KSRTC Strike: ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯಿಂದ ಹೊರಬಂದ ಎಸ್‌ಸಿ-ಎಸ್‌ಟಿ ನೌಕರರ ಸಂಘ

ಬೆಂಗಳೂರು: ರಾಜ್ಯದ ಸಾರಿಗೆ ಪ್ರಯಾಣಿಕರಿಗೆ ದೊಡ್ಡ ರಿಲೀಫ್ ಸಿಕ್ಕಿದ್ದು, ಮೇ 20ರಿಂದ ನಡೆಯಬೇಕಿದ್ದ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಭಾರೀ ಹಿನ್ನಡೆಯಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಬೃಹತ್ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಈ ಪ್ರತಿಭಟನೆಯಿಂದ 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ನೌಕರರ ಸಂಘ'ವು ದಿಢೀರನೆ ಹಿಂದೆ ಸರಿದಿದೆ.

ಈ ಕುರಿತು ಸೋಮವಾರ (ಮೇ 18, 2026) ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಪತ್ರ ಬರೆದಿರುವ ಸಂಘವು, ತಾವು ಜಂಟಿ ಕ್ರಿಯಾ ಸಮಿತಿಯಿಂದ ಹೊರಬರುತ್ತಿರುವುದಾಗಿ ಸ್ಪಷ್ಟಪಡಿಸಿದೆ. ಸಂಘದ ರಾಜ್ಯಾಧ್ಯಕ್ಷರಾದ ಎಫ್.ಹೆಚ್. ಜಕ್ಕಪ್ಪನವರ ಅವರ ಆದೇಶದ ಮೇರೆಗೆ, ರಾಜ್ಯ ಕಾರ್ಯಾಧ್ಯಕ್ಷ ರವಿಪ್ರಕಾಶ್ ಎಂ. ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರವಣಪ್ಪ ಅವರು ಈ ನಿರ್ಣಾಯಕ ಪತ್ರಕ್ಕೆ ಸಹಿ ಹಾಕಿದ್ದಾರೆ. ಇದು ಸಾರಿಗೆ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ದೊಡ್ಡ ಮಟ್ಟದ ರಿಲೀಫ್ ನೀಡಿದೆ.

KSRTC Strike

ಪತ್ರದಲ್ಲಿ ಏನಿದೆ?

"ನಮ್ಮ ಸಂಘವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಭಾಗವಾಗಿದ್ದು, ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದಿನಾಂಕ 20.05.2026ರಂದು ಅನಿರ್ದಿಷ್ಟಾವಧಿ ಮುಷ್ಕರ ಹೂಡಲು ತೀರ್ಮಾನಿಸಲಾಗಿತ್ತು. ಆದರೆ, ನಮ್ಮ ಸಂಘದ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ನಮ್ಮ ಸಂಘವು ಈ ಕೂಡಲೇ ಜಂಟಿ ಕ್ರಿಯಾ ಸಮಿತಿಯಿಂದ ನಿರ್ಗಮಿಸುತ್ತಿದ್ದೇವೆ. ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿರುವ ಮುಷ್ಕರದಲ್ಲಿ ನಮ್ಮ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಈ ಕ್ಷಣದಿಂದ ಭಾಗವಹಿಸುವುದಿಲ್ಲ" ಎಂದು ಕಟ್ಟುನಿಟ್ಟಾಗಿ ಪತ್ರದಲ್ಲಿ ವಿವರಿಸಲಾಗಿದೆ.

ಮುಷ್ಕರಕ್ಕೆ ತೀವ್ರ ಹಿನ್ನಡೆಯಾಗುವ ಸಾಧ್ಯತೆ

ರಾಜ್ಯ ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಾದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ (ಕೆಕೆಆರ್‌ಟಿಸಿ) ಪ.ಜಾ ಮತ್ತು ಪ.ಪಂ ನೌಕರರ ಸಂಘವು ಬೃಹತ್ ಬೆಂಬಲ ಮತ್ತು ಅತಿ ಹೆಚ್ಚು ಸದಸ್ಯರನ್ನು ಹೊಂದಿದೆ. ಇದೀಗ ಈ ಪ್ರಮುಖ ಸಂಘವೇ ಮುಷ್ಕರದಿಂದ ಅಧಿಕೃತವಾಗಿ ಹಿಂದೆ ಸರಿದಿರುವುದರಿಂದ, ಮೇ 20ರಂದು ನಡೆಯಬೇಕಿದ್ದ ಬಸ್ ಮುಷ್ಕರ ಬಹುತೇಕ ವಿಫಲವಾಗುವ ಅಥವಾ ದುರ್ಬಲಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಈ ನಿರ್ಧಾರದಿಂದಾಗಿ ಪ್ರತಿದಿನ ಕೆಲಸ ಕಾರ್ಯಗಳಿಗೆ, ಶಾಲಾ-ಕಾಲೇಜುಗಳಿಗೆ ಹಾಗೂ ಆಸ್ಪತ್ರೆಗಳಿಗೆ ತೆರಳಲು ಸರ್ಕಾರಿ ಬಸ್‌ಗಳನ್ನೇ ಸಂಪೂರ್ಣವಾಗಿ ನೆಚ್ಚಿಕೊಂಡಿರುವ ಲಕ್ಷಾಂತರ ಸಾಮಾನ್ಯ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬೇಸಿಗೆ ರಜೆ ಮುಗಿದು ಶಾಲಾ-ಕಾಲೇಜುಗಳು ಆರಂಭವಾಗುವ ಹಾಗೂ ಮಳೆಗಾಲದ ಈ ನಿರ್ಣಾಯಕ ಸಂದರ್ಭದಲ್ಲಿ ಬಸ್ ಮುಷ್ಕರ ನಡೆದಿದ್ದರೆ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿತ್ತು. ಸಂಘದ ಈ ಸಕಾರಾತ್ಮಕ ನಡೆ ಸರ್ಕಾರ ಮತ್ತು ಸಾರಿಗೆ ನಿಗಮಗಳ ಆಡಳಿತ ಮಂಡಳಿಗೂ ಕೊಂಚ ಸಮಾಧಾನ ತಂದಿದೆ. ಮುಷ್ಕರಕ್ಕೆ ಕರೆ ನೀಡಿರುವ ಇತರ ಸಂಘಟನೆಗಳು ಮುಂದಿನ ದಿನಗಳಲ್ಲಿ ಮುಷ್ಕರವನ್ನು ಮುಂದುವರೆಸುತ್ತವೆಯೇ ಅಥವಾ ಮಾತುಕತೆಗೆ ಮುಂದಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+