಗಳನ್ನು ಅದಾನಿ ಸಮೂಹದ ಮೂಲಸೌಕರ್ಯ ಪ್ಲಾಟ್‌ಫಾರ್ಮ್‌ನೊಂದಿಗೆ ಸಂಯೋಜಿಸುವ ಮೂಲಕ, ಈ ಪಾಲುದಾರಿಕೆಯು ಎರಡೂ ಕಂಪನಿಗಳಿಗೆ ಎಐ ಪರಿಸರ ವ್ಯವಸ್ಥೆಯುದ್ದಕ್ಕೂ ವಿಸ್ತರಿಸಬಹುದಾದ ಪರಿಹಾರಗಳನ್ನು ಒದಗಿಸಲು ಅನುವು ಮಾಡಿಕೊಡುತ್ತದೆ. ಭಾರತದ ನುರಿತ ಕಾರ್ಯಪಡೆ ಮತ್ತು ಬೆಳೆಯುತ್ತಿರುವ ಎಐ ಮಾರುಕಟ್ಟೆಯು ಇಂತಹ ಹೂಡಿಕೆಗಳಿಗೆ ಅತ್ಯಂತ ಆಕರ್ಷಕ ತಾಣವಾಗಿದೆ" ಎಂದು ತಿಳಿಸಿದ್ದಾರೆ.
ಈ ಪ್ರಸ್ತಾವಿತ ಮೈತ್ರಿಯು ದೇಶೀಯವಾಗಿ ಹೆಚ್ಚಿನ ಮೌಲ್ಯದ ಎಐ ಮೂಲಸೌಕರ್ಯ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ, ಪೂರೈಕೆ ಸರಪಳಿಯನ್ನು ಬಲಪಡಿಸುವ ಮೂಲಕ ಮತ್ತು ನುರಿತ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಸರ್ಕಾರದ "ಮೇಕ್ ಇನ್ ಇಂಡಿಯಾ" ಉಪಕ್ರಮಕ್ಕೆ ಬೆಂಬಲ ನೀಡುತ್ತದೆ ಎಂದು ಕಂಪನಿಗಳು ತಿಳಿಸಿವೆ. ಈ ಪಾಲುದಾರಿಕೆಯು ಅಂತಿಮಗೊಂಡು ಜಾರಿಗೆ ಬಂದರೆ, ಜಾಗತಿಕ ಎಐ ಮತ್ತು ಡಿಜಿಟಲ್ ಮೂಲಸೌಕರ್ಯ ಮೌಲ್ಯದ ಸರಪಳಿಯಲ್ಲಿ ಭಾರತದ ಪಾತ್ರವನ್ನು ಇನ್ನಷ್ಟು ಹೆಚ್ಚಿಸಲಿದೆ.












Click it and Unblock the Notifications